ಇಂದಿನಿಂದ ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ವಿಧಾನಸಭೆಯಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣದ ನಂತರ ಮಾರ್ಚ್ 4 ರಿಂದ 6 ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.
ನಂತರ ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಅಲ್ಲಿಂದ ಮಾರ್ಚ್ 21 ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ.
ವಿವಿಧ ವಿಧೇಯಕಗಳ ಬಗ್ಗೆ ಸರ್ಕಾರದ ಧೋರಣೆ ಖಂಡಿಸಿ ಈಗಾಗಲೇ ಪತ್ರ ಬರೆದಿರುವ ರಾಜ್ಯಪಾಲರು ಅಧಿವೇಶನದಲ್ಲಿ ಸರ್ಕಾರದ ಬಗ್ಗೆ ಯಾವ ರೀತಿ ಮಾತನಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಅಧಿವೇಶನದಲ್ಲಿ ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ, ಕೆಪಿಎಸ್ಸಿ ಹಗರಣ, ಬಸ್, ಮೆಟ್ರೋ ದರ ಏರಿಕೆ, ವಿವಿ ಮುಚ್ಚುವ ನಿರ್ಧಾರ, ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ವಿವಿಧ ಯೋಜನೆಗಳಿಗೆ ಕೇಂದ್ರ ಅಂಗೀಕಾರ ನೀಡದಿರುವುದು ಸೇರಿ ಹತ್ತು ಹಲವು ವಿಷಯಗಳು ಉಭಯ ಸದನಗಳಲ್ಲಿ ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.