ದೇವರ ನಾಡಿನ ಕರುಳು ಸುಡುವ ಹಸಿವಿಗೆ ಬಲಿಯಾದ ಅಟ್ಟಪ್ಪಾಡಿಯ ಮಧುವಿನ ಕಥೆ!

"..ಮಧು ಅನ್ನೋ ಅಮಾಯಕನ ಸಾವಿನ ಹಿಂದೆ ಒಂದು ಇಡೀ ಬುಡಕಟ್ಟು ಜನಾಂಗದ ಸಮಾಧಿಯಿದೆ. ನೂರಾರು ವರ್ಷಗಳ ವಂಚನೆಯ ಕರಾಳ ಇತಿಹಾಸವಿದೆ. ಒಂದು ದಟ್ಟವಾದ ಕಾಡು, ಅಲ್ಲಿನ ಡೆಮೋಗ್ರಫಿ ಮತ್ತು ಜಿಯಾಗ್ರಫಿ ಹೇಗೆ ಕೆಲವು ದುರಾಸೆಯ ವಲಸಿಗರಿಂದ ಸಂಪೂರ್ಣವಾಗಿ ನಾಶವಾಯ್ತು ಅನ್ನೋದರ ರಕ್ತಸಿಕ್ತ ಕಥೆಯಿದು.." ಲೇಖಕರಾದ ವಿಆರ್ ಕಾರ್ಪೆಂಟರ್ ಅವರ ಬರಹದಲ್ಲಿ 

“ಒಂದು ಹಿಡಿ ಅಕ್ಕಿ ಕದ್ದಿದ್ದಕ್ಕೆ ಹೊಡೆದು ಕೊಂದರು, ಈಗ ಕೇರಳ ಹೈಕೋರ್ಟ್ 12 ಜನರಿಗೆ ಲೈಫ್ ಟೈಮ್ ಜೈಲು ಶಿಕ್ಷೆ ಕೊಟ್ಟಿದೆ” ಎಂದು ಇಂದು ಅನೇಕ ಮಾಧ್ಯಮಗಳು ಸುದ್ದಿ ಮಾಡಿವೆ! ಮೇಲ್ನೋಟಕ್ಕೆ ಇದೊಂದು ಕಳ್ಳತನ ಮತ್ತು ಕೊಲೆಯ ಸ್ಟೋರಿ ತರಹ ಕಾಣುತ್ತದೆ. ನಾವೆಲ್ಲರೂ “ಪಾಪ, ತಪ್ಪು ಮಾಡಿದವರಿಗೆ ಶಿಕ್ಷೆಯಾಯ್ತು” ಎಂದುಕೊಂಡು ಎಂದುಕೊಂಡು ಫೇಸ್ಟುಕ್ಕಿನಲ್ಲಿ ಒಂದು ಲೈಕ್ ಒತ್ತಿ ಸ್ಕಾಲ್ ಮಾಡಿಕೊಂಡು ಹೋಗುತ್ತೇವೆ.

ಆದರೆ, ಸ್ವಲ್ಪ ನಿಲ್ಲಿ. ಈ ಮಧು ಅನ್ನೋ ಅಮಾಯಕನ ಸಾವಿನ ಹಿಂದೆ ಒಂದು ಇಡೀ ಬುಡಕಟ್ಟು ಜನಾಂಗದ ಸಮಾಧಿಯಿದೆ. ನೂರಾರು ವರ್ಷಗಳ ವಂಚನೆಯ ಕರಾಳ ಇತಿಹಾಸವಿದೆ. ಒಂದು ದಟ್ಟವಾದ ಕಾಡು, ಅಲ್ಲಿನ ಡೆಮೋಗ್ರಫಿ (Demography) ಮತ್ತು ಜಿಯಾಗ್ರಫಿ (Geography) ಹೇಗೆ ಕೆಲವು ದುರಾಸೆಯ ವಲಸಿಗರಿಂದ ಸಂಪೂರ್ಣವಾಗಿ ನಾಶವಾಯ್ತು ಅನ್ನೋದರ ರಕ್ತಸಿಕ್ತ ಕಥೆಯಿದು. ಬನ್ನಿ, ಕೇರಳದ ‘ದೇವಭೂಮಿ’ ಅಟ್ಟಪ್ಪಾಡಿಯ ಕಣ್ಣೀರಿನ ಕಥೆಯನ್ನು, ಯಾವುದನ್ನೂ ಮುಚ್ಚಿಡದೆ ಅರ್ಥಮಾಡಿಕೊಳ್ಳೋಣ. ಇದು ಕೇವಲ ಮಧುವಿನ ಕಥೆಯಲ್ಲ. ಇದು ನಮ್ಮ ಸಿಸ್ಟಮ್ನ. ನಮ್ಮ ‘ನಾಗರಿಕ ಸಮಾಜದ ಕ್ರೌರ್ಯದ ಕಥೆ.

ಅಟ್ಟಪ್ಪಾಡಿಯ ಡೆಮೋಗ್ರಫಿ ಮತ್ತು ಜಿಯಾಗ್ರಫಿಯ ವಿನಾಶ
ನಾನು ಹೇಳುತ್ತಿರುವುದು ಕೇರಳದ ಪಾಲಕ್ಕಾಡ್ ಜಿಲ್ಲೆಯ ‘ಅಟ್ಟಪ್ಪಾಡಿ’ ಬಗ್ಗೆ ಸುಮಾರು 745 ಚದರ ಕಿಲೋಮೀಟರ್ ವಿಸ್ತೀರ್ಣ ಇರುವ ಈ ಜಾಗೆ, ಕೇರಳದ ಮೊಟ್ಟಮೊದಲ ಟ್ರೈಬಲ್ ಬ್ಲಾಕ್. ಇದು ಕೇವಲ ಒಂದು ಕಾಡಲ್ಲ, ಇರುಳ (Irula), ಮುಡುಗ (Muduga) ಮತ್ತು ಕುರುಂಬ (Kurumba) ಎಂಬ ಮೂರು ಪುರಾತನ ಬುಡಕಟ್ಟು ಸಮುದಾಯಗಳ ಪಾಲಿಗೆ ಇದೊಂದು ದೇವಭೂಮಿ. ಸ್ವಾತಂತ್ರ್ಯ ಬಂದ ಹೊಸತರಲ್ಲಿ, ಅಂದರೆ 1951ರ ಸುಮಾರಿಗೆ ಈ ಪ್ರದೇಶದ ಶೇಕಡಾ 90 ಕ್ಕೂ ಹೆಚ್ಚು ಭಾಗ ದಟ್ಟವಾದ ಅರಣ್ಯದಿಂದ ಕೂಡಿತ್ತು. ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 90-91 ರಷ್ಟು ಮಂದಿ ಈ ಮೂಲನಿವಾಸಿಗಳೇ ಆಗಿದ್ದರು.

ಆದರೆ, ಇವತ್ತಿನ ಪರಿಸ್ಥಿತಿ ಏನಾಗಿದೆ ಗೊತ್ತಾ? ಅದೇ ಅಟ್ಟಪ್ಪಾಡಿಯಲ್ಲಿ ವಾಸಿಸುತ್ತಿರುವ ಅಂದಾಜು 70,000 ಜನಸಂಖ್ಯೆಯಲ್ಲಿ, ಆದಿವಾಸಿಗಳು ಕೇವಲ ಶೇಕಡಾ 41ಕ್ಕೆ ಕುಸಿದಿದ್ದಾರೆ. ಎಲ್ಲಿಂದಲೋ ಉದ್ಯೋಗ ಅರಸಿಕೊಂಡು, ಕೇರಳದ ಇತರ ಭಾಗಗಳಿಂದ, ತಮಿಳುನಾಡಿನಿಂದ ಬಂದ ವಲಸಿಗರ (Settlers) ಜನಸಂಖ್ಯೆ ಶೇಕಡಾ 9 ರಿಂದ ಶೇಕಡಾ 59 ಕ್ಕೆ ಏರಿಕೆಯಾಗಿದೆ. ಜಸ್ಟ್ ಇಮ್ಯಾಜಿನ್ ಮಾಡಿ, ತಮ್ಮದೇ ನೆಲದಲ್ಲಿ, ಕಾಡಿನ ಒಡೆಯರಾಗಿದ್ದವರು ಇವತ್ತು ಅಲ್ಪಸಂಖ್ಯಾತರಾಗಿದ್ದಾರೆ!

ಇದಕ್ಕೆ ಪ್ರಮುಖ ಕಾರಣ 1967 ರಲ್ಲಿ ಕೇರಳ ಸರ್ಕಾರ ತಂದ ‘ಕೇರಳ ಪ್ರೈವೇಟ್ ಫಾರೆಸ್ಟ್ ಆಕ್ಟ್’. ಈ ಕಾಯ್ದೆಯ ಪ್ರಕಾರ ಒಬ್ಬ ವ್ಯಕ್ತಿ ಕೇವಲ 15 ಎಕರೆ ಭೂಮಿಯನ್ನು ಮಾತ್ರ ಹೊಂದಿರಬಹುದು ಎಂಬ ರೂಲ್ ಬಂತು. ಇದರಿಂದ ತಪ್ಪಿಸಿಕೊಳ್ಳಲು ದೊಡ್ಡ ಭೂಮಾಲೀಕರು ತಮ್ಮ ಜಾಗವನ್ನು ಕವಡೆ ಕಾಸಿಗೆ ಹೊರಗಿನಿಂದ ಬಂದ ಗುತ್ತಿಗೆದಾರರಿಗೆ, ಮರಮುಟ್ಟುಗಳ ವ್ಯಾಪಾರಿಗಳಿಗೆ ಮಾರಿದರು. ಈ ಹೊಸ ಬಂಡವಾಳಶಾಹಿಗಳು, ಭ್ರಷ್ಟ ರಾಜಕಾರಣಿಗಳ ಜೊತೆ ಸೇರಿ, ಇಡೀ ಕಾಡನ್ನು ನಾಶ ಮಾಡಿದರು. ಶೇಕಡಾ 90 ರಷ್ಟಿದ್ದ ಕಾಡು, ಕೇವಲ 15 ವರ್ಷಗಳಲ್ಲಿ ಶೇಕಡಾ 82 ಕ್ಕೆ ಕುಸಿದು, ಇವತ್ತು ಕೇವಲ ಶೇಕಡಾ 20 ಕ್ಕೆ ಬಂದು ನಿಂತಿದೆ. 1980 ರ ದಶಕದಲ್ಲಿ ‘ಸೈಲೆಂಟ್ ವ್ಯಾಲಿ’ ವಿವಾದ ಬರುವವರೆಗೂ ಈ ಮರಗಳ ಮಾರಣಹೋಮ ನಿರಂತರವಾಗಿ ನಡೆಯುತ್ತಲೇ ಇತ್ತು.

ಮೂರು ಕಾಸಿಗೆ ಬಿಕರಿಯಾದ ಬದುಕು: ವ್ಯವಸ್ಥಿತ ಭೂಗಳ್ಳತನ
ಯುವಜನರೇ, ಒಂದು ವಿಷಯ ನೆನಪಿಡಿ. ಒಂದು ಸಮುದಾಯವನ್ನು ನಾಶ ಮಾಡಬೇಕು ಅಂದರೆ, ಮೊದಲು ಅವರ ನೆಲವನ್ನು ಕಸಿಯಬೇಕು. ಭಾರತಕ್ಕೆ ವಲಸೆ ಬಂದ ಆರ್ಯರು ಮಾಡಿದ್ದೂ ಅದನ್ನೇ… ಅಟ್ಟಪ್ಪಾಡಿಯಲ್ಲಿ ಆಗಿದ್ದೂ ಅದೇ. ವಲಸಿಗರು ಅಟ್ಟಪ್ಪಾಡಿಗೆ ಕಾಲಿಟ್ಟಾಗಿನಿಂದ, ಬರೋಬ್ಬರಿ 10472 ಎಕರೆಗೂ ಹೆಚ್ಚು ಆದಿವಾಸಿ ಭೂಮಿಯನ್ನು ವ್ಯವಸ್ಥಿತವಾಗಿ ಕಬಳಿಸಲಾಗಿದೆ.

  • ಇರುಳ ಸಮುದಾಯ: 8996.14 ಎಕರೆ ಕಳೆದುಕೊಂಡಿತು.
  • ಮುಡುಗ ಸಮುದಾಯ: 1083.17 ಎಕರೆ ಕಳೆದುಕೊಂಡಿತು.
  • ಕುರುಂಬ ಸಮುದಾಯ: 26.00 ಎಕರೆ ಕಳೆದುಕೊಂಡಿತು.

ಹೇಗೆ ಕದ್ದರು ಈ ಭೂಮಿಯನ್ನ? ಕೇಳಿದರೆ ನಿಮ್ಮ ರಕ್ತ ಕುದಿಯುತ್ತದೆ. ಕಾಡನ್ನೇ ನಂಬಿದ್ದ ಈ ಮುಗ್ಧಜನರಿಗೆ ದುಡ್ಡು, ಪ್ರಾಪರ್ಟಿ, ಡಾಕ್ಯುಮೆಂಟ್ ಅಂದರೆ ಏನು ಅಂತಾನೇ ಗೊತ್ತಿರಲಿಲ್ಲ. ವಲಸಿಗರು ಇವರಿಗೆ ಸಣ್ಣಪುಟ್ಟ ಸಾಲ ಕೊಟ್ಟು, ಅದಕ್ಕೆ ಪ್ರತಿಯಾಗಿ ಅವರ ನೂರಾರು ಎಕರೆ ಭೂಮಿಯನ್ನು ಜಪ್ತಿ ಮಾಡಿಕೊಂಡರು. ಹಲವರಂತೂ ಕೇವಲ ಒಂದೆರಡು ಬಾಟಲಿ ಮದ್ಯ ಕುಡಿಸಿ, ಖಾಲಿ ಪೇಪರ್‌ಗಳ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಂಡು ಜಾಗ ಕಿತ್ತುಕೊಂಡರು. ಇನ್ನು ಕೆಲವು ವಿಕೃತ ವಲಸಿಗರು, ಆದಿವಾಸಿ ಮಹಿಳೆಯರನ್ನು ಮದುವೆಯಾಗುವ ನಾಟಕವಾಡಿ, ಅವರ ಹೆಸರಿನಲ್ಲಿ ಭೂಮಿ ಖರೀದಿಸಿ, ಆಮೇಲೆ ಆ ಹೆಣ್ಣುಮಕ್ಕಳನ್ನು ನಡುಬೀದಿಗೆ ತಳ್ಳಿದರು.

ಇದೇ ಇರುಳ ಸಮುದಾಯದ ವೃದ್ಧ ‘ಕಾಳಿಮೂಪ್ಪನ್’ ಅನ್ನೋ ಅಜ್ಜನ ಕಥೆ ಕೇಳಿ. ಭೂತಿವಾಳಿ ಹಳ್ಳಿಯ ಈತನ ಬಳಿ 9 ಎಕರೆ 10 ಸೆಂಟ್ಸ್ ಕೃಷಿ ಭೂಮಿ ಇತ್ತು. ಮೇಲ್ಟಾತಿಯ ವಲಸಿಗನೊಬ್ಬ ಇದನ್ನ ಬಲವಂತವಾಗಿ ಕಸಿದುಕೊಂಡ. 1990 ರಿಂದ ಸತತ ಮೂರು ದಶಕಗಳ ಕಾಲ, ಅಕ್ಷರ ಬಾರದ ಈ ವಯಸ್ಸಾದ ಜೀವ ತನ್ನ ಭೂಮಿಗಾಗಿ ಕೋರ್ಟು ಮೆಟ್ಟಿಲೇರಿದ.

ವಕೀಲರ ಫೀಸ್ ಕಟ್ಟಲು ತನ್ನಲ್ಲಿದ್ದ ದನಗಳನ್ನೂ ಮಾರಿದ. 2005 ರಲ್ಲಿ 13 ದಿನ ಉಪವಾಸ ಸತ್ಯಾಗ್ರಹ ಮಾಡಿದಾಗ, ಅಧಿಕಾರಿಗಳು ಭೂಮಿ ವಾಪಸ್ ಕೊಡಲು ಆದೇಶ ಮಾಡಿದರು. ಆದರೆ, ಆತ ತನ್ನದೇ ಹೊಲ ಉಳುಮೆ ಮಾಡಲು ಹೋದಾಗ, ವಲಸಿಗರು ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಅಷ್ಟೇ ಅಲ್ಲ, ಭ್ರಷ್ಟ ಪೊಲೀಸರಿಗೆ ಲಂಚ ಕೊಟ್ಟು, ಆಸ್ಪತ್ರೆಯಲ್ಲಿದ್ದ ಕಾಳಿಮೂಪ್ಪನ್ ಮೇಲೆಯೇ ಸುಳ್ಳು ಮರ್ಡರ್” ಅಟೆಂಪ್ಟ್ ಕೇಸ್ ಹಾಕಿ 2 ತಿಂಗಳು ಜೈಲಿಗೆ ತಳ್ಳಿದರು! 2007 ರಲ್ಲಿ ಕೋರ್ಟ್ 5 ಎಕರೆ ಭೂಮಿ ಮರಳಿಸಲು ಹೇಳಿದರೂ, ಜಿಲ್ಲಾಡಳಿತ ಇವತ್ತಿಗೂ ಆ ಆದೇಶ ಜಾರಿ ಮಾಡಿಲ್ಲ.

ರಾಷ್ಟ್ರಪ್ರಶಸ್ತಿ ವಿಜೇತ ಆದಿವಾಸಿ ಗಾಯಕಿ ನಂಜಿಯಮ್ಮ ಅವರ ಪೂರ್ವಜರ ಭೂಮಿಯನ್ನೂ ಹೀಗೆಯೇ ಕಬಳಿಸಲಾಗಿದೆ. ಆಕೆಯೂ ಇಂದಿಗೂ ನ್ಯಾಯಕ್ಕಾಗಿ ಕೋರ್ಟ್ ಅಲೆಯುತ್ತಿದ್ದಾಳೆ. ದಾಖಲಾದ 2523 ಪ್ರಕರಣಗಳಲ್ಲಿ, ಕೇವಲ 13 ಕೇಸ್‌ಗಳನ್ನು ಇತ್ಯರ್ಥ ಮಾಡಿ ಬರೀ 44.77 ಎಕರೆ ಭೂಮಿಯನ್ನು ಮಾತ್ರ ಸರ್ಕಾರ ವಾಪಸ್‌ ಕೊಡಿಸಿದೆ ಎಂದರೆ, ನಮ್ಮ ಸಿಸ್ಟಮ್ ಎಷ್ಟರ ಮಟ್ಟಿಗೆ ಫೇಲ್ ಆಗಿದೆ ಅಂತ ನೀವೇ ಯೋಚಿಸಿ.

ಹಸಿವು, ಅಪೌಷ್ಟಿಕತೆ ಮತ್ತು ಆಡಳಿತ ಯಂತ್ರದ ಕುರುಡುತನ
ಕಾಡು ನಾಶವಾಯ್ತು, ಭೂಮಿ ರೂಮಿ ಹೋಯ್ತು. ರಾಗಿ, ಜೋಳ ಬೆಳೆದುಕೊಂಡು ನೆಮ್ಮದಿಯಾಗಿದ್ದ ಜನ, ಇವತ್ತು ತಮ್ಮದೇ ಭೂಮಿಯಲ್ಲಿ ದಿನಗೂಲಿ ಕಾರ್ಮಿಕರಾದರು.ಸರ್ಕಾರದ ಅವೈಜ್ಞಾನಿಕ ನೀತಿಗಳು ಇವರ ಹೊಟ್ಟೆಗೆ ದೊಡ್ಡ ಕಲ್ಲು ಹಾಕಿದವು. 1995ರಲ್ಲಿ ಜಪಾನ್ ಬ್ಯಾಂಕ್ (JBIC) ಆರ್ಥಿಕ ನೆರವಿನೊಂದಿಗೆ ‘ಅಹಡ್ಸ್’ (AHADS) ಅನ್ನೋ ಪ್ರಾಜೆಕ್ಟ್ ಬಂತು. ಪರಿಸರ ಸಂರಕ್ಷಣೆಯ ನೆಪದಲ್ಲಿ ಆದಿವಾಸಿಗಳು ದನ, ಮೇಕೆ ಸಾಕುವುನ್ನೇ ನಿಷೇಧ ಮಾಡಿದರು. ಹಾಲಿಲ್ಲ, ಜೇನುತುಪ್ಪವಿಲ್ಲ, ಕಾಡಿನ ಮದ್ದಿಲ್ಲ. ಜೊತೆಗೆ ಮದ್ಯ ನಿಷೇಧ ಮಾಡಿದ ತಕ್ಷಣ, ಹೊರಗಿನ ಅಕ್ರಮ ಮದ್ಯ ಮಾಫಿಯಾ ಮತ್ತು ಗಾಂಜಾ ಬೆಳೆಗಾರರು ಕಾಡಿಗೆ ನುಗ್ಗಿದರು. ಪೊಲೀಸರ ಏಟು ಮಾತ್ರ ಈ ಮುಗ್ಧ ಆದಿವಾಸಿಗಳಿಗೆ ಬಿತ್ತು.

ಇದರ ರಿಸಲ್ಟ್ ಏನಾಯ್ತು ಗೊತ್ತಾ? ಅಪೌಷ್ಟಿಕತೆ (Malnutrition)! ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (NIN) ಸ್ಟಡಿ ಪ್ರಕಾರ, ಕೇರಳದ ಉಳಿದ ಕಡೆ ಶಿಶು ಮರಣ ಪ್ರಮಾಣ (IMR) ಕೇವಲ 12 ಆಗಿದ್ದರೆ, ಅಟ್ಟಪ್ಪಾಡಿಯಲ್ಲಿ ಅದು 66 ಕ್ಕೆ ತಲುಪಿತ್ತು! ಇದು ಆಫ್ರಿಕಾದ ಸೊಮಾಲಿಯಾ ದೇಶದ ಪರಿಸ್ಥಿತಿಗೆ ಸಮನಾಗಿತ್ತು.

  • 2010 ರಿಂದ 2012 ರವರೆಗೆ 81 ಮಕ್ಕಳು ಹಸಿವಿನಿಂದ ಸತ್ತರು.
  • 2012-2013 ರಲ್ಲಿ 63 ಸಾವು.
  • 2014 ರಲ್ಲಿ 30, 2015 ರಲ್ಲಿ 14 ಶಿಶುಗಳು ಬಲಿಯಾದವು.

ಆದರೆ, ನಮ್ಮ ಸರ್ಕಾರಗಳು ಎಷ್ಟು ಬ್ಲೆಂಡ್, ಎಷ್ಟು ಕ್ರೂರ ಎಂದರೆ, ಮಧುವಿನ ಹತ್ಯೆಯಾದಾಗ ಕೇರಳ ಸರ್ಕಾರದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಪಿ. ಪುಗಝಂಡಿ ಹೈಕೋರ್ಟ್‌ಗೆ ಒಂದು ಅಫಿಡವಿಟ್ ಸಲ್ಲಿಸ್ತಾರೆ. ಅದರಲ್ಲಿ ಅವರು ಹೇಳ್ತಾರೆ: “ಮಧುವಿನ ಸಾವಿಗೆ ಹಸಿವು ಕಾರಣವಲ್ಲ. ಆತನ ತಾಯಿ ಮತ್ತು ಸಹೋದರಿ ಅಂಗನವಾಡಿಯಲ್ಲಿ ಕೆಲಸ ಮಾಡ್ತಾರೆ. ಅವರಿಗೆ ತಿಂಗಳಿಗೆ 35 ಕೆಜಿ ಉಚಿತ ರೇಷನ್ ಸಿಗುತ್ತೆ. ಹೀಗಿರುವಾಗ ಅವನು ಹಸಿವಿನಿಂದ ಅಕ್ಕಿ ಕದ್ದ ಅಂತ ಹೇಳಕ್ಕಾಗಲ್ಲ. ಇದೊಂದು ಕೇವಲ (Social Intolerance) : ” .

ಎಂತಹ ನಾಚಿಕೆಗೇಡು ಇದು! ಮಧು ಒಬ್ಬ ಮಾನಸಿಕ ಅಸ್ವಸ್ಥ ಯುವಕ. ಅವನು ಫ್ಯಾಮಿಲಿ ಬಿಟ್ಟು, ಕಾಡಿನ ಗುಹೆಯಲ್ಲಿ ಒಂಟಿಯಾಗಿ ಅನಾಥನಾಗಿ ಬದುಕ್ತಿದ್ದ. ಕಾಡಿನಲ್ಲಿದ್ದವನಿಗೆ ಅವನ ಮನೆಯವರ ರೇಷನ್ ಹೇಗೆ ತಲುಪುತ್ತೆ? ಒಂದು ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು, ಹಸಿದು ಸತ್ತವನ ಸಾವನ್ನೂ ಹೇಗೆ ತಿರುಚುತ್ತೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?

ಮಧು: ನಾಗರಿಕ ಸಮಾಜದ ಕ್ರೌರ್ಯಕ್ಕೆ ಬಲಿಯಾದ ಅಮಾಯಕ ಜೀವ
ಹಸಿವು ಮತ್ತು ನಮ್ಮ ಈ ‘ನಾಗರಿಕ’ ಸಮಾಜದ ರಕ್ತಪಿಪಾಸು ಕ್ರೌರ್ಯ ಒಟ್ಟಿಗೆ ಸೇರಿದಾಗ ಆಗಿದ್ದೇ 2018 ರ ಫೆಬ್ರವರಿ 22 ರ ದುರಂತ. ಅಟ್ಟಪ್ಪಾಡಿಯ ಚಿಂಡಾಕ್ಕೆ ಹಳ್ಳಿಯ 34 ವರ್ಷದ ಯುವಕ ಮಧು’. ಆಗಲೇ ಹೇಳಿದಂತೆ, ಮಾನಸಿಕ ಸ್ಥಿಮಿತ ಇಲ್ಲದೆ, ಮುಕ್ಕಾಲಿ ಸಮೀಪದ ಅರಣ್ಯದ ಗುಹೆಯಲ್ಲಿ ಪ್ರಕೃತಿ ಜೊತೆ ಬದುಕ್ತಿದ್ದವನು. ಅವನಿಗೆ ನಿಮ್ಮ ಮ್ಮ ಈ ದುಡ್ಡು, ಆಸ್ತಿ, ಪ್ರಾಪರ್ಟಿ, ಜಾತಿ ಯಾವುದರ ಅರಿವೂ ರಿವೂ ಇರಲಿಲ್ಲ. ಅವನಿಗೆ ಗೊತ್ತಿದ್ದದ್ದು ಒಂದೇ ಸತ್ಯ- ಕರುಳು • ಕರುಳು ಸುಡುವ ಹಸಿವು!

ಒಂದು ದಿನ ಹಸಿವು ತಾಳಲಾರದೆ ಒಂದು ಕಿರಾಣಿ ಅಂಗಡಿಯಲ್ಲಿ ಸ್ವಲ್ಪ ಅಕ್ಕಿ, ಮೆಣಸಿನ ಪುಡಿ ಕದ್ದ ಅನ್ನೋ ಆರೋಪ ಬಂತು. ಯೋಚಿಸಿ, ಸಾವಿರಾರು ಎಕರೆ ಆದಿವಾಸಿಗಳ ಜಮೀನನ್ನ ಕದ್ದ ಈ ವಲಸಿಗರಿಗೆ, ತಮ್ಮದೇ ಕಾಡಿನಲ್ಲಿ ಬದುಕುತ್ತಿದ್ದ ಒಬ್ಬ ಅಸ್ವಸ್ಥಯುವಕ ಒಂದು ಹಿಡಿ ಅಕ್ಕಿ ಕದ್ದದ್ದು ಜಗತ್ತಿನ ಅತಿದೊಡ್ಡ ಅಪರಾಧವಾಗಿ ಕಂಡಿತು. ಉದ್ರಿಕ್ತ ಗುಂಪು ಕಾಡಿಗೆ ನುಗ್ಗಿಸಿ, ಅವನನ್ನ ಗುಹೆಯಿಂದ ಎಳೆದು ತಂದು, ಅವನದೇ ಲುಂಗಿಯಿಂದ ಅವನ ಕೈಗಳನ್ನ ಹಿಂದಕ್ಕೆ ಕಟ್ಟೆ, ಅರೆಬೆತ್ತಲೆಯಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿದರು.

ಮನಬಂದಂತೆ ಥಳಿಸಿದರು, ಕಾಲಿನಿಂದ ಎದೆಗೆ ಒದ್ದರು, ತಲೆಯನ್ನ ಗೋಡೆಗೆ ಅಪ್ಪಳಿಸಿದರು. ಇದಕ್ಕಿಂತ ವಿಕೃತಿ ಏನಂದ್ರೆ, ರಕ್ತಸಿಕ್ತವಾಗಿ, ಭಯದಿಂದ ನಡುಗುತ್ತಿದ್ದ ಆ ಮುಗ್ಧನ ಸುತ್ತ ನಿಂತು, ಈ ರಾಕ್ಷಸರು ನಗುನಗುತ್ತಾ ಸೆಲ್ಪಿ (Selfie) ತೆಗೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡರು! ಆ ಏಟಿನಿಂದ, ಆ ಹಸಿವಿನಿಂದ ಮಧು ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಾಣ ಬಿಟ್ಟ. ಒಂದು ಹಿಡಿ ಅಕ್ಕಿಗೆ, ಒಂದು ಜೀವ ಬಲಿಯಾಯ್ತು. ದೇವರ ಸ್ವಂತ ನಾಡಿನ ಎಲ್ಲರೂ ವಿದ್ಯಾವಂತರಂತೆ! ಮಾಡಿದ್ದು ಮಾತ್ರ ಹೀನ ಕೆಲಸ!

ನ್ಯಾಯಾಲಯದ ಅಂಗಳದಲ್ಲಿ: ತೀರ್ಪು ಮತ್ತು ವಿಶ್ಲೇಷಣೆ
ಆ ವಿಕೃತರು ತೆಗೆದುಕೊಂಡ ಸೆಲ್ಪಿಗಳೇ ಕಡೆಗೆ ಅವರಿಗೆ ಮುಳುವಾದವು. ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು 16 ಮಂದಿ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಕೊಲೆ ಕೇಸ್ ಹಾಕಿದರು. ಆದರೆ ಆರೋಪಿಗಳ ಬಳಿ ದುಡ್ಡಿನ ಪವರ್ ಇತ್ತು. ಸಾಕ್ಷಿಗಳು ಕೋರ್ಟಿನಲ್ಲಿ ಉಲ್ಟಾ ಹೊಡೆದರು (Hostile Witnesses).

2023 ರಲ್ಲಿ ಮನ್ನಾರ್ಕ್ಕಾಡ್‌ನ ವಿಚಾರಣಾ ನ್ಯಾಯಾಲಯ, 13 ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಕೊಟ್ಟಿತ್ತು. 4 ನೇ ಮತ್ತು 11 ನೇ ಆರೋಪಿಯನ್ನು ಬಿಡುಗಡೆ ಮಾಡಿತ್ತು. ಆದರೆ ಮಧುವಿನ ತಾಯಿ ‘ಮಲ್ಲಿ’ ಮತ್ತು ಸಹೋದರಿ ‘ಸರಸು’ ಬಿಡಲಿಲ್ಲ. ರಾಜ್ಯ ಸರ್ಕಾರದ ಜೊತೆ ಸೇರಿ ಹೈಕೋರ್ಟ್ ಮೆಟ್ಟಿಲೇರಿದರು. ಈ ಸುದೀರ್ಘ ಹೋರಾಟದಲ್ಲಿ ಅವರು ಅನುಭವಿಸಿದ ಬೆದರಿಕೆ. ನೋವು ಅಷ್ಟಿಷ್ಟಲ್ಲ.

ನಿನ್ನೆ ಕೇರಳ ಹೈಕೋರ್ಟ್ನ ವಿಭಾಗೀಯ ಪೀಠ ಐತಿಹಾಸಿಕ ತೀರ್ಪು ಕೊಟ್ಟಿತು. ವಿಚಾರಣಾ ನ್ಯಾಯಾಲಯ ಕೊಟ್ಟಿದ್ದ 7 ವರ್ಷದ ಶಿಕ್ಷೆಯನ್ನು ರದ್ದು ಮಾಡಿ, 12 ಅಪರಾಧಿಗಳಿಗೆ (ಮರಕ್ಕಾರ್, ಶಂಶುದ್ದೀನ್, ರಾಧಾಕೃಷ್ಣನ್, ಅಬೂಬಕ್ಕರ್ ಸಿದ್ದೀಕ್, ಉಬೈದ್, ನಜೀಬ್, ಜೈಜುಮನ್, ಸಜೀವ್, ಸತೀಶ್, ಹರೀಶ್, ಮತ್ತು ಬಿಜು) ‘ಜೀವಾವಧಿ ಶಿಕ್ಷೆ’ (Life Imprisonment) ಮತ್ತು ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿತು. 16 ನೇ ಆರೋಪಿ ಮುನೀರ್‌ಗೂ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕಠಿಣ ಶಿಕ್ಷೆ ಎತ್ತಿಹಿಡಿಯಿತು. ತಾಯಿಗೆ 30 ಲಕ್ಷ ರೂಪಾಯಿ ಪರಿಹಾರ ಘೋಷಿಸಿತು.

ಆದರೆ, ಇಲ್ಲೊಂದು ಅತಿದೊಡ್ಡ ಆಘಾತವಿತ್ತು! ಪ್ರಕರಣದ ಮೊದಲನೇ ಆರೋಪಿ ‘ಹುಸೇನ್‌’ನನ್ನು ಹೈಕೋರ್ಟ್ ಸಂಪೂರ್ಣವಾಗಿ ಖುಲಾಸೆಗೊಳಿಸಿತು. ಪ್ರಾಸಿಕ್ಯೂಷನ್ ಪ್ರಕಾರ, ಹಲ್ಲೆ ಮಾಡುವಾಗ ಮಧುವಿನ ಎದೆಗೆ ಬಲವಾಗಿ ಒದ್ದಿದ್ದೇ ಈ ಹುಸೇನ್. ಇದರಿಂದ ತಲೆ ಗೋಡೆಗೆ ಬಡಿದು ರಕ್ತಸ್ರಾವವಾಗಿತ್ತು ಅಂತ ಫೋರೆನ್ಸಿಕ್ ತಜ್ಞರು ಕೂಡಾ ಹೇಳಿದ್ದರು. ಆದರೆ, ಕಾಡಿನಿಂದ ಎಳೆದುತಂದ ಆರಂಭಿಕ ಗುಂಪಿನಲ್ಲಿ ಆತ ಇರಲಿಲ್ಲ ಮತ್ತು ಆತನ ವಿರುದ್ಧ ನಿಖರವಾದ ನಿಖರವಾದ ಡಿಜಿಟಲ್ ವಿಡಿಯೋ ಸಾಕ್ಷ್ಯ ಇಲ್ಲ ಅನ್ನೋ ‘ಟೆಕ್ನಿಕಲ್’ ಕಾರಣ ಕೊಟ್ಟು ಆತನನ್ನು ಬಿಡುಗಡೆ ಮಾಡಲಾಯ್ತು.

ತೀರ್ಪಿನ ನಂತರ ಅಳುತ್ತಾ ಮಾಧ್ಯಮಗಳ ಮುಂದೆ ಬಂದ ತಾಯಿ ಮಲ್ಲಿ ಹೇಳಿದ್ದು ಇಷ್ಟೇ: “12 ಜನರಿಗೆ ಜೀವಾವಧಿ ಶಿಕ್ಷೆಯಾಗಿದ್ದು ನೆಮ್ಮದಿಯಿದೆ. ಆದರೆ ನನ್ನ ಮಗನ ಎದೆಗೆ ಒದ್ದು ಸಾವಿಗೆ ಕಾರಣನಾದ ಮೊದಲ ಆರೋಪಿಯನ್ನು ಹೇಗೆ ಬಿಟ್ಟರು ಅನ್ನೋದೆ ನನಗೆ ಅರ್ಥವಾಗ್ತಿಲ್ಲ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆಯ ವಾಸ್ತವ. ಇದೀಗ ಆ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದೆ.

ದೇಶಾದ್ಯಂತ ವ್ಯಾಪಿಸುತ್ತಿರುವ ‘ಗುಂಪು ಹತ್ಯೆ’ಯ ಕ್ಯಾನ್ಸ‌ರ್!
ನೀವು ಅಂದುಕೊಳ್ಳಬಹುದು, ಇದೊಂದು ಕೇರಳದಲ್ಲಿ ನಡೆದ ಸಣ್ಣ ಇನ್ಸಿಡೆಂಟ್ ಅಂತ. ಖಂಡಿತಾ ಅಲ್ಲ. ಇದು ಇಡೀ ಭಾರತಕ್ಕೆ ಅಂಟಿರುವ ಕ್ಯಾನ್ಸರ್! ಹಸಿವಿಗಾಗಿ, ಕಳ್ಳತನದ ಶಂಕೆಯ ಮೇಲೆ, ಜಾತಿಯ ಹೆಸರಿನಲ್ಲಿ ಅಮಾಯಕರನ್ನು ಗುಂಪು ಸೇರಿ ಥಳಿಸಿ ಕೊಲ್ಲುವ Mob Lynching ಎಂಬ ವಿಕೃತ ಮನಸ್ಥಿತಿ ದೇಶದಲ್ಲಿ ಬೇರೂರಿದೆ.

ಉದಾಹರಣೆ 1: ಡಿಸೆಂಬರ್ 17, 2025 ರಂದು, ಕೇರಳದ ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ (Walayar) ಬಳಿ, ಛತ್ತೀಸ್‌ಗಢದಿಂದ ಕೇವಲ 4 ದಿನದ ಹಿಂದಷ್ಟೇ ಉದ್ಯೋಗರಸಿಕೊಂಡು ಬಂದಿದ್ದ 31 ವರ್ಷದ ದಲಿತ ಕಾರ್ಮಿಕ ‘ರಾಮನಾರಾಯಣ್ ಬಮೇಲ್’ ಎಂಬಾತನನ್ನು. ಕಳ್ಳತನದ ಶಂಕೆಯ ಮೇಲೆ ಸ್ಥಳೀಯರು ಬಡಿದು ಕೊಂದರು. ನೋಡಲು ಬೇರೆ ತರಹ ಇದ್ದಾನೆ. ಇವನೊಬ್ಬ ಬಾಂಗ್ಲಾದೇಶಿ’ ಇರಬೇಕು ಅನ್ನೋ ಕೈನೋಫೋಬಿಕ್ (Xenophobic) ದ್ವೇಷಕ್ಕೆ ಆತನನ್ನು ಬಲಿಪಡೆದರು. ವಿಪರ್ಯಾಸ ನೋಡಿ, ಕೇರಳದವರು ಅಟ್ಟಪ್ಪಾಡಿಗೆ ಹೋಗಿ ಮೂಲನಿವಾಸಿಗಳನ್ನ ಶೋಷಿಸ್ತಾರೆ, ಆದರೆ ಬೇರೆ ರಾಜ್ಯದ ಬಡ ಕಾರ್ಮಿಕ ಕೇರಳಕ್ಕೆ ಬಂದರೆ ಅವನನ್ನ ಕಳ್ಳ ಅಂತ ಕಾಯ್ದು ಕೊಲ್ತಾರೆ!

ಉದಾಹರಣೆ 2: ಪಶ್ಚಿಮ ಬಂಗಾಳದ ಸಬಾಂಗ್ ಪ್ರದೇಶದಲ್ಲಿ ನಡೆದದ್ದು ಇನ್ನೂ ಘೋರ. ಅಳಿವಿನಂಚಿನಲ್ಲಿರುವ ‘ಲೋಧಾ ಶಬರ್’ ಬುಡಕಟ್ಟು ಸಮುದಾಯದ ಕೇವಲ 13 ವರ್ಷದ ಬಾಲಕನನ್ನು, ಸ್ಥಳೀಯ ಟಿಎಂಸಿ ಪಂಚಾಯತ್ ಸದಸ್ಯ ಮನೋರಂಜನ್ ಮಾಲ್ ನೇತೃತ್ವದ ಗುಂಪು, ಆಹಾರ ಕದ್ದ ಅನ್ನೋ ಒಂದೇ ಕಾರಣಕ್ಕೆ ಹೊಡೆದು ಕೊಂದಿತು. ಬ್ರಿಟಿಷರ ಕಾಲದಿಂದಲೂ ‘ಕ್ರಿಮಿನಲ್ ಟ್ರೈಬ್’ ಅಂತ ಹಣೆಪಟ್ಟಿ ಕಟ್ಟಿಕೊಂಡು ಇಂದಿಗೂ ಊರ ಹೊರಗೆ ಬದುಕುತ್ತಿರುವ ಇವರ ಹಸಿವು. ಸಮಾಜಕ್ಕೆ ಕಳ್ಳತನವಾಗಿ ಮಾತ್ರ ಕಾಣುತ್ತೆ.

ಇನ್ನು ಗೋರಕ್ಷಣೆಯ (Cow Vigilante Violence) ಹೆಸರಿನಲ್ಲಿ ನಡೆಯುತ್ತಿರುವ ಕೊಲೆಗಳಿಗೆ ಲೆಕ್ಕವೇ ಇಲ್ಲ. 2015 5ರಲ್ಲಿ ದಾದ್ರಿಯಲ್ಲಿ ಮೊಹಮ್ಮದ್ ಅಖ್ಯಾಕ್ ಹತ್ಯೆ, 2017 ರಲ್ಲಿ ಹರಿಯಾಣದ ಹೈನುಗಾರಿಕೆ ರೈತ 55 ವರ್ಷದ ಪೆದ್ದು ಖಾನ್‌ನನ್ನು 200 ಜನರ ಗುಂಪು ಥಳಿಸಿ ಕೊಂದಿದ್ದು, ಇವೆಲ್ಲವೂ ಕಣ್ಣ ಮುಂದೆಯೇ ಇವೆ. NCRB ಮತ್ತು ಫ್ಯಾಕ್ಟ್‌ಚೆಕ್ಕರ್ ಡೇಟಾ ಪ್ರಕಾರ, 2014 ರಲ್ಲಿ 03 ಗೋ-ಸಂಬಂಧಿತ ಹಿಂಸಾಚಾರಗಳಿದ್ದರೆ, 2015 ರಲ್ಲಿ 13, 2016 ರಲ್ಲಿ 30, ಮತ್ತು 2017 ರಲ್ಲಿ ಅದು 43 ಕ್ಕೆ ಏರಿಕೆಯಾಗಿತ್ತು. ಸಾಯುತ್ತಿರುವವರಲ್ಲಿ ಬಹುಪಾಲು ಮುಸ್ಲಿಮರು ಮತ್ತು ದಲಿತರೇ ಆಗಿದ್ದಾರೆ.

ಗುಂಪು ಹತ್ಯೆ ಅನ್ನೋದು ಕೇವಲ ಪೊಲೀಸ್ ಫೇಲ್ಯೂರ್ ಅಲ್ಲ. ಇದು ಬಡವರನ್ನ, ಅಲ್ಪಸಂಖ್ಯಾತರನ್ನ, ದಲಿತರನ್ನ ಮನುಷ್ಯರೆಂದೇ ಪರಿಗಣಿಸದ ನಮ್ಮ ಅಹಂಕಾರದ ದ್ಯೋತಕ. ಕಠಿಣ ಆಂಟಿ-ಲಿಂಚೆಂಗ್ (Anti-lynching) ಕಾನೂನುಗಳಿಲ್ಲದೆ ಇರೋದು ಈ ದುಷ್ಕರ್ಮಿಗಳಿಗೆ ಇನ್ನಷ್ಟು ಧೈರ್ಯ ಕೊಟ್ಟಿದೆ. ಅಟ್ಟಪ್ಪಾಡಿಯಲ್ಲಿ ಆಗಿದ್ದು ಕೇವಲ ಒಂದು ಜಾಗದ ಬದಲಾವಣೆಯಲ್ಲ, ಅದೊಂದು ಪರಂಪರೆಯ ಮಾರಣಹೋಮ. ಆಶ್ರಯ ಕೊಟ್ಟವರನ್ನೇ ಒಕ್ಕಲೆಬ್ಬಿಸಿ ಅವರ ಮಣ್ಣನ್ನೇ ಕಿತ್ತುಕೊಂಡಿದ್ದು ಮನುಷ್ಯನ ದುರಾಸೆಯ ಪರಮಾವಧಿ.

ಕಾಳಿಮೂಪ್ಪನ್ ತನ್ನ 9 ಎಕರೆಗಾಗಿ ಇವತ್ತಿಗೂ ಕಾಯ್ತಿದ್ದಾನೆ. ನಂಜಿಯಮ್ಮ ತನ್ನ ಹಕ್ಕಿಗಾಗಿ ಹೋರಾಡ್ತಿದ್ದಾಳೆ. ಮಧು ಒಂದು ಹಿಡಿ ಅಕ್ಕಿಗೆ ಪ್ರಾಣ ಬಿಟ್ಟಿದ್ದಾನೆ. ಹೈಕೋರ್ಟ್ 12 ಜನರಿಗೆ ಜೀವಾವಧಿ ಶಿಕ್ಷೆ ಕೊಟ್ಟಿರಬಹುದು. ತಾಯಿಗೆ 30 ಲಕ್ಷ ರೂಪಾಯಿ ಪರಿಹಾರ ಸಿಕ್ಕಿರಬಹುದು. ಆದರೆ ಮಧುವಿನ ಸಾವಿಗೆ ಆ 12 ಜನ ಮಾತ್ರ ಕಾರಣರಾ? ಖಂಡಿತ ಅಲ್ಲ. ಅವನ ಕಾಡನ್ನು ಕಬಳಿಸಿದ ಸಿಸ್ಟಮ್, ಅವನ ಹೊಟ್ಟೆಗೆ ಬೆಂಕಿ ಇಟ್ಟ ಆರ್ಥಿಕ ಅಸಮಾನತೆ, ಸರ್ಕಾರಿ ಫೈಲ್‌ಗಳಲ್ಲಿ ಅವನ ಹಸಿವನ್ನೇ ಮುಚ್ಚಿಹಾಕಿದ ರಾಜಕಾರಣ, ಮತ್ತು ಅವನು ನರಳುವಾಗ ಸೆಲ್ಪಿ ತೆಗೆದುಕೊಂಡ ನಮ್ಮ ಸಾಮಾಜಿಕ ಮನಸ್ಥಿತಿ.. ಇವೆಲ್ಲವೂ ಅಷ್ಟೇ ದೊಡ್ಡ ಅಪರಾಧಿಗಳು!

ಅಟ್ಟಪ್ಪಾಡಿಯ ಸಾವಿರಾರು ಮಧುಗಳಿಗೆ ಅವರ ಜಮೀನು ವಾಪಸ್ ಸಿಗುವವರೆಗೆ, ಅವರ ಫಾರೆಸ್ಟ್ ರೈಟ್ಸ್ (Forest Rights) ಸಿಗುವವರೆಗೆ, ಹಸಿವಿನಿಂದ ಕದ್ದವನನ್ನ ಕಳ್ಳನೆಂದು ನೋಡದೆ ಹಸಿದ ಮನುಷ್ಯನೆಂದು ನೋಡುವ ಮಾನವೀಯತೆ ನಮ್ಮಲ್ಲಿ ಬರುವವರೆಗೆ ಈ ನ್ಯಾಯ ಅಪೂರ್ಣ.

ನೆನಪಿಡಿ, ಹಸಿವು ಮತ್ತು ಬಡತನ ಯಾವತ್ತೂ ಅಪರಾಧವಲ್ಲ ; ಆದರೆ ಹಸಿದವರನ್ನು, ನಿರ್ಗತಿಕರನ್ನು ಕ್ರೂರವಾಗಿ ಕೊಲ್ಲುವ ಮತ್ತು ಆ ಕೊಲೆಯನ್ನು ನ್ಯಾಯ ಅಂತ ಸಂಭ್ರಮಿಸುವ ಸಮಾಜ ಇದೆಯಲ್ಲ, ಅದು ನಿಜವಾದ ಅಪರಾಧಿ!’ದೇವಭೂಮಿ’ಯಾಗಬೇಕಿದ್ದ ಅಟ್ಟಪ್ಪಾಡಿ, ಮಧುವಿನ ರಕ್ತದಿಂದ ನರಕವಾಗಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಈ ಕಥೆ ನಿಮ್ಮನ್ನ ಕಾಡಲಿ, ನಮ್ಮಸತ್ತುಹೋದ ಮಾನವೀಯತೆಯನ್ನ ಬಡಿದೆಬ್ಬಿಸಲಿ.

Related Articles

ಇತ್ತೀಚಿನ ಸುದ್ದಿಗಳು