Sunday, June 16, 2024

ಸತ್ಯ | ನ್ಯಾಯ |ಧರ್ಮ

ಪುಸ್ತಕ ಪರಿಚಯ | ‘ಶ್ವೇತ ಪಾರಿವಾಳ’ದ ಆರ್ತ ಗಾನ

ಪುಸ್ತಕ : ಶ್ವೇತ ಪಾರಿವಾಳ (ಕವನಸಂಕಲನ)

ಕವಿ : ಸಿಹಾನ ಬಿ ಎಂ

ಬೆಲೆ : ರು. 250

ಪ್ರಕಾಶಕರು : ಪ್ರಗತಿ ಪ್ರಕಾಶನ, ಮೈಸೂರು

ಫೋನ್:‌ 0821-4287558

ಎರಡು ತಿಂಗಳ ಹಿಂದೆ ಹಾವೇರಿ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಮುಸ್ಲಿಂ ಸಮುದಾಯದ ಸಾಹಿತಿಗಳನ್ನು ಮತ್ತು ಭಾಷೆಯನ್ನು ಕಡೆಗಣಿಸಿದಾಗ ನಾಡಿನ ಪ್ರಜ್ಞಾವಂತ ವಲಯದಲ್ಲಿ ಭಾರೀ ಆಕ್ರೋಶವೆದ್ದಿತು. ಸಾಹಿತ್ಯದ ವಿಷಯ ಬಂದಾಗ ಹೀಗೆ ಮತಧರ್ಮ ಆಧಾರಿತ ಭೇದ ಭಾವ ಮಾಡುವುದು ಸರಿಯೇ ಎಂಬ ಗಂಭೀರ ಪ್ರಶ್ನೆಯನ್ನು ಅನೇಕರು ಕೇಳಿದ್ದರು. ಇದೇ ಸಂದರ್ಭದಲ್ಲಿ ನಾಡಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಎಷ್ಟು ಮಂದಿ ಲೇಖಕ ಲೇಖಕಿಯರಿದ್ದಾರೆ ಅದರಲ್ಲೂ ಮುಖ್ಯವಾಗಿ ಒಂದಾದರೂ ಕೃತಿಯನ್ನು ಪ್ರಕಟಿಸಿದವರು ಎಷ್ಟು ಮಂದಿ ಇದ್ದಾರೆ ಎಂಬ ಅನೌಪಚಾರಿಕ ಒಂದು ಸಮೀಕ್ಷೆಯೂ ನಡೆದಿತ್ತು. ಅದರಲ್ಲಿ ಸುಮಾರು ಆರುನೂರ ಐವತ್ತು ಮಂದಿಯ ಅಧಿಕೃತ ಲೆಕ್ಕ ಸಿಕ್ಕಿತ್ತು! ಆದರೆ ಇದು ನಿಜವಾಗಿ ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ಎನ್ನಲಾಗಿದೆ.

ಮುಸ್ಲಿಂ ಸಮುದಾಯದ ಯಾರ ಮನೆಮಾತೂ ಕನ್ನಡವಲ್ಲ. ಆದರೆ ಇವರು ಹತ್ತಿರದ ಕನ್ನಡ ಶಾಲೆಯಲ್ಲಿ ಶ್ರದ್ಧೆ ಮತ್ತು ಪ್ರೀತಿಯಿಂದ ಕನ್ನಡ ಕಲಿತು, ಕನ್ನಡದ ಮೇಲೆ ಪ್ರೌಢಿಮೆ ಸಾಧಿಸಿ ತಮಗಷ್ಟೇ ಗೊತ್ತಿರುವ ತಮ್ಮ ಸಮುದಾಯದ ಬದುಕಿನ ಪಡಿಪಾಟಲುಗಳನ್ನು ವಸ್ತುವಾಗಿರಿಸಿಕೊಂಡು ಕನ್ನಡದಲ್ಲಿ ಅತ್ಯುತ್ಕೃಷ್ಟ ಸಾಹಿತ್ಯ ರಚಿಸುತ್ತಾ, ಕನ್ನಡವನ್ನು ಬಳಸುತ್ತಿರುವ, ಬೆಳೆಸುತ್ತಿರುವ ಪರಿ ನಿಜಕ್ಕೂ ಹೆಮ್ಮೆ ಮತ್ತು ಬೆರಗು ಮೂಡಿಸುವಂಥದ್ದು.

ಲಾಗಾಯ್ತಿನಿಂದಲೂ ಸಮುದಾಯದೊಳಗಡೆ ಮತ್ತು ಸಮಾಜದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತ ಬೆಳೆದುಬಂದ ಮುಸ್ಲಿಂ ಸಮುದಾಯ ಇತ್ತೀಚಿನ ದಿನಮಾನಗಳಲ್ಲಿ ಎದುರಿಸುತ್ತಿರುವ ಸವಾಲುಗಳಂತೂ ಹಿಂದೆಂದೂ ಕಂಡು ಕೇಳರಿಯದಂಥವು. ಪ್ರಭುತ್ವದ ಬೆಂಬಲದೊಂದಿಗೇ ಅವರನ್ನು ಶಿಕ್ಷಣ, ವ್ಯಾಪಾರ ಹೀಗೆ ಎಲ್ಲ ಕ್ಷೇತ್ರಗಳಿಂದಲೂ ಹೊರಗಿಡುವ ಯತ್ನ ತೀವ್ರವಾಗಿ ನಡೆಯುತ್ತಿದೆ. ಅವರಲ್ಲಿ ಪರಕೀಯತೆಯ ಭಾವನೆ ಉಂಟು ಮಾಡುವಂತೆ ಮಾಡಲಾಗುತ್ತಿದೆ.

ಇಂತಹ ಹೊತ್ತಿನಲ್ಲಿ ಸಂವೇದನಾಶೀಲ ಲೇಖಕರು ಏನು ಮಾಡಬಹುದು? ಕವಿಯಾದವರು ತನ್ನ ಸುತ್ತಲ ವಿದ್ಯಮಾನಗಳಿಗೆ ತನ್ನದೇ ರೀತಿಯಲ್ಲಿ ಕಾವ್ಯದ ಮೂಲಕ ಪ್ರತಿಕ್ರಿಯಿಸಬಹುದು. ಕಾವ್ಯದ ಮೂಲಕವೇ ತನ್ನ ನೋವುಗಳನ್ನು ತೋಡಿಕೊಳ್ಳಬಹುದು. ಇದು ಸರಿಯಲ್ಲ, ನಾಲ್ಕು ದಿನದ ಬಾಳು, ನಾವೆಲ್ಲರೂ ಪ್ರೀತಿಯಿಂದ ಸೌಹಾರ್ದದಿಂದ ಬಾಳೋಣ ಎಂದು ಸಮಾಜಕ್ಕೆ ತಿಳಿಹೇಳಬಹುದು. ಹಾಗೆಯೇ ಕತ್ತಲು ಕಳೆದು ಬೆಳಗಾಗಲೇ ಬೇಕು, ಭರವಸೆ ಕಳೆದುಕೊಳ್ಳುವುದು ಬೇಡ ಎಂದು ಭರವಸೆಯ ಮಾತುಗಳನ್ನು ಹೇಳಬಹುದು.

ನಮ್ಮ ನಡುವಿನ ಸಂವೇದನಾಶೀಲ ಮತ್ತು ಭರವಸೆಯ ಕವಿ ಸಿಹಾನಾ ಬಿ ಎಂ ತಮ್ಮ ‘ಶ್ವೇತ ಪಾರಿವಾಳ’ ಕವಿತೆಗಳ ಮೂಲಕ ಮಾಡಿರುವುದು ಇದೇ ಕೆಲಸವನ್ನು.

‘ಶ್ವೇತ ಪಾರಿವಾಳ’ ಕವನ ಸಂಕಲನದಲ್ಲಿ ನೂರ ಐದು ಕವಿತೆಗಳಿವೆ. ಅವರೇ ಹೇಳುವಂತೆ ಇವು ಸುಮಾರು ಹದಿನೈದು ವರ್ಷಗಳಲ್ಲಿ ಬರೆದ ಕವಿತೆಗಳು. ತಮ್ಮ ‘ಹೃದಯದ ಮಾತು’ ವಿನಲ್ಲಿ ತಾನು ಈ ಕವಿತೆಗಳನ್ನು ಯಾಕೆ ರಚಿಸಿದೆ ಎಂಬ ಬಗ್ಗೆ ವಿವರಣೆ ಕೊಡುತ್ತಾ, “ಪ್ರಸ್ತುತ ವಿದ್ಯಮಾನಗಳಲ್ಲಿ ಕೋಮುವಾದದ ವಿಷಗಾಳಿಗಳನ್ನು ಹರಡಿ, ಪರಸ್ಪರ ಪ್ರೀತಿಸುತ್ತಿದ್ದ ಹೃದಯಗಳನ್ನು ಒಡೆಯುವ ಯತ್ನ ನಿರಂತರ ನಡೆಯುತ್ತಿದೆ. ಕಳೆದ ಏಳು ವರ್ಷಗಳಿಂದ ಇದಕ್ಕೆಲ್ಲ ಸಾಕ್ಷಿಯಾಗಬೇಕಿದ್ದ ನನ್ನಿರವು ನನ್ನೊಳಗೊಂದು ಆತಂಕವನ್ನು ಉಂಟುಮಾಡುತ್ತಲೇ ಇತ್ತು. ಹಾಗೆ ಒಡೆದ ಹೃದಯಗಳನ್ನು ಜೋಡಿಸಲು ಬಂದ ಶ್ವೇತ ಪಾರಿವಾಳ ಶಾಂತಿ ಹರಡಲಿ ಎಂಬ ನನ್ನ ಬಯಕೆಯು ಇಲ್ಲಿ ಕವನಗಳಾಗಿ ರೂಪುಗೊಂಡವು. ನಾವೆಲ್ಲರೂ ಒಂದು, ನಾವೆಲ್ಲರೂ ಭಾರತೀಯರು ಎಂಬ ತಿರುಮಂತ್ರವು ನಾಲಗೆಯಿಂದ ಉಲಿದು ಹೃದಯದಲ್ಲಿ ಅಚ್ಚಾಗಿ ಮನಸ್ಸಲ್ಲಿ ಭದ್ರವಾಗಿ ಕಣ್ಣಲ್ಲಿ ರೂಪವಾಗಿ ಲೇಖನಿಯಿಂದ ಅಕ್ಷರಗಳಾಗಿ ತಾನಾಗಿಯೇ ಬಿರಿದ ಹೂಗಳಿವು” ಎನ್ನುತ್ತಾರೆ.

ಮತಧರ್ಮದ ಹೆಸರಿನಲ್ಲಿ ಹರಡಲಾಗುತ್ತಿರುವ ದ್ವೇಷ ಮತ್ತು ನಡೆಸಲಾಗುತ್ತಿರುವ ದಾಳಿಗಳು ಸಿಹಾನಾ ಅವರನ್ನು ತೀವ್ರವಾಗಿ ಕಾಡಿವೆ. ಇಲ್ಲಿನ ಅನೇಕ ಕವಿತೆಗಳಲ್ಲಿ ಅದನ್ನು ಅವರು ಮತ್ತೆ ಮತ್ತೆ ಹೇಳುತ್ತಾ ಹೋಗುತ್ತಾರೆ.

ಬಟ್ಟೆಯಲ್ಲೂ ಹಗೆತನ

ವ್ಯಾಪಾರದಲ್ಲೂ ದ್ವೇಷ

ಆಹಾರದಲ್ಲೂ ವೈರತ್ವ ನಿನಗೆ

ಕಲಿಕೆಗೂ ತಡೆಗೋಡೆ ತಂದಿಟ್ಟೆ

ಬದುಕಿಗೂ ಅಡ್ಡಗಾಲಿಟ್ಟೆ ನೀನು

ಹಸಿದವನಿಗೆ ಸಿಕ್ಕ ಆಹಾರದಲ್ಲಿ

ಜಾತಿಯೂ ಇರದು, ಧರ್ಮವೂ ಇರದು

ಮಾನವತೆಗಿಂತ ಮಿಗಿಲಾದ ಧರ್ಮವಿಲ್ಲ

ಭಾವೈಕ್ಯತೆಯಿಲ್ಲದ ಭಾರತವಿಲ್ಲ (ನಾನಿಲ್ಲದೆ ನೀನಿರಲಾರೆ)

ಸರಿ, ಅನ್ಯಾಯದ ವಿರುದ್ಧ ನ್ಯಾಯದ ಮೊರೆ ಹೋಗೋಣವೇ? ಅದನ್ನು ಎಲ್ಲಿ ಹುಡುಕೋಣ? ಅದು ಕಳುವಾಗಿ ಹೋಗಿದೆ. ಹಾವುಗಳ ನಡುವೆ ಬದುಕುವ ಗುಬ್ಬಚ್ಚಿಯಂತಾಗಿದೆ ಬದುಕು.

ನಾನೆತ್ತ ಹೋಗಲಿ

ಎಲ್ಲೆಂದು ಹುಡುಕಲಿ

ಇಲ್ಲಿ ನ್ಯಾಯ ಕಳುವಾಗಿದೆ

………..

ಬುಸುಗುಡುವ ಹಾವುಗಳ

ನಡುವೆ ಗುಬ್ಬಚ್ಚಿಯಾಗಿ

ಬದುಕುತ್ತಿದ್ದೇನೆ ಜೀವ ಹಿಡಿಯಾಗಿ ಹಿಡಿದು.. (ಇಲ್ಲಿ ನ್ಯಾಯ ಕಳವಾಗಿದೆ)

ಎಲ್ಲೆಲ್ಲೂ ಸಂಶಯ, ಅಪನಂಬಿಕೆ, ಬೆಸೆಯ ಬೇಕಾದ ಹೃದಯಗಳು ಕೋಮು ದಳ್ಳುರಿಯಲ್ಲಿ ಬೆಂದು ಕಳೆದುಹೋಗುತ್ತಿವೆ.

ಬೆಸೆಯಬೇಕಾದ ಹೃದಯಗಳು

ಸಂಶಯ, ಅಪನಂಬಿಕೆಗೆ ಸಿಲುಕಿ

ಕೋಮು ದಳ್ಳುರಿಯಲ್ಲಿ ಮಾರಾಟವಾಗುತ್ತಿವೆ

ಪ್ರೇಮ ಸಂಕೇತದ ಲಾಂಛನಗಳು

ದ್ವೇಷ ಕ್ರಿಮಿಯ ಸ್ವಾರ್ಥ ಮುಷ್ಟಿಯ

ಹವೆ ಹಾಡುವ ಹಗೆಯಲಿ ಮಾರಾಟವಾಗುತಿದೆ (ಮಾರಾಟವಾಗುತ್ತಿದೆ)

ದಯವಿಟ್ಟು ನಿಮ್ಮ ಚರ್ಚೆಗೆ ನನ್ನ ಉಡುಗೆ ವಸ್ತುವಾಗದಿರಲಿ, ನಾವೀಗ ಮಾತನಾಡಬೇಕು ಮಾತನಾಡುತ್ತಲೇ ಇರಬೇಕು ಉಚ್ಚ ದನಿಯಲ್ಲಿ ಎನ್ನುತ್ತಾರೆ ಕವಿ.

ನನ್ನ ಹೆಸರಲ್ಲಿ ನಿಮ್ಮ ಚರ್ಚೆಗೆ

ನನ್ನುಡುಗೆ ವಸ್ತುವಾಗದಿರಲಿ

ಗಾಜುಗಣ್ಣು, ಅರಗಿನ ನಾಲಗೆ

ನನ್ನ ಸುತ್ತಲು ಓಡಾಡದಿರಲಿ

ಮಾತನಾಡಬೇಕು, ಮಾತನಾಡುತ್ತಲೇ ಇರಬೇಕು

ಗಟ್ಟಿ ಧ್ವನಿಯಲಿ, ಉಚ್ಛ ಸ್ವರದಲಿ

ಎತ್ತರಕ್ಕೇರಿಸುವ ಶಿಕ್ಷಣದ ಧ್ವನಿಯಾಗಿ

ಜೀವ ಹಿಂಡುವ ಶೋಷಣೆಯ ನಾಶಕ್ಕಾಗಿ

….

 (ಸಾಕಾಗಿದೆ ಈ ವ್ಯರ್ಥ ಚರ್ಚೆ)

ನಾವೀಗ ಏನು ಮಾಡಬೇಕು? ನಮ್ಮದು ಸತ್ಯ ಅಹಿಂಸೆ ಬೋಧಿಸಿದ ನಾಡು. ದ್ವೇಷ ಸುಟ್ಟು ರೋಷ ಕಿತ್ತೆಸೆದು ಮಾನವತೆ ಸಾರುವ ಶಾಂತಿಗೀತೆ ಹಾಡಬೇಕು. ಅದೊಂದೇ ದಾರಿ ಎನ್ನುತ್ತಾರೆ ಕವಿ.

ಸತ್ಯ, ಅಹಿಂಸೆ ಬೋಧಿಸಿದ ನಾಡು ನಮ್ಮದು

ಪ್ರೀತಿ ಸ್ನೇಹ, ಬೀರಿದ ಬೀಡು ನಮ್ಮದು

ಎಲ್ಲೆಲ್ಲಿಯೂ ಪ್ರೇಮ ಸುಧೆಯ ಧರೆಗಿಳಿಸಿ

ಅನ್ಯಾಯ ಅಳಿಸಿ, ಸತ್ಯವ ಸಂಸ್ಥಾಪಿಸಿ

ದ್ವೇಷ ಸುಟ್ಟು, ರೋಷವ ಕಿತ್ತೆಸೆದು

ಮಾನವತೆ ಸಾರುವ ಶಾಂತಿಗೀತೆ ಹಾಡೋಣ

ಸೌಹಾರ್ದತೆ, ಸಾಮರಸ್ಯದಿ ಬಾಳೋಣ ( ಶಾಂತಿಗಾನ)

ಈ ಕವಿಗೆ ಸೌಹಾರ್ದತೆ ಎಂದರೆ ಬರಿಯ ಮಾತಲ್ಲ; ಅದು ಜೀವ. ಇವರಿಗೆ ಬಣ್ಣಗಳ ಬಗ್ಗೆ ದ್ವೇಷವಿಲ್ಲ. ಕೇಸರಿ, ಬಿಳಿ, ಹಸಿರು, ನೀಲಿ ಎಲ್ಲದರಲ್ಲಿಯೂ ಬೆರೆಯುವಾಸೆ. ಸೌಹಾರ್ದ ಭಾರತದ ಕನಸು ಇರಬೇಕಾದುದೇ ಹೀಗಲ್ಲವೇ?

ನನ್ನ ಧ್ವಜ ಹಾರಾಡಬೇಕು

ಸೌಹಾರ್ದತೆಯ ಗಾಳಿಯಲ್ಲಿ

ಉರಿಬಿಸಿಲ ತಣಿಸುವ ಶಾಂತಿಗಾಳಿಯಲ್ಲಿ

………

ಕೇಸರಿಯೊಂದಿಗೆ ನಾ ಮೀಯಬೇಕು

ಶ್ವೇತದೊಂದಿಗೆ ನಾ ಮಿನುಗಬೇಕು

ಹಸಿರಿನೊಂದಿಗೆ ನಾ ಹಸಿರಾಗಿ ನಳನಳಿಸಬೇಕು

ನೀಲಿ ಚಕ್ರದೊಂದಿಗೆ ನನಗೂ ನೃತ್ಯವಾಡಬೇಕು (ನನ್ನ ಧ್ವಜ ಹಾರಾಡಬೇಕು)

ನಿಜ. ಸುತ್ತಲೂ ನಿರಾಶೆಯ ವಾತಾವರಣವೇ ಇದೆ. ಆದರೆ ಕವಿ ಹತಾಶರಾಗಿಲ್ಲ. ರಾತ್ರಿ ಶಾಶ್ವತವಲ್ಲ, ಅದು ಕಳೆದೇ ಕಳೆಯುತ್ತದೆ, ಬೆಳಗು ಆಗಿಯೇ ಆಗುತ್ತದೆ. ಈವತ್ತು ನಮಗೆ ಕಷ್ಟವಿರಬಹುದು. ಆದರೆ ನಾಳೆ ಸುಖದ ದಿನಗಳು ಬಂದೇ ಬರುತ್ತವೆ  ಎನ್ನುವುದು ಅವರ ಆಶಾವಾದ.

ಇಂದು ನೋವು ಉಂಡರೂ

ನಾಳೆ ಸಂತೃಪ್ತಿಯ ನಗು ಬಿರಿದಾವು

ಸುಖಭೋಗ ಅಳಿದರೂ

ಸವಿಬಾಳು ಮತ್ತೆ ಪಡೆದಾವು (ಸತ್ವ ಪರೀಕ್ಷೆ)

ನಂಬಿಕೆಯ ಬೇರುಗಳು ಸಡಿಲವಾದರೂ

ನಿರೀಕ್ಷೆಯ ಕಣ್ಣುಗಳಿನ್ನೂ ಮುಚ್ಚಿಲ್ಲ

ಭರವಸೆಯ ರಂಗು ಬೆಳಕಾಗಲಿರುವುದು

ನೊಂದ ಎದೆಯಲ್ಲೊಂದು ಕೋಲ್ಮಿಂಚು ಹಾಯದಿರದು (ಕೋಲ್ಮಿಂಚು)

ಹೀಗೆ ಸಿಹಾನಾರ ಕವಿತೆಗಳಲ್ಲಿ ಮೂರು ಮುಖ್ಯ ಗುಣಗಳನ್ನು ಗುರುತಿಸಬಹುದು. ಸುತ್ತಲ ತಲ್ಲಣಗಳು ಬಹುವಾಗಿ ಅವರ ಕಾವ್ಯವಸ್ತು. ಬರೇ ಪ್ರತಿಕ್ರಿಯೆ, ಪ್ರಶ್ನೆ, ಟೀಕೆಗೆ ಇಲ್ಲಿನ ಕವಿತೆಗಳು ಸೀಮಿತಗೊಳ್ಳುವುದಿಲ್ಲ. ನಾವು ಹೇಗೆ ಬದುಕಬೇಕು ಎಂಬ ಕಿವಿಮಾತೂ ಇದೆ. ಹಾಗೆಯೇ ಭರವಸೆ ಕಳೆದುಕೊಳ್ಳಬೇಕಾಗಿಲ್ಲ, ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂಬ ಆಶಾವಾದವೂ ಇದೆ. ಸಿಹಾನಾ ಅವರ ಭಾಷಾ ಸಂಪತ್ತಂತೂ ಅಭಿಮಾನದ  ಗೆರೆ ದಾಟಿ, ಮತ್ಸರ ಹುಟ್ಟಿಸುವಂತಿದೆ.

