ಮೈಸೂರು : ನಾನು ಬಿಜೆಪಿಯಲ್ಲಿ ಸಕ್ರಿಯವಾಗಿ ಇರಲಿಲ್ಲ. ಇಲ್ಲಿಯವರೆಗೂ ನಾನು ಬಿಜೆಪಿಯಲ್ಲಿ ಇದ್ದದ್ದು ಅಕ್ರಮವಾಗಿ. ಹಾಗಾಗಿ ಬಿಜೆಪಿ ಪಕ್ಷವನ್ನು ತೊರೆಯಲು ಇಚ್ಛಿಸಿದ್ದೇನೆ ಎಂದು ಬಿಜೆಪಿ ಮುಖಂಡರು, ಸಿನಿಮಾ ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರು ಹೇಳಿದ್ದಾರೆ.
“ಜೆಡಿಎಸ್ ಪಕ್ಷದಲ್ಲಿ ಇದ್ದ ನನ್ನನ್ನು ಕಳೆದ ಎರಡೂವರೆ ವರ್ಷಗಳ ಹಿಂದೆ ಪರಿಷತ್ ಸದಸ್ಯನನ್ನಾಗಿ ಮಾಡುವುದಾಗಿ ಭರವಸೆ ನೀಡಿ ಬಿಜೆಪಿಗೆ ಬರಮಾಡಿಕೊಂಡರು. ಆದರೆ ಯಾವುದೇ ಸ್ಥಾನಮಾನ ಇಲ್ಲ, ಪರಿಷತ್ ಟಿಕೇಟೂ ಇಲ್ಲ. ಮೋಸ ಮಾಡುವುದರಲ್ಲಿ ಬಿಜೆಪಿಗರು ನಿಸ್ಸೀಮರು” ಎಂದು ಸಂದೇಶ್ ನಾಗರಾಜ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಅವರು MLC ಮಾಡದೇ ಇರುವುದೇ ಒಳ್ಳೆಯದು. ಮಾಡಿದ್ದರೆ ಅಲ್ಲೇ ಸಿಕ್ಕಿ ಹಾಕಿಕೊಂಡು ಇಕ್ಕಟ್ಟಿನ ವಾತಾವರಣ ಸೃಷ್ಟಿಯಾಗುತ್ತಿತ್ತು. ಬಿಜೆಪಿ ಅನ್ಯಾಯ ಮಾಡಿದ್ದು ನನಗೆ ಮಾತ್ರವಲ್ಲ. ಮಾಜಿ ಸಚಿವ ವಿಶ್ವನಾಥ್ ಗೆ ಕೂಡಾ ಬಿಜೆಪಿ ನಾಯಕರಿಂದ ಅನ್ಯಾಯವಾಗಿದೆ. ಹಾಗಾಗಿ ಇನ್ನು ಬಿಜೆಪಿ ಸಹವಾಸವೇ ಬೇಡ..” ಎಂದು ಹೇಳಿದ್ದಾರೆ.
ಆಡಳಿತಾತ್ಮಕವಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯಲ್ಲೂ ಸರಿಯಾದ ಪಕ್ಷ. ಹಾಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರಲು ಇಚ್ಛಿಸಿದ್ದೇನೆ. ಈ ಬಗ್ಗೆ ಸಿದ್ದರಾಮಯ್ಯ ಬಳಿ ಮಾತನಾಡಿದ್ದೇನೆ. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿಯೂ ಮಾತನಾಡಲಿದ್ದೇನೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.
ಇದರ ಜೊತೆಗೆ ಬಿಜೆಪಿ ಯಡಿಯೂರಪ್ಪರಿಗೂ ಕೂಡಾ ಅವರಿಗೆ ಅರಿವಿಗೆ ಬಾರದೇ ಅನ್ಯಾಯ ಮಾಡಿದ್ದಾರೆ. ಅವರನ್ನು ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಎಲ್ಲಾ ಸಂಚು ನಡೆದಿದೆ. ಹಾಗಾಗೇ ಯಾವುದೇ ಅಸ್ತಿತ್ವ ಇರದ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರನ ತಂದು ನಿಲ್ಲಿಸುವ ತಯಾರಿ ನಡೆಸಿದ್ದಾರೆ. ಇದು ಬಿಜೆಪಿ ಆಂತರಿಕ ತಂತ್ರಗಾರಿಕೆ, ಎಂದು ತಿಳಿಸಿದ್ದಾರೆ.
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ ಬಹುಮತದಿಂದ ಆಯ್ಕೆ ಆಗಲಿದೆ. ತನ್ನ ದುರಾಡಳಿತದಿಂದ ಬಿಜೆಪಿ ತನ್ನ ಹೆಸರು ಕೆಡಿಸಿಕೊಂಡಿದೆ. ಈ ಕಾರಣದಿಂದ ಬಿಜೆಪಿ 40 ಸ್ಥಾನವನ್ನಾದರೂ ಕಳೆದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ಭವಿಷ್ಯ ನುಡಿದಿದ್ದಾರೆ.