Friday, June 14, 2024

ಸತ್ಯ | ನ್ಯಾಯ |ಧರ್ಮ

ಹೊಸ ಪಾರ್ಟಿ ಕಟ್ತಿದ್ದಾರಾ ಗಾಲಿ ಜನಾರ್ಧನ ರೆಡ್ಡಿ!?

ತನ್ನ ತವರು ಜಿಲ್ಲೆಗೆ ಕಾಲಿಡಲು ಕೋರ್ಟಿನಿಂದ ಅನುಮತಿ ಪಡೆದ ನಂತರ ಬಳ್ಳಾರಿಗೆ ಬಂದಿದ್ದ ಜನಾರ್ಧನ ರೆಡ್ಡಿಯವರು ಬಿಜೆಪಿಯನ್ನು ನೇರವಾಗಿ ಟೀಕಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ನಂತರ ಆ ಸುದ್ದಿಗೆ ಕೈಕಾಲು ಬೆಳೆದು ಅವರು ಕಾಂಗ್ರೆಸ್ ಸೇರುತ್ತಾರೆ, ಹೊಸ ಪಕ್ಷ ಕಟ್ಟುತ್ತಾರೆ ಇತ್ಯಾದಿಯಾಗಿ ಸುದ್ದಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಪೀಪಲ್ ಮೀಡಿಯಾ ಹಲವು ಮೂಲಗಳನ್ನು ಎಡತಾಕಿ ಸಂಗ್ರಹಿಸಿದ ಮಾಹಿತಿಗಳ ಅವಲೋಕನ ಇಲ್ಲಿದೆ.

ಗಾಲಿ ಜನಾರ್ಧನ ರೆಡ್ಡಿಯೆನ್ನುವ ಹೆಸರು ರಾಜಕೀಯದಲ್ಲಿ ಹಲವು ಬಾರಿ ದೊಡ್ಡ ಸದ್ದು ಮಾಡಿದೆ. ಭಾರತದಲ್ಲಿ ಮೊದಲ ಭಾರಿಗೆ ಆಪರೇಷನ್ ಕಮಲವನ್ನು ಮಾಡಿಸಿದ ಡಾಕ್ಟರ್ ಯಡ್ಯೂರಪ್ಪನವರಾದರೆ, ಆ ಆಪರೇಷನ್ನಿಗೆ ತಗಲುವ ಖರ್ಚನ್ನು ನೋಡಿಕೊಂಡಿದ್ದು ಯಾರು ಎನ್ನುವುದು ಜನಜನಿತ ಸತ್ಯ. ಆದರೆ ಅಷ್ಟೆಲ್ಲ ಧೂಳನ್ನು ರಾಜಕಾರಣದಲ್ಲೂ, ಬಳ್ಳಾರಿಯ ಗಣಿಗಳಲ್ಲೂ ಒಟ್ಟಿಗೇ ಎಬ್ಬಿಸಿದ್ದ ಜನಾ ರೆಡ್ಡಿಯವರ ರಾಜಕೀಯ ಬದುಕು ಗಾಳಿಯ ಅಬ್ಬರ ಇಳಿದ ನಂತರ ಮತ್ತೆ ಮಣ್ಣಿಗಿಳಿದ ಧೂಳಿನ ಕಣದಂತೆಯೇ ಆಗಿತ್ತು. ಇಂದಿಗೂ ಅವರು ಹಲವು ಕೇಸುಗಳ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ.

ಹಾಗೆ ಜೈಲಿಗೆ ಹೋಗಿ ಕುಳಿತರೂ ರೆಡ್ಡಿ ಸುಮ್ಮನೆ ಕುಳಿತವರಲ್ಲ, ಆಗಾಗ ಜೈಲಿನಿಂದಲೂ ಅದರ ನಂತರ ಜೈಲಿನಿಂದ ಹೊರಗೆ ಬಂದ ಮೇಲೂ ಸದ್ದು ಮಾಡುತ್ತಲೇ ಇದ್ದವರು. ಮಗಳ ಮದುವೆಯನ್ನಂತೂ ದೇವಲೋಕದ ಸಭೆಯೋ ಎಂಬಂತೆ ಆಯೋಜಿಸಿದ್ದ ರೆಡ್ಡಿ ವಾರಗಳ ಕಾಲ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್ ಆಗಿದ್ದರು. ಅದರ ನಂತರ ಇತ್ತೀಚೆಗೆ ತನ್ನ ಮಗನನ್ನು ಸಿನೆಮಾ ನಾಯಕನನ್ನಾಗಿ ಪರಿಚಯಿಸುವ ಸಲುವಾಗಿ ಹೊಸ ಚಿತ್ರವೊಂದನ್ನು ಸಹ ಅನೌನ್ಸ್ ಮಾಡಿದ್ದರು.

ಇದೆಲ್ಲದರ ನಡುವೆ ಈಗ ರಾಜಕೀಯ ವಲಯದಲ್ಲೊಂದು ಸುದ್ದಿ ಓಡಾಡತೊಡಗಿ ಅದಕ್ಕೆ ಕೈ-ಕಾಲು, ತಲೆ ಮೂಡತೊಡಗಿ ಈಗ ಅದಕ್ಕೆ ಒಂದು ರೂಪ ಬಂದಂತಿದೆ. ಈಗೀನ ಹೊಸ ಸುದ್ದಿ ಏನಪ್ಪಾ ಅಂದ್ರೆ ರೆಡ್ಡಿಯವರು ಹೊಸ ಪಕ್ಷ ಕಟ್ಟಲಿದ್ದಾರೆ ಎನ್ನುವುದು! ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಈಗ ಅವರು ಹೊಸ ಪಾರ್ಟಿ ಕಟ್ಟಲಿದ್ದಾರೆನ್ನುವ ಸುದ್ದಿ ರಾಜಕೀಯದ ಪಡಸಾಲೆಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸ್ವತಃ ಜನಾರ್ಧನ ರೆಡ್ಡಿಯವರೇ, “ವಿರೋಧ ಪಕ್ಷವಾಗಿರುವ ಕಾಂಗ್ರೆಸ್’ಗೆ ನನ್ನನ್ನು ಟೀಕಿಸುವ ಎಲ್ಲಾ ಹಕ್ಕಿದೆ, ಆದರೆ, ಪಕ್ಷವನ್ನು ಕಟ್ಟಲು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಾನು ದೊಡ್ಡ ಪಾತ್ರ ನಿರ್ವಹಿಸಿದ್ದರಿಂದ ಬಿಜೆಪಿಯಿಂದ ಟೀಕೆಯನ್ನು ಎದುರು ನೋಡಿರಲಿಲ್ಲ. ನನ್ನ ರಾಜಕೀಯ ಬದುಕಿನ ಕುರಿತು ನನಗೆ ತೃಪ್ತಿಯಿದೆ. ಶೀಘ್ರದಲ್ಲೇ, ನನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತೇನೆ,” ಎಂದು ಮೊನ್ನೆ ಬಳ್ಳಾರಿಗೆ ಬಂದಾಗ ಹೇಳಿದ್ದರು. ಅಲ್ಲದೆ ಇನ್ನು ಮುಂದೆ ತಾನು ಬೆಂಗಳೂರಿಗೆ ಹೋಗದೆ ಬಳ್ಳಾರಿ ಜನರ ನಡುವೆಯೇ ಇರುವುದಾಗಿಯೂ ಘೋಷಿಸಿದ್ದರು.

ಇದೆಲ್ಲದರ ನಡುವೆ ಅವರು ಕಾಂಗ್ರೆಸ್ ಸೇರುತ್ತಾರೆನ್ನುವ ಸುದ್ದಿಯೂ ಓಡಾಡಿತ್ತಾದರೂ, ಅಂತಹ ಸಾಧ್ಯತೆಗಳು ಬಹಳ ಕಡಿಮೆ. ಯಾಕೆಂದರೆ ರೆಡ್ಡಿ ಬ್ರದರ್ಸ್ ಮತ್ತು ಅವರ ಸಂಗಡಿಗರ ಕುರಿತು ಪಾದಯಾತ್ರೆ ಮಾಡಿ ಜಯಿಸಿದ್ದ, ಅವರೆಲ್ಲರ ವಿರುದ್ಧ ಭ್ರಷ್ಟಾಚಾರದ ವಿಷಯದಲ್ಲಿ ದೊಡ್ಡ ಯುದ್ಧವನ್ನೇ ಹೂಡಿದ್ದ ಕಾಂಗ್ರೆಸ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆ ಎನ್ನುವುದನ್ನು ನಂಬಲು ಕಷ್ಟ.

ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿದರೆ ಜನಾ ರೆಡ್ಡಿಯವರಿಗೆ ಇರುವ ಮತ್ತೊಂದು ಆಯ್ಕೆಯೆಂದರೆ ಅದು ಹೊಸ ಪಕ್ಷ ಕಟ್ಟುವುದು. ಬಳ್ಳಾರಿಗೆ ತೀರಾ ಹತ್ತಿರವಾದ ಅವಿಭಜಿತ ಆಂಧ್ರದಲ್ಲಿ ಈ ರೀತಿಯಾಗಿ ಬಲಶಾಲಿ ವ್ಯಕ್ತಿಗಳು ತಮ್ಮದೇ ಪ್ರಾದೇಶಿಕ ಪಕ್ಷ ಕಟ್ಟಿಕೊಂಡು ರಾಜಕೀಯವಾಗಿ ಹೋರಾಡುವುದು ಮತ್ತು ಅಧಿಕಾರ ಹಿಡಿಯುವುದು ಸರ್ವೇಸಾಮಾನ್ಯ. ಕಾಂಗ್ರೆಸ್ಸಿನೊಡನೆ ಮುನಿಸಿಕೊಂಡು ಹೊರ ಹೋದ ಜಗನ್ ಇಟ್ಟಿದ್ದು ಕೂಡಾ ಇದೇ ರೀತಿಯ ಹೆಜ್ಜೆಯನ್ನು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆದರೆ ಕರ್ನಾಟಕದ ಮಟ್ಟಿಗೆ ಇಂತಹದ್ದೊಂದು ಪ್ರಯೋಗ ಎಷ್ಟರಮಟ್ಟಿಗೆ ಪ್ರಯೋಜನಕಾರಿಯೆನ್ನುವುದನ್ನು ಕಾಲವೇ ಹೇಳಬೇಕಿದೆ. ಇಲ್ಲಿ ಈ ರೀತಿ ಪಕ್ಷ ಕಟ್ಟಲು ಹೊರಟು ಎಡವಿಬಿದ್ದ ಬಂಗಾರಪ್ಪ, ಯಡ್ಯೂರಪ್ಪ ಇನ್ನಿತರರನ್ನು ನೆನಪಿಸಿಕೊಳ್ಳಬಹುದು. ಆದರೆ ಬಳ್ಳಾರಿ ಮತ್ತು ಅದರ ಸುತ್ತಮುತ್ತ ಮತಗಳ ಭದ್ರಕೋಟೆಯನ್ನೇ ಹೊಂದಿರುವ ರೆಡ್ಡಿಗಳ ಬಳಗ ಒಂದಷ್ಟು ಸೀಟನ್ನು ಗೆದ್ದರೆ ಅಚ್ಚರಿಪಡುವಂತಹದ್ದೇನಿಲ್ಲ.

ಒಂದು ವೇಳೆ ರೆಡ್ಡಿಯವರು ಪಕ್ಷ ಕಟ್ಟುವುದು ನಿಜವೇ ಆದರೆ, ಈಗಾಗಲೇ ಭ್ರಷ್ಟಾಚಾರ ಮತ್ತು ಅಧಿಕಾರ ವಿರೋಧಿ ಅಲೆಯಲ್ಲಿ ಮುಳುಗಿರುವ ಬಿಜೆಪಿಗೆ ದೊಡ್ಡ ಹೊಡೆತ ನೀಡಲಿದೆಯೆನ್ನುವುದು ಪರಿಣಿತರ ಅಭಿಪ್ರಾಯ. ರಾಮುಲು ಅವರಂತಹ ಹಿಂದುಳಿದ ವರ್ಗದ ನಾಯಕ ಪಕ್ಷವನ್ನು ಬಿಟ್ಟರೆ ಅದರ ಪರಿಣಾಮ ತೀರಾ ನಗಣ್ಯವಾಗಿಯೇನೂ ಇರುವುದಿಲ್ಲ. ಕೇವಲ ಹಿಂದುತ್ವದ ಹೆಸರಿನಲ್ಲಿ ಇಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆನ್ನುವುದನ್ನು ತಿಳಿದಿರುವ ಬಿಜೆಪಿ ಈಗ ಕೆಂಪೇಗೌಡರ ಎತ್ತರದ ಮೂರ್ತಿ ನಿರ್ಮಿಸಿ, ಮೋದಿಯವರನ್ನು ಕರೆಯಿಸಿ ಅದನ್ನು ಅನಾವರಣ ಮಾಡಿಸುವ ಮೂಲಕ ಒಕ್ಕಲಿಗರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿದೆ. ಜೊತೆಗೆ ಅನಧಿಕೃತವಾಗಿ ಕರ್ನಾಟಕದಲ್ಲಿನ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಹುಮ್ಮಸ್ಸಿನಲ್ಲಿರುವಾಗಲೇ ಇಂತಹದ್ದೊಂದು ಸುದ್ದಿ ಈಗ ಹರಿದಾಡತೊಡಗಿದೆ.

ಅದೇನೇ ಇದ್ದರೂ ಅವರು ರಾಜಕೀಯದಲ್ಲಿ ಅಪ್ರಸ್ತುತರಾಗದಿರಲು ಏನಾದರೂ ಒಂದು ಹೊಸ ಹೆಜ್ಜೆಯನ್ನು ಇಡಲಿರುವುದಂತೂ ಖಚಿತ. ಆ ಹೆಜ್ಜೆ ಯಾವುದು ಎನ್ನುವುದನ್ನು ಬಹುಶಃ ಮುಂದಿನ ವಾರ ಅವರು ಕೊಪ್ಪಳದಲ್ಲಿ ನಡೆಸಲಿರುವ ಸಭೆಯಲ್ಲಿ ಬಹಿರಂಗಗೊಳಿಸಬಹುದೆನ್ನುವುದು ರಾಜಕೀಯ ಮೂಲಗಳ ಅಂಬೋಣ. ಜನಾರ್ಧನ ರೆಡ್ಡಿಯವರ ಎರಡನೇ ಇನ್ನಿಂಗ್ಸ್ ಸದ್ಯದಲ್ಲೇ ಚುನಾವಣೆ ಎದುರಿಸಲಿರುವ ಕರ್ನಾಟಕದ ರಾಜಕೀಯ ಆಗು-ಹೋಗುಗಳಿಗೆ ಹೊಸ ರಂಗನ್ನು ತುಂಬುವುದಂತೂ ಖಚಿತ.

Related Articles

ಇತ್ತೀಚಿನ ಸುದ್ದಿಗಳು