ಸಂಕಲನಕ್ಕೆ ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರು ಇಂದಿನ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತಾ, ಸೊಗಸಾದ ಮತ್ತು ಅರ್ಥಪೂರ್ಣವಾದ ಮುನ್ನುಡಿ ಬರೆದಿದ್ದಾರೆ. ಪತ್ರಕರ್ತ ಹಂಝ ಮಲಾರ್ ಅವರು ಸಿಹಾನಾ ಕವಿತೆಗಳ ವಿಶೇಷವನ್ನು ಬೆಟ್ಟುಮಾಡುತ್ತಾ ಬೆನ್ನುಡಿ ಬರೆದು ಶುಭ ಹಾರೈಸಿದ್ದಾರೆ.

‘ಕಲೆ ಇರುವುದು ಕೇವಲ ಕಲೆಗಾಗಿಯೋ ಅಥವಾ ಸಮಾಜ ಬದಲಾವಣೆಗಾಗಿಯೋ’ ಎನ್ನುವುದು ಬಹಳ ಹಿಂದಿನಿಂದಲೂ ಇರುವ ಒಂದು ಚರ್ಚೆ. ಸುತ್ತೆಲ್ಲ ತಲ್ಲಣವೇ ಇರುವಾಗ ಕವಿ ಹೇಗೆ ತಾನೇ ಸೂರ್ಯ, ಚಂದ್ರ, ಬೆಳದಿಂಗಳ ಬಗ್ಗೆ, ಬದುಕಿನ ಸುಖಗಳ ಬಗ್ಗೆ ಮಾತನಾಡುತ್ತ ಕೂರುವುದು ಸಾಧ್ಯ? ಅನ್ಯಾಯವೊಂದು ನಡೆಯುತ್ತಿರುವಾಗ ಸುಮ್ಮನೆ ಕೂರುವುದು ಎಂದರೆ ಆ ಅನ್ಯಾಯದಲ್ಲಿ ಭಾಗಿಯಾದಂತೆ ಎನ್ನುವ ಮಾತೊಂದಿದೆ. ಹಾಗಾಗಿ ಈಗ ಮೌನವಾಗಿ ಕೂರುವ ಕಾಲವಲ್ಲ, ಎಲ್ಲರೂ ಮಾತನಾಡಲೇಬೇಕಾದ ಕಾಲ. ಕಲಾವಿದ ತನ್ನ ಕಲೆಯ ಮೂಲಕ, ಕವಿ ತನ್ನ ಕಾವ್ಯದ ಮೂಲಕ ಮಾತನಾಡಬೇಕು. ಬಹಳ ಮಂದಿ ತಮ್ಮ ಮನುಷ್ಯ ನೆಲೆಯ ಕರ್ತವ್ಯ ಮರೆತು ಮೌನಕ್ಕೆ ಶರಣಾಗಿರುವ ಹೊತ್ತು ಸಿಹಾನ ಕಾವ್ಯದ ಮೂಲಕ ದಿಟ್ಟವಾಗಿ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಅವರು ಪ್ರೀತಿಯಿಂದ, ಭರವಸೆಯಿಂದ ಹಾರಿಬಿಟ್ಟ ಶ್ವೇತ ಪಾರಿವಾಳ ದೀರ್ಘಕಾಲ ಬದುಕುಳಿಯುವಂತೆ ಮತ್ತು ಸ್ವಚ್ಛಂದವಾಗಿ ಹಾರುತ್ತಿರುವಂತೆ ನಾವು ನೋಡಿಕೊಳ್ಳಬೇಕು.

ಶ್ರೀನಿವಾಸ ಕಾರ್ಕಳ

ಕವಿ ಹಾಗೂ ಸಾಮಾಜಿಕ ಚಿಂತಕ

Related Articles

ಇತ್ತೀಚಿನ ಸುದ್ದಿಗಳು