ಮೈಸೂರು: ಹಾಲಿ ಲೋಕಸಭಾ ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ತಂಗಿ ಮಗ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದ ಧೀರಜ್ ಪ್ರಸಾದ್ ಭಾರತೀಯ ಜನತಾ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಲು ನಿರ್ಧರಿಸಿದ್ದಾರೆ.
ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಇಂದು ಅಥವಾ ನಾಳೆ ಅಧಿಕೃತವಾಗಿ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿಕೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಅವರು, ನಿವೃತ್ತಿ ಘೋಷಿಸಿದ್ದೇನೆ, ನೋಡೋಣ ಎಂದಷ್ಟೇ ಹೇಳಿದ್ದರು. ಇದರ ಬೆನ್ನಲ್ಲೇ ಈಗ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆಯಾಗುವುದು ಖಚಿತವಾಗಿದೆ.
ಚಾಮರಾಜನಗರ ಕ್ಷೇತ್ರದ ಬಿಜೆಪಿ ಲೋಕಸಭಾ ಸ್ಥಾನದ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಡಾ. ಮೋಹನ್ ಕುಮಾರ್ ಅವರಿಗೂ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಲಾಗಿದ್ದು ಅವರು ಶೀಘ್ರದಲ್ಲೇ ಪಕ್ಷವನ್ನು ಸೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.