ಗುಬ್ಬಚ್ಚಿಯ ನೀತಿ ಕತೆಯೊಂದನ್ನು ಹೇಳುತ್ತಾ ಪರಿಸರ ನಾಶವನ್ನ ನಿಲ್ಲಿಸಿ ಅದನ್ನು ಉಳಿಸಿ ಕೊಳ್ಳುವ ಕೆಲಸಕ್ಕೆ ಮುಂದಾಗದೆ ಇದ್ದರೆ ಆ ಗುಬ್ಬಚ್ಚಿಯಂತೆ ಆಸರೆ, ಆಹಾರ ಇಲ್ಲದೆ ಅಲೆದಲೆದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ ಎಂಬುದನ್ನು ನೆನಪಿಸಿದ್ದಾರೆ ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿ ಮುರುಳಿಮೋಹನ.ಆರ್
ಒಂದು ಗುಬ್ಬಚ್ಚಿಯು ಬೃಹತ್ ನಗರದ ಮರ ಒಂದರಲ್ಲಿ ತನ್ನ ವಾಸ್ತವ್ಯವನ್ನು ಹೂಡಿತ್ತು. ಕಾಲ ಕಳೆದಂತೆ ಆ ಗುಬ್ಬಚ್ಚಿ ಕೆಲವು ಮರಿಗಳಿಗೆ ಜನ್ಮ ನೀಡಿತ್ತು. ಆಹಾರಕ್ಕಾಗಿ ಹಾತೊರೆಯುವಂತಹ ಕಾಲವದು. ತಾಯಿ ಗುಬ್ಬಚ್ಚಿಯು ತನ್ನ ಮಕ್ಕಳನ್ನು ಸಂರಕ್ಷಿಸಲೆಂದು ಅನೇಕ ಕಡೆ ಆಹಾರ ಹುಡುಕುತ್ತಾ ತನ್ನ ಪಯಣ ಬೆಳೆಸಿ ಒಂದಿಷ್ಟು ಆಹಾರವನ್ನು ಸಂಗ್ರಹಿಸಿ ತಂದಿತು. ಅಷ್ಟರಲ್ಲಿ ಆ ಮರಿಗಳಲ್ಲಿ ಕೆಲವು ಮರಿಗಳು ಪ್ರಾಣ ಬಿಟ್ಟಿದ್ದವು. ಕೇವಲ ಒಂದು ಮರಿ ಮಾತ್ರ ಜೀವಂತವಾಗಿತ್ತು. ತಾಯಿ ಗುಬ್ಬಚ್ಚಿಯು ತಂದಂತಹ ಆಹಾರವನ್ನು ಆ ಮರಿಗೆ ನೀಡಿ ತನ್ನ ಆಹಾರಕ್ಕಾಗಿ ಮತ್ತೆ ಚೀರ ತೊಡಗಿತು.
ಅಲ್ಲೇ ಅದೇ ಮರದ ಕೆಳಗೆ ನಿಂತಿದ್ದಂತಹ ವ್ಯಕ್ತಿಗೆ ಗುಬ್ಬಚ್ಚಿಯ ಕೂಗು ಕೇಳಲಿಲ್ಲ. ಪಕ್ಷಿಯ ಭಾಷೆ ಮಾನವನಿಗೆ ಅರ್ಥವಾದೀತೇ…? ಎಷ್ಟೇ ಅದು ಚೀರಿದರೂ ಗುಬ್ಬಚ್ಚಿಯ ಕಡೆ ಗಮನ ಕೊಡದೆ ಅಲ್ಲಿಂದ ಮನುಷ್ಯ ಹೊರಟು ಹೋದನು. ಮತ್ತು ಅದೇ ಮರದ ಕೆಳಗೆ ಮತ್ತೊಬ್ಬ ಮನುಷ್ಯನ ಆಗಮನವಾಯಿತು. ಆತನು ತನ್ನ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಯಾರೊಂದಿಗೋ ಸಂಭಾಷಣೆ ಮಾಡುತ್ತಿರುವುದನ್ನು ಗುಬ್ಬಚ್ಚಿಯು ಕಂಡಿತು. ಚೀರಿ ಚೀರಿ ಮೊಬೈಲ್ ಬಳಸಬೇಡಿ ನಾನು ಸಾಯುತ್ತೇನೆ ಎಂದು ತನ್ನ ಅಳಲನ್ನು ತೋಡಿಕೊಂಡರೂ ಆ ವ್ಯಕ್ತಿಗೆ ಅದು ಅರ್ಥವಾಗದಂತಹ ಪರಿಸ್ಥಿತಿ. ಅಷ್ಟರಲ್ಲಿ ಅಲ್ಲಿಗೆ ಧಿಡೀರನೆ ಮತ್ತೊಬ್ಬ ವ್ಯಕ್ತಿಯು ಕೈಯಲ್ಲಿ ಗರಗಸವನ್ನು ಹಿಡಿದುಕೊಂಡು ಬಂದು ನಿಂತನು.
ಆ ಗರಗಸ ಹಿಡಿದ ವ್ಯಕ್ತಿಯು ನೋಡ ನೋಡುತ್ತಲೇ ಮರವನ್ನು ಕುಯ್ಯಲು ಬುಡಕ್ಕೆ ಕೈ ಹಾಕಿದ. ಬೃಹತ್ ನಗರದಲ್ಲಿ ರಸ್ತೆಯನ್ನು ಅಗಲೀಕರಣ ಮಾಡುವ ಕೆಲಸ ನಡೆಯುತ್ತಿತ್ತು. ʼಕತ್ತರಿಸಬೇಡಿ. ನಾನು ಈ ಮರದಲ್ಲಿ ವಾಸ ಮಾಡುತ್ತಿದ್ದೇನೆʼ ಎಂದು ಗುಬ್ಬಚ್ಚಿಯು ಚೀರಿ ಚೀರಿ ಹೇಳಿದರೂ ಯಾರಿಗೂ ಅರ್ಥವಾಗದೆ ನೋಡ ನೋಡುತ್ತಲೇ ಮರ ಧರೆಗುರುಳಿತು. ಗುಬ್ಬಚ್ಚಿಯ ಮಗುವೂ ಜತೆಗುರುಳಿತು. ಅಲ್ಲೇ ನಿಂತಿದ್ದ ವ್ಯಕ್ತಿಯು ತನ್ನ ಪಾಡಿಗೆ ಆ ಮರಿಯ ಮೇಲೆ ಕಾಲಿಟ್ಟ. ತನ್ನ ಎಲ್ಲಾ ಮರಿಗಳ ಸಾವಿನಿಂದ ಕಂಗೆಟ್ಟ ಗುಬ್ಬಚ್ಚಿಯು ನನಗೆ ಈ ನಗರದ ಸಹವಾಸವೇ ಬೇಡ, ಎಲ್ಲಾದರೂ ದೂರದ ಸಮೃದ್ಧ ಪ್ರದೇಶಕ್ಕೆ ವಲಸೆ ಹೋಗೋಣ ಎಂದು ನಿರ್ಧರಿಸಿ ತನ್ನ ಪಯಣ ಬೆಳೆಸಿತು.
ಎಲ್ಲಿ ನೋಡಿದರೂ ಬರಗಾಲ. ನೀರಿಗೆ ಹಾಹಾಕಾರ. ಪಯಣ ಬೆಳೆಸುತ್ತಾ ಗುಬ್ಬಚ್ಚಿಯು ದಣಿದಿತ್ತು. ಒಂದೆಡೆ ಅದರ ಕಣ್ಣಿಗೆ ಹಚ್ಚ ಹಸಿರಾದ ಪ್ರದೇಶ ಹಾಗೂ ಝಳ ಝಳನೆ ಪ್ರಶಾಂತವಾಗಿ ಹರಿಯುತ್ತಿರುವ ನೀರು ಕಣ್ಣಿಗೆ ಬಿದ್ದಿತು. ನೀರನ್ನು ಕಂಡಂತಹ ಗುಬ್ಬಚ್ಚಿ ಒಮ್ಮೆಲೇ ತನ್ನ ಎಲ್ಲಾ ದುಃಖವನ್ನು ಮರೆತು ಖುಷಿಯಿಂದ ನೀರಿಗೆ ಜಿಗಿದು ಕುಣಿದು ಕುಪ್ಪಳಿಸುತ್ತಾ ಒಂದೆರಡು ಹನಿ ನೀರನ್ನು ಕುಡಿಯಿತು. ಯಾಕೋ ತಲೆ ಸುತ್ತುತ್ತಾ ಇದೆ ಎಂದು ನೋಡಿದರೆ ಅಲ್ಲಿಯೇ ಪಕ್ಕದಲ್ಲಿ ರೈತನೊಬ್ಬ ತನ್ನ ಗದ್ದೆಗೆ ಕ್ರಿಮಿನಾಶಕವನ್ನು ಸಿಂಪಡಿಸಿ ಉಳಿದಂತಹ ಕ್ರಿಮಿನಾಶಕವನ್ನು ಅಲ್ಲಿಯೇ ಹರಿಯುತ್ತಿದ್ದಂತಹ ನೀರಿಗೆ ಸುರಿದಿದ್ದ. ಇದನ್ನು ಕುಡಿದಿದ್ದಕ್ಕೆ ನನಗೆ ಈ ಪರಿಸ್ಥಿತಿ ಬಂತು ಎಂದು ತಿಳಿದು ಆ ಗುಬ್ಬಚ್ಚಿಯು ಅಲ್ಲಿಯೂ ನೆಲೆಯೂರಲಾರದೆ ತನ್ನ ಪ್ರಾಣವನ್ನು ಕಳೆದುಕೊಂಡಿತು.
ಬುದ್ಧಿವಂತ ಎಂದು ಹೇಳುವ ಮನುಷ್ಯನ ದುರಾಸೆಯಿಂದ ಕೇವಲ ಗುಬ್ಬಚ್ಚಿ ಒಂದೇ ಪ್ರಾಣ ಕಳೆದುಕೊಂಡಿರುವುದಲ್ಲ. ಬದಲಾಗಿ ಅನೇಕ ಪ್ರಾಣಿ ಪಕ್ಷಿಗಳು ಸೇರಿದಂತೆ ಲಕ್ಷಾಂತರ ಜಲಚರ ಜೀವಿಗಳು ತಮ್ಮ ಪ್ರಾಣವನ್ನು ಕಳೆದು ಕೊಂಡಿವೆ.
ಪರಿಸರ ತಜ್ಞರು ಈಗಾಗಲೇ ಪ್ರಕೃತಿಗೆ ಅಪಾಯಕಾರಿಯಾಗಿರುವ ಅಂಶಗಳನ್ನು ನಿಷೇಧಿಸುವಂತೆ ಸರ್ಕಾರಗಳಿಗೆ ತಿಳಿಸಿದ್ದಾರೆ. ನಮ್ಮ ಪೂರ್ಣಚಂದ್ರ ತೇಜಸ್ವಿ ಅವರು ಹೇಳುವಂತೆ “ಪ್ರಕೃತಿ ನಮ್ಮ ಭಾಗವಲ್ಲ ನಾವು ಪ್ರಕೃತಿಯ ಭಾಗ”. ಹಾಗಾಗಿ ಪ್ರತಿಯೊಂದು ಕ್ಷಣ ಪ್ರಕೃತಿಯ ಬಗ್ಗೆ ಮತ್ತು ಪ್ರಕೃತಿಯಲ್ಲಿ ಜೀವಿಸುತ್ತಿರುವ ಅಮಾಯಕ ಜೀವರಾಶಿಗಳ ಬಗ್ಗೆ ಕಾಳಜಿ ವಹಿಸುವುದು ಬುದ್ಧಿವಂತ ಮನುಷ್ಯನಾದವನ ಮೂಲ ಜವಾಬ್ದಾರಿ. ಒಂದು ವೇಳೆ ಪರಿಸರ ನಾಶವನ್ನ ನಿಲ್ಲಿಸಿ ಅದನ್ನು ಉಳಿಸಿ ಕೊಳ್ಳುವ ಕೆಲಸಕ್ಕೆ ಮುಂದಾಗದೆ ಇದ್ದರೆ ಆ ಗುಬ್ಬಚ್ಚಿಯಂತೆ ಆಸರೆ, ಆಹಾರ ಇಲ್ಲದೆ ಅಲೆದಲೆದು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಪ್ರತಿಯೊಬ್ಬ ಮನುಷ್ಯನಿಗೂ ಬರುತ್ತದೆ; ಮತ್ತದು ಮನುಷ್ಯ ರೂಪಿಸಿದ ಅತಿ ಕ್ರೂರ ವ್ಯವಸ್ಥೆಯ ಅಂತಿಮ ಫಲಿತಾಂಶವೂ ಆಗಿರುತ್ತದೆ.
ಮುರುಳಿಮೋಹನ.ಆರ್
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