Thursday, September 4, 2025

ಸತ್ಯ | ನ್ಯಾಯ |ಧರ್ಮ

ಬೂಕರ್ ಕನ್ನಡದ ಬಾನು v/s ಸಂಸ್ಕೃತ ಸನಾತನ ಕಮಲಿ

ದಸರಾ ಹಬ್ಬ ಹತ್ತಿರ ಬರುತ್ತಿದ್ದಂತೆ ಮಹಾರಾಜನಾಗಿ ಮೆರೆವ ಕನಸು ಕಾಣುತ್ತ, ಪ್ರಜಾಪ್ರಭುತ್ವದಲ್ಲಿ  ಸಂಸದನಾಗಿ ಆಯ್ಕೆಯಾಗಿರುವ ಸನಾತನ ವೀರನ ಕುರಿತಾದ ವಿಡಂಬನಾತ್ಮಕ ಬರಹ.. ಚಿಂತಕರಾದ ಚಂದ್ರಪ್ರಭ ಕಠಾರಿ ಅವರಿಂದ..

ಪಾರ್ಟ್ ಒನ್
ದಸರಾ ಹಬ್ಬ ಹತ್ತಿರ ಬರುತ್ತಿದ್ದಂತೆ ಮಹಾರಾಜನಾಗಿ ಮೆರೆವ ಕನಸು ಕಾಣುತ್ತ, ಪ್ರಜಾಪ್ರಭುತ್ವದಲ್ಲಿ  ಸಂಸದನಾಗಿ ಆಯ್ಕೆಯಾಗಿರುವ ಸನಾತನ ವೀರ ರಾಜಕುಮಾರ(?) ತನ್ನ  ಭವ್ಯ ಬಂಗಲೆ ಮನೆಯಲ್ಲಿಯೇ ಖಾಸಗಿ ದರ್ಬಾರಿನ ತಾಲೀಮು ನಡೆಸಿದ್ದ. ಬಗಲಲ್ಲಿ ಕತ್ತಿ ನೇತಾಕಿಕೊಂಡ ಕಲ್ಪಿತ ರಾಜಕುಮಾರ – ಕುದುರೆ ಸವಾರಿ, ಕತ್ತಿವರಸೆಯನ್ನು ಅಭ್ಯಾಸ ಮಾಡುತ್ತ, ಗತಕಾಲಕ್ಕೆ ತೆರಳಿ ಸಂಭ್ರಮ ಪಡುತ್ತಿದ್ದ. ಪ್ರತಿದಿನ  ಅರಮನೆ ಪುರೋಹಿತರು ಬಂದು  ಉತ್ಸವದ ನಡಾವಳಿ ಬಗ್ಗೆ ಸನಾತನ ವೀರನಿಗೆ ತಿಳುವಳಿಕೆ ನೀಡುತ್ತಿದ್ದರು.

ಮುಹೂರ್ತ ಹೇಳಿದಂತೆ ಆದಿನ ಸೂರ್ಯೋದಯಕ್ಕೆ ಮುನ್ನವೇ ಬಂದ ಪುರೋಹಿತರು, ಸನಾತನ ವೀರರಿಗೆ ಸಂಸ್ಕೃತದಲ್ಲಿ ಮಂತ್ರ ಪಠಿಸುತ್ತ ದೇವತಾ ಕಾರ್ಯಗಳ ಬಗ್ಗೆ ಪಾಠ ಮಾಡುತ್ತಿದ್ದರು. ದೇವರಿಗೆ ಮಾತ್ರ ಅರ್ಥವಾಗುವ ದೇವಭಾಷೆಯಾದ್ದರಿಂದ ಪುರೋಹಿತ ಹೇಳುತ್ತಿದ್ದ ಶ್ಲೋಕಗಳಿಗೆ ಅರ್ಥ ಹುಡುಕಿ, ತಿಳಿದುಕೊಳ್ಳುವುದು ನಿರರ್ಥಕವಾಗಿ, ಮಿರಿಮಿರಿ ಮಿಂಚುವ ಪೇಟ ಧರಿಸಿ, ಚಕ್ಕಂಬಕ್ಕಳ ಹಾಕಿ ಮಣೆ ಮೇಲೆ ಕೈಮುಗಿದು ಕುಳಿತ ಸನಾತನ ವೀರ ಆಗಾಗ್ಗೆ ಗೋಡೆ ಗಡಿಯಾರವನ್ನು ನೋಡುತ್ತಿದ್ದ.

ಅಷ್ಟೊತ್ತಿಗೆ ಅಲ್ಲಿಗೆ ಅವಸರದಲ್ಲಿ ಧಾವಿಸಿ ಬಂದ ಪರ್ಸನಲ್ ಸೆಕ್ರೆಟರಿ, ಕೈಲಿದ್ದ ಮೊಬೈಲನ್ನು ತೋರಿ ಯಾರದೋ ಕರೆ ಬಂದಿದೆ ಎಂಬಂತೆ ಸನ್ನೆ ಮಾಡಿದ. ಸನಾತನ ವೀರ ಕೂಡ ಕೈಸನ್ನೆ ಮಾಡಿ ಪೂಜಾ ವಿಧಾನ ಬೋಧನೆ ಮುಗಿದ ಮೇಲೆ ಕರೆ ಮಾಡುವಂತೆ ತಿಳಿಸಿದ. ಗಾಬರಿಗೊಂಡಂತೆ ಕಂಡ ಸೆಕ್ರೆಟರಿ, ʼಆಗದಾಗದು…ಈಗಲೇ ಉತ್ತರಿಸಬೇಕುʼ ಎಂದು ಬಾಯಿ ಸನ್ನೆ ಕೈ ಸನ್ನೆ ಮಾಡಿದ. ಕರೆ ಮಾಡಿದವರು ಬೊಕ್ಕ ತಲೆ, ಟೊಣಪ ಎಂಬಂತೆ ಅಂಗೀಕಾಭಿನಯ ಮಾಡಿ ʼತುರ್ತು ಕರೆ!ʼ ಎಂದು ಮುಖದಲ್ಲಿ ಭಯ ವ್ಯಕ್ತಪಡಿಸಿದ.

ಕರೆ ಬಂದಿರುವುದು ಅಪರಿಮಿತ ಕುತಂತ್ರಿ ಮಂತ್ರಿಯದೆಂದು ತಟ್ಟನೆ ಗ್ರಹಿಸಿದ ಸನಾತನ ವೀರನ ತೊಡೆ ಅದುರ ತೊಡಗಿತು. “ಪುರೋಹಿತರೇ…ಒಂದು ನಿಮಿಷ. ನಂಬರ್ ದೊ ದಂಧೆ ಮಿನಿಷ್ಟರ್ ಕ್ಷಮಿಸಿ…ನಂಬರ್ ಟು ಮಂತ್ರಿ ಫೋನ್ ಮಾಡ್ತಿದ್ದಾರೆ. ಅಟೆಂಡ್ ಮಾಡಿ ಬರುತ್ತೇನೆ” ಎಂದ. ಮುಖ ಸಿಂಡರಿಸಿಕೊಂಡ ಪುರೋಹಿತ ಹೇಳುತ್ತಿದ್ದ ಸಂಸ್ಕೃತ ಶ್ಲೋಕಗಳ ಮಧ್ಯೆ ʼಇವನ್ಯಾವ ಸೀಮೆ ಮಹಾರಾಜ…ಯಕಶ್ಚಿತ್ ನಂಬರ್ ದೊ ಮಂತ್ರಿಗೆ ಹೆದರುತ್ತಿದ್ದಾನೆ!ʼ ಎನ್ನುವುದು ಸನಾತನ ವೀರನ ಕಿವಿಗೆ ಬಿತ್ತಾದರೂ ಪ್ರತಿಕ್ರಿಯಿಸಲು ಹೋಗಲಿಲ್ಲ.

“ಹಲೋ ಸಾಹೇಬ್…ಆಪ್ ಕೈ ಸೆ ಹೋ?”

“ಮೈ ಹೈ ಸೀ ಹುಂ…ಮೇರಾ ಬಾತ್ ಚೊಡೊ…ಉದರ್ ಕಾಮ್ ಕೈಸೆ ಹೊ ರಹಹೇ? ಡುಸ್ಸರಾ ಉತ್ಸವ್ ಕ?”

“ಭಾಳ ಚೆನ್ನಾಗಿ ನಡಿತೀದೆ. ಈ ಸರ್ತಿ ದಸರಾ ಉತ್ಸವಕ್ಕೆ ತಾವು, ನಮೋ ಸಾಮ್ರಾಟ್ ಸಾಹೇಬರ ಸಹಿತ ಬರಬೇಕು…”

“ಬರೋಣ…ಈ ಬಾರಿ ಅದೇನು ಬಹುತ್ ವಿಶೇಷ್ ಮೆಹ್ಮಾನ್ ಕೊ ಬುಲಾ ಹೈ?”

“ಹಾಂ…ಜೀ…ಒಬ್ರು ಲೇಡಿನಾ ಕರೆದಿದ್ದಾರೆ. ಅವರು ಕನ್ನಡದ ಫೇಮಸ್ ರೈಟರ್. ಅವರಿಗೆ ಬೂಕರ್ ಪ್ರೈಜ್ ಬಂದಿದೆ”

“ಅವರು ಅಷ್ಟೊಂದು ಚೆನ್ನಾಗಿ ಸ್ನೂಕರ್ ಆಡ್ತಾರ…ಬೂಕರ್ ಪ್ರೈಜ್ ಗೆಲ್ಲೋಕೆ?”

