ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌

ಕೇವಲ ಮದುವೆಯಾಗುವ ಉದ್ದೇಶದಿಂದ ಧರ್ಮ ಬದಲಿಸಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಇದೇ ವೇಳೆ, ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧರ್ಮವನ್ನು ಬದಲಿಸಿಕೊಳ್ಳುವ ಸ್ವಾತಂತ್ರ್ಯವಿದೆ ಎಂಬುದನ್ನೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಥಾಣೆಯ 70 ವರ್ಷದ ಇಸ್ಲಾಂ ಧರ್ಮ ಬೋಧಕರೊಬ್ಬರು ಈ ಅರ್ಜಿ ಸಲ್ಲಿಸಿದ್ದರು. ಸಂವಿಧಾನದ 25ನೇ ವಿಧಿಯು ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಆದರೆ, ರಾಜ್ಯ ಸರ್ಕಾರದ ಹೊಸ ಕಾನೂನು ಈ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.

ಬಲವಂತದ ಮತಾಂತರ ತಡೆಯುವ ಉದ್ದೇಶ

ಮುಖ್ಯ ನ್ಯಾಯಮೂರ್ತಿ ಮಹೇಶ್‌ ಸೀತಾರಾಮ್‌ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್‌ ಸೇಥ್ನಾ ಅವರನ್ನೊಳಗೊಂಡ ನ್ಯಾಯಪೀಠವು, ಸಮಾಜದ ಜಾತ್ಯತೀತ ಸ್ವರೂಪವನ್ನು ರಕ್ಷಿಸುವುದು ಮತ್ತು ಬಲವಂತದ ಮತಾಂತರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಕಾನೂನಿನ ಉದ್ದೇಶವಾಗಿದೆ ಎಂದು ಹೇಳಿದೆ.

ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮವನ್ನು ಬದಲಿಸಿಕೊಳ್ಳುವ ಹಕ್ಕಿದೆ. ಆದರೆ, ಕೇವಲ ಮದುವೆಯ ಉದ್ದೇಶದಿಂದ, ಅದರಲ್ಲೂ ಮದುವೆಗೆ ಒಂದು ಅಥವಾ ಎರಡು ದಿನಗಳ ಮೊದಲು ಧರ್ಮ ಬದಲಿಸಿಕೊಳ್ಳುವ ವಿಚಾರವನ್ನು ನ್ಯಾಯಪೀಠ ಪ್ರಸ್ತಾಪಿಸಿದೆ ಎಂದು ವರದಿ ತಿಳಿಸಿದೆ.

ಹೊಸ ಅರ್ಜಿ ಸಲ್ಲಿಸಲು ಅವಕಾಶ

ಅರ್ಜಿಯಲ್ಲಿ ನಿರ್ದಿಷ್ಟವಾದ ವಾಸ್ತವಾಂಶಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸಮರ್ಥನೆಗಳ ಕೊರತೆಯಿದ್ದ ಕಾರಣ, ಪ್ರಸ್ತುತ ಅರ್ಜಿಯನ್ನು ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿತು. ಅಗತ್ಯ ದಾಖಲೆಗಳು ಮತ್ತು ವಾಸ್ತವಾಂಶಗಳೊಂದಿಗೆ ಹೊಸ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಿತು.

ಇದರ ಬೆನ್ನಲ್ಲೇ ಅರ್ಜಿಯನ್ನು ಹಿಂಪಡೆಯಲು ಒಪ್ಪಿದ ಅರ್ಜಿದಾರರು, ಶೀಘ್ರದಲ್ಲೇ ಹೊಸ ಅರ್ಜಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು