Thursday, June 13, 2024

ಸತ್ಯ | ನ್ಯಾಯ |ಧರ್ಮ

“ಸಂವಿಧಾನ ಸಮರ್ಪಣಾ ದಿನ”ವನ್ನು “ವೇದ ಹಾಗೂ ಮನುಸ್ಮೃತಿ ದಿನ” ಮಾಡುವ ಬಿಜೆಪಿ ಹುನ್ನಾರ : ಚಿಂತಕ ಶಿವಸುಂದರ್

ಈ ಬಾರಿ ನ.26 ರ ಸಂವಿಧಾನ ಸಮರ್ಪಣಾ ದಿನವನ್ನು “ಭಾರತ-ಪ್ರಜಾತಂತ್ರದ ಜನನಿ” ಎಂಬ ಹೆಸರಿನಲ್ಲಿ ದೇಶಾದ್ಯಂತ ಆಚರಿಸಬೇಕೆಂದು ಮೋದಿ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ ನವಂಬರ್ 9 ರಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಕೇಂದ್ರ ಕಚೇರಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ.

ಆ ಆಚರಣೆಯ ಒತ್ತು ಏನಿರಬೇಕೆಂಬ ಬಗ್ಗೆ ICHR- Indian Council For Historical Research ತಯಾರಿಸಿದ  ಎರಡು ಪುಟದ ಒಂದು ಪರಿಕಲ್ಪನಾತ್ಮಕ ಟಿಪ್ಪಣಿ (Concept Note) ಯನ್ನು ಕೂಡ ಅದರ ಜೊತೆ ಲಗತ್ತಿಸಲಾಗಿದೆ. (ಅದು ಈ ಲೇಖನದ attachment ನಲ್ಲಿದೆ).

ಆ ಟಿಪ್ಪಣಿಯ ಕೆಲವು ಭಾಗಗಳು ಹೀಗಿವೆ:
●  ವೇದಗಳ ಕಾಲದಲ್ಲೇ ಭಾರತದಲ್ಲಿ ಪ್ರಜಾತಂತ್ರವಿತ್ತು.
●  ವೇದಗಳ ಕಾಲದಿಂದಲೂ ಗ್ರಾಮಗಳಲ್ಲಿ  ಸಮುದಾಯ ಆಧಾರಿತ ಆಡಳಿತವಿತ್ತು. ಅದು ಪಂಚಾಯತಿ ಮತ್ತು ಖಾಪ್ ಪಂಚಾಯತಿ ರೂಪದಲ್ಲಿತ್ತು.
(ಆರ್ಥಾತ್ ಜಾತಿ ವ್ಯವಸ್ಥೆಯನ್ನು ಪ್ರಜಾತಾಂತ್ರಿಕ ಗ್ರಾಮ ವ್ಯವಸ್ಥೆಯೆಂದು ಬಣ್ಣಿಸಲಾಗುತ್ತಿದೆ!)
●  ಈ ಕಾರಣದಿಂದಾಗಿಯೇ  ಭಾರತವು 2000  ವರ್ಷಗಳಿಂದಲೂ ವಿದೇಶಿಯರ ದಾಳಿಗೆ ತುತ್ತಾಗುತ್ತಲೇ ಬಂದಿದ್ದರೂ ಹಿಂದೂ ಸಂಸ್ಕೃತಿ ಮತ್ತು ನಾಗರಿಕತೆ ಉಳಿದುಕೊಂಡು ಬಂದಿದೆ.
(ಇದು ಆರೆಸ್ಸೆಸ್ ಸರಸಂಘಚಾಲಕ ಗೋಲ್ವಾಲ್ಕರ್  ಪ್ರತಿಪಾದನೆ. ಜಾತಿ ವ್ಯವಸ್ಥೆಯೇ ಈ ದೇಶದ ಅಸ್ಮಿತೆ. ಅದು ಸಡಿಲವಾಗಿದ್ದರಿಂದಲೇ ಭಾರತದ ಈಶಾನ್ಯ ಮತ್ತು ವಾಯುವ್ಯ  ಪ್ರಾಂತ್ಯಗಳಲ್ಲಿ ಪರದೇಸಿ ಧರ್ಮಗಳು ನೆಲಸುವಂತಾಯಿತು ಎಂದು ಅವರ Bunch Of Thoughts ನಲ್ಲಿ ಬರೆದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಯಥಾವತ್ ಅದೇ ಮಾತನ್ನು ಸಂವಿಧಾನ ದಿನದಂದು ಪ್ರಚಾರ ಮಾಡುತ್ತಿದೆ)
●  ಇತ್ತೀಚಿಗೆ ರಾಖಿಗರಿ ಸಂಶೋಧನೆಯಲ್ಲೂ ಭಾರತದ ವೈದಿಕ ನಾಗರೀಕತೆ 5000 ವರ್ಷಗಳಷ್ಟು ಹಿಂದಿನದ್ದೆಂದೂ, ಆ ಕಾಲದಲ್ಲೂ ಪ್ರಜಾತಾಂತ್ರಿಕ ವ್ಯವಸ್ಥೆ ಇತ್ತೆಂದು ಸಾಬೀತಾಗಿದೆ.
(ಇದು ಮತ್ತೊಂದು ಮಹಾ ಸುಳ್ಳು. ರಾಖಿಗರಿ ಸಂಶೋಧನೆಯು  ಹರಪ್ಪಾ ನಾಗರಿಕತೆಗೂ ಆರ್ಯರಿಗೂ ಸಂಬಂಧವಿಲ್ಲ. ಅದು ದ್ರಾವಿಡ ನಾಗರೀಕತೆ ಹೊರತು ಆರ್ಯ ನಾಗರೀಕತೆಯಲ್ಲ ಅರ್ಥಾತ್ ವೇದ ನಾಗರಿಕತೆಯಲ್ಲ ಎಂಬುದುನ್ನು ರಾಖಿಗರಿ ಸಂಶೋಧನೆ ಸಾಬೀತು ಮಾಡಿದೆ)

●  ಭಗವದ್ಗೀತೆಯು ಈ ವೇದ ಪ್ರಣೀತ ಪ್ರಜಾತಾಂತ್ರಿಕತೆಯ ಭಾಗವಾಗಿ ಮಾನವನ ನಡತೆಯಲ್ಲಿ ಜ್ಞಾನ, ಶ್ರದ್ಧೆ , ಕ್ರಿಯೆ ಮತ್ತು ಗುಣಗಳು ವ್ಯಕ್ತವಾಗಬೇಕು ಎಂದು ಪ್ರತಿಪಾದಿಸುತ್ತದೆ.
(ಆದರೆ ಅಂಬೇಡ್ಕರ್ ಅವರು ಸ್ಪಷ್ಟಪಡಿಸುವಂತೆ, ಭಗವದ್ಗೀತೆಯು  ಜಾತಿ ಆಧಾರಿತ ಶ್ರೇಣೀಕರಣವನ್ನು ಪ್ರತಿಪಾದಿಸುವ ಮನುಸ್ಮೃತಿಯ ತಾತ್ವಿಕ ಸಮರ್ಥನೆಯಾಗಿದ್ದು, ಅದರಲ್ಲಿ ಭೋಧಿಸಲಾಗಿರುವ ಜ್ಞಾನ, ಗುಣ ಮತ್ತು ಕ್ರಿಯೆಗಳೆಲ್ಲವೂ ಹುಟ್ಟಿನಿಂದಲೇ ತೀರ್ಮಾನವಾಗಿರುತ್ತದೆ ಎಂಬ ಜಾತಿ ಶ್ರೇಣೀಕರಣದ ತಾರತಮ್ಯ ತತ್ವವನ್ನೇ ಹೇಳುತ್ತದೆ. ಆದರೆ ಮೋದಿ ಸರ್ಕಾರ ಅದನ್ನು ಭಾರತದ ಸನಾತನ ಪ್ರಜಾತಂತ್ರ ಎಂದು ಆಚರಿಸಲು ಆದೇಶಿಸುತ್ತಿದೆ )

●  ಇದಲ್ಲದೆ, ಜಗತ್ತಿನ ಇತರ ಪ್ರಾಚೀನ ಪ್ರಜಾತಂತ್ರಗಳಾದ ಗ್ರೀಸ್ ಮತ್ತು ರೋಮನ್ ಪ್ರಜಾತಂತ್ರಕ್ಕೂ ಮತ್ತು ಭಾರತದ ವೈದಿಕ ಪ್ರಜಾತಂತ್ರಕ್ಕೂ ಇದ್ದ ದೊಡ್ಡ ವ್ಯತ್ಯಾಸವೇನೆಂದರೆ ಭಾರತದಲ್ಲಿ ಹುಟ್ಟಿನ ಆಧಾರದಲ್ಲಿ ಸಂಪತ್ತು, ಜ್ಞಾನ ಮತ್ತು ರಾಜ್ಯಅಧಿಕಾರಗಳು ಒಂದೆಡೆ ಕೇಂದ್ರೀಕರಣಗೊಂಡು ನಿರಂಕುಶ ಸಾಮ್ರಾಜ್ಯಗಳು ರೂಪುಗೊಳ್ಳಲಿಲ್ಲ.
(ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದು ಇರಬಹುದೇ??? ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ಹುಟ್ಟಿನ ಆಧಾರದ ಜಾತಿ ವ್ಯವಸ್ಥೆ, ಜಾತಿ ತಾರತಮ್ಯ ಇರುವುದು ಭಾರತದ ಬ್ರಾಹ್ಮಣಿಯ ಸಾಮಾಜಿಕ  ವ್ಯವಸ್ಥೆಯಲ್ಲಿ ಮಾತ್ರ. ಸಂಪತ್ತು, ಅಧಿಕಾರ ಮತ್ತು ಜ್ಞಾನ ವನ್ನು ವೇದಗಳ ಪ್ರಮಾಣಡ್ಮದಲೇ ದಲಿತರಿಂದ ಮತ್ತು ಶೂದ್ರರಿಂದ, ಮಹಿಳೆಯರಿಂದ ಕಸಿದು ಕೇವಲ ಬ್ರಾಹ್ಮಣಿಯ ಮೇಲ್ಜಾತಿಗಳ ಖಾಸಗಿ ಆಸ್ತಿಯನ್ನಾಗಿ ಮಾಡಿದ್ದು ಭಾರತದ ವೇದ -ಪುರಾಣ -ಶಾಸ್ತ್ರ -ಸ್ಮೃತಿ -ಶ್ರುತಿಗಳನ್ನಾಧರಿಸಿದ ಈ ದೇಶದ ಹಿಂದೂ ಬ್ರಾಹ್ಮಣಿಯ ಜಾತಿ ವ್ಯವಸ್ಥೆ.

ಆದ್ದರಿಂದಲೇ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಪ್ರಜಾತಂತ್ರ, ಸ್ವಾತಂತ್ರ್ಯ-ಸಮಾನತೆ-ಭ್ರಾತ್ತ್ರುತ್ವ ಇಲ್ಲವೇ ಇಲ್ಲ. ಏಕೆಂದರೆ ಅದು ತಾರತಮ್ಯವನ್ನೇ ಆಧರಿಸಿದ ವೇದ-ಪುರಾಣಗಳನ್ನು ಅನುಸರಿಸುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರವೆಂಬುದು ಭಾರತಕ್ಕೆ ಒದಗಬಹುದಾದ ಅತಿ ದೊಡ್ಡ ವಿಪತ್ತು ಎಂದು ಎಚ್ಚರಿಸಿದ್ದರು.

ಆದರೆ ಮೋದಿ ಸರ್ಕಾರ ಸಂವಿಧಾನ ದಿನದಂದು ಅದೇ ವೇದ-ಪುರಾಣ ಆಧರಿಸಿದ ಜಾತಿ ವ್ಯವಸ್ಥೆಯನ್ನೇ ಭಾರತದ ಹಿರಿಮೆ ಎಂದು ಆಚರಿಸಲು ಆದೇಶಿಸಿದ್ದಾರೆ)

ಹಾಗೆ ನೋಡಿದರೆ, 1949  ರ ನವಂಬರ್ 25 ರಂದು ಭಾರತಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುತ್ತಾ ಅಂಬೇಡ್ಕರ್ ಅವರು ಮಾಡಿದ ಭಾಷಣದಲ್ಲಿ ಕೂಡ ಪ್ರಾಚೀನ ಭಾರತದಲ್ಲಿ ಪ್ರಜಾತಂತ್ರವಿತ್ತು ಎಂದು ಹೇಳಿದ್ದಾರೆ.

ಆದರೆ ಅದು ವೇದ ಭಾರತದಲ್ಲಲ್ಲ
ವೇದವನ್ನು ನಿರಾಕರಿಸುತ್ತಾ ಸಮತೆ, ಮಮತೆಯ ಮೌಲ್ಯಗಳ ಆಧಾರದಲ್ಲಿ ಹುಟ್ಟಿಕೊಂಡದ್ದು ಬುದ್ಧ ಕಾಲದ ಭಾರತದಲ್ಲಿ. ಬುದ್ಧ ಸಂಘಗಳಲ್ಲಿ.

ಇಂಥಾ ನೈಜ ಪ್ರಜಾತಂತ್ರವನ್ನು ಪುಷ್ಯ ಶೃಂಗ ನೇತೃತ್ವದಲ್ಲಿ ಬ್ರಾಹ್ಮಣರು ಪ್ರತಿಕ್ರಾಂತಿ ಮಾಡಿ ಸರ್ವನಾಶ ಮಾಡಿದರು. ಬ್ರಾಹ್ಮಣ್ಯದ ದಿಗ್ವಿಜಯದೊಂದಿಗೆ ಭಾರತದ ಸ್ವದೇಶಿ ಪ್ರಜಾತಂತ್ರ ಪತನಗೊಂಡಿತ್ತು. ಈಗ ಮತ್ತೊಮ್ಮೆ ಪ್ರಜಾತಂತ್ರ ಸಾಧಿಸಿದ್ದೇವೆ. ಆದರೆ ಅದು ಕೂಡ ಸರ್ವಾಧಿಕಾರದ ಹಾದಿ ಹಿಡಿಯುವ ಸಾಧ್ಯತೆ ಇದೆಯೆಂದು ಅಂಬೆಡ್ಕರ್ ಸಂವಿಧಾನ ಸಮರ್ಪಣಾ ದಿನದಂದೇ ಎಚ್ಚರಿಸಿದ್ದರು.

ಈಗ ಮೋದಿ ಸರ್ಕಾರ ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಜನಕ್ರಾಂತಿಯನ್ನು-ಸಂವಿಧಾನವನ್ನು ನಾಶಗೊಳಿಸಿ ಮತ್ತೆ  ವೇದಕಾಲದ ವರ್ಣಾಶ್ರಮವನ್ನೇ ಪ್ರಜಾತಂತ್ರ ಎಂದು ಪ್ರತಿಕ್ರಾಂತಿ ಮಾಡುತ್ತಿದ್ದಾರೆ.

ಈ ಪ್ರಜಾತಂತ್ರ ವಿರೋಧಿ ಬ್ರಾಹ್ಮಣಿಯ  ಸರ್ವಾಧಿಕಾರಿ ತತ್ವವನ್ನು ಅಧಿಕೃತಗೊಳಿಸಲು ನವಂಬರ್ 26ರ ಸಂವಿಧಾನ ಸಮರ್ಪಣಾ ದಿನವನ್ನೇ ಬಳಸಿಕೊಳ್ಳುತ್ತಿದ್ದಾರೆ.

ಇದನ್ನು ಭಾರತದ ಜನತೆ ತಿರಸ್ಕರಿಸಬೇಕು.
ಅದರ ಅರ್ಥ ಪ್ರಾಚಿನ ಭಾರತದಲ್ಲಿ ಪ್ರಜಾತಂತ್ರವಿರಲಿಲ್ಲ ಎಂದೇನಲ್ಲ. ಅಂಬೇಡ್ಕರ್ ಸ್ಪಷ್ಟಪಡಿಸಿರುವಂತೆ ಬೌದ್ಧ ಸಂಘಗಳಲ್ಲಿ ಇಂದಿನ ಆಧುನಿಕ ಸಂಸದೀಯ ಪ್ರಜಾತಂತ್ರದ ಎಲ್ಲಾ ರಿವಾಜುಗಳೂ ಇದ್ದವು. ಮತ್ತು ಬೌದ್ಧ ಸಂಘದ ಮೌಲ್ಯ ಸಮತೆ ಮತ್ತು ಮಮತೆಗಳಾಗಿದ್ದವು. ಹಾಗೆಯೇ ಬಸವ ಕ್ರಾಂತಿಯ ಅನುಭವ ಮಂಟಪವೂ ಕೂಡ. ನಮ್ಮ ಇತಿಹಾಸದಲ್ಲಿ ನಾವು ಹೆಮ್ಮೆ ಪಡಬೇಕಾದದ್ದು, ಮಾರ್ಗದರ್ಶಿಯಾಗಬೇಕಿರುವುದು ಬುದ್ಧ, ಬಸವರೇ ವಿನಾ ವೇದ-ಪುರಾಣ- ಗೀತಗಳಲ್ಲ.

ಆದರೆ ICHR ತಯಾರು ಮಾಡಿರುವ Concept Note ನಲ್ಲಿ ಬುದ್ಧನ ಬಗ್ಗೆಯಾಗಲೀ, ಅಪ್ಪಟ  ಭಾರತೀಯ  ಅವೈದಿಕ ಹಾಗೂ ಬ್ರಾಹ್ಮಣ ವಿರೋಧಿ  ಪ್ರಜಾತಾಂತ್ರಿಕ ಜ್ಞಾನ ದರ್ಶನಗಳ  ಬಗ್ಗೆ ಒಂದೇ ಒಂದು ಪದವೂ ಉಲ್ಲೇಖವಾಗಿಲ್ಲ.

ಬ್ರಾಹ್ಮಣೀಕರಣವೇ ಭಾರತೀಕರಣ ಎಂಬ ಸಂಘಿ ಹುನ್ನಾರ ಇದರಲ್ಲೂ ಎದ್ದು ಕಾಣುತ್ತಿದೆ. ಶೋಷಕರ ಇತಿಹಾಸವನ್ನು ನಿರಾಕರಿಸಿ ಶೋಷಿತರ ಪ್ರಜಾತಾಂತ್ರಿಕ ಇತಿಹಾಸವನ್ನು ಈ ನವಂಬರ್ 26 ರಂದೂ ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮಮೇಲಿದೆ.
ಅಲ್ಲವೇ?

– ಶಿವಸುಂದರ್

Related Articles

ಇತ್ತೀಚಿನ ಸುದ್ದಿಗಳು