Home ಲೋಕಸಭೆ ಚುನಾವಣೆ -2024 ಉತ್ತರ ಪ್ರದೇಶ ಸರ್ಕಾರ ಬ್ರಾಹ್ಮಣರಿಗೆ ಕಿರುಕುಳ ನೀಡುತ್ತಿದೆ: ಮಾಯಾವತಿ

ಉತ್ತರ ಪ್ರದೇಶ ಸರ್ಕಾರ ಬ್ರಾಹ್ಮಣರಿಗೆ ಕಿರುಕುಳ ನೀಡುತ್ತಿದೆ: ಮಾಯಾವತಿ

0

ಮಿರ್ಜಾಪುರ: ಮೇಲ್ಜಾತಿಗೆ ಸೇರಿದ ಬಡವರು ಬಹಳ ಕಷ್ಟದಲ್ಲಿದ್ದಾರೆ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಡಿಯಲ್ಲಿ ಅವರು ಅದರಲ್ಲೂ ಬ್ರಾಹ್ಮಣರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಗುರುವಾರ ಹೇಳಿದ್ದಾರೆ.

ಬಿಎಸ್ಪಿ ಅಭ್ಯರ್ಥಿ ಮನೀಶ್ ತಿವಾರಿ ಅವರನ್ನು ಬೆಂಬಲಿಸಿ ಮಿರ್ಜಾಪುರದಲ್ಲಿ ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಯಾವತಿಯವರು ರಾಜ್ಯದಲ್ಲಿ ಹಿಂದುತ್ವದ ಸೋಗಿನಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಉತ್ತುಂಗಕ್ಕೇರಿವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಂತೆಯೇ ಬಿಜೆಪಿಯೂ ತಪ್ಪು ನೀತಿಗಳನ್ನು ಅನುಸರಿಸುತ್ತಿದೆ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಜಾತಿವಾದಿ, ಬಂಡವಾಳಶಾಹಿ ಮತ್ತು ಕೋಮುವಾದಿ ನೀತಿಗಳಿಂದಾಗಿ ಕೇಂದ್ರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು. ಅದು ಈ ಬಾರಿ ಮತ ಯಂತ್ರಗಳನ್ನು ಟ್ಯಾಂಪರ್‌ ಮಾಡದಿದ್ದರೆ ಈ ಬಾರಿ ಖಂಡಿತ ಸೋಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘‘ಹಿಂದುತ್ವದ ನೆಪದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಉತ್ತುಂಗಕ್ಕೇರಿವೆ.ಇದರ ಜತೆಗೆ ಮೇಲ್ಜಾತಿಗೆ ಸೇರಿದ ಬಡವರ ಸ್ಥಿತಿಯೂ ಅಷ್ಟೇನೂ ಚೆನ್ನಾಗಿಲ್ಲ.ಅದರಲ್ಲೂ ಇಡೀ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ದೊಡ್ಡ ಮಟ್ಟದಲ್ಲಿ ಕಿರುಕುಳವಾಗುತ್ತಿದೆ” ಎಂದು ಮಾಯಾವತಿ ಹೇಳಿದರು.

“ಬಿಜೆಪಿ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಬಡತನ, ನಿರುದ್ಯೋಗ ಮತ್ತು ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ ಆದರೆ ಭ್ರಷ್ಟಾಚಾರ ಇನ್ನೂ ಕೊನೆಗೊಂಡಿಲ್ಲ” ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಗೆಲ್ಲಲು ಬಿಡಬೇಡಿ ಎಂದು ಜನರನ್ನು ಕೋರಿದ ಅವರು, ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಎಲ್ಲರದೂ ಪ್ರಗತಿಯಾಗುತ್ತದೆ ಎಂದು ಪ್ರತಿಪಾದಿಸಿದರು.

ಕೇಂದ್ರದಲ್ಲಿ ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಸರ್ವಜನ್ ಹಿತಾಯ, ಸರ್ವಜನ ಸುಖಾಯ ನೀತಿಯಡಿ ಕೆಲಸ ಮಾಡಲಿದೆ, ಈ ಮೂಲಕ ಬಿಎಸ್‌ಪಿ ಸಂಸ್ಥಾಪಕ ಕಾನ್ಶಿರಾಮ್ ಅವರ ನನಸಾಗದ ಕನಸನ್ನು ನನಸಾಗಿಸಬಹುದು ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆಯನ್ನು ಉಲ್ಲೇಖಿಸಿದ ಮಾಯಾವತಿ, “ನಿಮಗೆ ನೀಡುತ್ತಿರುವ ಅಲ್ಪ ಪ್ರಮಾಣದ ಉಚಿತ ಪಡಿತರದಿಂದ ಶಾಶ್ವತ ಪ್ರಯೋಜನವಾಗುವುದಿಲ್ಲ. ನಿಮಗೆ ಉಚಿತವಾಗಿ ನೀಡುವ ಪಡಿತರವು ಬಿಜೆಪಿ ಅಥವಾ RSS ಜೇಬಿನಿಂದ ಬಂದಿಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

ಮಿರ್ಜಾಪುರದಲ್ಲಿ ಜೂನ್ 1ರಂದು ಏಳನೇ ಹಂತದಲ್ಲಿ ಮತದಾನ ನಡೆಯಲಿದೆ.

Exit mobile version