Home ಜನ-ಗಣ-ಮನ ಧರ್ಮ- ಸಂಸ್ಕೃತಿ ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೋರಾಟಗಾರರ ಆಕ್ರೋಶ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕರೆ

ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಹೋರಾಟಗಾರರ ಆಕ್ರೋಶ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಕರೆ

0

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದಶಕಗಳ ಕಾಲ ಹೋರಾಟ ನಡೆಸುತ್ತಿರುವ ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೆ ಭರವಸೆ ಮೂಡಿದ್ದರೂ, ಕಾಂಗ್ರೆಸ್ ನೇತೃತ್ವದ ಸರ್ಕಾರ ಕಳೆದ ಎರಡು ವರ್ಷಗಳಿಂದ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಕ್ಕದ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶಗಳು ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿದ ಹೋರಾಟಗಾರರು, ಕರ್ನಾಟಕ ಸರ್ಕಾರ ಮಾತ್ರ ಸಾಮಾಜಿಕ ನ್ಯಾಯವನ್ನು ನಿರಾಕರಿಸುತ್ತಿದೆ ಎಂದು ಟೀಕಿಸಿದ್ದಾರೆ.

ಮಾರ್ಚ್ 27ರಂದು ಒಳಮೀಸಲಾತಿ ಕುರಿತು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದ್ದರೂ, ಉಪಚುನಾವಣೆ ನೆಪ ಮುಂದಿಟ್ಟುಕೊಂಡು ಸಭೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿರುವುದು ಹೋರಾಟಗಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಹೋರಾಟಗಾರರ ಅಭಿಪ್ರಾಯಗಳನ್ನು ಪಡೆಯದೆ ಈ ನಿರ್ಧಾರ ಕೈಗೊಂಡಿರುವುದು “ದೊಡ್ಡ ದ್ರೋಹ” ಎಂದು ಖಂಡಿಸಲಾಗಿದೆ.

ಇದೇ ವೇಳೆ ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೋರಾಟಗಾರರು ಘೋಷಿಸಿದ್ದಾರೆ. ಕಳೆದ 35 ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಕ್ಕೆ ಬೆಂಬಲ ನೀಡಿದ ಜನರು ಈ ನಿಲುವಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಒಳಮೀಸಲಾತಿ ಜಾರಿಗೆ ಮುನ್ನ ಸರ್ಕಾರ 56,432 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಆಗ್ರಹಿಸಲಾಗಿದೆ.

ಸಾಮಾಜಿಕ ನ್ಯಾಯವನ್ನು ನಿರಾಕರಿಸಿರುವ ಸರ್ಕಾರಕ್ಕೆ ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸುವ ನೈತಿಕ ಹಕ್ಕಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ. ಸರ್ಕಾರ ಈ ಆಚರಣೆಗಳಿಗೆ ಮುಂದಾದರೆ ವಿಧಾನಸೌಧ ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ದಾವಣಗೆರೆ ಉಪಚುನಾವಣೆಗೆ ಸಂಬಂಧಿಸಿದ ಕಾರ್ಯತಂತ್ರ ರೂಪಿಸಲು ರಾಜ್ಯ ಸಮಿತಿ ಸಭೆಯನ್ನು ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಈ ಹೇಳಿಕೆಗೆ ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್‌, ಬಸವರಾಜ್‌ ಕೌತಾಳ್‌, ನರಸಪ್ಪ ದಂಡೋರ, ಬಿ. ಆರ್‌ ಭಾಸ್ಕರ್‌ ಪ್ರಸಾದ್‌, ಕರಿಯಪ್ಪ ಗುಡಿಮನಿ, ಎಂ ಗುರುಮೂರ್ತಿ, ಬಿ.ಪಿ ಪ್ರಕಾಶ್‌ ಮೂರ್ತಿ, ಆರ್‌ ಮುನಿಯಪ್ಪ, ಪಿ. ಮೂರ್ತಿ, ವೈ. ಸಿ ಕಾಂಬ್ಳೆ, ಚಾವಡಿ ಲೋಕೇಶ್‌ ಸೇರಿದಂತೆ ಹಲವು ಹೋರಾಟಗಾರರು ಸಹಿ ಹಾಕಿದ್ದಾರೆ.

You cannot copy content of this page

Exit mobile version