Tuesday, June 18, 2024

ಸತ್ಯ | ನ್ಯಾಯ |ಧರ್ಮ

ಭೂತಕ್ಕಿದೆಯೇ ಭವಿಷ್ಯ?

ದೈವಾರಾಧನೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದಾದರೆ ಭೂತ ಕಟ್ಟುವವನ ಮಗನೂ ಭೂತ ಕಟ್ಟಿಕೊಂಡೇ ಇರಬೇಕೇ? ಆತನಿಗೂ ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಡವೇ? ಎಂಬ ಬಹು ಮುಖ್ಯ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದಾರೆ ಚಿಂತಕ ಶ್ರೀನಿವಾಸ ಕಾರ್ಕಳ.

“ಹ್ವಾಯ್, ಮುಂದಿನ್ ವಾರ ಕಲ್ಕುಟ್ಕ ಮಕ್ಕಿಯಲ್ ಕೋಲ ಅಂಬ್ರಲ್ಲೆ…”  ಎಂಬ ಮಾತು ಎಲ್ಲೋ  ಯಾರೋ ಆಡುತ್ತಿರುವುದು ಕಿವಿಗೆ ಬಿದ್ದರೂ ಸಾಕು, ಒಂದು ಕ್ಷಣ ನಮ್ಮ ಕಿವಿ ನೆಟ್ಟಗಾಗಿ ಬಿಡುತ್ತಿತ್ತು. ಇದಕ್ಕೆ ಕಾರಣಗಳು ಅನೇಕ. ಇಂದಿನಂತಹ ಮನರಂಜನಾ ಕಾರ್ಯಕ್ರಮಗಳು ವ್ಯಾಪಕವಾಗಿ ಇರದ ಅದು ಕಳೆದ ಶತಮಾನದ ಎಪ್ಪತ್ತರ ದಶಕ. ಊರಿನವರನ್ನೆಲ್ಲ ಆಕರ್ಷಿಸಿ ಒಂದೆಡೆ ಸೇರಿಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳೆಂದರೆ, ಊರಿನ ದೇವಸ್ಥಾನದ ತೇರಿನ ಜಾತ್ರೆ, ಅಪರೂಪಕ್ಕೊಮ್ಮೆ ಬರುತ್ತಿದ್ದ ಟೆಂಟ್ ಮೇಳದ ಯಕ್ಷಗಾನ ಬಯಲಾಟ, ಶಾಲೆಯ ವಾರ್ಷಿಕೋತ್ಸವ, ಅದು ಬಿಟ್ಟರೆ ಊರ ದೈವಗುಡಿಯ ಕೋಲ.

ಶಂಕ್ರಾಣದ (ಊರ ಹೆಸರು ಶಂಕರನಾರಾಯಣವಾದರೂ ಅಷ್ಟುದ್ದದ ಹೆಸರು ಗ್ರಾಮೀಣ ಅನಕ್ಷರಸ್ಥರು ಮತ್ತು ಅರೆ ಅಕ್ಷರಸ್ಥರ ಬಾಯಿಯಲ್ಲಿ ಹೇಗೆ ಉಳಿದೀತು? ಅದನ್ನು ಅವರು ಸಂಕ್ಷಿಪ್ತವಾಗಿ ಕರೆಯುತ್ತಿದ್ದುದು ಶಂಕ್ರಾಣ ಎಂದೇ. ಈ ಶಂಕ್ರಾಣವು ಕುಂದಾಪುರದಿಂದ ಹಾಲಾಡಿ ಮಾರ್ಗವಾಗಿ ಸಿದ್ದಾಪುರ ಕಡೆಗೆ ಹೋಗುವಾಗ ಹಾಲಾಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸಿಗುತ್ತದೆ) ವೀರ ಕಲ್ಲು ಕುಟಿಕ/ ಕಲ್ಕುಡ ದೈವದ ಕೋಲ ತುಂಬಾ ಪ್ರಸಿದ್ಧ. ಎರಡೋ ಮೂರೋ ದಿನ ನಡೆಯುತ್ತಿದ್ದ ಆ ಕೋಲಕ್ಕೆ ಆ ದೈವಸಾನಕ್ಕೆ ನಡೆದುಕೊಳ್ಳುವ ಸುತ್ತಲ ಹಳ್ಳಿಗರು ಮಾತ್ರವಲ್ಲ, ಘಟ್ಟದ ಮೇಲಿನವರೂ ಬರುತ್ತಿದ್ದರು.

ಕೋಲ ಸಂಜೆ ಶುರುವಾಗುವುದಿದ್ದರೆ, ನಾವು ಕುತೂಹಲದಿಂದ ಹಗಲಲ್ಲೇ ಆಗೊಮ್ಮೆ ಈಗೊಮ್ಮೆ ಅಲ್ಲಿ ಠಳಾಯಿಸುತ್ತಿದ್ದೆವು. ಭೂತ ಕಟ್ಟುವಾತ ತನ್ನ ಹೆಂಡತಿ ಮಕ್ಕಳೊಂದಿಗೆ ಅಲ್ಲಿ ಒಂದು ಮೂಲೆಯಲ್ಲಿ ಹಾಜರಿದ್ದು, ತೆಂಗಿನ ಎಳೆ ಗರಿಯಿಂದ ಭೂತದ ವೇಷದ ತಿರಿ ಮತ್ತು ಅಣಿಗೆ ಅಗತ್ಯವಾದ ಸಾಮಗ್ರಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿರುತ್ತಿದ್ದ. ತೆಂಗಿನ ಎಳೆಗರಿಯಿಂದ ಅವರು ತಯಾರಿಸುತ್ತಿದ್ದ ಅಲಂಕಾರಿಕ ಸಾಮಗ್ರಿಗಳು ತುಂಬಾ ಆಕರ್ಷಕವಾಗಿರುತ್ತಿದ್ದವು.

ರಾತ್ರಿ ಕೋಲಕ್ಕೆ ಸಭೆ ಪೂರ್ತಿ ಸೇರುವ ಮೊದಲೇ ನಾವು ಹುಡುಗರು ಮತ್ತೆ ಹಾಜರ್. ಭೂತ ವೇಷ ಕಟ್ಟುವುದನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದೆವು. ನಾಗಸ್ವರ, ತಾಸೆ, ಡೋಲು, ಬೇಂಡು ವಾಲಗದ ಅಬ್ಬರದಲ್ಲಿ ದೈವಕ್ಕೆ ಆವೇಶ ಬರುವಾಗ ನಮಗೆಲ್ಲ ಒಂದು ರೀತಿ ಭಯ. ನಮಗೆ ಅದು ಏನಾದರೂ ಮಾಡಿದರೆ?! ಒಂದು ಬಾರಿ ಆವೇಶ ಇಳಿದ ಮೇಲೆ ಅಲ್ಲಿ ಸೇರಿದವರನ್ನು ರಂಜಿಸಲು ಅದು ಸಿನಿಮಾ ಸಂಗೀತಕ್ಕೆ ಹೆಜ್ಜೆ ಹಾಕುವುದೂ ಇತ್ತು. ನಡು ನಡುವೆ ಮತ್ತೆ ಆವೇಶ. ಮತ್ತದೇ ಪುನರಾವರ್ತನೆ. ಇದು ಬಹುತೇಕ ರಾತ್ರಿಯಿಡೀ ನಡೆಯುತ್ತಿತ್ತು.

ಎರಡೋ ಮೂರೋ ದಿನ ನಡೆಯುತ್ತಿದ್ದ ಕೋಲದಲ್ಲಿ ಕೊನೆಯ ದಿನದ ಚಿತ್ರಗಳು ತುಂಬಾ ನೆನಪಿನಲ್ಲಿವೆ. ಅದಕ್ಕೆ ಕಾರಣ ಅಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ. ಊರಿನ ಬಹುತೇಕ ಶೂದ್ರ ಸಮುದಾಯವರು ಅಲ್ಲಿಗೆ  ಕೋಳಿ ಕೊಡುತ್ತಿದ್ದರು. ಕೋಳಿಯ ಕಾಲಿಗೆ ಅದರ ಮಾಲೀಕನ  ಗುರುತಿನ ಚೀಟಿ ಕಟ್ಟಲಾಗುತ್ತಿತ್ತು. ಇಬ್ಬರು ಕೋಳಿಯನ್ನು ಹಿಡಿದುಕೊಳ್ಳುತ್ತಿದ್ದರು. ಒಬ್ಬರು ಅತ್ತಲಿಂದ ಇನ್ನೊಬ್ಬರು ಇತ್ತಲಿಂದ. ಕೋಳಿಯ ಕತ್ತನ್ನು ಕತ್ತರಿಸಿ ಗದ್ದೆಗೆ ಎಸೆಯುತ್ತಿದ್ದರು. ರುಂಡ ರಹಿತ ಕೋಳಿ ಸ್ವಲ್ಪ ಹೊತ್ತು ಜಿಗಿದಾಡಿ ಕೊನೆಗೆ ಸ್ತಬ್ಧವಾಗುತ್ತಿತ್ತು. ಮುಸ್ಸಂಜೆಯ ಹೊತ್ತು, ಅನೇಕರ ಕೋಳಿಗಳು ಗದ್ದೆಯ ತುಂಬಾ ಚದುರಿರುತ್ತಿದ್ದುದರಿಂದ ನಮ್ಮ ಕೋಳಿ ಹುಡುಕಲು ಬಹಳ ಸಮಯ ಹಿಡಿಯುತ್ತಿತ್ತು. ಕೋಳಿಯ ರುಂಡ ಅದನ್ನು ಕತ್ತರಿಸಿದವರಿಗೆ. ನಮಗೆ ಮುಂಡ ಮಾತ್ರ.

ಇನ್ನೂ ಹೆಚ್ಚು ಭಯ ಹುಟ್ಟಿಸುತ್ತಿದ್ದುದು ಆ ರಾತ್ರಿಯ ಪ್ರಾಣಿ ಬಲಿಯ ದೃಶ್ಯ. ‘ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು! ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು. ಕೊಂದವರುಳಿದರೆ ಕೂಡಲಸಂಗಮದೇವ ?’ ಎಂದು ಬಸವಣ್ಣ ಹೇಳಿದ್ದರಲ್ಲ, ಈ ವಚನಗಳ ಮೊದಲ ಸಾಲುಗಳನ್ನು ಅಲ್ಲಿ ಕಣ್ಣಾರೆ ನೋಡುತ್ತಿದ್ದೆವು. ಬಲಿ ಕೊಡಲಿರುವ ಆಡು, ಕುರಿಗಳ ಕೊರಳಿಗೆ ಹಾರ ಹಾಕಿ ಅವನ್ನು ದೈವಸಾನದ ಸುತ್ತ ಪ್ರದಕ್ಷಿಣೆ ಒಯ್ಯಲಾಗುತ್ತಿತ್ತು. ಮುಂದೇನಾಗಲಿದೆ ಎಂಬ ಅರಿವೇ ಇರದ ಅವು ಕೊರಳಿಗೆ ಹಾಕಿದ ಹೂವಿನ ಹಾರವನ್ನೇ ಕಿತ್ತು ತಿನ್ನುತ್ತಾ ಸುತ್ತುಬರುತ್ತಿದ್ದವು.

ಇನ್ನಷ್ಟು ರಾತ್ರಿಯಾಗಿ ಬಲಿಯ ಸಮಯ ಹತ್ತಿರವಾಗುತ್ತಿದ್ದಂತೆ ಪ್ರಾಣಿಯ ತಲೆ ಕಡಿಯುವ ವ್ಯಕ್ತಿಗೆ ಹರಿತವಾದ ಕತ್ತಿಯನ್ನು ಕೊಡುತ್ತಿದ್ದರು. ಕತ್ತಿ ತೆಗೆದುಕೊಳ್ಳುವ ವರೆಗೂ ಎಲ್ಲರಂತೆ ಶಾಂತವಾಗಿರುವ ವ್ಯಕ್ತಿ, ಕೈಗೆ ಕತ್ತಿ ಬರುತ್ತಲೇ ಮೈಮೇಲೆ ಆವೇಶ ಬಂದು ಮೈ ಅದುರಿಸುತ್ತಾ ಜಿಗಿಯುತ್ತಿದ್ದ. ನಮಗೋ ಭಯ. ಆ ಕತ್ತಿಯಿಂದ ನಮ್ಮ ತಲೆ ಕತ್ತರಿಸಿದರೆ?! ದೂರ ಓಡಿ ಹೋಗಿ ನಿಂತು ಮುಂದಿನ ಘಟನೆ ನೋಡುತ್ತಿದ್ದೆವು. ದೈವಸಾನದ ಅಂಗಳದಲ್ಲಿ ಒಬ್ಬರು ಬಲಿಪ್ರಾಣಿಯ ಹಿಂಗಾಲನ್ನು ಹಿಡಿದುಕೊಳ್ಳುತ್ತಿದ್ದರು. ಇನ್ನೊಬ್ಬರು ಅದರ ಕೊರಳಿಗೆ ಹಗ್ಗ ಹಾಕಿ ಅದನ್ನು ಎಳೆದು ಹಿಡಿಯುತ್ತಿದ್ದರು. ಮೈ ಮೇಲೆ ಆವೇಶ ಬಂದ ವ್ಯಕ್ತಿ ವಿಚಿತ್ರ ದನಿಯೊಂದಿಗೆ ಆರ್ಭಟಿಸುತ್ತಾ ಕತ್ತಿಯಿಂದ ಪ್ರಾಣಿಯ ಕತ್ತಿಗೆ ಬೀಸುತ್ತಿದ್ದ. ಬಹುತೇಕ ಒಂದೇ ಏಟಿಗೆ ರುಂಡ ಮತ್ತು ಮುಂಡ ಬೇರೆಯಾಗುತ್ತಿತ್ತು.

ಇದೇ ರೀತಿ ಉಳಿದ ಪ್ರಾಣಿಗಳನ್ನೂ ತಂದು ಬಲಿಕೊಡುತ್ತಿದ್ದರು. ಕತ್ತು ಕತ್ತರಿಸಿದ ಬಳಿಕ ಚಿಮ್ಮುತ್ತಿದ್ದ ರಕ್ತವನ್ನು ದೈವಕ್ಕೆಂದು ಇರಿಸಿದ ಅನ್ನದ ರಾಶಿಗೆ ಚಿಮುಕಿಸುತ್ತಿದ್ದರು. ಆನಂತರ ಆ ಪ್ರಾಣಿಗಳ ದೇಹವನ್ನು ಕತ್ತರಿಸಿ, ಮಾಂಸ ಮಾಡಿ ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚುತ್ತಿದ್ದರು. ನನ್ನಪ್ಪ ಸರಕಾರಿ ಉದ್ಯೋಗಿಯಾಗಿದ್ದುದರಿಂದ ನಮಗೂ ಮಟನ್ ನಲ್ಲಿ ಒಂದು ಪಾಲು ಬರುತ್ತಿತ್ತು. ಇದು ನಾನು ಸುಮಾರು ನಲವತ್ತೈದು ವರ್ಷದ ಹಿಂದೆ ನೋಡಿದ ಮತ್ತು ಇನ್ನೂ ಮನಸಿನಲ್ಲಿ ಹಸಿರಾಗಿಯೇ ಇರುವ ದೈವ ಕೋಲವೊಂದರ ಚಿತ್ರ.

ಯಕ್ಷಗಾನ, ಕೋಲ, ಕಂಬಳ, ಕೋಳಿ ಕಟ್ಟಗಳನ್ನು ಹೊರತುಪಡಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಲ್ಪಿಸಿಕೊಳ್ಳುವುದು ಬಹಳ ಕಷ್ಟ. ಇವು ಕರಾವಳಿಯ ಸಾಂಸ್ಕೃತಿಕ ಚಹರೆಯಲ್ಲಿ ವಹಿಸಿದ ಪಾತ್ರ ದೊಡ್ಡದು. ಮಳೆಗಾಲ ಕಳೆದ ನಂತರ ರಾತ್ರಿಯ ನೀರವ ಸಮಯ ಮಂಗಳೂರಿನಂತಹ ಮಹಾನಗರದೊಳಗೆ ಕೂಡಾ ನೀವು ಕಿವಿಗೊಟ್ಟು ಆಲಿಸಿದರೆ ಈಗಲೂ ಎಲ್ಲೋ ಯಕ್ಷಗಾನದ ಚೆಂಡೆ ಪೆಟ್ಟು,ಇನ್ನೆಲ್ಲೋ ಕೋಲದ ತಾಸೆ ಪೆಟ್ಟಿನ ಸದ್ದು, ದೈವದ ಆರ್ಭಟ ನಿಮಗೆ ಕೇಳಿಸದಿರದು.

ಪರಂಪರೆಯಿಂದ ಬಂದ ಈ ಜನಪದ ಕಲೆ, ಕ್ರೀಡೆ, ಸಂಪ್ರದಾಯಗಳೆಲ್ಲ ಹಿಂದಿನಂತೆಯೇ ಈಗಲೂ ಇವೆಯೇ? ಮುಂದೆಯೂ ಇರಬಹುದೇ? ಎಂದು ಕೇಳಿದರೆ ಉತ್ತರಿಸುವುದು ಬಹಳ ಕಷ್ಟವೇನಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಬದಲಾಗುತ್ತಿವೆ. ತೀವ್ರ ಗತಿಯಲ್ಲಿ ವಾಣಿಜ್ಯೀಕರಣಗೊಳ್ಳುತ್ತಿವೆ. ಯಕ್ಷಗಾನ ಇರಬಹುದು, ಕಂಬಳ, ದೈವಾರಾಧನೆ ಇರಬಹುದು ಇವೆಲ್ಲ ಮೂಲತಃ ಕೃಷಿ ಸಂಸ್ಕೃತಿಯೊಂದಿಗೆ ಸಂಬಂಧ ಇಟ್ಟುಕೊಂಡವು. ಕೃಷಿ ಕೆಲಸದ ಆನಂತರ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ನಮ್ಮ ಜನಪದರು ಯಕ್ಷಗಾನವನ್ನು ಆರಂಭಿಸಿದರು ಎಂಬ ಒಂದು ವಾದವೂ ಇದೆ. ಟೆಂಟಿನ ಮೇಳಗಳು ಊರೂರು ತಿರುಗುವಾಗ ಹೆಚ್ಚಾಗಿ ಯಕ್ಷಗಾನ ಬಯಲಾಟ ನಡೆಸುತ್ತಿದ್ದುದು ಬೇಸಗೆಯ ಭತ್ತದ ಗದ್ದೆಗಳಲ್ಲಿ. ಕಂಬಳವಂತೂ  ನೇರವಾಗಿ ಭತ್ತದ ಗದ್ದೆಗಳೊಂದಿಗೆ ಸಂಬಂಧ ಇದ್ದಂತಹ ಒಂದು ಜನಪದ ಕ್ರೀಡೆ. ಬಿತ್ತನೆಗೆ ಸಿದ್ಧವಾದ ಗದ್ದೆಯಲ್ಲಿಯೇ ಕಂಬಳ ನಡೆಯುತ್ತಿದ್ದುದು. ದೈವಾರಾಧನೆಯೂ ಕೃಷಿ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡ ಒಂದು ಆರಾಧನಾ ಸಂಪ್ರದಾಯ. ಅಲ್ಲಿ ಬಳಕೆಯಾಗುವುದೆಲ್ಲ ಪ್ರಾಕೃತಿಕವಾಗಿ ಸಿಗುವ ಪರಿಕರಗಳು.

ಊಳಿಗಮಾನ್ಯ ವ್ಯವಸ್ಥೆಯ ಜತೆ ಜತೆಗೆ ಹೆಜ್ಜೆ ಹಾಕುತ್ತ ಬೆಳೆದುಬಂದ ಸಂಪ್ರದಾಯ ದೈವಾರಾಧನೆ. ಇಡೀ ಕರಾವಳಿಯು ಕೃಷಿಯಲ್ಲಿ ತೊಡಗಿಕೊಂಡಿದ್ದ ಕಾಲದಲ್ಲಿ ಗುತ್ತಿನ ಮನೆಗಳು ವ್ಯಾಪಕವಾಗಿದ್ದವು. ದೈವಗಳು ಗುತ್ತಿನ ಯಜಮಾನನನ್ನು ಉದ್ದೇಶಿಸಿ ‘ಗುತ್ತಿನಾರೇ’ (ಗುತ್ತಿನ ಯಜಮಾನರೇ) ಎಂದು ಸಂಬೋಧಿಸುತ್ತಿದ್ದವು. ಭೂಸುಧಾರಣೆಯಲ್ಲಿ ಅನೇಕ ಗುತ್ತಿನ ಯಜಮಾನರು ಜಮೀನು ಕಳೆದುಕೊಂಡು, ಭೂಮಿಯೆಲ್ಲ ವಿಭಾಗವಾಗಿ ಕೊನೆಗೆ ಹೆಸರಿಗಷ್ಟೇ ಗುತ್ತಿನ ಯಜಮಾನರಾಗಿ ಉಳಿದರು. ಈಗಲೂ ದೈವ ಅವರನ್ನು ಸಂಬೋಧಿಸುವುದು ‘ಗುತ್ತಿನಾರೇ’ ಎಂದೇ!

ಕ್ರಮೇಣ ತುಳುನಾಡಿನ ಕೃಷಿ ವಲಯದಲ್ಲಿ ತೀವ್ರ ಗತಿಯ ಸ್ಥಿತ್ಯಂತರ ಸಂಭವಿಸಿತು. ಭತ್ತ ಕೃಷಿ ಬಹುತೇಕ ಮಾಯವಾಗಿ ತೋಟಗಳು ಕಾಣಿಸಿಕೊಂಡವು. ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡು ಜನ ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾದರು. ಕೃಷಿಯನ್ನೇ ಅವಲಂಬಿಸಿದ್ದ ಅನೇಕರು ಹೆಚ್ಚು ಸಂಪಾದನೆಯ ಉದ್ಯೋಗ ಅರಸುತ್ತಾ ಬೊಂಬಾಯಿ, ಬೆಂಗಳೂರು, ಕೊಲ್ಲಿ ರಾಷ್ಟ್ರ ಎಂದೆಲ್ಲ ಹೊರನಡೆಯುತ್ತಿದ್ದಂತೆ ಅಪಾರ ಪ್ರಮಾಣದ ಭತ್ತದ ಗದ್ದೆಗಳು ಹಡಿಲು ಬಿದ್ದವು. ಕೃಷಿ ಭೂಮಿಯ ಮೇಲೆ ವಾಣಿಜ್ಯ ಕಟ್ಟಡಗಳು ತಲೆ ಎತ್ತಿದವು. ಹೀಗೆ ಕೃಷಿಯೇ ಇಲ್ಲವಾದ ಮೇಲೆ ಕೃಷಿ ಸಂಸ್ಕೃತಿಯನ್ನೇ ಅವಲಂಬಿಸಿದ ಜನಪದ ಕ್ರೀಡೆಗಳು, ಅರಾಧನಾ ಸಂಪ್ರದಾಯಗಳ ಪರಿಸ್ಥಿತಿ ಏನಾಗಬಹುದು?

ಏನಾಗಬಹುದೋ ಅದೇ ಅಗುತ್ತಿದೆ. ಸಿನಿಮಾ ಒಂದರ ಕಾರಣವಾಗಿ ಇಲ್ಲಿನ ದೈವಾರಾಧನೆಯ ಚರ್ಚೆಗಳು ಮುನ್ನೆಲೆಗೆ ಬಂದಿರಬಹುದು. ಹೊರಗಿನವರಲ್ಲಿ ಅದರ ಬಗ್ಗೆ ಸುಂದರ ಕಲ್ಪನೆ, ಭವ್ಯ ಭ್ರಮೆ ಸೃಷ್ಟಿಯಾಗಿರಬಹುದು. ಆದರೆ ವಾಸ್ತವ ಅಷ್ಟು ಖುಷಿ ತರುವಂತಿಲ್ಲ. ವೈದಿಕ ಸಂಸ್ಕೃತಿಯೊಂದಿಗೆ ಯಾವ ಸಂಬಂಧವೂ ಇರದ ದೈವ, ದೈವಸಾನಗಳನ್ನು ವೈದಿಕ ಶಕ್ತಿಗಳು ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ದೈವಗಳನ್ನು ಪುರಾಣ ಕತೆಗಳಿಗೆ ಜೋಡಿಸಿ, ದೈವಗಳ ಹೆಸರುಗಳನ್ನು ಸಂಸ್ಕೃತೀಕರಿಸಿ ಸ್ಥಳೀಯ ಸಂಸ್ಕೃತಿಯ ಅಸ್ಮಿತೆಗಳನ್ನು ಇಲ್ಲವಾಗಿಸುವ ಕೆಲಸ ಭರದಿಂದ ನಡೆದಿದೆ.

ವಾಣಿಜ್ಯೀಕರಣ ಇತರೆಲ್ಲ ಕ್ಷೇತ್ರಗಳನ್ನು ಪ್ರಭಾವಿಸಿದಂತೆ ದೈವಾರಾಧನೆಯನ್ನೂ ಬಿಟ್ಟಿಲ್ಲ. ಪರಂಪರೆಯ ಕಾರಣಕ್ಕೆ ಅನಿವಾರ್ಯವಾಗಿ ನಡೆಯುತ್ತಿವೆ ಎನ್ನುವುದನ್ನು ಹೊರತು ಪಡಿಸಿದರೆ ಅದೂ ಆಂತರ್ಯದಲ್ಲಿ ದೇವರಿಲ್ಲದ ಗುಡಿಯಾಗುತ್ತಿದೆ. ದೈವದ ಕೋಲಗಳು ಈಗ ದುಬಾರಿ ಬಾಬತ್ತಾಗಿವೆ. ‘ಇವತ್ತು ಎರಡು ದೈವಗಳ ದರ್ಶನ ಇದೆ, ಒಟ್ಟು ಬಜೆಟ್ ನಲವತ್ತೆಂಟು ಸಾವಿರ ರುಪಾಯಿ’ ಎಂದು ಈಗಷ್ಟೇ ಒಬ್ಬರು ಹೇಳಿದರು. ಭೂತ ಕಟ್ಟುವವರು ಆಯಾ ದಿನವೇ, ಸ್ಥಳದಲ್ಲಿಯೇ ಕೋಲಕ್ಕೆ ಅಗತ್ಯವಾದ ತಿರಿ, ಅಣಿಗಳನ್ನೆಲ್ಲ ಸಿದ್ಧಪಡಿಸುತ್ತಿದ್ದರು. ಈಗ ರೆಡಿಮೇಡ್ ವೇಷ ಭೂಷಣಗಳ ಕಾಲ. ಒಂದು ಭೂತ ಕಟ್ಟಿದ್ದಕ್ಕೆ ಐದರಿಂದ ಹತ್ತು ಸಾವಿರ ಕೊಡಬೇಕಾಗುತ್ತದೆ. ಹೊಸಬರು ಭೂತ ಕಟ್ಟಲು ಸಿದ್ಧರಿಲ್ಲ. ಹಾಗಾಗಿ ಹಳೆಯ ತಲೆಮಾರು ಮಾತ್ರ ಇದರಲ್ಲಿ ಮುಂದುವರಿಯುತ್ತಿದೆ.

ಈ ಎಲ್ಲದರ ನಡುವೆಯೂ, ಸಂಸ್ಕೃತಿಯನ್ನು ಉಳಿಸಬೇಕು ಎಂಬ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಆದರೆ ಯಾವ ಸಂಸ್ಕೃತಿಯನ್ನು ಉಳಿಸಬೇಕು? ಸಂಸ್ಕೃತಿಯ ಪ್ರತಿಗಾಮಿ ಅಂಶಗಳನ್ನೂ ಉಳಿಸಿಕೊಳ್ಳಬೇಕೇ? ಆಚರಣೆಗಳೆಲ್ಲವೂ ಮೌಢ್ಯವಲ್ಲವಾದರೂ, ಮೌಢ್ಯಗಳೆಲ್ಲವೂ ಆಚರಿಸಲ್ಪಡುವ ಮತ್ತು ಮೂಢನಂಬಿಕೆಗಳೆಲ್ಲವೂ ಸಂಭ್ರಮಿಸಲ್ಪಡುವ ಸಮಾಜದಲ್ಲಿ ಯಾವುದನ್ನು ಎಷ್ಟು ಉಳಿಸಿಕೊಳ್ಳಬೇಕು? ದೈವಾರಾಧನೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದಾದರೆ ಭೂತ ಕಟ್ಟುವವನ ಮಗನೂ ಭೂತ ಕಟ್ಟಿಕೊಂಡೇ ಇರಬೇಕೇ? ಆತನಿಗೂ ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಡವೇ? ಎಂಬ ಅನೇಕ ಪ್ರಶ್ನೆಗಳಿವೆ. ಉತ್ತರ, ಪರಿಹಾರ ಸುಲಭವಲ್ಲ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

Related Articles

ಇತ್ತೀಚಿನ ಸುದ್ದಿಗಳು