Home ಬ್ರೇಕಿಂಗ್ ಸುದ್ದಿ ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಮಾಡಿ – ಮಾಜಿ ಸಿಎಂ ಸಿದ್ದರಾಮಯ್ಯ

ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಮಾಡಿ – ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರಗೂ ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಭಾವುಕರಾಗಿ ತಮ್ಮ ಕ್ಷೇತ್ರ ವರುಣಾದ ಜನತೆಗೆ ಮನವಿ ಮಾಡಿದ್ದಾರೆ. ಈ ಮೂಲಕ 2028ರ ಚುನಾವಣೆಯಲ್ಲಿ ತಾವು ವರುಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂಬ ಸುಳಿವು ನೀಡಿದ್ದಾರೆ. ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ವರುಣಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು, ದಾಸನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, “ರಾಜ್ಯದಲ್ಲಿ ಭೀಕರ ಬರಗಾಲ‌ ಇದೆ. 150 ವರ್ಷಗಳಲ್ಲೇ ಅತಿ ದೊಡ್ಡ ಭೀಕರ ಬರ ಇದಾಗಿದೆ. 220 ತಾಲೂಕು ಈ ಹೊಡೆತಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಿದ್ದರೂ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿ ಆಗಿದ್ದಾರೆ. ನಾನು‌ ರಾಜ್ಯದಲ್ಲಿ ಎಂಟು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದೇನೆ. ರಾಹುಲ್ ಗಾಂಧಿ ಯಾವಾಗ ಹೇಳ್ತಾರೆ, ಅಂದೇ ಸಿಎಂ ಸ್ಥಾನವನ್ನು ಬಿಡುತ್ತೇನೆ ಎಂದು ನಾಲ್ಕೈದು ಬಾರಿ ಹೇಳಿದ್ದೆ. ಅಂತೆಯೇ, ನಡೆದುಕೊಂಡಿದ್ದೇನೆ” ಎಂದರು. ವರುಣ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಎರಡು ಬಾರಿ ಮುಖ್ಯಮಂತ್ರಿ ಹಾಗೂ ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಲು ವರುಣ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.

ನನ್ನ ರಾಜಕೀಯ ಶ್ರೇಯಸ್ಸಿಗೆ ವರುಣದ ಮತದಾರರೇ ಕಾರಣ. ಶಾಸಕನಾಗಿರಲಿ, ಇಲ್ಲದಿರಲಿ ವರುಣ ಕ್ಷೇತ್ರದ ಸೇವೆಯನ್ನು ಮುಂದುವರಿಸುತ್ತೇನೆ. ವರುಣ ಕ್ಷೇತ್ರವನ್ನು ನಾನು ಯಾವತ್ತೂ ಮರೆಯುವುದಿಲ್ಲ. ಇನ್ನೂ ಒಂದೂವರೆ ವರ್ಷ ಶಾಸಕನಾಗಿ ಇರುತ್ತೇನೆ. ನನಗೆ ಆಶೀರ್ವಾದ ಮಾಡಿದಂತೆ ಯತೀಂದ್ರ ಅವರಿಗೂ ನೀವು ಆಶೀರ್ವಾದ ಮಾಡಬೇಕು” ಎಂದು ಕೇಳಿಕೊಂಡರು. ಈ ಮಧ್ಯೆ, ನೀವು ಮತ್ತೆ 2028ರ ಚುನಾವಣೆಗೂ ನಿಲ್ಲಬೇಕು. ನಿಮ್ಮನ್ನು ನಾವು ಗೆಲ್ಲಿಸುತ್ತೀವಿ ಎಂದು ವರುಣ ಕ್ಷೇತ್ರದ ಜನರು ಹೇಳಿದ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿದ್ದರಾಮಯ್ಯ ಅವರು ಭಾಷಣ ಮುಗಿಸಿದ್ದು, ಮಾಜಿ ಸಿಎಂ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತು.

You cannot copy content of this page

Exit mobile version