Wednesday, July 17, 2024

ಸತ್ಯ | ನ್ಯಾಯ |ಧರ್ಮ

7 ರಾಜ್ಯಗಳ ಉಪ ಚುನಾವಣೆ ಫಲಿತಾಂಶ: ಮುದುಡಿದ ಕಮಲ, ಇಂಡಿಯಾ ಒಕ್ಕೂಟಕ್ಕೆ ಭರ್ಜರಿ ಮುನ್ನಡೆ

ನವದೆಹಲಿ: ದೇಶದ ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇನ್ನೇನು ಅಂತಿಮಗೊಳ್ಳಲಿದ್ದು, ಈಗ ಮಧ್ಯಾಹ್ನ 3ರ ಸುಮಾರಿಗೆ ಈ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಕ್ಕಿದೆ. ಬಿಜೆಪಿ ಬಹುತೇಕ ಹಿಂದೆ ಉಳಿದಿದ್ದು ಬಹುತೇಕ ವಿಪಕ್ಷಗಳ ಮೈತ್ರಿ ಕೂಟ ‘ಇಂಡಿಯಾ’ ಒಕ್ಕೂಟ ಭರ್ಜರಿ ಸಾಧನೆ ಮಾಡಿದೆ.

ಸಧ್ಯ ಸುಮಾರಿಗೆ 13 ಸ್ಥಾನಗಳ ಪೈಕಿ ಕಾಂಗ್ರೆಸ್ 2ರಲ್ಲಿ ಗೆಲುವು ಸಾಧಿಸಿದರೆ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ 1ರಲ್ಲಿ ಗೆಲುವು ಸಾಧಿಸಿದ್ದಾರೆ. ಅದೇ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿರುವುದು ವರದಿಯಾಗಿದೆ. ಉಳಿದ 9 ಸ್ಥಾನಗಳ ಪೈಕಿ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಫಲಿತಾಂಶದ ಬಗ್ಗೆ ಎಎಪಿ ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ‘ಇಂದು ಜಲಂಧರ್ ಉಪಚುನಾವಣೆಯಲ್ಲಿ ಸುಮಾರು 38 ಸಾವಿರ ಮತಗಳಿಂದ ಗೆದ್ದಿದ್ದೇವೆ. ಪಂಜಾಬ್ ಜನತೆ ನಮ್ಮೊಂದಿಗಿದ್ದಾರೆ. ಇಡೀ ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲುತ್ತಿದೆ. ಸಾರ್ವಜನಿಕರು ಪೊಳ್ಳು ಭರವಸೆಗಳು ಮತ್ತು ಸುಳ್ಳುಗಳಿಂದ ಬೇಸತ್ತಿದ್ದಾರೆ ಎಂಬುದನ್ನು ಬಿಜೆಪಿ ಅರ್ಥಮಾಡಿಸಿದ್ದಾರೆ. ಅಗ್ನಿವೀರ್‌ನಂತಹ ಯೋಜನೆಗಳನ್ನು ನಿಲ್ಲಿಸುವ ಅಗತ್ಯವಿದ್ದು, ಬಿಜೆಪಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ 4 ಸ್ಥಾನಗಳಲ್ಲೂ ಟಿಎಂಸಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ರಾಯಗಂಜ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಕೃಷ್ಣ ಕಲ್ಯಾಣಿ ಬಿಜೆಪಿ ಅಭ್ಯರ್ಥಿಯನ್ನು 49536 ಮತಗಳಿಂದ ಸೋಲಿಸಿದ್ದಾರೆ. ರಣಘಟ್ಟ ದಕ್ಷಿಣದಲ್ಲಿ ಹಾಗೂ ಬಗ್ಡಾದಲ್ಲಿ ಟಿಎಂಸಿ ಅಭ್ಯರ್ಥಿ ಗೆದಿದ್ದಾರೆ. ಮಾಣಿಕ್ತಾಲಾ ಕ್ಷೇತ್ರದಲ್ಲೂ ಸಹ 11 ಸುತ್ತಿನ ಮತದಾನದ ನಂತರ, ಟಿಎಂಸಿ ಅಭ್ಯರ್ಥಿ ಸುಪ್ತಿ ಪಾಂಡೆ ಭರ್ಜರಿ ಜಯ ಗಳಿಸಿದ್ದಾರೆ.

ಹಿಮಾಚಲ ಪ್ರದೇಶ 

ಡೆಹ್ರಾದಲ್ಲಿ ಕಾಂಗ್ರೆಸ್ 25 ವರ್ಷಗಳ ನಂತರ ವಿಜಯ ಸಾಧಿಸಿದೆ. ಹಮೀರ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಿಶ್ ಶರ್ಮಾ 1433 ಮತಗಳಿಂದ ಜಯಗಳಿಸಿದ್ದಾರೆ. ನಲಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾವಾ ಹರ್ದೀಪ್ ಸಿಂಗ್ ಗೆಲುವು ದಾಖಲಿಸಿದ್ದಾರೆ.

ಉತ್ತರಾಖಂಡ

ಉತ್ತರಾಖಂಡದ ಬದರಿನಾಥ್ ಕ್ಷೇತ್ರದಲ್ಲಿ ಹಾಗೂ ಮಂಗಲೌರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖಾಜಿ ನಿಜಾಮುದ್ದೀನ್ ಗೆಲುವು ಸಾಧಿಸಿದ್ದಾರೆ. ಆದರೆ ಮರುಎಣಿಕೆ ಕೂಡ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ದರಿಂದ ಅಧಿಕೃತ ಘೋಷಣೆಯನ್ನು ಇನ್ನೂ ಮಾಡಲಾಗಿಲ್ಲ ಮತ್ತು ಪ್ರಮಾಣಪತ್ರವನ್ನು ಇನ್ನೂ ನೀಡಲಾಗಿಲ್ಲ.

ಬಿಹಾರ

ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ ಮುನ್ನಡೆ ಸಾಧಿಸಿರುವುದು ವಿಶೇಷ. ಜೆಡಿಯು ಅಭ್ಯರ್ಥಿ ಕಲಾಧರ್ ಪ್ರಸಾದ್ ಮಂಡಲ್ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಯು ತೊರೆದು ಆರ್ ಜೆಡಿ ಸೇರಿದ ಬಿಮಾ ಭಾರತಿ ಮೂರನೇ ಸ್ಥಾನದಲ್ಲಿದ್ದಾರೆ.

ಮಧ್ಯಪ್ರದೇಶ, ತಮಿಳುನಾಡು ಮತ್ತು ಪಂಜಾಬ್‌

ಅಮರವಾಡ – 15ನೇ ಸುತ್ತಿನ ನಂತರ ಕಾಂಗ್ರೆಸ್ ಅಭ್ಯರ್ಥಿ 4014 ಮತಗಳಿಂದ ಮುಂದಿದ್ದಾರೆ. ಇನ್ನು, ತಮಿಳುನಾಡಿನ ವಿಕ್ರವಾಂಡಿ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಅಣ್ಣಿಯುರ್ ಶಿವ 5564 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆರು ಸುತ್ತಿನ ಎಎಪಿ ಅಭ್ಯರ್ಥಿ ಮೊಹಿಂದರ್ ಭಗತ್ ಸುಮಾರು 13 ಸಾವಿರ ಮತಗಳಿಂದ ಜಯಗಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು