Monday, August 19, 2024

ಸತ್ಯ | ನ್ಯಾಯ |ಧರ್ಮ

ಮಲೆನಾಡಿನಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿರುವ ಒತ್ತುವರಿ ತೆರವು ವಿರೋಧಿ ಹೋರಾಟ; ಇಂದು ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ

ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆಯ ಒತ್ತುವರಿ ತೆರವು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇನ್ನು ಕೆಲವೇ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಮಲೆನಾಡು ಭಾಗದ ರೈತ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ಶನಿವಾರದ ದಿನ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದಾದ್ಯಂತ ನಡೆದ ಬೃಹತ್ ಪ್ರತಿಭಟನೆ ನಂತರ ಇಂದು ರೈತ ಮತ್ತು ಕಾರ್ಮಿಕ ಸಂಘಟನೆಗಳು ತೀರ್ಥಹಳ್ಳಿಯಲ್ಲಿ ದೊಡ್ಡ ಪ್ರಮಾಣದ ಬಂದ್ ಮತ್ತು ಪ್ರತಿಭಟನೆಗೆ ಸಜ್ಜುಗೊಂಡಿವೆ.

ಆ.19ರಿಂದ ತೀರ್ಥಹಳ್ಳಿಯ ಬಾಳೇಬೈಲಿನ ಎ.ಪಿ.ಎಂ.ಸಿ. ಇಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ತಾಲ್ಲೂಕು ಕಛೇರಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಾವಿರಾರು ಮಂದಿ ರೈತರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

ರೈತರ ಬೃಹತ್ ಪ್ರತಿಭಟನೆ ರೈತರು ಹೇಳಿದ್ದೇನು?
ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಅಂದರೆ ಮಳೆನಾಡಿನಲ್ಲಿ ನಮ್ಮ ಕಾಲಘಟ್ಟದಲ್ಲಿ ಹಿಂದೆಂದಿಗೂ ಕಂಡು ಕೇಳರಿಯದಂತಹ ಈ ಮಳೆಗಾಲದಲ್ಲಿ ಅತ್ಯಂತ ಭೀಕರ ಅನಾಹುತಗಳು ಸೃಷ್ಟಿಯಾಗುತ್ತಿವೆ. ಬಿರುಗಾಳಿ, ಮೇಘ ಸ್ಫೋಟ, ಭೂ ಕುಸಿತ, ಪ್ರವಾಹ ಇತ್ಯಾದಿ ನೈಸರ್ಗಿಕ ಆಪತ್ತುಗಳು ಸಹಜ ಮಾನ್ಸೂನ್ ಮಾರುತುಗಳಿಂದ ಉಂಟಾಗುವುದು ಅಪರೂಪದ ವಿದ್ಯಮಾನ: ಆದರೆ ಇತ್ತೀಚಿನ ಹವಾಮಾನ ವೈಪರೀತ್ಯಗಳು, ಜಾಗತಿಕ ತಾಪಮಾನ ಹೆಚ್ಚಳ ಮುಂತಾದ ವಿದ್ಯಮಾನಗಳು ಇನ್ನು ಮುಂದೆ ಹೀಗೆಯೆ ಮಳೆ ಮಾರುತಗಳಲ್ಲಿ ಅನಾಹುತಕಾರಿ ಬದಲಾವಣೆಗೆ ಕಾರಣ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೆ ರೈತರ ಒತ್ತುವರಿ ಸಾಗುವಳಿ ಕಾರಣ ಎಂದು ಹೇಳುವವರು ಅವಿವೇಕಿಗಳು. ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣಗಳಾದ ನಗರೀಕರಣ, ಕೈಗಾರಿಕೀಕರಣ, ಯುದ್ಧಗಳು ಜೊತೆಗೆ ಅರಣ್ಯ ಇಲಾಖೆಯೇ ಅರಣ್ಯ ನಾಶ ಮಾಡಿ ಅಕೇಶಿಯಾದಂತಹ ನೆಡುತೋಪುಗಳ ಮೂಲಕ ಮಾಡಿದ ಬೃಹತ್ ಪ್ರಮಾಣದ ಒತ್ತುವರಿಯೂ ಕಾರಣವಾಗಿದೆ.

ಆದರೆ ಈ ಹಿನ್ನೆಲೆಯಲ್ಲಿ ಮಲೆನಾಡಿನ ಕೃಷಿಕರು ಇದಕ್ಕೆಲ್ಲ ಕಾರಣ ಎಂದು ಬಿಂಬಿಸುವ ಪಡಪೋಸಿ ಹೀನ ಮನಸ್ಥಿತಿಯ ಜಾಗತಿಕ ರಾಜಕಾರಣಕ್ಕೆ ನಮ್ಮ ವಿರೋಧ ಯಾವ ಮಟ್ಟಕ್ಕಾದರೂ ಸರಿಯೇ ವಿರೋಧಿಸಿ ಜಯಿಸುತ್ತೇವೆ; ಸಂಬಂಧಪಟ್ಟವರೇ ಎಚ್ಚರ. ಪಶ್ಚಿಮ ಘಟ್ಟವನ್ನು no man’s land (ಜನ ವಸತಿ ರಹಿತ) ಮಾಡಬೇಕೆಂಬ ಅಂತರರಾಷ್ಟ್ರೀಯ ಪಿತೂರಿ ಬಹಳ ದಶಕಗಳಿಂದ ನಡೆಯುತ್ತಿದೆ ಎನ್ನುವುದು ನಮಗೆ ಗೊತ್ತಿದೆ.

ಅರಣ್ಯ ಇಲಾಖೆಯವರೇ ರೈತರ ಬ್ಯಾಣ, ಹಾಡ್ಯ, ಗೋಮಾಳ, ಸೊಪ್ಪಿನ ಬೆಟ್ಟ, ಕಾನು, ಕುಮ್ಮಿ, ಜಮೀನು ತಲಕಟ್ಟು, ಒಳಕಡೆ ಭೂಮಿಗಳನ್ನು ಅರಣ್ಯ ನೋಟಿಫಿಕೇಶನ್ ಹೆಸರಲ್ಲಿ ಒತ್ತುವರಿ ಮಾಡಿದ್ದಾರೆ. ಇಂತಹ ಒತ್ತುವರಿ ಭೂಮಿಯಲ್ಲಿಯೇ ಅರಣ್ಯ ಇಲಾಖೆ ಮತ್ತೊಂದು ಬೃಹತ್ ಒತ್ತುವರಿ ಮಾಡಿಕೊಂಡು ಬರುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ಅಕೇಶಿಯ, ಸಾಗುವಾನಿಯಂತಹ ನೆಡುತೋಪುಗಳು, ಅರಣ್ಯ ಇಲಾಖೆ ಈ ನೆಡುತೋಪುಗಳನ್ನು ಮಾಡಲು ಶುರುವಿಟ್ಟುಕೊಂಡಾಗ ರೈತರು ತಮ್ಮ ಮನೆ ಮತ್ತು ಖಾತೆ ಭೂಮಿ ಆಜು ಬಾಜು ಜಾಗ ಉಳಿಸಿಕೊಳ್ಳಲು ಸಾಗುವಳಿ ತಂತ್ರಕ್ಕೆ ಮೊರೆ ಹೋಗಿದ್ದಾರೆಯೇ ಹೊರತು ಭೂ ಕಬಳಿಕೆಗಾಗಿ ಅಲ್ಲವೆಂದು ನಾಲ್ಕೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ರೈತರಿಗಾಗಿ ಮತ್ತು ಪರಿಸರಕ್ಕಾಗಿ ಹೋರಾಟ ಮಾಡಿಕೊಂಡು ಬಂದಿರುವ ರೈತರಿಗೆ ಸ್ಪಷ್ಟ ಅರಿವಿದೆ. ಹೀಗಾಗಿ ಒತ್ತುವರಿ ತೆರವಿಗೆ ಮುಂದಾದರೆ ಇಲಾಖೆಗಳ ಹಾಗೂ ಸರ್ಕಾರಗಳ ವಿರುದ್ಧದ ಹೋರಾಟ ಅನಿವಾರ್ಯ ಮತ್ತು ಕಠಿಣವಾಗಿರುತ್ತದೆ ಎಂದು ಆರೋಪಿಸಲಾಗಿದೆ.

ಯಾವ ಸಂಘ ಸಂಸ್ಥೆಗಳ ಬೆಂಬಲ?
– ಸಮಾನ ಮನಸ್ಕ ವೇದಿಕೆ ಸಂಘಟನೆಗಳ ಒಕ್ಕೂಟ
– ಸರ್ವ ಪಕ್ಷಗಳ ಬೆಂಬಲ
– ರೈತ ಸಂಘ, ತೀರ್ಥಹಳ್ಳಿ
– ದಲಿತ ಸಂಘರ್ಷ ಕ್ರಿಯಾ ಸಮಿತಿ
– ಕರ್ನಾಟಕ ರಕ್ಷಣಾ ವೇದಿಕೆ
– ಮಲೆನಾಡು ನವ ನಿರ್ಮಾಣ ಸೇನೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page