Sunday, June 30, 2024

ಸತ್ಯ | ನ್ಯಾಯ |ಧರ್ಮ

ನೆಹರೂ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್‌ ಗಾಂಧಿಯ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಬಿಜೆಪಿ

ಬೆಂಗಳೂರು: ವೀರ್‌ ಸಾವರ್ಕರ್‌  ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂಬ ರಾಹುಲ್‌ ಗಾಂಧಿ ಹೇಳಿಕೆಯ ವಿರುದ್ದ ಬಿಜೆಪಿ ಕಿಡಿಕಾರಿದ್ದು, ನೆಹರೂ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ಆಕ್ರೋಶ ವ್ಯಕ್ತ ಪಡಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ʼಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದ ರಾಜಕೀಯ ನಿರುದ್ಯೋಗಿ ರಾಹುಲ್‌ ಗಾಂಧಿಯವರು ವೀರ ಸಾವರ್ಕರ್‌ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಕಠಿಣಾತಿ ಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್‌ ವೀರನಲ್ಲ ಎಂದಾದರೆ, ಅಪ್ರಬುದ್ಧ ನಡೆಗಳಿಂದ ನ್ಯಾಯಾಲಯದಿಂದ ಆಗಾಗ್ಗೆ ಛೀಮಾರಿ ಹಾಕಿಸಿಕೊಂಡು ಕ್ಷಮೆ ಕೇಳುವ ರಾಹುಲ್‌ ಗಾಂಧಿ ಏನು? ಎಂದು ಪ್ರಶ್ನೆ ಮಾಡಿದೆ.

ʼನೆಹರೂ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್‌ ಗಾಂಧಿ ಮೌನವೇಕೆ? ಕೇವಲ ಎರಡು ವರ್ಷದ ಶಿಕ್ಷೆಯನ್ನೇ ತಡೆದುಕೊಳ್ಳಲಾರದ ಕುಟುಂಬದವರು ಸ್ವಾತಂತ್ರ್ಯದ ಹೆಗ್ಗುರುತು, ಕಠಿಣಾತಿಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್‌ ಅವರ ವೀರತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

ʼಸಾವರ್ಕರ್‌ ಧೀರತೆಗೆ ಬೆರಗಾಗಿ ಸ್ವತಃ ಇಂದಿರಾ ಗಾಂಧಿ ಅವರೇ ʼಭಾರತದ ವೀರ ಸುಪುತ್ರʼ ಎಂದು ಸಂಬೋಧಿಸಿ ವೀರ ಸಾವರ್ಕರ್‌ ಜನ್ಮಶತಮಾನೋತ್ಸವ ಆಚರಣೆಗೆ ಸಹಕರಿಸಿದ್ದರು. ಸಾವರ್ಕರ್‌ ಕುರಿತಾಗಿ ಅಂಚೆಚೀಟಿ ಬಿಡುಗಡೆ ಮಾಡಿ, ಸಾಕ್ಷ್ಯಚಿತ್ರ ನಿರ್ಮಿಸಲು ಆದೇಶ ನೀಡಿದ್ದರು. ಸಾವರ್ಕರ್ ಟ್ರಸ್ಟ್‌ಗೆ 11 ಸಾವಿರ ದೇಣಿಗೆ ಕೂಡಾ ನೀಡಿದ್ದರು ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ರಾಹುಲ್‌ ಗಾಂಧಿ ಹೇಳಿಕೆಯ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿರುವ ಮಧ್ಯಪ್ರದೇಶದ ಸಿಎಂ ಶಿವರಾಜ್‌ ಎಸ್‌ ಚೌಹಾಣ್‌, ʼ ವೀರ್‌ ಸಾವರ್ಕರ್‌ ವಿರುದ್ಧ ರಾಹುಲ್‌ ಗಾಂಧಿ ನೀಡುತ್ತಿರುವ ಹೇಳಿಕೆಗಳನ್ನು ದೇಶ ಸಹಿಸಿಕೊಳ್ಳುತ್ತದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್‌ ಯಾವಾಗಲೂ ನೆಹರೂ ಕುಟುಂಬವನ್ನು ಗೌರವಿಸುತ್ತದೆ. ಆದರೆ ಶ್ಯಾಮ್‌ ಜೀ ಕೃಷ್ಣ ವರ್ಮಾ ಮತ್ತು ಸರ್ದಾರ್‌ ಪಟೇಲರ ಕೊಡುಗೆಗಳನ್ನು ಅವರು ಎಂದಾದರೂ ಪರಿಗಣಿಸಿದ್ದಾರೆಯೇ ? ಜನರು ಅವಮಾನಗಳನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು