Wednesday, May 14, 2025

ಸತ್ಯ | ನ್ಯಾಯ |ಧರ್ಮ

ಸೆರೆಯಾಗಿದ್ದ ಬಿಎಸ್‌ಎಫ್‌ ಸೈನಿಕನನ್ನು ವಾಪಸ್ ಭಾರತಕ್ಕೆ ಕಳುಹಿಸಿದ ಪಾಕಿಸ್ತಾನ

ಏಪ್ರಿಲ್ 23ರಿಂದ ಪಾಕಿಸ್ತಾನಿ ರೇಂಜರ್‌ಗಳ ವಶದಲ್ಲಿದ್ದ ಬಿಎಸ್‌ಎಫ್ ಜವಾನ ಪೂರ್ಣಮ್ ಕುಮಾರ್ ಶಾ ಅವರನ್ನು ಆ ದೇಶವು ಭಾರತಕ್ಕೆ ಹಿಂದಿರುಗಿಸಿದೆ. ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಕಳುಹಿಸಲಾಗಿದೆ.

ಏಪ್ರಿಲ್ 23ರಂದು ಆಕಸ್ಮಿಕವಾಗಿ ತನ್ನ ಗಡಿ ದಾಟಿದ ಜವಾನನನ್ನು ಪಾಕಿಸ್ತಾನ ಬಂಧಿಸಿತ್ತು. ಘಟನೆಯ ನಂತರ ಪ್ಲಗ್ ಮೀಟಿಂಗ್‌ಗಳು ಮತ್ತು ಇತರ ವಿಧಾನಗಳ ಮೂಲಕ ಪಾಕಿಸ್ತಾನ ರೇಂಜರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಬಿಎಸ್‌ಎಫ್ ಘೋಷಿಸಿತು. ಪಾಕಿಸ್ತಾನದ ಈ ಕ್ರಿಯೆಗೆ ಪ್ರತಿಯಾಗಿ ಭಾರತ ಒಬ್ಬ ಪಾಕಿಸ್ತಾನಿ ಸೈನಿಕನನ್ನು ಆ ದೇಶಕ್ಕೆ ಹಸ್ತಾಂತರಿಸಿದೆ.

ಬಿಎಸ್‌ಎಫ್ ಕಾನ್‌ಸ್ಟೆಬಲ್ ಪೂರ್ಣಮ್ ಕುಮಾರ್ ಶಾ ಅವರನ್ನು ಬುಧವಾರ ಬೆಳಿಗ್ಗೆ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್ ಪೋಸ್ಟ್‌ನಲ್ಲಿ ಬೆಳಿಗ್ಗೆ 10:30 ರ ಸುಮಾರಿಗೆ ಹಸ್ತಾಂತರ ನಡೆಯಿತು ಮತ್ತು ಸ್ಥಾಪಿತ ಶಿಷ್ಟಾಚಾರಗಳನ್ನು ಅನುಸರಿಸಿ ಶಾಂತಿಯುತವಾಗಿ ಹಸ್ತಾಂತರ ಪ್ರಕ್ರಿಯೆಯನ್ನು ನಡೆಸಲಾಯಿತು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಭದ್ರತಾ ಅಧಿಕಾರಿಗಳು ಶಾ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಏಪ್ರಿಲ್ 23ರಂದು ಪಂಜಾಬ್‌ನ ಫಿರೋಜ್‌ಪುರ ಬಳಿ ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ದಾಟಿದ್ದ 182ನೇ ಬೆಟಾಲಿಯನ್‌ನ ಬಿಎಸ್‌ಎಫ್ ಜವಾನ್ ಶಾ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ಬಂಧಿಸಿದ್ದರು. ತನ್ನ ಸರ್ವಿಸ್ ರೈಫಲ್‌ನೊಂದಿಗೆ ಸಮವಸ್ತ್ರದಲ್ಲಿ ಗಡಿ ಬೇಲಿಯ ಬಳಿ ಕರ್ತವ್ಯದಲ್ಲಿದ್ದಶಾ, ವಿಶ್ರಾಂತಿ ಪಡೆಯಲು ನೆರಳಿನ ಪ್ರದೇಶಕ್ಕೆ ಹೋಗಿದ್ದರು. ಈ ಪ್ರಕ್ರಿಯೆಯಲ್ಲಿ, ಅವರು ತಿಳಿಯದೆ ಪಾಕಿಸ್ತಾನಿ ಪ್ರದೇಶವನ್ನು ಪ್ರವೇಶಿಸಿದರು. ಅಲ್ಲಿ ಪಾಕಿಸ್ತಾನಿ ರೇಂಜರ್‌ಗಳು ಅವರನ್ನು ಸೆರೆಹಿಡಿದಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page