Friday, June 14, 2024

ಸತ್ಯ | ನ್ಯಾಯ |ಧರ್ಮ

ಸ್ತನ ಕ್ಯಾನ್ಸರ್:‌ ರೋಗ ನಿರ್ಣಯದ ನಂತರ ಪಾಲಿಸಬೇಕಾದ ಕೆಲವು ಅಭ್ಯಾಸಗಳು

ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ಸುಮಾರು 20,000 ಸಾವಿರ ಜನ, ಅವರಲ್ಲಿ ಹೆಚ್ಚಿನವರು ಮಹಿಳೆಯರು ಸ್ತನದ ಕ್ಯಾನ್ಸರಿಗೆ ತುತ್ತಾಗ್ತಿದ್ದಾರೆ. ಆದರೆ ಈ ನೋವಿನ ವಿಷಯದಲ್ಲೂ ಒಂದು ಖುಷಿಯ ಸಂಗತಿ ಏನು ಗೊತ್ತಾ? ಹೀಗೆ ಸ್ತನದ ಕ್ಯಾನ್ಸರಿಗೆ ತುತ್ತಾದವ್ರಲ್ಲಿ ನೂರಕ್ಕೆ ತೊಂಬತ್ತರೆಡು ಜನರಿಗೆ ಈ ಕಾಯಿಲೆ ವಾಸಿಯಾಗಿದೆ ಮತ್ತು ಅವರು ಸಂತೋಷದ ಜೀವನ ನಡೆಸ್ತಿದ್ದಾರೆ. ಈ ಕಾಯಿಲೆಗೆ ತುತ್ತಾದವರು ನೀವಾಗಿದ್ದಲ್ಲಿ ಅಥವಾ ನಿಮಗೆ ಗೊತ್ತಿರೋರು ಈ ಕಾಯಿಲೆಗೆ ತುತ್ತಾಗಿದ್ದರೆ ದಯವಿಟ್ಟು ಈ ಲೇಖನ ಓದಿ.

ಸಾಕಷ್ಟು ಮಹಿಳೆಯರು ತುಂಬಾ ನೋವು ಮತ್ತೆ ಆಯಾಸದಿಂದ ಬಳಲುವುದಲ್ಲದೆ, ಕ್ಯಾನ್ಸರ್‌ ಚಿಕಿತ್ಸೆಯು ಬದುಕನ್ನು ಬದಲಿಸಬಹುದಾದ ಕುರಿತು ಚಿಂತೆ ಮಾಡುತ್ತಿರುತ್ತಾರೆ. ಮತ್ತೆ ಇನ್ನು ಕೆಲವರು ಕಾಯಿಲೆ ಮತ್ತೆ ಮರುಕಳಿಸುವ ಚಿಂತೆಯಲ್ಲೂ ಬದುಕುತ್ತಿರುತ್ತಾರೆ. ಅದೂ ಐದು ವರ್ಷಗಳ ಸರ್ವೈವಲ್‌ ಮಾರ್ಕನ್ನು ದಾಟಿದ ನಂತರವೂ.

ಹಾಗಿದ್ದರೆ, ಈ ಕಾಯಿಲೆ ಇದೆಯೆಂದು ಒಮ್ಮೆ ವೈದ್ಯರು ನಮಗೆ ತಿಳಿಸಿದ ಮೇಲೆ ಬದುಕಿನ ರೀತಿಯನ್ನು ಬದಲಾಯಿಸಿಕೊಂಡು ಹೇಗೆ ಉತ್ತಮವಾಗಿ ಬದುಕಬಹುದೆನ್ನುವುದನ್ನು ತಿಳಿಯೋಣ ಬನ್ನಿ.

ದೈಹಿಕವಾಗಿ ಸದಾ ಚಟುವಟಿಕೆಯಿಂದಿರಿ

ಹೆಚ್ಚು ಓಡಾಡಿ ಕಡಿಮೆ ಹೊತ್ತು ಕುಳಿತುಕೊಳ್ಳಿ. ಈ ಮೂಲಕ ನಿಧಾನವಾಗಿ ವಾರಕ್ಕೆ 150 ನಿಮಿಷಗಳ (ಎರಡೂವರೆ ಗಂಟೆಗಳು) ವ್ಯಾಯಾಮಕ್ಕೆ ನಮ್ಮನ್ನು ನಾವು ತೆರೆದುಕೊಳ್ಳಬೇಕು. ಇದರಲ್ಲಿ ನಡಿಗೆಯಂತಹ ಏರೋಬಿಕ್‌ ವ್ಯಾಯಾಮ ಮತ್ತು ರೆಸಿಸ್ಟೆನ್ಸ್‌ ವ್ಯಾಯಾಮಗಳೂ (ನಿರ್ದಿಷ್ಟ ಸ್ನಾಯು ಗುಂಪಗಳನ್ನು ಗುರಿಯಾಗಿಟ್ಟುಕೊಂಡು ವ್ಯಾಯಾಮ ಮಾಡುವುದು) ಸೇರಿವೆ. ಇದನ್ನು ಸಮತೋಲನಗೊಳಿಸಲು ಮಧ್ಯಮ ಮಟ್ಟದಲ್ಲಿ ಅಥವಾ ತೀವ್ರ ರೀತಿಯಲ್ಲಿ ಮಾಡಬೇಕಾಗುತ್ತದೆ.

ಒಂದಷ್ಟು ಸಂಶೋಧನೆಗಳು ವ್ಯಾಯಾಮದಿಂದ ಕ್ಯಾನ್ಸರ್‌ ಮರುಕಳಿಸುವುದನ್ನು ತಡೆಯಬಹುದು ಮತ್ತು ದೀರ್ಘಕಾಲ ಬದುಕಬಹುದು ಎನ್ನುವುದನ್ನು ತೋರಿಸಿವೆ. ಇದಕ್ಕೆ ಕೆಲವು ಕ್ಲಿನಿಕಲ್‌ ಟ್ರಯಲ್‌ಗಳ ಸಾಕ್ಷಿಯೂ ಇದೆ.

ವ್ಯಾಯಾಮ ಮತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರುವ ಮಹಿಳೆಯರು ಉತ್ತಮ ಗುಣಮಟ್ಟದ ಬದುಕು ಮತ್ತು ದೃಢ ಆರೋಗ್ಯ ಹೊಂದಿರುತ್ತಾರೆ. ಮತ್ತು ಚಿಕಿತ್ಸೆಯ ಸಮಯದಲ್ಲಿ ಅವರು ಕಡಿಮೆ ಸೈಡ್‌ ಎಫೆಕ್ಟ್‌ ಅನುಭವಿಸುತ್ತಾರೆ

ಉತ್ತಮ ಗುಣಮಟ್ಟದ ಆಹಾರ ಸೇವಿಸಿ

ನಿಮ್ಮ ಊಟದಲ್ಲಿ ತರಕಾರಿಗಳು, ಹಣ್ಣು, ದ್ವಿದಳ ಧಾನ್ಯಗಳು, ನಟ್ಸ್‌, ಇಡೀ ಕಾಳುಗಳು ಮತ್ತು ವಿವಿಧ ಬಗೆಯ ಮೀನು ಇರುವಂತೆ ನೋಡಿಕೊಳ್ಳಿ. ಇಂತಹ ಆಹಾರವನ್ನು ಸೇವಿಸುವ ಮಹಿಳೆಯರು ಸಂಸ್ಕರಿತ ಆಹಾರ ಮತ್ತು ರೆಡ್‌ ಮೀಟ್‌ ತಿನ್ನುವ ಮಹಿಳೆಯರಿಗಿಂತಲೂ ಹೆಚ್ಚು ಕಾಲ ಸ್ತನದ ಕ್ಯಾನ್ಸರಿಗೆ ಒಳಗಾದ ನಂತರ ಬದುಕಿರುವುದು ಪ್ರೂವ್‌ ಆಗಿರುವ ವಿಚಾರ.

ಇಂತಹ ಆಹಾರಗಳು ಸ್ತನ ಕ್ಯಾನ್ಸರಿನ ಮೇಲೆ ನೇರ ಪರಿಣಾಮ ಬೀರದಿದ್ದರೂ ಹೃದ್ರೋಗದಂತಹ ಇತರ ಆರೋಗ್ಯ ಪರಿಸ್ಥಿತಿಗಳ ಅಪಾಯಗಳನ್ನು ಕಡಿಮೆ ಮಾಡುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾವೆ. ಇದು ಉತ್ತಮ ಆಹಾರದಿಂದ ಮಾತ್ರವೇ ಸಿಗುವ ಪ್ರಯೋಜನ.

ಅನೇಕ ಮಹಿಳೆಯರು ಅದರಲ್ಲೂ ವಯಸ್ಸಾದ ಮಹಿಳೆಯರು ಅಥವಾ ಆರಂಭಿಕ ಹಂತದ ಸ್ತನ ಕ್ಯಾನ್ಸರ್‌ ಹೊಂದಿರುವವರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುವ ಅಪಾಯ ಹೆಚ್ಚಿರುತ್ತದೆ. ಉತ್ತಮ ಗುಣಮಟ್ಟದ ಆಹಾರವು ಆರೋಗ್ಯಕರ ದೇಹದ ತೂಕ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪ್ರಸ್ತುತ ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ನಿರ್ದಿಷ್ಟ ಆಹಾರಗಳಲ್ಲಿ (ಕೆಟೋಜೆನಿಕ್ ಅಥವಾ ಕಡಿಮೆ-ಕಾರ್ಬೋಹೈಡ್ರೇಟ್ ಇರುವ ಆಹಾರಗಳು) ಮತ್ತು ಉಪವಾಸದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಆದರೆ ಅತ್ಯಂತ ಇತ್ತೀಚಿನ ಸಲಹೆಗಳು ಇವು ಗಮನಾರ್ಹ ಪ್ರಯೋಜನವನ್ನು ಹೊಂದಿವೆ ಎಂದು ಹೇಳಬಹುದಾದ ಸಾಕ್ಷಿಗಳು ಇದುವರೆಗೆ ದೊರೆತಿಲ್ಲ ಎನ್ನುತ್ತವೆ.

ಕೀಮೋಥೆರಪಿಗೆ ಮುಂಚಿನ ದಿನಗಳಲ್ಲಿ ಮತ್ತು ಕೀಮೋಥೆರಪಿಯ ನಂತರದ ದಿನಗಳಲ್ಲಿ ‘ಉಪವಾಸದ ಅನುಕರಣೆಯ ಆಹಾರ’ (ಕಡಿಮೆ ಕ್ಯಾಲೊರಿ, ಕಡಿಮೆ ಪ್ರೋಟೀನ್) ಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆಯನ್ನು ಉಂಟುಮಾಡಿದೆ ಎಂದು ಹೇಳುವ 2020ರ ಅಧ್ಯಯನದ ಫಲಿತಾಂಶಗಳನ್ನು ಅನುಸರಿಸಿ ಹೆಚ್ಚಿನ ಸಂಶೋಧನೆಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ, ಈ ಆಹಾರಕ್ರಮವನ್ನು ಪಾಲಿಸುವುದು ರೋಗಿಗಳ ಪಾಲಿಗೆ ಕಷ್ಟಕರವಾಗಿತ್ತು, ಅಧ್ಯಯನದಲ್ಲಿನ ಐದು ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರವೇ ತಮ್ಮ ಎಲ್ಲಾ ಕೀಮೋಥೆರಪಿ ಚಿಕಿತ್ಸೆಗಳಿಗೆ ಉಪವಾಸದ ಆಹಾರಕ್ಕೆ (fasting diet) ಅಂಟಿಕೊಳ್ಳಲು ಸಾಧ್ಯವಾಯಿತು.

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

ಹೆಚ್ಚುವರಿ ದೇಹತೂಕವೂ ಸ್ತನ ಕ್ಯಾನ್ಸರ್‌ ಪತ್ತೆಯಾದ ನಂತರ ಹೆಚ್ಚು ಕಾಲ ಬದುಕದಿರಲು ಕಾರಣವಾಗುವುದಿದೆ. ಆದರೆ ಇದಕ್ಕೆ ವಿರುದ್ಧವಾದ ಹೇಳಿಕೆಯನ್ನು ತೋರಿಸಲು ಇದುವರೆಗೆ ಯಾವುದೇ ಕ್ಲಿನಿಕಲ್‌ ಟ್ರಯಲ್‌ ನಡೆದಿಲ್ಲ. ಎಂದರೆ ದೇಹ ತೂಕ ಕಳೆದುಕೊಳ್ಳುವುದರಿಂದ ಸ್ತನ ಕ್ಯಾನ್ಸರ್‌ ಚಿಕಿತ್ಸೆಯನ್ನು ಉತ್ತಮಗೊಳಿಸಬಲ್ಲದು ಎನ್ನುವ ಯಾವುದೇ ಪ್ರಯೋಗ ನಡೆದಿಲ್ಲ.

ಸ್ತನ ಕ್ಯಾನ್ಸರ್ ಚಿಕಿತ್ಸೆಯ ನಂತರ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳು ಸಂಕೀರ್ಣವಾಗಿವೆ ಮತ್ತು ಹೆಚ್ಚುವರಿ ತೂಕವನ್ನು ಹೊರುವುದು ಚಿಕಿತ್ಸೆಯ ಕೆಲವು ಅಡ್ಡಪರಿಣಾಮಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯನ್ನು ಅನುಸರಿಸುವ ಮಹಿಳೆಯರ ಬಗ್ಗೆ ನಮ್ಮ ಇತ್ತೀಚಿನ ಅಧ್ಯಯನವು, ಅವರು ತಮ್ಮ ದೃಹದ ಸಾಧಾರಣ ಪ್ರಮಾಣದ ತೂಕವನ್ನು (ಅವರ ದೇಹದ ತೂಕದ 5%) ಕಳೆದುಕೊಳ್ಳಲು ಪ್ರೋತ್ಸಾಹಿಸಿದಾಗ, ಅವರು ತಮ್ಮ ದೈಹಿಕ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಂಡರು ಮತ್ತು ಅವರಲ್ಲಿ ನೋವಿನ ಮಟ್ಟ ಕಡಿಮೆಯಾಗಿತ್ತು. ಅವರಲ್ಲಿ ಹೃದ್ರೋಗ ಮತ್ತು ಮಧುಮೇಹದ ಅಪಾಯವು ಸಹ ಕಡಿಮೆಯಾಗಿತ್ತು.

ಈ ಸಾಬೀತುಪಡಿಸಲಾದ ಸಲಹೆಗಳ ಹೊರತಾಗಿ, ನಮ್ಮ ದೈಹಿಕ ಗಡಿಯಾರಕ್ಕೆ ಸಂಬಂಧಿಸಿದ ಇನ್ನೂ ಎರಡು ನಡವಳಿಕೆಗಳು ಸ್ತನ ಕ್ಯಾನ್ಸರ್ ರೋಗನಿರ್ಣಯದ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಸಣ್ಣ ಸಂಶೋಧನೆ ತಿಳಿಸಿದೆ.

ಒಳ್ಳೆಯ ನಿದ್ರೆ

ಕ್ಯಾನ್ಸರ್‌ ಇರುವ ಮಹಿಳೆಯರಲ್ಲಿ ಚಿಕಿತ್ಸೆಯ ನಂತರ ಅರೆ-ಬರೆ (ಸರಿಯಾಗಿ ನಿದ್ರೆ ಬಾರದಿರುವುದು) ನಿದ್ರೆಯೆನ್ನುವುದು ವರ್ಷಗಳ ಕಾಲ ಮುಂದುವರೆಯಬಹುದು.

ಸ್ತನ ಕ್ಯಾನ್ಸರ್‌ ಪೀಡಿತ ಮಹಿಳೆಯರು ರಾತ್ರಿ ಹೊತ್ತು ನಿದ್ದೆ ಬಾರದಿರುವುದು ಮತ್ತು ನಿದ್ದೆ ಬಂದರೂ ಹೆಚ್ಚು ಹೊತ್ತು ಬಾರದಿರುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ನಿದ್ರಾ ಹೀನತೆಯೂ ಯಾವುದೇ ಕಾಯಿಲೆಯಿಂದ ಸಾವಿಗೆ ಹತ್ತಿರವಾಗಲು ಇರುವ ಕಾರಣಗಳಲ್ಲಿ ಒಂದು.

ನೀವು ಎಷ್ಟು ಚೆನ್ನಾಗಿ ನಿದ್ರಿಸುತ್ತೀರಿ ಎನ್ನುವುದಷ್ಟೇ ಮುಖ್ಯವಲ್ಲ, ನೀವು ಎಷ್ಟು ಹೊತ್ತು ಮಲಗುತ್ತೀರಿ ಎನ್ನುವುದು ಕೂಡಾ ಬಹಳ ಮುಖ್ಯ. ರಾತ್ರಿ ಏಳರಿಂದ ಎಂಟು ಗಂಟೆಗಳ ಕಾಲ ಮಲಗುವವರಿಗೆ ಹೋಲಿಸಿದರೆ ಒಂಬತ್ತು ಗಂಟೆಗಳಿಗಿಂತಲೂ ಹೆಚ್ಚು ಕಾಲ ನಿದ್ರಿಸುವವರಲ್ಲಿ ಕ್ಯಾನ್ಸರ್‌ ಮರಳುವ ಸಾಧ್ಯತೆ 48% ಹೆಚ್ಚು. ಆದರೆ ಇದಕ್ಕೆ ಕಾರಣವೇನು ಎನ್ನುವದನ್ನು ಸಂಶೋಧನೆಗಳು ಇದುವರೆಗೆ ಹೆಕ್ಕಿ ತೋರಿಸಿಲ್ಲ. ಹೆಚ್ಚು ಕಾಲ ನಿದ್ರಿಸುವುದರಿಂದ ಸ್ತನ ಕ್ಯಾನ್ಸರ್‌ ಮರಕಳಿಸುತ್ತದೆಯೋ, ಕ್ಯಾನ್ಸರ್‌ ಮರುಕಳಿಸುವುದರಿಂದಲೇ ಹೆಚ್ಚು ನಿದ್ರೆ ಬರುತ್ತದೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಊಟ ಮಾಡುವ ಸಮಯದಲ್ಲಿ ಶಾಂತವಾಗಿರಿ

ಪ್ರಾಥಮಿಕ ಸಂಶೋಧನೆಯು ನೀವು ಯಾವ ಸಮಯದಲ್ಲಿ ತಿನ್ನುತ್ತೀರಿ ಎನ್ನುವುದು ಕೂಡಾ ಬಹಳ ಮುಖ್ಯ ಎನ್ನುತ್ತದೆ. ದಿನದ ಕೊನೆಯ ಊಟ (ರಾತ್ರಿಯೂಟ) ಮತ್ತು ಮುಂದಿನ ದಿನದ ತಿಂಡಿಯ ನಡುವಿನ ಸಮಯವನ್ನು ವಿಳಂಬಗೊಳಿಸುವುದು ಸ್ತನ ಕ್ಯಾನ್ಸರ್ ಮರಳುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ತನ ಕ್ಯಾನ್ಸರ್ ರೋಗನಿರ್ಣಯವಾದ ನಂತರ 13 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಮಹಿಳೆಯರು ರಾತ್ರಿ ಉಪವಾಸವನ್ನು ವರದಿ ಮಾಡಿದಾಗ, ಇದು ಸ್ತನ ಕ್ಯಾನ್ಸರ್ ನ 36% ರಷ್ಟು ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. ಆದರೆ ಅಧ್ಯಯನದ ಲೇಖಕರು ರಾತ್ರಿಯಲ್ಲಿ ಉಪವಾಸದ ಸಮಯವನ್ನು ಹೆಚ್ಚಿಸುವುದರಿಂದ ರೋಗದ ಅಪಾಯವನ್ನು ಕಡಿಮೆ ಮಾಡಬಹುದೇ ಎಂದು ಪರೀಕ್ಷಿಸಲು ಯಾದೃಚ್ಛಿಕಗೊಳಿಸಿದ ಪ್ರಯೋಗಗಳ ಅಗತ್ಯವಿದೆ ಎಂದು ಗಮನಿಸಿದ್ದಾರೆ.

ಸ್ತನ ಕ್ಯಾನ್ಸರ್‌ ವಾಸಿಯಾದ, ಹದಿಮೂರು ಗಂಟೆಗಳಿಗಿಂತಲೂ ಕಡಿಮೆ ಅಂತರದ ಅವಧಿಯಲ್ಲಿ ಬೆಳಗಿನ ಉಪಹಾರ ಸ್ವೀಕರಿಸಿದ ಮಹಿಳೆಯರು ಮತ್ತು ಹದಿಮೂರು ಅಥವಾ ಅದಕ್ಕಿಂತಲೂ ಹೆಚ್ಚು ಅಂತರ ನೀಡಿದ ಮಹಿಳೆಯರಿಗೆ ಹೋಲಿಸಿದರೆ, ಕಡಿಮೆ ಅವಧಿಯಲ್ಲಿ ಉಪಹಾರ ಸೇವಿಸಿದ ಮಹಿಳೆರಲ್ಲಿ ಕ್ಯಾನ್ಸರ್‌ ಮರಳುವಿಕೆ 36% ಹೆಚ್ಚಿತ್ತು. ಆದರೆ ಈ ಅಧ್ಯಯನದ ಸಂಶೋಧಕರು ಈ ಕುರಿತು ನಿಖರವಾಗಿ ಹೇಳಲು ಇನ್ನೂ ಹಲವು ಸಂಶೋಧನೆಗಳನ್ನು ನಡೆಸಬೇಕು ಎಂದಿದ್ದಾರೆ.

ದೊಡ್ಡ ಬದಲಾವಣೆಗಳಿಗಾಗಿ ಸಣ್ಣ ಹೆಜ್ಜೆಗಳು

ವಿಶ್ವ ಕ್ಯಾನ್ಸರ್ ಸಂಶೋಧನಾ ನಿಧಿಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮತ್ತು ಕ್ಯಾನ್ಸರ್ ಮರಳಿ ಬರುವ ಅಪಾಯವನ್ನು ಕಡಿಮೆ ಮಾಡಲು ಶಿಫಾರಸುಗಳ ಪಟ್ಟಿಯನ್ನು ಅಭಿವೃದ್ಧಿಪಡಿಸಿದೆ. ಆದರೆ ನಮ್ಮ ಸಂಶೋಧನೆಯು ಹೆಚ್ಚಿನ ಮಹಿಳೆಯರು ತಮ್ಮ ಸ್ತನ ಕ್ಯಾನ್ಸರ್ ರೋಗನಿರ್ಣಯದ ನಂತರ ಈ ಶಿಫಾರಸುಗಳನ್ನು ಪೂರೈಸುತ್ತಿಲ್ಲ ಎನ್ನುವುದನ್ನು ಕಂಡುಕೊಂಡಿದೆ. ಸ್ತನ ಕ್ಯಾನ್ಸರ್ ಬಂದ ನಂತರ ಅಭ್ಯಾಸಗಳನ್ನು ಬದಲಾಯಿಸವುದು ಬಹಳ ಕಷ್ಟದ ವಿಷಯವಾಗಿರಬಹುದು, ಮುಖ್ಯವಾಗಿ ಆಯಾಸ ಮತ್ತು ಒತ್ತಡದ ಕಾರಣದಿಂದಾಗಿ.

ಚಿಕಿತ್ಸೆಯ ನಂತರ ವ್ಯಾಯಾಮವನ್ನು ಪ್ರಾರಂಭಿಸುವುದು ಹೆದರಿಕೆ ಹುಟ್ಟಿಸುತ್ತದೆ ಮತ್ತು ಭಯಾನಕವಾಗಿರುತ್ತದೆ. ಮೊದಲಿಗೆ ಸಣ್ಣದಾಗಿ ಪ್ರಾರಂಭಿಸುವುದು ಒಳ್ಳೆಯದು, ಉದಾಹರಣೆಗೆ: ಪ್ರತಿ ವಾರ 10ರಿಂದ 15 ನಿಮಿಷಗಳಷ್ಟು ವ್ಯಾಯಾಮವನ್ನು ಮಾಡುವ ಗುರಿಯನ್ನು ಹೊಂದಿರಿ. ವ್ಯಾಯಾಮ ಮಾಡುವ ಸ್ನೇಹಿತರನ್ನು ಹೊಂದಿರುವುದು ನಿಜವಾಗಿಯೂ ಈ ವಿಷಯದಲ್ಲಿ ಸಹಾಯ ಮಾಡುತ್ತದೆ ಮತ್ತು ಸ್ತನ ಕ್ಯಾನ್ಸರ್ ಹೊಂದಿರುವ ಜನರಿಗೆ ಸಾಕಷ್ಟು ವ್ಯಾಯಾಮ ಕಾರ್ಯಕ್ರಮಗಳು ಸಹ ಲಭ್ಯವಿವೆ.

ಸ್ತನ ಕ್ಯಾನ್ಸರ್ ರೋಗನಿರ್ಣಯದ ನಂತರ ವ್ಯಾಯಾಮ ಮಾಡುವಾಗ ಎದುರಾಗುವ ಸಾಮಾನ್ಯ ಪ್ರಶ್ನೆಗಳೆಂದರೆ ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕ, ಸ್ತನ ಕ್ಯಾನ್ಸರ್ ಕಾಯಿಲೆ ವಾಸಿಯಾದವರಲ್ಲಿ ಉಂಟಾಗುವ ಸುಮಾರು 20% ಜನರಲ್ಲಿ ಸುಮಾರು 20% lymphoedema ಊತ ಮತ್ತು ಅಸ್ವಸ್ಥತೆಯಿಂದ ಹೇಗೆ ಪಾರಾಗುವುದು ಎನ್ನುವುದಾಗಿದೆ. ಜನರು ವ್ಯಾಯಾಮ ಮತ್ತು ವಿಗ್ ಅಸ್ವಸ್ಥತೆ ಅಥವಾ ವಿಕಿರಣದಿಂದ ಕಿರಿಕಿರಿಯ ಬಗ್ಗೆಯೂ ಚಿಂತಿಸುತ್ತಾರೆ. ಈಗ ಇದಕ್ಕೆಲ್ಲ ನಿರ್ದಿಷ್ಟ ಸಲಹೆಗಳು ಲಭ್ಯವಿವೆ.

ವ್ಯಾಯಾಮದ ವಿಷಯದಲ್ಲಿ ಮಾಡಿದಂತೆಯೇ, ಪರಿಪೂರ್ಣ ಆಹಾರವನ್ನು ಪಡೆಯಲು ಪ್ರಯತ್ನಿಸುವ ಬದಲು, ನೀವು ಪ್ರತಿ ವಾರ ಹೆಚ್ಚು ತರಕಾರಿಗಳನ್ನು ತಿನ್ನುವ ಗುರಿಯನ್ನು ಮೊದಲಿಗೆ ಹೊಂದಬಹುದು.

ನೀವು ಕ್ಯಾನ್ಸರ್ ರೋಗನಿರ್ಣಯ ಅಥವಾ ಚಿಕಿತ್ಸೆಯ ಬಗ್ಗೆ ಚಿಂತಿಸುತ್ತಿದ್ದರೆ ನಿದ್ರೆ ಎನ್ನುವುದು ಕನಸಿನ ಮಾತಾಗಿಬಿಡಬಹುದು ಆದರೆ ಪ್ರತಿ ರಾತ್ರಿ ಶಿಫಾರಸು ಮಾಡಲಾದ ಏಳರಿಂದ ಒಂಬತ್ತು ಗಂಟೆಗಳ ನಿದ್ರೆಯನ್ನು ಪಡೆಯಲು ಇರುವ ಸಲಹೆಗಳೆಂದರೆ ಹಗಲಿನಲ್ಲಿ ಮುಂಚಿತವಾಗಿ ವ್ಯಾಯಾಮ ಮಾಡುವುದು, ಮಲಗುವ ಮೊದಲು ತಿಂಡಿಗಳನ್ನು ತಪ್ಪಿಸುವುದು ಮತ್ತು ಉತ್ತಮ ನಿದ್ರೆ ನಾವು ಮಲಗುವ ಕೋಣೆಯ ಸ್ವಚ್ಛತೆಯೊಡನೆ ನೇರ ಸಂಬಂಧ ಹೊಂದಿದೆಯೆನ್ನುವುದನ್ನು ಎಂದಿಗೂ ಮರೆಯಬಾರದು.

*

ಈ ಲೇಖನವು ಮೂಲತಃ ಇಂಗ್ಲಿಷ್‌ ಭಾಷೆಯಲ್ಲಿ DNA ವೆಬ್‌ ತಾಣದಲ್ಲಿ ಪ್ರಕಟವಾಗಿತ್ತು. ಮೇಲಿನ ಬರಹವು ಆ ಲೇಖನದ ಅನುವಾದವಾಗಿರುತ್ತದೆ.

Related Articles

ಇತ್ತೀಚಿನ ಸುದ್ದಿಗಳು