ಹಾಸನ : ಪ್ರಸಿದ್ಧ ಹಾಸನಾಂಬ ಜಾತ್ರಾ ಮಹೋತ್ಸವದ ಸಿದ್ಧತೆಯ ನೆಪದಲ್ಲಿ ಹಾಸನಾಂಬ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ವಾಸವಿರುವ ನೂರಾರು ಕುಟುಂಬಗಳು ಹಾಗೂ ವ್ಯಾಪಾರಸ್ಥರು ಜಿಲ್ಲಾಡಳಿತದ ಕ್ರಮದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದೇವಸ್ಥಾನದ ಸುತ್ತಮುತ್ತ ದಿಗ್ಬಂಧನ ಹಾಕಿ ಜನರ ಓಡಾಟಕ್ಕೆ ಅಡ್ಡಿಪಡಿಸುತ್ತಿರುವ ಕ್ರಮವನ್ನು ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಸನಾಂಬ ದೇವಸ್ಥಾನದ ಸುತ್ತಮುತ್ತ ನೂರಾರು ಕುಟುಂಬಗಳು ದಶಕಗಳಿಂದ ವಾಸಿಸುತ್ತಿದ್ದು, ಹಾಸನಾಂಬ ಜಾತ್ರೆ ಎಂಬ ನೆಪದಲ್ಲಿ ಅವರನ್ನು ಮನೆ ಬಿಟ್ಟು ಹೊರ ಹೋಗದಂತೆ, ಗೇಟ್ ಅಳವಡಿಸಿ ದಿಗ್ಬಂಧನ ಹಾಕಲಾಗಿದೆ. ಇದರಿಂದ ಸ್ಥಳೀಯರು ಮೂಲಭೂತ ಅಗತ್ಯಗಳಿಗೂ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತ್ರಾ ಸಿದ್ಧತೆಯ ಭಾಗವಾಗಿ ಜಿಲ್ಲಾಡಳಿತ ಸೆಪ್ಟೆಂಬರ್ ೨೯ ರಿಂದಲೇ ದೇವಸ್ಥಾನದ ಸುತ್ತಮುತ್ತಲಿನ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದು, ಸಾವಿರಾರು ಕುಟುಂಬಗಳ ಜೀವನೋಪಾಯ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಅಂಗಡಿ ಮುಚ್ಚಿದ ಪರಿಣಾಮ ಸಾವಿರಾರು ಕೂಲಿ ಕಾರ್ಮಿಕರು, ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ತಿಂಗಳುಗಟ್ಟಲೆ ವ್ಯವಹಾರ ನಿಂತುಹೋಗಿರುವುದರಿಂದ ಕೋಟ್ಯಂತರ ರೂ. ನಷ್ಟ ಎದುರಾಗಲಿದೆ.
ಅಂಗಡಿಗಳಲ್ಲಿರುವ ವಸ್ತುಗಳ ಅವಧಿ ಮುಗಿಯುವ ಆತಂಕವೂ ಇದೆ ಎಂದು ಅವರು ವಿಷಾದಿಸಿದರು. ಇಲ್ಲೊಂದು ಶಾಲೆ ಕೂಡ ಇದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೇ ಉದಾಸೀನವಾಗಿ ಮಾತನಾಡಿದ್ದಾರೆ ಎಂದು ದೂರಿದರು. ಇದಲ್ಲದೆ ನಿವಾಸಿಗಳಿಗೆ ಸ್ವಂತ ವಾಹನಗಳನ್ನು ತೆಗೆದುಕೊಂಡು ಬರಲು ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಸಮಸ್ಯೆ ಉಂಟಾದರೆ ಆಂಬ್ಯುಲೆನ್ಸ್ ಬರಲು, ಬೆಂಕಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ವಾಹನ ತಲುಪಲು ಯಾವುದೇ ವ್ಯವಸ್ಥೆಯಿಲ್ಲ. ಇದು ಸಂಪೂರ್ಣ ನಿರ್ಲಕ್ಷ್ಯ ಮತ್ತು ಅನ್ಯಾಯ ಆಕ್ರೋಶ ವ್ಯಕ್ತಪಡಿಸಿದರು. ಜಾತ್ರೆ ಆರಂಭಕ್ಕಿಂತ ಮೊದಲು ಜಿಲ್ಲಾಡಳಿತ ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಬೇಕಾಗಿತ್ತು. ಆದರೆ ಯಾವುದೇ ಸಂವಾದವಿಲ್ಲದೆ ಬಲವಂತದ ಕ್ರಮ ಕೈಗೊಳ್ಳಲಾಗಿದೆ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಆಡಳಿತ ತಕ್ಷಣ ಕ್ರಮ ಕೈಗೊಂಡು ಸ್ಥಳೀಯರಿಗೆ ಓಡಾಡಲು, ವ್ಯಾಪಾರಿಗಳಿಗೆ ತಮ್ಮ ಜೀವನೋಪಾಯ ಮುಂದುವರಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಹಾಸನಾಂಬ ಜಾತ್ರಾ ಮಹೋತ್ಸವ ಮುಗಿಯುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ನಿವಾಸಿಗಳಾದ ಸೋಮಶೇಖರ್, ಉಮೇಶ್, ಅಂಬಿಕಾ, ದಿನೇಶ್, ಕೇಶವಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.