16 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧಿಸಲು ಕೆನಡಾ ಸಂಸತ್ತಿನಲ್ಲಿ ಬಿಲ್ ಮಂಡನೆ!

ಆನ್‌ಲೈನ್‌ನ ಮಾಯಾಲೋಕ ಹಾಗೂ ಸೋಶಿಯಲ್ ಮೀಡಿಯಾ ವ್ಯಸನದಿಂದ ಮಕ್ಕಳನ್ನು ರಕ್ಷಿಸಲು ಕೆನಡಾ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸದಂತೆ ನಿಷೇಧ ಹೇರಲು ವಿಶೇಷ ‘ಡಿಜಿಟಲ್ ಸೇಫ್ಟಿ ಬಿಲ್’ (ಡಿಜಿಟಲ್ ಸುರಕ್ಷತಾ ವಿಧೇಯಕ) ಅನ್ನು ಕೆನಡಾ ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್‌ಗಳ ದಾಸರಾಗಿ ಇಂದಿನ ಪೀಳಿಗೆಯ ಮಕ್ಕಳು ತೀವ್ರ ಮಾನಸಿಕ ಆತಂಕ, ಒಂಟಿತನ ಹಾಗೂ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕಠಿಣ ಕಾನೂನು ತರಲಾಗುತ್ತಿದ್ದು, ಆನ್‌ಲೈನ್‌ನ ಹಾನಿಕಾರಕ ಪರಿಣಾಮಗಳಿಂದ ಮಕ್ಕಳ ಸುರಕ್ಷತೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕೆನಡಾದ ಸಾಂಸ್ಕೃತಿಕ ಸಚಿವ ಮಾರ್ಕ್ ಮಿಲ್ಲರ್ ಸ್ಪಷ್ಟಪಡಿಸಿದ್ದಾರೆ. ಆದರೆ, ನಿಗದಿಪಡಿಸಿದ ಸುರಕ್ಷತಾ ಮಾನದಂಡಗಳನ್ನು ಪಾಲಿಸುವ ಪ್ಲಾಟ್‌ಫಾರ್ಮ್‌ಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗುತ್ತದೆ.

ಒಂದು ವೇಳೆ ನಿಯಮ ಉಲ್ಲಂಘಿಸಿ ಮಕ್ಕಳಿಗೆ ಪ್ರವೇಶ ನೀಡುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಅನುಮತಿಯಿಲ್ಲದೆ ಹಂಚಿಕೊಳ್ಳಲಾಗುವ ಆಕ್ಷೇಪಾರ್ಹ ಚಿತ್ರಗಳನ್ನು ವರದಿ ಮಾಡಿದ 24 ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂದು ಬಿಲ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಎಐ ಚಾಟ್‌ಬಾಟ್‌ಗಳನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಡಿಜಿಟಲ್ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಲು ಕೆನಡಾ ಯೋಜಿಸುತ್ತಿದೆ. ಈ ಕಾನೂನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲು ಕನಿಷ್ಠ ಎರಡು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ವಿಶ್ವಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಗಡಿಗಳು: ಈಗಾಗಲೇ ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ದೇಶಗಳು 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೆ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ಭಾಗಶಃ ನಿರ್ಬಂಧಗಳನ್ನು ಹೇರಿವೆ. ಫ್ರಾನ್ಸ್, ಡೆನ್ಮಾರ್ಕ್ ಮತ್ತು ಪೋಲೆಂಡ್ ದೇಶಗಳು ಕೂಡ ಇಂತಹ ಕಠಿಣ ನಿಯಮಗಳ ಜಾರಿಗೆ ಪರಿಶೀಲನೆ ನಡೆಸುತ್ತಿವೆ. ಗ್ರೀಸ್ ದೇಶವು ಒಂದು ಹೆಜ್ಜೆ ಮುಂದೆ ಹೋಗಿ 15 ವರ್ಷದೊಳಗಿನವರಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸುವುದಾಗಿ ಘೋಷಿಸಿದೆ. ಭಾರತದಲ್ಲೂ ಅಗ್ಗದ ಇಂಟರ್ನೆಟ್ ಸೌಲಭ್ಯದಿಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕೋಟ್ಯಂತರ ಮಕ್ಕಳು ಸ್ಮಾರ್ಟ್‌ಫೋನ್‌ಗಳಿಗೆ ದಾಸರಾಗುತ್ತಿದ್ದು, ಶಿಕ್ಷಣದ ಮೇಲಿನ ಗಮನ ಕಳೆದುಕೊಳ್ಳುತ್ತಿದ್ದಾರೆ. ಕೆಲವರಂತೂ ರೀಲ್ಸ್ ಹುಚ್ಚಿನಿಂದ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಿರುವುದರಿಂದ, ಭಾರತದಲ್ಲೂ ಇಂತಹ ಕಠಿಣ ಕಾನೂನಿನ ಅಗತ್ಯವಿದೆ ಎಂಬ ಚರ್ಚೆಗಳು ಆರಂಭವಾಗಿವೆ.

Related Articles

ಇತ್ತೀಚಿನ ಸುದ್ದಿಗಳು