“ನೊ…ನೊ…ನಹೀ…ಬುಕ್ ಬರೆದಿದ್ದಾರೆ. ಅವರ ಫಿಕ್ಷನ್ ಬುಕ್ ಗೆ ಬೂಕರ್ ಬಂದಿದೆ”

“ವೊ ಮಾಲೂಮ್ ನಹೀ. ಲೇಕಿನ್ ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತ್….” ಎಂದು ಏನನ್ನೋ ಹೇಳ ಹೊರಟ ಕುತಂತ್ರಿ ಮಂತ್ರಿ ಮಾತನ್ನು ತುಂಡರಿಸಿ ಸನಾತನ ವೀರ “ಪುರೋಹಿತ್ ಏನು ಬೇಡ. ನಮ್ಮ ಪ್ಯಾಲೇಸ್ ಪುರೋಹಿತ್ ಇದ್ದಾರೆ” ಎಂದ.

“ಅರೆ…ಪೂರಾ ಬಾತ್ ಸುನೊ ತೊ ಸಹಿ…ಹಮಾರ ಚಡ್ಡಿ ಹೆಡ್ ಆಫೀಸ್ ಹೆಡ್ ಪುರೋಹಿತ್, ಮೆಹ್ಮಾನ್ ಲೇಕರ್ ಬಹುತ್ ಗುಸ್ಸಾ ಹೊಗಾ ಹೈ!!”

ತಟ್ಟನೆ ಸನಾತನ ವೀರನಿಗೆ ಏನು ಹೇಳಬೇಕೆಂದು ಹೊಳೆಯಲಿಲ್ಲ. ಅಷ್ಟರಲ್ಲಿ ಆ ಕಡೆಯಿಂದ “ರಾಜ್ ಕುಮಾರ್ ಸೊ ಗಯಾ ಕ್ಯಾ….” ಎಂದು ಕೂಗೋದು ಕೇಳಿ ಬರುತ್ತಿತ್ತು.

“ಇಲ್ಲ…ಇಲ್ಲ…ಹೇಳಿ ಸಾಹೇಬ್”

“ವೊ ಬಾತ್ ಚೊಡೋ…ಇದು ರಾಜರ ಕಾಲ ಅಲ್ಲ. ಡೆಮಾಕ್ರಸಿ. ಎಮ್ ಪಿ ಆಗಿ ಪ್ಯಾಲೇಸ್ ನಲ್ಲಿ ಕೂತಿದ್ದರೆ ಆಗೋಲ್ಲ. ಸಮಯ ಸಂದರ್ಭ ಬಳಸ್ಕೊಂಡು ಹವಾ ಮೆಂಟೇನ್ ಮಾಡ್ಬೇಕು. ನಿಮಗೆ ಸಿನಿಮಾದಲ್ಲಿ ಆಕ್ಟ್ ಮಾಡೋ ಇಂಟೆರೆಸ್ಟ್ ಇದ್ಯಾ?”

ಫಿಲಮ್ ಆಕ್ಟಿಂಗ್ ಅಂದದ್ದೇ ಸನಾತನ ವೀರನ ಕಿವಿ ನೆಟ್ಟಗಾಯಿತು. ಕಿಸಿಯುತ್ತ “ಜನಸೇವೆ ಮಾಡೋಕೆ ಟೈಮಿಲ್ಲ. ಇನ್ನಾ ಫಿಲಮ್ ಆಕ್ಟಿಂಗ್ ಗೆ ಟೈಮ್ ಎಲ್ಲಿ ಇರುತ್ತೆ ಸಾಹೇಬ್? ಸರಿ ಮಾಡೋಣಂತೆ…ಯಾರು ಹೀರೊಯಿನ್?”

“ಅಯ್ಯೋ…ಸನಾತನ ವೀರ್…ಇದು ಫೀಚರ್ ಫಿಲಮ್ ಅಲ್ಲ. ಶಾರ್ಟ್ ಮೂವೀ. ಡುಸ್ಸೆರಾ ಫೆಸ್ಟಿವಲ್ನ ಪ್ರಮೋಟ್ ಮಾಡೋಕೆ?”

“ಆಗಲಿ ಸಾಹೇಬ್…ನೀವು ಹೇಳಿದ ಮೇಲೆ ಒಂದ್ ಕೈ ನೋಡೋದೆ…”

“ಕೈಯನ್ನು ಯಾಕೆ ನೋಡ್ತಿರ? ಕಮಲಾನ ನೋಡಿ…ಸರಿ…ನಮ್ಮ ಪ್ರಾಪಗಂಡ ಡೈರೆಕ್ಟರ್ ಎಲ್ಲಾ ಗೈಡ್ ಮಾಡ್ತಾರೆ”

“ಯಾರು ಸರ್…ಅಲ್ಲ…ಸಾಹೇಬ್ ಅವ್ರು?”

“ವರ್ಡ್ ಫೇಮಸ್ ಡೈರೆಕ್ಟರ್ ಅವಿವೇಕ್ ಅಗ್ನಿಮೂತ್ರಿ ಗೊತ್ತಿಲ್ವ? ಹೋಗ್ಲಿ ಬಿಡಿ. ಅವ್ರು ಮ್ಯಾನೇಜ್ ಮಾಡ್ತಾರೆ. ಅವರು ಹೇಳಿದ್ದಷ್ಟು ಮಾಡಿ”

ಮತ್ತೇನೊ ಹೇಳಬೇಕು ಅನ್ನುವಷ್ಟರಲ್ಲಿ ಫೋನ್ ಕಟ್ ಆಯಿತು.

ಪಾರ್ಟ್ ಟು
ಬೂಕರ್ ಕನ್ನಡ ಬಾನು v/s ಸಂಸ್ಕೃತ ಸನಾತನ ಕಮಲಿ – ಸಿನಿಮಾದ ಶೂಟಿಂಗ್ ಸಾಂಸ್ಕೃತಿಕ ನಗರಿಯ ಸುತ್ತಮುತ್ತ ವಾರಗಳ ಕಾಲ ನಡೆಯಿತು. ಕ್ಲೈಮ್ಯಾಕ್ಸ್ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು ಅಗ್ನಿಮೂತ್ರಿ ಲೋಕೆಷನ್ ಗಾಗಿ ನಗರ ಪೂರ್ತಿ ಹುಡುಕಿದರೂ, ತನ್ನ ಕಲ್ಪನೆಯ ಜಾಗ ಸಿಗದೆ ತಲೆ ಕೆಡಿಸಿಕೊಂಡು ಹೈರಾಣಾದ.

ಆ ದಿನ ರಾತ್ರಿ ಸೆವೆನ್ ಸ್ಟಾರ್ ಹೋಟೆಲ್ಲಿನಲ್ಲಿ ಸುಸ್ತಾಗಿ ಮಲಗಿದ್ದವನಿಗೆ ಸರಿರಾತ್ರಿ ಯಾರೋ ಕೂಗಿದಂತಾಗಿ ಎದ್ದು ಕುಳಿತ. ಸುತ್ತಲೂ ಕಣ್ಣಾಡಿಸಿದರೆ ಯಾರು ಇದ್ದಂತೆ ಕಾಣಲಿಲ್ಲ. ತಾನೇ ಭ್ರಮಿಸಿರಬೇಕು ಅಂದುಕೊಂಡು ಮತ್ತೆ ಮಲಗೋ ಹೊತ್ತಿಗೆ “ಹೇ…ಅವಿವೇಕಿ ಮೂತ್ರಿ. ನೀನೇ ಅಲ್ಲವೇನೊ ಕಶ್ಮೀರಿ ಫೈಲ್ಸ್ ಅನ್ನೋ ಬಂಡಲ್ ಸಿನಿಮಾ ತೆಗೆದು, ನೆಮ್ಮದಿಯಾಗಿದ್ದ ಜನಗಳ ಮಧ್ಯೆ ಬೆಂಕಿ ಹಚ್ಚಿದೋನು?” ಎಂಬ ಮಾತು ಕೇಳಿಬಂತು. ಏನು ಅರ್ಥವಾಗದಿದ್ದರೂ, ʼಕಶ್ಮೀರ್ ಫೈಲ್ಸ್ʼ ಎಂಬ ಶಬ್ಧ ಅವನನ್ನು ದಂಗು ಬಡಿಸಿತು. ʼಇದ್ಯಾವ ಭಾಷೆ! ಕನ್ನಡ್ ಇದ್ದಂಗೆ ಇದೆʼ ಅಂದು ಕೊಂಡು ಅಶರೀರವಾಣಿಯಂತೆ ಬರುತ್ತಿರುವ ಮಾತಿನ ದಿಕ್ಕಿಗಾಗಿ ಕಿವಿ ಕೊಟ್ಟ.  

ಚಟೀರನೆ ಕೆನ್ನೆಗೊಂದು ಏಟು ಬಿದ್ದಂತಾಗಿ ಹಾಸಿಗೆಗೆ ಬಿದ್ದ.

“ಮೂರ್ಖ ಹಿಂದಿ ದೊಡ್ಡಕ್ಕನ ಮಗನೇ…ದೇಶನಂತೂ ಹಾಳು ಮಾಡಿದ್ದಾಯಿತು. ಈಗ ಕರುನಾಡಿಗೂ ಕೋಮು ವಿಷ ಹಂಚೋಕೆ ಬಂದಿದ್ದೀಯ? ಬಾನು ಮುಷ್ತಾಕ್ ನನ್ನ ಹೆಮ್ಮೆಯ ಮಗಳು. ಅವಳ ಮೇಲೆ ಧರ್ಮದ ಹೆಸರಲ್ಲಿ ಮುಗ್ಧ ಜನಗಳನ್ನು ಎತ್ತಿ ಕಟ್ಟೋಕೆ ಸಿನಿಮಾ ಮಾಡ್ತಿದ್ದೀಯ? ಎಂತದೋ ದರಿದ್ರ ಸುಳ್ಳುಗಳ ನಿನ್ನ ಸ್ಕ್ರಿಪ್ಟ್ ಅದು. ನನ್ನ ಕನ್ನಡ ಮಕ್ಕಳು ಸ್ವಾಭಿಮಾನಿಗಳು. ನಿನ್ನ  ಧರ್ಮದ ಅಫೀಮಿಗೆ ಬಲಿಯಾಗುವವರಲ್ಲ…ಎಚ್ಚರ. ಅವರು ಸಹನೆಗೆಟ್ಟು, ನಿನ್ನಂತವರನ್ನು ಅಟ್ಟಾಡಿಸಿಕೊಂಡು ಬೀದೀಲಿ ಬೆತ್ತಲೆ ಮಾಡುವ ಮುಂಚೆ ನಿನ್ನ ಗಂಟು ಮೂಟೆ ಕಟ್ಟು…ಜಸ್ಟ್ ಪ್ಯಾಕಪ್” ಎಂಬ ಮಾತು ಮುಗಿದದ್ದೇ ಮತ್ತೊಂದು ಕೆನ್ನೆಗೆ ಬಿದ್ದ ಏಟಿಗೆ ಮೂತ್ರಿ ಮೂರ್ಛೆ ಹೋದ.

ಬೆಳಗ್ಗೆ ಶೂಟಿಂಗ್ ಗೆ ತಡವಾಗುತ್ತಿದ್ದರೂ ಡೈರೆಕ್ಟರ್ ರೂಮಿನಿಂದಾಚೆ ಬರಲಿಲ್ಲವಾಗಿ ಆತಂಕದಿಂದ ಪ್ರೊಡ್ಯುಸರ್ ಬಾಗಿಲು ಬಡಿದ. ತಡಬಡ ಶಬ್ಧಕ್ಕೆ ಎಚ್ಚೆತ್ತ ಮೂತ್ರಿಗೆ ರಾತ್ರಿ ಅನುಭವ ದುಃಸ್ವಪ್ನವಾಗಿ ಕಣ್ಮುಂದೆ ಹಾದು ಹೋಯಿತು. ಸ್ಕ್ರಿಪ್ಟ್…ಪ್ಯಾಕಪ್ – ಎರಡೇ ಪದಗಳು ಅರ್ಥವಾಗಿದ್ದವು. ಬಾಗಿಲು ತೆರೆದವನೆ ಪ್ರೊಡ್ಯುಸರ್ ಮೇಲೆ ಬಿದ್ದ.

“ಕೌ ನೇ ವೊ…ಸ್ಕ್ರಿಪ್ಟ್ ರೈಟರ್…ಬುಲಾವ್ ಉಸ್ಕು…”

“ಸ್ಕ್ರಿಪ್ಟ್ ರೈಟರ್ ಯಾರೂಂತ ನಮ್ಗೇ ಗೊತ್ತಿಲ್ಲ. ಅದೆಲ್ಲಾ ಮಾ.ಕೃ.ಕುಟೀರದಲ್ಲಿ ತಯಾರಾಗಿ ಬರೋದು. ಯಾಕೆ ಸರ್…ಏನಾಯ್ತು?”

“ಓಹ್…ಇಟ್ಸ್ ಓಕೆ. ಶೂಟಿಂಗ್ ಇವತ್ತೇ ಮುಗೀಬೇಕು. ಇವತ್ತೇ ಪ್ಯಾಕ್ ಆಪ್ ಕೂಡ ಆಗ್ಬೇಕು” ಅಂದದ್ದು ಯಾಕೆಂದು ತಿಳಿಯದೆ ಪ್ರೊಡ್ಯುಸರ್ ಗೊಂದಲಗೊಂಡ. ಕಾರಣ ಕೇಳಿದರೆ ಬೆಳ್ಳಂಬೆಳಗ್ಗೆ ಮುಖಕ್ಕೆ ಮಂಗಳಾರತಿ ಆದೀತೆಂದು, ಎಲ್ಲಾ ನಟರಿಗೂ ಕೂಡಲೇ ಬರಹೇಳಿದ.

ಚುರುಗುಟ್ಟುತ್ತಿದ್ದ ಕೆನ್ನೆ ಅವಿವೇಕ್ ಅಗ್ನಿಮೂತ್ರಿಗೆ ಅಶರೀರವಾಣಿಯ ಎಚ್ಚರಿಕೆಯ ಮಾತುಗಳನ್ನು ನೆನಪಿಸುತ್ತಿತ್ತು. ಯಾವುದಕ್ಕೂ ಸುರಕ್ಷಿತವಾಗಿರಬೇಕೆಂದು ಯೋಚಿಸಿ, ಮುಖ್ಯ ಪೊಲೀಸ್ ಅಧಿಕಾರಿಯ ಕಚೇರಿ ಬಳಿ ಇದ್ದ ಮೈದಾನವೇ ಕ್ಲೈಮಾಕ್ಸ್ ಶೂಟಿಂಗಿಗೆ ಸರಿಯಾದ ಜಾಗ ಎಂದುಕೊಂಡ. ಮೈದಾನದ ಹಿಂದೆ ಬ್ಯಾಕ್ ಡ್ರಾಪ್ ಆಗಿ ದೂರದಲ್ಲಿ ಚಾಮುಂಡಿ ಬೆಟ್ಟ ಕಾಣುತ್ತಿದ್ದು ಜಾಗ ಹೆಚ್ಚು ಪ್ರಶಸ್ತವಾಗಿತ್ತು. 

ಪಾರ್ಟ್ ತ್ರೀ.
ಮೊದಲಿಗೆ ಚೊಂಬಕ್ಕನ ಕೈಗೆ ಲಾಂಗನ್ನು ಕೊಟ್ಟು ಡೈಲಾಗ್ ಅನ್ನು ಹೇಳಿಕೊಡಲಾಯಿತು. ಲಾಂಗ್ ಮಚ್ಚು ಹೆಚ್ಚು ತೂಕವಿದ್ದರಿಂದ, ಚಕ್ಕನೆ ಎತ್ತಿ ಡೈಲಾಗ್ ಹೇಳಲು ಚೊಂಬಕ್ಕ ತಿಣುಕಾಡುತ್ತಿದ್ದಾಗ, ರೋಸಿ ಹೋದ ಅ. ಮೂತ್ರಿ ರಟ್ಟಿನ ಲಾಂಗನ್ನು ಕೊಡಲು ಹೇಳಿದ.

ಡೈರೆಕ್ಟರ್ ಚೇರ್ ಮೇಲೆ ಕುಳಿತ ಅವಿವೇಕ್ ಮೂತ್ರಿ “ಲೈಟ್…ಕ್ಯಾಮೆರಾ…ಸೌಂಡ್….ಆಕ್ಷನ್” ಅಂದಿದ್ದೇ, ಚೊಂಬಕ್ಕ ಸೀರೆಯನ್ನು ಎತ್ತಿ ಸೊಂಟಕ್ಕೆ ಕಟ್ಟಿ, ಮೈಮೇಲೆ ಅಣ್ಣಮ್ಮ ದೇವಿ ಬಂದವಳಂತೆ, “ಯಾವುದೇ ಕಾರಣಕ್ಕೂ ಬಾನು ಚಾಮುಂಡಿ ಬೆಟ್ಟ ಹತ್ತಬಾರದು. ದೇವಿ ದರ್ಶನ ಮಾಡಬಾರದು. ಮಾಡಿದರೆ…ಐತೆ ಮಾರಿಹಬ್ಬ” ಎಂದು ಹಲ್ಲನ್ನು ಕಡಿಯುತ್ತ ರಟ್ಟಿನ ಲಾಂಗನ್ನು ಝಳಪಿಸಿದಳು. “ಕಟ್…ಕಟ್” ಎಂದ ಅ. ಮೂತ್ರಿ. ಒಂದೇ ಟೇಕಿಗೆ ಶಾಟ್ ಓಕೆ ಮಾಡಿ, ಚೊಂಬಕ್ಕನನ್ನು “ಯುವರ್…ಗ್ರೇಟ್ ವ್ಯಾಂಪೇರ್ ಆಕ್ಟರ್ಸ್” ಎಂದ. ಅವನು ಹೇಳಿದ್ದು ಅರ್ಥವಾಗದಿದ್ದರೂ, ಚೊಂಬಕ್ಕನ ಮುಖ ಖುಷಿಯಿಂದ ಗಡಿಗೆಯಾಯಿತು. ನಂತರ ಪೇಪರ್ ಚಿಮ್ಮ, ಆಸೋಕ, ಚೂನೀಲ್ ಕುಮಾರ್, ಸಜೇಯೆಂದ್ರ…ಎಲ್ಲಾ ಕಮಲೀಗಳು ರಣಕಲಿಗಳಂತೆ ಕೂಗಾಡಿ, ವಿವಿಧ ಆಯುಧಗಳನ್ನು ತೋರಿ ಪುಡಿರೌಡಿಗಳಂತೆ “ಅರಿಶಿನ ಕುಂಕುಮ ಕೇರ್ ಮಾಡದ ಬಾನು ಬರಬಾರದು” ಎಂದು ಮಾಡಿದ ಓವರ್ ಆಕ್ಟಿಂಗ್ ಗೆ ಅವಿವೇಕ್ ಮೂತ್ರಿಯೇ ಶಾಕ್ ಆಗಿ ಕರೆಂಟ್ ಹೊಡೆದಂತಾಗಿತ್ತು.

ಮೆಥೆಡ್ ಆಕ್ಟಿಂಗ್ ಮಾಡುತ್ತೇನೆ ಎಂದಿದ್ದ ಸನಾತನ ವೀರರನ್ನು ಕೊನೆಯದಾಗಿ ಶೂಟ್ ಮಾಡಲಾಯಿತು.

ಅ. ಮೂತ್ರಿ : ಸನಾತನ ಸರ್….ಡೈಲಾಗ್ ಉರು ಹಚ್ಚಿ ಆಯ್ತಾ? ರೆಡಿನಾ..

ಸನಾತನವೀರ್ : ನಾನ್ ರೆಡಿ…

ಕ್ಲಾಪ್ ಬಾಯ್ : ಸೀನ್ ಟೆನ್…ಟೇಕ್ ಟೆನ್

ಅ. ಮೂತ್ರಿ : ಲೈಟ್…ಕ್ಯಾಮೆರಾ…ಸೌಂಡ್….ಆಕ್ಷನ್

ಸನಾತನ ವೀರ್ : ಬಾನು ಅವರು ಕನ್ನಡ ದೊಡ್ಡ ಸಾಹಿತಿ. ಅವರಿಂದ ಕನ್ನಡಕ್ಕೆ ಬೂಕರ್ ಪ್ರಶಸ್ತಿ ಬಂದಿದೆ. ಅವರು ದಸರಾ ಉದ್ಘಾಟನೆ ಮಾಡಲು ನಮಗೆ ಯಾವ ಅಡ್ಡಿ ಇಲ್ಲ. ಬದಲಿಗೆ ನಾವು ಸಂತೋಷ ಪಡುತ್ತೇವೆ.

ಅ. ಮೂತ್ರಿ : (ಸಿಟ್ಟಿನಿಂದ) ಕಟ್..ಕಟ್…ಏನ್ಸಾರ್ ನೀವು? ಕಮಲೀ ಪಾರ್ಟಿಯಲ್ಲಿದ್ದೀರ! ಸಂಸದರಾಗಿದ್ದೀರ! ಹಿಂಗೆ ಡೈಲಾಗ್ ಹೇಳೋದ? ಚಡ್ಡಿ ಪಾರ್ಟಿಗೆ ಬರೋಕೆ ಮುಂಚೆ ಮೆದುಳನ್ನು ಅಡ ಇಟ್ಟು ಬರಬೇಕು. ಗೊತ್ತಿಲ್ವ! ನೀವಿನ್ನು ಪಾರ್ಟಿ ಆಫೀಸಿನ ಸೇಫ್ ಲಾಕರ್ ನಲ್ಲಿ ಬ್ರೈನ್ ಡಿಪಾಸಿಟ್ ಮಾಡಿಲ್ವ?

ಸನಾತನ ವೀರ್ : ನಮೋ ಸಾಹೇಬರು…ನೀವು ರಾಜಕುಮಾರ…ಆದ್ದರಿಂದ ಬ್ರೈನ್ ಡಿಪಾಸಿಟ್ ಮಾಡೋದೇನು ಬೇಡ ಅಂದಿದ್ರು.

ಅ. ಮೂತ್ರಿ : ಹಂಗಂತ…ಏನ್ ಬೇಕಾದ್ರು ಡೈಲಾಗ್ ಹೊಡೀ ಬಹುದಾ?…ಮತ್ತೆ ಸ್ಕ್ರಿಪ್ಟ್ ಸರಿಯಾಗಿ ಓದಿ ಕೊಳ್ಳಿ…ಟೇಕ್ ಓಕೆ ಆಗ್ಬೇಕು. ನಂಗೆ ಟೈಮಿಲ್ಲ. ಬೇಗ ಇಲ್ಲಿಂದ ಜಾಗ ಖಾಲಿ ಮಾಡ್ಭೇಕು.

