ಸಚಿವ ಸತೀಶ್ ಜಾರಕಿಹೊಳಿ ವಿರುದ್ಧದ ಇಡಿ ದಾಳಿ ಸಂವಿಧಾನ ಮತ್ತು ಕಾಂಗ್ರೆಸ್ ಮೇಲಿನ ದಾಳಿ: ಬಿ.ಕೆ. ಹರಿಪ್ರಸಾದ್ ಆಕ್ರೋಶ

ಕರ್ನಾಟಕ ಸರ್ಕಾರದ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಯು ಕೇವಲ ವೈಯಕ್ತಿಕವಲ್ಲ, ಅದು ಸಂವಿಧಾನ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆಯೇ ನಡೆದಿರುವ ವ್ಯವಸ್ಥಿತ ದಾಳಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯನ್ನು ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಲಿತರು ಮತ್ತು ಹಿಂದುಳಿದ, ದುರ್ಬಲ ವರ್ಗದ ನಾಯಕರು ರಾಜಕೀಯವಾಗಿ ಹಾಗೂ ಸಾರ್ವಜನಿಕ ಜೀವನದಲ್ಲಿ ಶಕ್ತಿಯುತವಾಗಿ ಬೆಳೆಯುವುದನ್ನು ಸಹಿಸದ ಶಕ್ತಿಗಳು ಇಂತಹ ಷಡ್ಯಂತ್ರ ನಡೆಸುತ್ತಿವೆ ಎಂದು ಹರಿಪ್ರಸಾದ್ ಕಿಡಿಕಾರಿದರು. ಬುದ್ಧ, ಬಸವಣ್ಣ ಮತ್ತು ಏಸು ಕ್ರಿಸ್ತನ ಕಾಲದಿಂದಲೂ ಸಮಾಜ ಸುಧಾರಣೆಗೆ ಮುಂದಾದವರಿಗೆ ಇಂತಹ ಕಷ್ಟಗಳು ತಪ್ಪಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಡಿ, ಐಟಿ ಹಾಗೂ ಸಿಬಿಐ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ನಾಯಕರನ್ನು ಬೆದರಿಸಿ, ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂಸ್ಕೃತಿಯನ್ನು ಮುಂದುವರಿಸಿದೆ ಎಂದು ಅವರು ಆರೋಪಿಸಿದರು.

ಮಹಾರಾಷ್ಟ್ರದ ಅಜಿತ್ ಪವಾರ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ 70 ಸಾವಿರ ಕೋಟಿ ರೂಪಾಯಿ ಹಗರಣದ ಆರೋಪ ಮಾಡಿ, ಕೆಲವೇ ದಿನಗಳಲ್ಲಿ ಅವರನ್ನು ತಮ್ಮ ಮೈತ್ರಿಕೂಟಕ್ಕೆ ಸೇರಿಸಿಕೊಂಡರು ಎಂದು ಹರಿಪ್ರಸಾದ್ ನೆನಪಿಸಿದರು. ಅಮಿತ್ ಶಾ ಅವರ ಪುತ್ರ ಉದ್ಯಮ ಆರಂಭಿಸಿದಾಗ 40 ಸಾವಿರ ರೂಪಾಯಿ ಇತ್ತು, ಈಗ ಅವರ ಆಸ್ತಿ 40 ಸಾವಿರ ಕೋಟಿಗೆ ಏರಿಕೆಯಾಗಿದೆ. ಅವರನ್ನು ಬಿಸಿಸಿಐ ಮತ್ತು ಐಸಿಸಿಗೆ ತಂದು ಕೂರಿಸಲಾಗಿದೆ; ಇಂತಹವರ ಮೇಲೆ ಇಡಿ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡಿವೆ ಎಂದ ಅವರು, ರಾಹುಲ್ ಗಾಂಧಿ ಅವರನ್ನೇ 52 ಗಂಟೆಗಳ ಕಾಲ ವಿಚಾರಣೆ ನಡೆಸಿದರೂ ಏನೂ ಮಾಡಲು ಸಾಧ್ಯವಾಗಲಿಲ್ಲ, ನಾವು ಇಂತಹ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಗುಡುಗಿದರು. ಸತೀಶ್ ಜಾರಕಿಹೊಳಿ ಅವರ ರಾಜಕೀಯ ಶಕ್ತಿ ಏನೆಂಬುದು ಬಿಜೆಪಿಗೆ ತಿಳಿದಿರುವುದರಿಂದಲೇ ಈ ದಾಳಿ ನಡೆದಿದ್ದು, ಅವರೊಂದಿಗೆ ಕಾಂಗ್ರೆಸ್ ಪಕ್ಷ ಮತ್ತು ಹೈಕಮಾಂಡ್ ಸಂಪೂರ್ಣ ಬಂಡೆಯಂತೆ ನಿಂತಿದೆ ಎಂದು ಅವರು ಭರವಸೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು