ಬಳ್ಳಾರಿ,ಆ.20: ಜಿಲ್ಲೆಯ ರೈತ ಬಾಂಧವರು, ಗದ್ದೆ ಭೂಮಿಗಳನ್ನು ಹದಗೊಳಿಸಲು ಬಳಸುವಂತಹ ಕೇಜ್ ವೀಲ್ಹ್ ಟ್ರ್ಯಾಕ್ಟರ್‌ಗಳನ್ನು ರಸ್ತೆ ಮೇಲೆ ಚಲಾಯಿಸಬಾರದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಹಾಗೂ ಅಚ್ಚುಕಟ್ಟು ವ್ಯಾಪ್ತಿಯ ನೀರಾವರಿ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಭತ್ತದ ನಾಟಿ ಕಾರ್ಯವು ಭರದಿಂದ ಸಾಗಿದೆ. ರೈತರು ಭೂಮಿ ಸಿದ್ಧತೆಗಾಗಿ ವಿವಿಧ ಟ್ರ್ಯಾಕ್ಟರ್ ಚಾಲಿತ ಉಪಕರಣಗಳನ್ನು ಬಳಸುತ್ತಿದ್ದು, ಭತ್ತದ ಬೆಳೆಯ ನಾಟಿ ಪೂರ್ವದಲ್ಲಿ ಭೂಮಿ ಸಿದ್ಧತೆಗೆ ಗದ್ದೆಯನ್ನು ಕೆಸರು (ಪಡ್ಲಿಂಗ್) ಮಾಡುವ ಕಾರ್ಯದಲ್ಲಿ ಮುಖ್ಯವಾಗಿ ಕೇಜ್ ವೀಲ್ಹ್ಗಳನ್ನು ಬಳಸುವುದು ರೂಢಿಯಲ್ಲಿದೆ.
ಟ್ರಾö್ಯಕ್ಟರ್‌ನ ಟೈರ್ ವೀಲ್ಹ್ಗಳ ಬದಲಿಗೆ ಕಬ್ಬಿಣದಿಂದ ತಯಾರಾದ ಕೇಜ್ ವೀಲ್ಹ್ಗಳನ್ನು ಗದ್ದೆಗೆ ಇಳಿಸಿ ಸಮತಟ್ಟು ಮಾಡಿ ನಾಟಿಗೆ ಸಿದ್ಧಗೊಳಿಸುತ್ತಾರೆ. ಆದರೆ ಟ್ರಾö್ಯಕ್ಟರ್‌ನಲ್ಲಿ ಉಳುಮೆಗಾಗಿ ಮನೆಯಿಂದ ಹೊಲಕ್ಕೆ ಹೋಗಿ, ಉಳುಮೆಯ ನಂತರ ರೈತರು ಟ್ರ್ಯಾಕ್ಟರ್‌ನ ಕೇಜ್ ವ್ಹೀಲ್‌ಗಳನ್ನು ಬದಲಿಸದೇ ಹಾಗೆಯೇ ರಸ್ತೆ ಮೇಲೆ ಚಲಾಯಿಸುತ್ತಿರುವುದು ಕಂಡುಬರುತ್ತಿದೆ.
ಟ್ರಾö್ಯಕ್ಟರ್ ಭಾರ ಹಾಗೂ ಮೊನಚಾದ ಅಂಚುಗಳಿರುವ ಕೇಜ್ ವೀಲ್ಹ್ಗಳು ಡಾಂಬರೀಕರಿಸಿದ ರಸ್ತೆ ಮೇಲೆ ಚಲಿಸುವುದರಿಂದ ರಸ್ತೆಗೆ ಆಳವಾದ ಮಾರ್ಕ್ ಬೀಳುವುದರ ಜೊತೆಗೆ ರಸ್ತೆ ಕಿತ್ತು ಹಾಳಾಗುತ್ತದೆ. ಇದರಿಂದ ಸಾರ್ವಜನಿಕ ಆಸ್ತಿಯಾದ ರಸ್ತೆಗಳು ಹಾಳಾಗಿ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ಅಪಘಾತಗಳಾಗುವ ಸಂಭವವಿರುತ್ತದೆ.
ಹೀಗಾಗಿ ರೈತ ಬಾಂಧವರು ಸಾರ್ವಜನಿಕ ರಸ್ತೆಗಳ ಬಾಳಿಕೆಯ ದೃಷ್ಟಿಯಿಂದ ಯಾರು ಕೂಡ ಕೇಜ್ ವೀಲ್ಹ್ಗಳು ಹಾಗೂ ಇತರೇ ಅಂತಹ ದೊಡ್ಡ ಗಾತ್ರದ ಉಪಕರಣಗಳ ವಾಹನಗಳನ್ನು ಡಾಂಬರೀಕರಿಸಿದ ರಸ್ತೆ ಮೇಲೆ ಚಲಾಯಿಸಬಾರದು ಮತ್ತು ಮನೆಯಿಂದ ಹೊಲಕ್ಕೆ ಹೋಗುವಾಗ ಕೇಜ್ ವೀಲ್ಹ್ಗಳನ್ನು ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿ ಹೊಲಕ್ಕೆ ತೆಗೆದುಕೊಂಡು ಹೋಗಿ ಉಳುಮೆಯ ನಂತರ ಟ್ರ್ಯಾಕ್ಟರ್ ಟ್ರ್ಯಾಲಿಗಳಲ್ಲಿಯೇ ಮನೆಗೆ ಸಾಗಿಸಬೇಕು.
ಒಂದು ವೇಳೆ ಇಂತಹ ಚಟುವಟಿಕೆಗಳಿಂದ ರಸ್ತೆ ಹಾಳಾಗುವುದು ಕಂಡುಬಂದರೆ ಸಂಬಂಧಿಸಿದವರ ಮೇಲೆ ಲೋಕೋಪಯೋಗಿ ಇಲಾಖೆ ಮೂಲಕ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.