ಸನಾತನ ವೀರ್ : ಓಹ್…ಗೊತ್ತಾಗಲಿಲ್ಲ. ತಾಳಿ…ಡೈಲಾಗ್ ಉರು ಹೊಡಿತೀನಿ.

ಕ್ಲಾಪ್ ಬಾಯ್ : ಸೀನ್ ಟೆನ್…ಟೇಕ್ ಇಲೆವೆನ್

ಅ. ಮೂತ್ರಿ : ಲೈಟ್…ಕ್ಯಾಮೆರಾ…ಸೌಂಡ್….ಆಕ್ಷನ್

ಸನಾತನ ವೀರ್ : ಬಾನು ಅವರು ಕನ್ನಡ ದೊಡ್ಡ ಸಾಹಿತಿ ಆಗಿರಬಹುದು. ಅವರಿಂದ ಕನ್ನಡಕ್ಕೆ ಬೂಕರ್ ಪ್ರಶಸ್ತಿ ಬಂದಿರಬಹುದು. ಆದರೆ, ತಾಯಿ ಭುವನೇಶ್ವರಿ ಬಗ್ಗೆ ಅರಿಶಿನ ಕುಂಕುಮದ ಬಗ್ಗೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಅವರು ದಸರಾ ಉದ್ಘಾಟನೆ ಮಾಡಲು ನಾವು ಅಡ್ಡಿ ಮಾಡುತ್ತೇವೆ.  ಸಂತೋಷ ಪಡುವ ಬದಲಿಗೆ ವಿಷಾದಿಸುತ್ತೇವೆ.

ಅ. ಮೂತ್ರಿ : ಕಟ್…ಕಟ್…ಸೂಪರ್ ಸರ್ ನೀವು…ಸಕತ್ತಾಗಿ ಡೈಲಾಗ್ ಡೆಲಿವೆರಿ ಮಾಡಿದ್ರಿ. ಮೆಥೆಡ್ ಆಕ್ಟಿಂಗ್ ಎಲ್ಲಿ ಚಡ್ಡಿ ಆಫೀಸಲ್ಲಿ ಕಲಿತದ್ದಾ? ಕಂಗ್ರಾಜುಲೇಷನ್….ನಿಮಗೆ ಕಮಲೀ ಪಾರ್ಟಿಯಲ್ಲಿ ಒಳ್ಳೇ ಭವಿಷ್ಯವಿದೆ.

ಸನಾತನ ವೀರ್ : (ಅಬ್ಬಾ ಬಚಾವಾದೆ)…ಥ್ಯಾಂಕ್ಯು…ಮೂತ್ರಿಗಳೇ.

ಲೌಡ್ ಸ್ಪೀಕರ್ ಹಿಡಿದ ಅವಿವೇಕ ಮೂತ್ರಿ “ಆಲ್ ಕನ್ನಡ್ ಪೀಪಲ್ ಥ್ಯಾಂಕ್ಯು…ಪ್ಯಾಕ್ ಅಪ್…” ಎಂದು ಹೇಳುವಾಗ, ಮೈದಾನದ ಹೊರಗಡೆ ಮೆರವಣಿಗೆ ಹೊರಟಿದ್ದು ಕಂಡಿತು. “ಸರ್ವ ಜನಾಂಗದ ಶಾಂತಿಯ ತೋಟ…ಈ ನಮ್ಮ ಕರುನಾಡು” “ನಾಡಹಬ್ಬ ಕನ್ನಡಿಗರ ಹಬ್ಬ” “ನಮ್ಮ ಬಾನು ಕನ್ನಡಮ್ಮನ ಮಗಳು” “ಕನ್ನಡವೇ ಧರ್ಮ ಕನ್ನಡವೇ ಬದುಕು” ಎಂದು ಘೋಷಣೆ ಕೂಗುತ್ತ ಕನ್ನಡ ಬಾವುಟ ಹಿಡಿದು ಜನಸಾಗರ ಸಾಗಿತ್ತು.

ಅದನ್ನು ನೋಡಿದ ಕಮಲಿಗಳು “ಡೈರೆಕ್ಟರ್…ಡೈರೆಕ್ಟರ್” ಎಂದು ಅವಿವೇಕ್ ಮೂತ್ರಿಗಾಗಿ ಹುಡುಕಾಡಿದರೆ, ಪ್ರಾಪಗಂಡ ಡೈರೆಕ್ಟರ್ ಅವಿವೇಕ್  ಮೂತ್ರಿ ಆಗಲೇ ಅಲ್ಲಿಂದ ಕಂಬಿ ಕಿತ್ತಿದ್ದ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page