Saturday, October 11, 2025

ಸತ್ಯ | ನ್ಯಾಯ |ಧರ್ಮ

ಮಂತ್ರಿಮಂಡಲ ಪುನರ್‌ರಚನೆ ಸಹಜ ಪ್ರಕ್ರಿಯೆ: ಸಚಿವ ಸಂತೋಷ್‌ ಲಾಡ್‌

ಉಡುಪಿ: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್‌ರಚನೆಯು ಸಹಜ ಪ್ರಕ್ರಿಯೆಯಾಗಿದೆ. ಯಾವಾಗ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಹೈಕಮಾಂಡ್‌, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಯವರು ತೀರ್ಮಾನಿಸುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಶುಕ್ರವಾರ ಅಭಿಪ್ರಾಯಪಟ್ಟಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅಥವಾ ಸಚಿವರು ಔತಣಕೂಟ ನೀಡುವುದು ಹೊಸತಲ್ಲ; ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಲಾಗಿದೆ. ಅಲ್ಲಿ ವೈಯಕ್ತಿಕವಾಗಿ ಕೆಲವು ವಿಷಯಗಳ ಬಗ್ಗೆ ಮಾತನಾಡುವುದು ಸಹಜ ಎಂದರು.

ಗಣತಿ ವಿರೋಧ ಸರಿಯಲ್ಲ

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ (ಜಾತಿ ಗಣತಿ) ಶೇಕಡಾ 80 ರಷ್ಟು ಪೂರ್ಣಗೊಂಡಿದೆ. ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷೆ ಉತ್ತಮವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮೀಕ್ಷೆಯ ಮೂಲಕ ಸಮಾಜವನ್ನು ಒಡೆದಿಲ್ಲ. ರಾಜ್ಯ ಸರ್ಕಾರದ ಈ ಸಮೀಕ್ಷೆಯನ್ನು ವಿರೋಧಿಸುವುದು ಸರಿಯಲ್ಲ ಎಂದು ಹೇಳಿದ ಅವರು, ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿದಾಗ ಯಾರಾದರೂ ಪ್ರತಿಭಟಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಬಿಜೆಪಿ ವಿರುದ್ಧ ಭ್ರಷ್ಟಾಚಾರದ ವ್ಯಂಗ್ಯ

ಭ್ರಷ್ಟಾಚಾರದ ವಿಷಯವಾಗಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಲಾಡ್‌, ಮಹಾರಾಷ್ಟ್ರದಲ್ಲಿ ಅಜಿತ್‌ ಪವಾರ್‌ ಅವರ ಮೇಲೆ ₹60 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪ ಇತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಮೇಲೂ ಆರೋಪ ಇತ್ತು. ಇಬ್ಬರೂ ಬಿಜೆಪಿಗೆ ಸೇರಿದರು. ಇಡೀ ಮಹಾರಾಷ್ಟ್ರ ಚುನಾವಣೆಗೆ ಅಜಿತ್‌ ಪವಾರ್‌ ಹಣ ಕೊಟ್ಟಿದ್ದಾರೆ. ಭ್ರಷ್ಟ ರಾಜಕಾರಣಿಗಳು ಬಿಜೆಪಿಗೆ ಬಂದರೆ ‘ಸರಿ’ ಆಗುತ್ತಾರೆ. ಈ ರೀತಿ 25 ರಾಜಕಾರಣಿಗಳನ್ನು ಬಿಜೆಪಿ ತನ್ನತ್ತ ಸೆಳೆದಿದೆ. ಆದರೆ, ಬಿಜೆಪಿ ಮಾತ್ರ ಭ್ರಷ್ಟಾಚಾರ ಮಾಡಿಲ್ಲ ಎಂದು ವ್ಯಂಗ್ಯವಾಡಿದರು.

ಭ್ರಷ್ಟಾಚಾರ ಶ್ರೇಯಾಂಕದಲ್ಲಿ ದೇಶ ಯಾವ ಸ್ಥಾನದಲ್ಲಿದೆ? ಹಂಗರ್‌ ಇಂಡೆಕ್ಸ್‌ (ಹಸಿವಿನ ಸೂಚ್ಯಂಕ), ಪವರ್ಟಿ ಇಂಡೆಕ್ಸ್‌ (ಬಡತನ ಸೂಚ್ಯಂಕ), ಫ್ರೀಡಂ ಆಫ್‌ ಸ್ಪೀಚ್‌ (ವಾಕ್ ಸ್ವಾತಂತ್ರ್ಯ), ಜಿಡಿಪಿ, ಪಾಸ್‌ಪೋರ್ಟ್‌ ಶ್ರೇಯಾಂಕದಲ್ಲಿ ದೇಶ ಎಲ್ಲಿದೆ ನೋಡಿದ್ದೀರಾ ಎಂದು ಅವರು ಪ್ರಶ್ನಿಸಿದರು.

ಮಹಿಳೆಯರಿಗೆ ಮುಟ್ಟಿನ ರಜೆಯ ಅನುಕೂಲ

ಮಹಿಳೆಯರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ (Menstrual Leave) ನೀಡುವ ಸರ್ಕಾರದ ತೀರ್ಮಾನವು ಪ್ರಗತಿಪರವಾಗಿದೆ. ಇದು ಮಧ್ಯಮ, ಬಡ ಮಧ್ಯಮ ವರ್ಗದ ಮಹಿಳೆಯರಿಗೆ, ಗಾರ್ಮೆಂಟ್‌ ಇಂಡಸ್ಟ್ರಿ ಸೇರಿದಂತೆ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಸಚಿವ ಸಂತೋಷ್‌ ಲಾಡ್‌ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page