Home ದೇಶ ರಿಲಯನ್ಸ್ ಜಿಯೋಗೆ ಬಿಲ್ ನೀಡದ ಕಾರಣ ಬಿಎಸ್‌ಎನ್‌ಎಲ್‌ನಿಂದ ಸರ್ಕಾರಕ್ಕೆ 1,757 ಕೋಟಿ ರುಪಾಯಿ ನಷ್ಟ: ಸಿಎಜಿ...

ರಿಲಯನ್ಸ್ ಜಿಯೋಗೆ ಬಿಲ್ ನೀಡದ ಕಾರಣ ಬಿಎಸ್‌ಎನ್‌ಎಲ್‌ನಿಂದ ಸರ್ಕಾರಕ್ಕೆ 1,757 ಕೋಟಿ ರುಪಾಯಿ ನಷ್ಟ: ಸಿಎಜಿ ವರದಿ

0
ಲೆಕ್ಕಪರಿಶೋಧನಾ ಸಂಸ್ಥೆಯ ಅಂದಾಜಿನ ಪ್ರಕಾರ, ಬಿಎಸ್‌ಎನ್‌ಎಲ್ ಮುಖೇಶ್ ಅಂಬಾನಿ ಮಾಲಕತ್ವದ ರಿಲಯನ್ಸ್ ಜಿಯೋ ಸಂಸ್ಥೆಗೆ ಮೇ 2014 ರಿಂದ ಮಾರ್ಚ್ 2024 ರ ನಡುವೆ ಬಿಲ್ ನೀಡದೆ ಸರ್ಕಾರಿ ಖಜಾನೆಗೆ 1,757 ಕೋಟಿ ರುಪಾಯಿ ನಷ್ಟವಾಗಿದೆ

ಮೂಲಸೌಕರ್ಯ ಹಂಚಿಕೆ ಕುರಿತು ಒಪ್ಪಂದವಿದ್ದರೂ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸುಮಾರು 10 ವರ್ಷಗಳ ಕಾಲ ರಿಲಯನ್ಸ್ ಜಿಯೋಗೆ ಬಿಲ್ ಮಾಡದ ಕಾರಣ ಕೇಂದ್ರ ಸರ್ಕಾರಕ್ಕೆ 1,757.56 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (Comptroller and Auditor General of India ) ನಡೆಸಿದ ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿದೆ.

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರು ಸರ್ಕಾರಿ ಖಜಾನೆಯ ಕಾವಲುಗಾರರಾಗಿದ್ದಾರೆ ಮತ್ತು ಸಾರ್ವಜನಿಕ ನಿಧಿಯ ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಖಾತೆಗಳನ್ನು ಲೆಕ್ಕಪರಿಶೋಧಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

“ಬಿಎಸ್‌ಎನ್‌ಎಲ್, M/s. ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್‌ಜೆಐಎಲ್) ಜೊತೆಗಿನ ಮಾಸ್ಟರ್ ಸರ್ವಿಸ್ ಅಗ್ರಿಮೆಂಟ್ (ಎಂಎಸ್‌ಎ) ಜಾರಿಗೊಳಿಸುವಲ್ಲಿ ವಿಫಲವಾಗಿದೆ ಮತ್ತು ಬಿಎಸ್‌ಎನ್‌ಎಲ್‌ನ ಹಂಚಿಕೆಯ ನಿಷ್ಕ್ರಿಯ ಮೂಲಸೌಕರ್ಯದಲ್ಲಿ ಬಳಸಲಾದ ಹೆಚ್ಚುವರಿ ತಂತ್ರಜ್ಞಾನಕ್ಕೆ ಬಿಲ್ ಮಾಡಲಿಲ್ಲ, ಇದರ ಪರಿಣಾಮವಾಗಿ ಮೇ 2014 ರಿಂದ ಮಾರ್ಚ್ 2024 ರ ನಡುವೆ ಸರ್ಕಾರಿ ಖಜಾನೆಗೆ 1,757.76 ಕೋಟಿ ರುಪಾಯಿ ನಷ್ಟ ಮತ್ತು ದಂಡದ ಬಡ್ಡಿ ಉಂಟಾಗಿದೆ” ಎಂದು ಲೆಕ್ಕಪರಿಶೋಧನಾ ಸಂಸ್ಥೆ ತಿಳಿಸಿದೆ.

“ನಿಷ್ಕ್ರಿಯ ಮೂಲಸೌಕರ್ಯ” ಎಂದು ಪರಿಗಣಿಸಲಾದ ಸುಮಾರು 4,000 ಮೊಬೈಲ್ ಟವರ್‌ಗಳ ಗುತ್ತಿಗೆಗೆ ಎರಡೂ ಸಂಸ್ಥೆಗಳು 2014 ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು .

ಮುಖೇಶ್ ಅಂಬಾನಿಯವರ ರಿಲಯನ್ಸ್ ಜಿಯೋಗೆ ಸಂಬಂಧಿಸಿದ ನಷ್ಟದ ಜೊತೆಗೆ, ಟೆಲಿಕಾಂ ಮೂಲಸೌಕರ್ಯ ಪೂರೈಕೆದಾರರಿಗೆ ಪಾವತಿಸಿದ ಆದಾಯದ ಪಾಲಿನಿಂದ ಪರವಾನಗಿ ಶುಲ್ಕವನ್ನು ಕಡಿತಗೊಳಿಸಲು ವಿಫಲವಾದ ನಂತರ ಬಿಎಸ್‌ಎನ್‌ಎಲ್ 2019-20 ಮತ್ತು 2021-22 ರ ನಡುವೆ 38.36 ಕೋಟಿ ರುಪಾಯಿ ನಷ್ಟವನ್ನು ಅನುಭವಿಸಿದೆ ಎಂದು ಲೆಕ್ಕಪರಿಶೋಧನಾ ಸಂಸ್ಥೆ ಕಂಡುಹಿಡಿದಿದೆ.

ಮಾರ್ಚ್ 2023 ರ ಹೊತ್ತಿಗೆ ಸರ್ಕಾರವು ಬಿಎಸ್‌ಎನ್‌ಎಲ್‌ನಲ್ಲಿ ಒಟ್ಟು 38,886.44 ಕೋಟಿ ರುಪಾಯಿ ಹೂಡಿಕೆ ಮಾಡಿದೆ ಎಂದು ವರದಿ ಹೇಳುತ್ತದೆ. ಹಾಗಿದ್ದೂ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯ ಕಡೆಯಿಂದ ಉಂಟಾದ ಲೋಪಗಳು 1,944.92 ಕೋಟಿ ರುಪಾಯಿಗಳ ಒಟ್ಟು ನಷ್ಟಕ್ಕೆ ಕಾರಣವಾಯಿತು.

You cannot copy content of this page

Exit mobile version