Saturday, June 29, 2024

ಸತ್ಯ | ನ್ಯಾಯ |ಧರ್ಮ

“ಆಪರೇಷನ್ ಕಮಲ”ದಲ್ಲಿ ಬಿ.ಎಲ್.ಸಂತೋಷ್ ಹೆಸರು ; KCR ಬಿಡುಗಡೆ ಮಾಡಿದ ಸಾಕ್ಷ್ಯದಲ್ಲಿ ಏನೇನಿದೆ?

ತೆಲಂಗಾಣದಲ್ಲಿ ಕಾನೂನು ಬಾಹಿರ “ಆಪರೇಷನ್ ಕಮಲ”ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ “ಆಪರೇಷನ್ ಕಮಲ” ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದೆ.

ತೆಲಂಗಾಣದಲ್ಲಿ ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ “ಆಪರೇಷನ್ ಕಮಲ”ದ ರೂವಾರಿಗಳು ತಾವು ಬಿಜೆಪಿ ಪಕ್ಷದ ಕಡೆಯಿಂದಲೇ ಬಂದದ್ದು, ‘ಶಾಸಕರ ಖರೀದಿಯ ಅಷ್ಟೂ ವ್ಯವಸ್ಥೆಯನ್ನು ನಮ್ಮ ಪಕ್ಷದ ರಾಷ್ಟ್ರ ಮಟ್ಟದ ತಂಡ ನಿರ್ವಹಿಸುತ್ತಿದ್ದು, ಇದರಲ್ಲಿ ಪಕ್ಷದ ರಾಜ್ಯ ಮುಖಂಡರ ಯಾವ ಪಾತ್ರವೂ ಇಲ್ಲ’ ಎಂದು ಆಡಿಯೋದಲ್ಲಿ ಹೇಳಿದ್ದಾರೆ. ಇದರ ಜೊತೆಗೆ ‘ಮೂರು ಪ್ರಮುಖ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ಇದ್ದು ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಡೆಯಲಿದೆ. ಶಾಸಕರ ಯೋಗ್ಯತೆ ನೋಡಿ ಅವರ ಬೆಲೆ ನಿಗದಿ ಮಾಡಲಾಗುತ್ತದೆ. ಒಬ್ಬೊಬ್ಬ ಶಾಸಕನಿಗೆ ಕನಿಷ್ಟ 50 ಕೋಟಿಯಿಂದ 100 ಕೋಟಿ ವರೆಗೂ ನಿಗದಿ ಮಾಡಲಾಗಿದೆ. ಆ ಮೂರು ಪ್ರಮುಖ ವ್ಯಕ್ತಿಗಳೆಂದರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ’ ಎಂದು ಹೇಳಿದ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ತೆಲಂಗಾಣ ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಪ್ರಮುಖ ಆರೋಪಿಗಳಾದ ಬಿಜೆಪಿ ಹಿನ್ನೆಲೆಯವರು ಎಂದು ಹೇಳಲಾದ ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎನ್ನುವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರು ಪ್ರಮುಖ ಆರೋಪಿಗಳು ತೆಲಂಗಾಣದ ಆಡಳಿತಾರೂಢ ಟಿಆರ್ಎಸ್ ಪಕ್ಷದ ಶಾಸಕ ರೋಹಿತ್ ರೆಡ್ಡಿ ಜೊತೆಗೆ ನಡೆಸಿದ ಸಂಭಾಷಣೆ ಇದಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನಡೆಸುತ್ತಿರುವ “ಆಪರೇಷನ್ ಕಮಲ”ದ ಮಾದರಿ ಹೇಗೆ ಇರಲಿದೆ ಎಂಬುದನ್ನು ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ.

ಖದೀಮರನ್ನು ಖೆಡ್ಡಾಗೆ ಉರುಳಿಸಿದ ಬಗೆ ಹೇಗಿತ್ತು? ಇದು “ಆಪರೇಷನ್ ನಾರಿಯಲ್ ಪಾನಿ”!
ಅಂದಹಾಗೆ ರಾಷ್ಟ್ರಾದ್ಯಂತ ಬಿಜೆಪಿ ಪಕ್ಷ ಆಪರೇಷನ್ ಕಮಲದ ಮೂಲಕ ಹಿಂಬಾಗಿಲ ರಾಜಕಾರಣ ಮಾಡುತ್ತಾ ಬಂದಿದ್ದು ಎಲ್ಲೂ ಸಹ ಅಧಿಕೃತವಾಗಿ ಸಿಕ್ಕಿ ಬಿದ್ದಿರಲಿಲ್ಲ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲದ ಸೂಚನೆ ಸಿಕ್ಕ ತಕ್ಷಣವೇ ಟಿಆರ್ಎಸ್ ಪಕ್ಷದ ನಾಯಕರು ಜಾಗೃತಗೊಂಡಿದ್ದಾರೆ.

ತೆಲಂಗಾಣದ ಪೊಲೀಸರ ಸಹಕಾರ ಪಡೆದ ಟಿಆರ್ಎಸ್ ಪಕ್ಷದ ನಾಯಕರು ಮುಂಚಿತವಾಗಿಯೇ ವ್ಯವಸ್ಥೆಯಾಗಿದ್ದ ಶಾಸಕ ಪೈಲಟ್ ರೋಹಿತ್ ರೆಡ್ಡಿಯವರ ಫಾರಂ ಹೌಸ್ ನ ನಾಲ್ಕು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ನಂತರ ರೋಹಿತ್ ರೆಡ್ಡಿ ಜೇಬಿನಲ್ಲಿ ಆಡಿಯೋ ರೆಕಾರ್ಡರ್ ಅಳವಡಿಸಿದ್ದಾರೆ. ನಂತರ ಅತಿಥಿಗಳಂತೆ ಬಂದಿದ್ದ ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಆಪರೇಷನ್ ಕಮಲದ ಅಷ್ಟೂ ಪ್ರಕ್ರಿಯೆಯನ್ನು ಬಾಯಿ ಬಿಡಿಸಿದ್ದಾರೆ. ಪ್ರಮುಖವಾಗಿ ಆಪರೇಷನ್ ಕಮಲ ಹೇಗೆ ನಡೆಯಲಿದೆ, ಇದರ ರೂವಾರಿಗಳು ಯಾರು, ಒಬ್ಬೊಬ್ಬ ಶಾಸಕರನ್ನು ಎಷ್ಟು ಹಣ ಕೊಟ್ಟು ಕೊಂಡುಕೊಳ್ಳಲಾಗುತ್ತದೆ, ರಾಜೀನಾಮೆ ನಂತರ ಚುನಾವಣೆಗೆ ಬಿ.ಫಾರಂ ನೀಡುವ ಬಗ್ಗೆ, ಚುನಾವಣೆ ಗೆಲ್ಲಲು ಬೇಕಾದ ವ್ಯವಸ್ಥೆ ಬಗ್ಗೆ, ಹೀಗೆ ಎಲ್ಲಾ ವಿಚಾರಗಳು ಚರ್ಚೆಯಾಗಿವೆ.

ನಂತರ ಪೂರ್ವ ನಿಯೋಜನೆಯಂತೆ ಶಾಸಕ ರೋಹಿತ್ ರೆಡ್ಡಿ ಫಾರಂ ಹೌಸ್ ನ ಸಿಬ್ಬಂದಿಗೆ “ನಾರಿಯಲ್ ಪಾನಿ”(ಎಳನೀರು) ಕೊಡಲು ಹೇಳುತ್ತಾರೆ. ಆ “ನಾರಿಯಲ್ ಪಾನಿ”ಯೇ ಪೊಲೀಸರಿಗೆ ಸೂಚನೆ ಕೊಡುವ ಕೋಡ್ ವರ್ಡ್ ಆಗಿರುತ್ತದೆ. ನಂತರ ಪೊಲೀಸರು ಬಂದ ಖದೀಮರು ಮತ್ತು ಅವರ ಬಳಿಯಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳುತ್ತಾರೆ. ಈ ಅಷ್ಟೂ ಪ್ರಕ್ರಿಯೆ ಸಿನಿಮೀಯ ರೀತಿಯಲ್ಲಿದ್ದು ಟಿಆರ್ಎಸ್ ಪಕ್ಷದ ಪ್ರಮುಖರು ಖದೀಮರನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಟಿಆರ್ಎಸ್ ಪಕ್ಷ ಆಪರೇಷನ್ ಕಮಲದ ರೂವಾರಿಗಳನ್ನು ಸಾಕ್ಷ್ಯ ಸಮೇತರಾಗಿ ಹಿಡಿದು ಹಾಕಿದ್ದು, ತನಿಖೆ ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ನಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು