Friday, June 14, 2024

ಸತ್ಯ | ನ್ಯಾಯ |ಧರ್ಮ

ಹೆರಿಗೆ ಮಾಡಿಸಲು ಲಂಚ: ಬಿಡದಿ ವೈದ್ಯರಿಬ್ಬರ ಅಮಾನತು

ಬಿಡದಿ: ಗಾರ್ಮೆಂಟ್ಸ್ ನೌಕರರೊಬ್ಬರ ಪತ್ನಿಯ ಹೆರಿಗೆ ಮಾಡಿಸಲು ಆರು ಸಾವಿರ ರೂ ಲಂಚ ಕೇಳಿದ ಆರೋಪದ ಮೇರೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ.

ಹೆರಿಗೆ ಮಾಡಿಸಲು ಆಸ್ಪತ್ರೆ ಸಿಬ್ಬಂದಿ ಹಣ ಕೇಳುವ ದೃಶ್ಯವನ್ನು `ದಿ ಫೈಲ್’ ನಿನ್ನೆ ಪ್ರಕಟಿಸಿದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಈ ಆದೇಶವನ್ನು ಹೊರಡಿಸಿದ್ದು, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣವೇ ಇಬ್ಬರು ವೈದ್ಯರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಸಿ, ಇನ್ನಷ್ಟು ತಪ್ಪಿತಸ್ಥರು ಕಂಡು ಬಂದರೆ ಅವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.

ದಿ ಫೈಲ್ ವರದಿಯ ಬೆನ್ನಲ್ಲೇ, ಆಸ್ಪತ್ರೆಯಲ್ಲಿ ಲಂಚ ಕೇಳುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇದರಿಂದ ಮುಜುಗರಕ್ಕೆ ಒಳಗಾದ ಆರೋಗ್ಯ ಸಚಿವ ಸುಧಾಕರ್, ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಭ್ರಷ್ಟಾಚಾರ, ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಮನೋಧರ್ಮ ಇಲ್ಲದ ವೈದ್ಯರು, ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ದರು.

ಅಷ್ಟೇ ಅಲ್ಲದೆ, ಕೇವಲ ಸುಸಜ್ಜಿತ ಕಟ್ಟಡಗಳು, ಅತ್ಯಾಧುನಿಕ ಉಪಕರಣಗಳು, ಅತ್ಯುತ್ತಮ ಭೌತಿಕ ಮೂಲಸೌಕರ್ಯಗಳಿಂದ ಒಂದು ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ. ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ಉಳ್ಳ ವೃತ್ತಿಪರ ವೈದ್ಯರಿಂದ ಒಂದು ಆಸ್ಪತ್ರೆ ಒಳ್ಳೆಯ ಆಸ್ಪತ್ರೆ ಎನಿಸಿಕೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದರು.

ನೀನು ಕೊಡ್ತಾ ಇರೋ ಟೂ ಥೌಸಂಡ್ ನ್ನು ನಾನೊಬ್ಬಳೇ ಇಟ್ಕೊಳ್ಳಲ್ಲ, ಎಲ್ರಿಗೂ ಡಿವೈಡ್ ಮಾಡಬೇಕು. ಟೂ ಥೌಸಂಡ್ ಯಾರು ಯಾರಿಗೆ ಕೊಡಲಿ? ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹೇಳುತ್ತಿರುವ ದೃಶ್ಯ ನಿನ್ನೆ ವೈರಲ್ ಆಗಿತ್ತು.

Related Articles

ಇತ್ತೀಚಿನ ಸುದ್ದಿಗಳು