Thursday, June 20, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯವರು ನಮ್ಮ ಪಾದಯಾತ್ರೆಗೆ ಹೆದರಿದ್ದಾರೆ: ಸಿದ್ದರಾಮಯ್ಯ

ಮಂಡ್ಯ : ಭಾರತ ಐಕ್ಯತಾ ಯಾತ್ರೆ ಕುರಿತು ಹಲವಾರು ಕಾಂಗ್ರೆಸ್‌ ಮುಖ್ಯ ಅಭ್ಯರ್ಥಿಗಳು ಸೇರಿ ಇಂದು ಮಂಡ್ಯದ ನಾಗಮಂಗಲದಲ್ಲಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವರು ಜೊತೆಗೂಡಿ ಜಂಟಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದ್ರುವ ನಾರಾಯಣ ಮತ್ತು ಕೆಪಿಸಿಸಿ ಸಂವಹನ ಹಾಗೂ ಜಾಲತಾಣ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ್‌ ಖರ್ಗೆ ಅವರು ಹಾಜರಿದ್ದರು.

ಭಾರತ ಐಕ್ಯತಾ ಯಾತ್ರೆ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯನವರು “ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇದೆ. ಕೇಂದ್ರದಲ್ಲಿ ಈ ವರ್ಗಗಳ ಜನರಿಗೆ ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌,ಸಿ ಗಳಿಗೆ 15% ಹಾಗೂ ಎಸ್‌,ಟಿ ಗಳಿಗೆ 7.5% ಇದೆ. ಎರಡೂ ಸೇರಿ 22.5% ಮೀಸಲಾತಿ ಇದೆ. ರಾಜ್ಯದಲ್ಲಿ ಎಸ್‌,ಸಿ ಗಳಿಗೆ 15% ಹಾಗೂ ಎಸ್‌,ಟಿ ಗಳಿಗೆ 3% ಒಟ್ಟು 18% ಮೀಸಲಾತಿ ಇದೆ. ಹಾಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇಲ್ಲ ಎಂದು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

2011ರ ಜನಗಣತಿ ಪ್ರಕಾರ ಎಸ್‌,ಸಿ 17.15% ಹಾಗೂ ಎಸ್.ಟಿ ಜನರು 6.95% ಒಟ್ಟು 24.10% ಜನಸಂಖ್ಯೆ ಹೊಂದಿದ್ದಾರೆ. ಆದರೆ ಇವರಿಗೆ ಮೀಸಲಾತಿ ಇರುವುದು 18% ಮಾತ್ರ. ಹಾಗಾಗಿ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್‌ ದಾಸ್‌ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿತ್ತು. ಈ ಸಮಿತಿ 2-7-2020ರಲ್ಲಿ ವರದಿ ಸಲ್ಲಿಸಿತ್ತು, ಆ ವೇಳೆಗೆ ಸಮ್ಮಿಶ್ರ ಸರ್ಕಾರ ಇರಲಿಲ್ಲ. ಈ ವರದಿ ನೀಡಿ 2 ವರ್ಷ 3 ತಿಂಗಳಾಯಿತು ಆದರೂ ಈ ಸರ್ಕಾರ ವರದಿಯನ್ನು ಒಪ್ಪಿಕೊಂಡಿಲ್ಲ ಮತ್ತು ಜಾರಿ ಮಾಡಿಲ್ಲ. ಇದೇ ಕಾರಣಕ್ಕಾಗಿ ವಾಲ್ಮೀಖಿ ಜನಾಂಗದ ಸ್ವಾಮೀಜಿ ಧರಣಿ ಆರಂಭ ಮಾಡಿದ್ದಾರೆ. ನಾನು ಮತ್ತು ಎಸ್‌,ಸಿ/ಎಸ್‌,ಟಿ ಜನಾಂಗದ ಶಾಸಕರು, ಬೇರೆ ಪಕ್ಷಗಳ ನಾಯಕರು, ಕೆಪಿಸಿಸಿ ಅಧ್ಯಕ್ಷರು ವರದಿ ಜಾರಿ ಮಾಡುವಂತೆ ಒತ್ತಾಯ ಮಾಡಿದ್ದೇವೆ ಎಂದು ಮಾತನಾಡಿದರು.

ವರದಿಈ ವರದಿಯ ಪ್ರಮುಖ ಅಂಶಗಳೆಂದರೆ ಎಸ್‌,ಟಿ ಜನಾಂಗದ ಮೀಸಲಾತಿಯನ್ನು 3% ಇಂದ 7% ಗೆ ಏರಿಕೆ ಮಾಡಬೇಕು. ಎಸ್‌,ಸಿ ಜನಾಂಗದವರಿಗೆ 15% ಇಂದ 17% ಗೆ ಏರಿಕೆ ಮಾಡಬೇಕು. ಅಂದರೆ ಒಟ್ಟು ಮೀಸಲಾತಿಯನ್ನು 6% ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆ. ನಾಗಮೋಹನ್‌ ದಾಸ್‌ ಅವರು ಹೈಕೋರ್ಟ್‌ ನ ಮಾಜಿ ನ್ಯಾಯಮೂರ್ತಿಗಳು, ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಅವರು ಕೊಟ್ಟಿರುವ ಶಿಫಾರಸನ್ನು ಇಟ್ಟುಕೊಂಡು ಎರಡು ವರ್ಷಗಳಿಂದ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಬಿಜೆಪಿಯವರು ಮೀಸಲಾತಿಗೆ ವಿರುದ್ಧವಾಗಿರುವವರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದವರು. ಸಾಮಾನ್ಯ ವರ್ಗದ ಬಡ ಜನರಿಗೆ ಒಂದೇ ದಿನದಲ್ಲಿ ತಿದ್ದುಪಡಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಲ್‌ ಪಾಸ್‌ ಮಾಡಿಕೊಂಡಿದ್ದಾರೆ. ನಾವು ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾನೂನನ್ನು ಜಾರಿ ಮಾಡಿದ್ದೇವೆ. ಇದನ್ನು ಕೇಂದ್ರ ಸರ್ಕಾರ ಆಗಲೀ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿ ಮಾಡಿದ್ದಾರ? ಇವರದ್ದು ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾತ್ರ. ಈ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ ಮೇಲೆ ಮುಂದೆ ಮಾಡುತ್ತೇವೆ ಎಂದು ಕಾಲಾಹರಣ ಮಾಡುತ್ತಿದ್ದಾರೆ ಎಂದು ಅವರು ಮಾಡಿರುವ ಒತ್ತಾಯದ ಬಗ್ಗೆ ಮಾತನಾಡಿದರು.

ಹೀಗೆ ಮಾತು ಮುಂದುವರೆಸಿದ ಸಿದ್ದರಾಮಯ್ಯನವರು ʼರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇದೆ. ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿ ಇದೆ. ಇದಲ್ಲದೆ ಸುಭಾಶ್‌ ಹಾಡಿ ಅವರ ನೇತೃತ್ವದಲ್ಲಿ ಇನ್ನೊಂದು ಸಮಿತಿ ರಚನೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾದ ಸಮಿತಿ. ಮುಖ್ಯಮಂತ್ರಿಗಳು ನಾವೆಲ್ಲ ಒತ್ತಾಯ ಮಾಡಿದ ಮೇಲೆ ವಾಲ್ಮೀಕಿ ಗುರುಪೀಠದ ಶ್ರೀಗಳು ನಿರಂತರ ಹೋರಾಟ ಮಾಡಿದ ನಂತರ ನಾಳೆ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ಈ ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ಸದನದಲ್ಲಿ ಮಾತು ಕೊಟ್ಟಿದ್ದರು. ನಮ್ಮ ಪಕ್ಷದ ನಿಲುವು ನಾಗಮೋಹನ್‌ ದಾಸ್‌ ವರದಿ ಜಾರಿ ಮಾಡಬೇಕು ಎಂಬುದಾಗಿದೆ. ನಾವು ಮೀಸಲಾತಿ ಪರವಾಗಿ ಇರುವವರು. ಎಸ್‌,ಸಿ ಹಾಗೂ ಎಸ್‌,ಟಿ ಮೀಸಲಾತಿಯನ್ನು ಏರಿಕೆ ಮಾಡಬೇಕು ಎಂಬ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಇದನ್ನು ಸದನದಲ್ಲಿ ಚರ್ಚಿಸಿ ರೆಗ್ಯುಲೇಷನ್‌ ಪಾಸ್‌ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ನಂತರ ಕೇಂದ್ರ ಸರ್ಕಾರ 15 ದಿನಗಳ ಒಳಗೆ ಸಂವಿಧಾನ ತಿದ್ದುಪಡಿ ಮಾಡಬೇಕಾ ಅಥವಾ ಬೇಡವೇ ಎಂಬುದನ್ನು ನೋಡಿ ಜಾರಿ ಮಾಡಬೇಕು. ಇದು ನಮ್ಮ ಪಕ್ಷದ ನಿಲುವಾಗಿದೆ. ಇದೇ ಮಾತನ್ನು ನಾಳೆಯ ಸರ್ವ ಪಕ್ಷ ಸಭೆಯಲ್ಲಿ ಹೇಳುತ್ತೇವೆʼ ಎಂದು ಮೀಸಲಾತಿಯ ಪರವಾಗಿ ಮಾತನಾಡಿದ್ದಾರೆ.

ರಾಹುಲ್‌ ಗಾಂಧಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸಿದ್ದರಾಮಯ್ಯ ʼಬಿಜೆಪಿಯವರು ನಮ್ಮ ಪಾದಯಾತ್ರೆಗೆ ಹೆದರಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಚುನಾವಣೆ ಬರುತ್ತದೆ. ಈ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬುದು ಖಾತ್ರಿಯಾಗಿರುವುದರಿಂದ ಭಯಭೀತರಾಗಿ ಸುಳ್ಳು ಜಾಹಿರಾತುಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಅವರ ಜಾಹಿರಾತಿನಲ್ಲಿ ಯಾವ ಸತ್ಯವೂ ಇಲ್ಲ, ಹಾಗಾಗಿ ನಾವು ಈ ಜಾಹಿರಾತಿಗೆ ಯಾವ ಮಹತ್ವವನ್ನು ನೀಡುವುದಿಲ್ಲʼ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ರಾಹುಲ್‌ ಗಾಂಧಿಯವರೇ ಕನ್ನಡಿಗರ ಈ ಸೊಲ್ಲು ಆಲಿಸಿ
ಭಾರತವನ್ನು ಜೋಡಿಸಲು ಚಾರಿತ್ರಿಕ “ಬಾರತ್‌ ಜೋಡೋ” ಪಾದಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿಯವರು ಕನ್ನಡಿಗರ ಆತಂಕಗಳನ್ನು ನಿವಾರಿಸುವ ಬದ್ಧತೆ ತೋರುರೆ, ಕನ್ನಡಿಗರ ಈ ಸೊಲ್ಲನ್ನು ಆಲಿಸುವವರೆ? ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ಕನ್ನಡಿಗರ ಹಕ್ಕೊತ್ತಾಯವೇನು ಎಂದು ಇಲ್ಲಿ ತಿಳಿಸಿದ್ದಾರೆ.

https://www.facebook.com/peepaltvkannada/videos/1200412170521513

Related Articles

ಇತ್ತೀಚಿನ ಸುದ್ದಿಗಳು