ರಾಯಚೂರು: ಫೆ.16ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ‘ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಫೆಬ್ರುವರಿ 12ರಿಂದ 23ರವರೆಗೆ ವಿಧಾನಸಭೆ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ.15 ರವರೆಗೆ ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಯಲಿದೆ ಎಂದರು.
ಬಜೆಟ್ ಕುರಿತು ಮಾಹಿತಿ ಒದಗಿಸಲು ಎಲ್ಲ ಶಾಸಕರಿಗೆ ಫೆ.9ರಂದು ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್‌ನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಬಜೆಟ್ ಹೇಗೆ ರೂಪಿಸಲಾಗುತ್ತದೆ, ಯಾವ ಯಾವ ಇಲಾಖೆಗೆ ಹೇಗೆ ಅನುದಾನ ಮೀಸಲಿಡಲಾಗುತ್ತದೆ. ಇಲಾಖೆಗಳ ಕಾರ್ಯನಿರ್ವಹಣೆ ಹೇಗಿರುತ್ತದೆ ಎನ್ನುವುದರ ಕುರಿತಾಗಿ ಶಾಸಕರಿಗೆ ಮಾಹಿತಿ ಒದಗಿಸಲಾಗುವುದು. ಇದರ ಜೊತೆಗೆ ಪತ್ರಕರ್ತರಿಗೂ ಸಹ ಪ್ರತ್ಯೇಕವಾಗಿ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ವಿಧಾನಸಭೆ ಜನರ ಹತ್ತಿರಕ್ಕೆ: ರಾಜ್ಯದ ವಿಧಾನಸಭೆಯನ್ನು ಜನರ ಬಳಿ ಒಯ್ಯಬೇಕು, ಸಮಾಜದ ಕಟ್ಟಕಡೆಯ ಜನ ವಿಧಾನಸಭೆ ನಾನು ನೋಡುವಂತದ್ದಲ್ಲ ಎಂದು ಭಾವಿಸಬಾರದು. ಹಾಗಾಗಿ ಎಲ್ಲರೂ ವಿಧಾನಸಭೆ ಒಳಕ್ಕೆ ಬರಲು ಅನುಮತಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸುರಕ್ಷತಾ ದೃಷ್ಠಿಯಿಂದ ಯಾರು ಬರುತ್ತಾರೆ ಹೋಗುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಸಿಸಿ ಕ್ಯಾಮೆರಾಗಳ ಅಳವಡಿಕೆಗೆ ಹಾಗೂ ಇತರೆ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಖಾದರ್ ತಿಳಿಸಿದರು.
ತಲಾ ಒಂದು ದಿನ ತಳಮಟ್ಟದ ಕೂಲಿ ಕಾರ್ಮಿಕರು, ಪೌರಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ಕ್ರೀಡಾಪಟುಗಳು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಒಂದು ದಿನ ಅಧಿವೇಶನ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಒಟ್ಟಿನಲ್ಲಿ ವಿಧಾನಸೌಧ ರಾಜ್ಯದ ಎಲ್ಲ ಸಮುದಾಯಗಳ, ಪ್ರತಿಯೊಬ್ಬರ ವಿಧಾನಸಭೆಯಾಗಬೇಕು ಎನ್ನುವ ಆಶಯವನ್ನು ಹೊಂದಲಾಗಿದೆ ಎಂದರು.
ಅಧಿವೇಶನಕ್ಕೆ ಸರಿಯಾದ ಸಮಯಕ್ಕೆ ಬಂದು, ಕೊನೆವರೆಗೂ ಇದ್ದು, ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎನ್ನುವ ಕಾರಣಕ್ಕಾಗಿಯೇ ಮತದಾರರು ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಹೀಗಾಗಿ ನೂರರಷ್ಟು ಕೆಲಸ ಮಾಡುವೆ ಎನ್ನುವ ಆತ್ಮವಿಶ್ವಾಸ ಶಾಸಕರಲ್ಲಿ ಬರಬೇಕು. ಬೇರೆಲ್ಲ ಕೆಲಸ-ಕಾರ್ಯಗಳಿದ್ದರೂ ಮೊದಲ ಆದ್ಯತೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಬೇಕು ಎಂದು ಮನವಿ ಮಾಡಿದರು.
ಶಾಸಕರು ವಿಧಾನಸಭೆಯಲ್ಲಿ ಕುಳಿತುಕೊಂಡು ಜನರ ಕಷ್ಟಗಳ ಪರ ಧ್ವನಿ ಎತ್ತಬೇಕು. ಹಿರಿಯರು ಮಾತನಾಡುವ ವಿಷಯಗಳು ಸೇರಿದಂತೆ ಅಲ್ಲಿ ನಡೆಯುವ ಎಲ್ಲ ಘಟನಾವಳಿಗಳನ್ನು ಅರಿತುಕೊಳ್ಳಬೇಕು. ಆಗ ಮಾತ್ರ ದೊಡ್ಡ ಮಟ್ಟದ ನಾಯಕರಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಒಂದೆರಡು ಸಲ ಆಯ್ಕೆಯಾಗಿ ಹೋದವರನ್ನು ಯಾರೂ ನೆನಪಿಗೆ ಇಟ್ಟುಕೊಳ್ಳುವುದಿಲ್ಲ. ಯಾರು ಬೆಳಿಗ್ಗೆಯಿಂದ ಸಂಜೆವರೆಗೆ ಕುಳಿತುಕೊಳ್ಳುತ್ತಾರೆ, ಎಲ್ಲ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ ಅಂತವರು ಯಶಸ್ವಿ ನಾಯಕರಾಗುತ್ತಾರೆ ಎಂದು ಸಭಾಧ್ಯಕ್ಷರು ಶಾಸಕರಿಗೆ ಕಿವಿಮಾತು ಹೇಳಿದರು.