ನೂತನ ಪೋಪ್ ಆಗಿ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಆಯ್ಕೆ; ‘ಲಿಯೊ 14’ ಎಂದು ಮರು ನಾಮಕರಣ

ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರು 267 ನೇ ಪೋಪ್ ಆಗಿ ಆಯ್ಕೆಯಾಗಿದ್ದಾರೆ. ಪೋಪ್‌ ಫ್ರಾನ್ಸಿಸ್ ಅವರು ಏಪ್ರಿಲ್ 21ರಂದು ನಿಧನರಾದ ನಂತರ ಈ ಹೊಸ ಆಯ್ಕೆ ನಡೆದಿದೆ. ಮೂಲತಃ ಚಿಕಾಗೋದವರಾದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸುತ್ತಿರುವ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

69 ವರ್ಷದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರು ನೂತನ ಪೋಪ್ ಆಗಿ ಆಯ್ಕೆಯಾದ ನಂತರ ‘ಲಿಯೊ 14’ ಎಂಬ ಹೆಸರಿನಿಂದ ಮರು ನಾಮಕರಣ ಮಾಡಲಾಗಿದೆ.

1955ರ ಸೆಪ್ಟೆಂಬರ್‌ 14ರಂದು ಷಿಕಾಗೊದಲ್ಲಿ ಜನಿಸಿದ ರಾಬರ್ಟ್ ಫ್ರಾನ್ಸಿಸ್‌ ಅವರು ಪೆರು ದೇಶದಲ್ಲಿ ಎರಡು ದಶಕ ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಬಿಷಪ್‌ ಆಗಿಯೂ ಕಾರ್ಯನಿರ್ವಹಿಸಿದ್ದರು. 2023ರಲ್ಲಿ ಅವರನ್ನು ವ್ಯಾಟಿಕನ್‌ನ ಕಾರ್ಡಿನಲ್‌ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು.

ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ತಮ್ಮ ಚೊಚ್ಚಲ ಸಂದೇಶ ನೀಡಿದ ಅವರು, ‘ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ಎಲ್ಲರೂ ಪರಸ್ಪರ ಕೈ ಜೋಡಿಸಬೇಕು. ಸಂವಾದ, ಮಾತುಕತೆಗಳ ಮೂಲಕ ಸೇತುವೆ ನಿರ್ಮಿಸಿ ಎಲ್ಲರೂ ಪರಸ್ಪರ ಹತ್ತಿರವಾಗಬೇಕು. ಜಗತ್ತಿನಲ್ಲಿ ಸದಾ ಶಾಂತಿ ನೆಲೆಸಲಿ’ ಎಂದು ಕರೆ ನೀಡಿದರು.

ನೂತನ ಪೋಪ್‌ ಆಯ್ಕೆಯನ್ನು ಸೇಂಟ್‌ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ ಘೋಷಿಸಲಾಯಿತು. ವಿಶ್ವದ ನಾನಾ ದೇಶಗಳನ್ನು ಪ್ರತಿನಿಧಿಸುವ 133 ಕಾರ್ಡಿನಲ್‌ಗಳು ನೂತನ ಪೋಪ್ ಅವರನ್ನು ಆಯ್ಕೆ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು