ಬೆಂಗಳೂರು: ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದೆ. ಈ ಹಿಂದೆ ಕುಟುಂಬ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಘೋಷಿಸಿದ್ದ ಸರ್ಕಾರ, ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಇನ್ನು ಮುಂದೆ ‘ಇಂದಿರಾ ಆಹಾರ ಕಿಟ್’ ವಿತರಿಸಲು ನಿರ್ಧರಿಸಿದೆ. ಈ ನಿರ್ಧಾರಕ್ಕೆ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇನ್ನು ಮುಂದೆ, ಕುಟುಂಬ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಜತೆಗೆ ಒಂದು ಆಹಾರ ಕಿಟ್ ಸಹ ಸಿಗಲಿದೆ.
ಕಿಟ್‌ನಲ್ಲಿ ಏನೆಲ್ಲಾ ಇರಲಿದೆ?
ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ಪರ್ಯಾಯವಾಗಿ ವಿತರಿಸಲಾಗುವ ಈ ಪೌಷ್ಟಿಕ ಆಹಾರ ಕಿಟ್‌ನಲ್ಲಿ ಈ ಕೆಳಗಿನ ವಸ್ತುಗಳು ಸೇರಿವೆ:
ತೊಗರಿಬೇಳೆ – 2 ಕೆ.ಜಿ
ಅಡುಗೆ ಎಣ್ಣೆ – 1 ಕೆ.ಜಿ
ಸಕ್ಕರೆ – 1 ಕೆ.ಜಿ
ಉಪ್ಪು – 1 ಕೆ.ಜಿ
ಈ ಕುರಿತು ಮಾಹಿತಿ ನೀಡಿದ ಸಚಿವ ಹೆಚ್.ಕೆ. ಪಾಟೀಲ್ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಈ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ. ಈ ಕಿಟ್‌ಗಳ ವಿತರಣೆಗೆ 61.19 ಕೋಟಿ ರೂಪಾಯಿಗಳ ವೆಚ್ಚವಾಗಲಿದೆ ಎಂದು ತಿಳಿಸಿದರು.
ಈ ಹಿಂದೆ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿತ್ತು. ಈಗ ಹಣದ ಬದಲಿಗೆ ಕಿಟ್ ನೀಡಲಾಗುತ್ತದೆ. ಅಕ್ಕಿಯ ದುರ್ಬಳಕೆಯನ್ನು ತಡೆಯುವುದು ಕೂಡ ಈ ಹೊಸ ನಿರ್ಧಾರದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.