Home ರಾಜಕೀಯ ಬಿಜೆಪಿಯವರಂತೆ ಮಿಸ್ ಕಾಲ್ ಕೊಟ್ಟು ಸದಸ್ಯರನ್ನು ನೇಮಕ ಮಾಡಿಲ್ಲ: ಬಿ.ಕೆ ಹರಿಪ್ರಸಾದ್

ಬಿಜೆಪಿಯವರಂತೆ ಮಿಸ್ ಕಾಲ್ ಕೊಟ್ಟು ಸದಸ್ಯರನ್ನು ನೇಮಕ ಮಾಡಿಲ್ಲ: ಬಿ.ಕೆ ಹರಿಪ್ರಸಾದ್

0

ಬೆಂಗಳೂರು : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಬೆಂಗಳೂರಿಗೆ ಆಗಮಿಸಿದ್ದು, ಈ ಸಲುವಾಗಿ ಹಮ್ಮಿಕೊಂಡಿದ್ದ ಸರ್ವೋದಯ ಸಮಾವೇಶದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಭಾಗವಹಿಸಿದ್ದು, ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಮ್ಮ ಪುಣ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್‌, ʼಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡೀ ರಾಷ್ಟ್ರದಲ್ಲಿನ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಮ್ಮ ಪುಣ್ಯ. ಇದೊಂದು ಪವಿತ್ರವಾದ ಪಕ್ಷವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಪಕ್ಷವಾಗಿದೆʼ ಎಂದು ಹೇಳಿದರು.

ʼಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗುವ ಮುನ್ನ ಬಿಜೆಪಿ ಅವರು ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಆರೋಪ ಮಾಡುತ್ತಿತ್ತು. ಪ್ರಪಂಚದಲ್ಲಿ ಅತ್ಯಂತ ಹಳೆಯ ಹಾಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ನಾವು ಬಿಜೆಪಿಯವರಂತೆ ಮಿಸ್ ಕಾಲ್ ಕೊಟ್ಟು ಸದಸ್ಯರನ್ನು ನೇಮಕ ಮಾಡಿಲ್ಲʼ ಎಂದು ಬಿಜೆಪಿಯನ್ನು ಟೀಕಿಸಿದರು.

ʼಇದುವರೆಗೂ ಪಾರ್ಸಿ, ಮುಸಲ್ಮಾನರು, ಕ್ರೈಸ್ತರು, ಮಹಿಳೆಯರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ಅವರು ಚುನಾವಣೆ ಮಾಡಿದ್ದೀರಾ? ನಮ್ಮಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಆದರೆ ಆರ್ ಎಸ್ ಎಸ್ ಕೇವಲ ಒಂದು ಜಾತಿಗೆ ಸೇರಿದ ಸಂಘಟನೆ ಆಗಿದೆ. ಹೀಗಾಗಿ ಬಿಜೆಪಿ, ಕಾಕಿ ಚಡ್ಡಿ ಹಾಗೂ ಕರಿ ಟೋಪಿ ಅವರಿಂದ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ನಾವು ಕಲಿಯುವ ಅಗತ್ಯವಿಲ್ಲʼ ಎಂದು ಮಾತನಾಡಿದರು.

ʼಈ ಸಂದರ್ಭದಲ್ಲಿ ಖರ್ಗೆ ಅವರ ಮುಂದೆ ಈ ತ್ರಿವರ್ಣ ಧ್ವಜ ಮರ್ಯಾದೆ ಕಾಪಾಡುವ ಜವಾಬ್ದಾರಿ ಇದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸುವ ಸವಾಲು ಇದೆ. ಈ ಹೋರಾಟದಲ್ಲಿ ನಾವೆಲ್ಲರೂ ನಿಮ್ಮ ಜತೆಯಾಗಿ ಹೆಜ್ಜೆ ಹಾಕುತ್ತೇವೆʼ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಖರ್ಗೆಯವರಿಗೆ ಭರವಸೆ ನೀಡಿದರು.

You cannot copy content of this page

Exit mobile version