ಛತ್ರಪತಿ ಶಂಭಾಜಿ ನಗರ, ಫೆಬ್ರವರಿ 18: ಆರು ತಿಂಗಳೊಳಗೆ ದೇಶದಲ್ಲಿ ಮಹಿಳೆಯರಿಗೆ ಕ್ಯಾನ್ಸರ್ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ್ ಜಾಧವ್ ಮಂಗಳವಾರ ಘೋಷಿಸಿದ್ದಾರೆ.
ಮಹಾರಾಷ್ಟ್ರದ ಛತ್ರಪತಿ ಶಂಭಾಜಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಲಸಿಕೆ ಸಂಶೋಧನೆ ಬಹುತೇಕ ಪೂರ್ಣಗೊಂಡಿದ್ದು, ಪ್ರಸ್ತುತ ಪ್ರಯೋಗಗಳು ನಡೆಯುತ್ತಿವೆ ಎಂದು ಹೇಳಿದರು. 9-16 ವರ್ಷದೊಳಗಿನ ಹುಡುಗಿಯರು ಲಸಿಕೆ ಪಡೆಯಲು ಅರ್ಹರು. ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಸಮಸ್ಯೆಯನ್ನು ಪರಿಹರಿಸಲು ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಆಸ್ಪತ್ರೆಗಳಲ್ಲಿ ಸ್ಕ್ರೀನಿಂಗ್ ನಡೆಸಲಾಗುತ್ತದೆ. “ಕ್ಯಾನ್ಸರನ್ನು ಮೊದಲೇ ಪತ್ತೆಹಚ್ಚಲು ನಾವು ಡೇ ಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸುತ್ತೇವೆ” ಎಂದು ಅವರು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗಗಳಿದ್ದು, ಜನರು ಅವುಗಳನ್ನು ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.