ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್‌: 15 ಜನ ಕಾರ್ಮಿಕರು ಸಾವು 40 ಮಂದಿಗೆ ಗಾಯ

ರೇವಾ: ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ 15 ಜನ ಕಾರ್ಮಿಕರು ಸಾವನ್ನಪ್ಪಿದ್ದು, 40 ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಹೆದ್ದಾರಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಸುಮಾರು 100 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್‌, ನಿನ್ನೆ ತಡರಾತ್ರಿ ರೇವಾದ ಸುಹಾಗಿ ಪಹಾರಿ ಬಳಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಸ್‌ ಟ್ರಕ್‌ ಹಿಂಭಾಗದಲ್ಲಿ ಡಿಕ್ಕಿ ಹೊಡೆದಿದ್ದು, ಟ್ರಕ್ ಹೆದ್ದಾರಿಯಲ್ಲಿ ಸಿಲುಕಿಕೊಂಡಿದೆ. ಸದ್ಯಕ್ಕೆ ಗಾಯಾಳುಗಳನ್ನು ಸುಹಗಿಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅವಘಡದ ಕುರಿತು, ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಮಾತನಾಡಿ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೆಚ್ಚಿನ ಜನರು ಉತ್ತರ ಪ್ರದೇಶದ ಕಾರ್ಮಿಕರಾಗಿದ್ದು, ಮಧ್ಯಪ್ರದೇಶದ ಕಟ್ನಿಯಿಂದ ಬಸ್ ಹತ್ತಿ ದೀಪಾವಳಿಗೆಂದು ಮನೆಗೆ ತೆರಳುತ್ತಿದ್ದರು ಎಂದು ಬಸ್‌ನಲ್ಲಿದ್ದ ಕೆಲವರಿಂದ ಮಾಹಿತಿ ತಿಳಿದುಬಂದಿದೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪಘಾತದ ಬಗ್ಗೆ ಮದ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ದುಃಖ ವ್ಯಕ್ತಪಡಿಸಿದ್ದಾರೆ. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಮೃತದೇಹಗಳನ್ನು ಉತ್ತರ ಪ್ರದೇಶದಲ್ಲಿರುವ ಅವರ ಕುಟುಂಬ ಸದಸ್ಯರಿಗೆ ಕಳುಹಿಸುವಂತೆ ವ್ಯವಸ್ಥೆ ಮಾಡಲು ವಿನಂತಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು