ಶಿರಡಿಗೆ ತೆರಳುತ್ತಿದ್ದ ಕಾರು-ಲಾರಿ ಡಿಕ್ಕಿ: 4 ಸಾವು 6 ಜನರಿಗೆ ಗಾಯ

ಸೊಲ್ಲಾಪುರ (ಮಹಾರಾಷ್ಟ್ರ): ಕರ್ಮಲಾ-ಅಹಮದ್‌ನಗರ ರಸ್ತೆಯಲ್ಲಿ ಬುಧವಾರದಂದು ಕಂಟೈನರ್ ಟ್ರಕ್‌ಗೆ ಎಸ್‌ಯುವಿ ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕದ ಕನಿಷ್ಠ ನಾಲ್ವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಒಂದು ಮಗುವೂ ಸೇರಿದಂತೆ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 6 ಗಂಟೆ ಸುಮಾರಿಗೆ ಕರ್ನಾಟಕದ ವಾಹನವು ಗುಲ್ಬರ್ಗದಿಂದ ಸೊಲ್ಲಾಪುರ ಮಾರ್ಗವಾಗಿ ಅಹಮದ್‌ನಗರ ಜಿಲ್ಲೆಯ ಪ್ರಸಿದ್ಧ ಶ್ರೀ ಸಾಯಿಬಾಬಾ ದೇವಸ್ಥಾನದ ಕಡೆಗೆ ವೇಗವಾಗಿ ಹೋಗುತ್ತಿದ್ದಾಗ ಪಾಂಡೆ ಗ್ರಾಮದ ಬಳಿ ದುರಂತ ಸಂಭವಿಸಿದೆ. ಅಪಘಾತದ ವೇಳೆ ವಾಹನದಲ್ಲಿದ್ದ ಎಲ್ಲರೂ ನಿದ್ರಾವಸ್ಥೆಯಲ್ಲಿದ್ದರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಎಸ್‌ಯುವಿ ಪೂರ್ಣ ಬಲದಿಂದ ಎದುರಿಗೆ ಬರುತ್ತಿದ್ದ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಆ ರಭಸಕ್ಕೆ ಅದು ರಸ್ತೆಯ ಪಕ್ಕದ ಕಂದಕಕ್ಕೆ ಎಸೆಯಲ್ಪಟ್ಟು ಪಲ್ಟಿಯಾಗಿದೆ, ಅದರಲ್ಲಿದ್ದ ಅನೇಕರು ವಾಹನದೊಳಗೆ ಸಿಕ್ಕಿಹಾಕಿಕೊಂಡರು.

ಬದುಕುಳಿದವರ ಕಿರುಚಾಟವನ್ನು ಕೇಳಿದ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅವರಿಗೆ ಸಹಾಯ ಮಾಡಿದರು, ಜ್ಯೋತಿರಾಮ್ ಗಂಜ್ವಾಟೆ ನೇತೃತ್ವದ ಕರ್ಮಲಾ ಪೊಲೀಸರ ತಂಡವು ದುರಂತದ ಸ್ಥಳಕ್ಕೆ ತಲುಪಿ ನೋಡಿದಾಗ ಕಾರು ನುಜ್ಜುಗುಜ್ಜಾಗಿತ್ತು

ಕನಿಷ್ಠ ನಾಲ್ವರು ಯಾತ್ರಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ಆರು ಮಂದಿ ಗಾಯಾಳುಗಳನ್ನು ಕರ್ಮಲಾ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಮೃತರನ್ನು ಹುಬ್ಬಳ್ಳಿಯ ಶಾರದಾ ಹಿರೇಮಠ (67), ಗುಲ್ಬರ್ಗದ ಜೆಮಿ ದೀಪಕ ಹಿರೇಮಠ (38), ಶ್ರೀಶೈಲ್ ಚಂದಗಾ ಕುಂಬಾರ (55) ಮತ್ತು ಅವರ ಪತ್ನಿ ಶಶಿಕಲಾ (50) ಎಂದು ಗುರುತಿಸಲಾಗಿದೆ.

ಗಾಯಗೊಂಡವರಲ್ಲಿ ಎಂಟು ತಿಂಗಳ ಮಗು ನಕ್ಷತ್ರ ವಿ.ಕುಂಬಾರ್, ಕಾವೇರಿ ವಿ.ಕುಂಬಾರ್, ಸೌಮ್ಯ ಎಸ್.ಕುಂಬಾರ್, 26, ಶ್ರೀಧರ್ ಶ್ರೀಶಾಲ್ ಕುಂಬಾರ್, 24, ಶಶಿಕುಮಾರ್ ಟಿ.ಕುಂಬಾರ್, 36, ಮತ್ತು ಶ್ರೀಕಾಂತ್ ಆರ್.ಚವ್ಹಾಣ್, 27 ಸೇರಿದ್ದಾರೆ.

ರಸ್ತೆ ಅನಾಹುತಕ್ಕೆ ಕಾರಣ ಸ್ಪಷ್ಟವಾಗಿಲ್ಲ, ಕರ್ಮಲಾ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯ ಮೃತರ ಕುಟುಂಬಗಳಿಗೆ ದುರಂತದ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು