Home ಬ್ರೇಕಿಂಗ್ ಸುದ್ದಿ ವ್ಯಂಗ್ಯಚಿತ್ರಗಳು ಸಾವಿರ ಪದಗಳ ಸುದ್ದಿಯನ್ನು ಒಂದೇ ಚಿತ್ರದಲ್ಲಿ ಹೇಳುವ ಶಕ್ತಿ ಹೊಂದಿರುತ್ತವೆ – ಎಂ.ವಿ ಶಿವರಾಂ

ವ್ಯಂಗ್ಯಚಿತ್ರಗಳು ಸಾವಿರ ಪದಗಳ ಸುದ್ದಿಯನ್ನು ಒಂದೇ ಚಿತ್ರದಲ್ಲಿ ಹೇಳುವ ಶಕ್ತಿ ಹೊಂದಿರುತ್ತವೆ – ಎಂ.ವಿ ಶಿವರಾಂ

ಹಾಸನ: ವ್ಯಂಗ್ಯಚಿತ್ರಗಳು ಸಮಾಜ ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವುದರ ಜೊತೆಗೆ ಸಾವಿರ ಪದಗಳ ಸುದ್ದಿಯನ್ನು ಒಂದೇ ಚಿತ್ರದಲ್ಲಿ ಹೇಳುವ ಶಕ್ತಿ ಹೊಂದಿವೆ ಎಂದು ಹಿರಿಯ ವ್ಯಂಗ್ಯಚಿತ್ರಕಾರ ಹಾಗೂ ‘ವ್ಯಂಗ್ಯ ಲೋಕ’ ಪತ್ರಿಕೆಯ ಆರಂಭಿಕರಾದ ಎಂ ವಿ ಶಿವರಾಂ ಅವರು ಅಭಿಪ್ರಾಯಪಟ್ಟರು. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್. ೧೫ ರಂದು ಈ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸುತ್ತಿದ್ದೇವೆ, ಇದು ಆನ್ಲೈನ್ ನಲ್ಲಿ ಸಿಗುವ ಪತ್ರಿಕೆ ಎಂದು ತಿಳಿಸಿದರು. ಕಳೆದ 30–40 ವರ್ಷಗಳಿಂದ ವಿವಿಧ ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ದಿನಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾ ಬಂದಿರುವುದಾಗಿ ತಿಳಿಸಿದರು. ಇದೀಗ ತಮ್ಮ ದೀರ್ಘಕಾಲದ ಅನುಭವದ ಆಧಾರದಲ್ಲಿ ‘ವ್ಯಂಗ್ಯ ಲೋಕ’ ಹೆಸರಿನ ಪಾಕ್ಷಿಕ ವ್ಯಂಗ್ಯಚಿತ್ರ ಪತ್ರಿಕೆಯನ್ನು ಆರಂಭಿಸುತ್ತಿರುವುದಾಗಿ ಹೇಳಿದರು.

ತಮ್ಮ ವೃತ್ತಿಜೀವನದ ಆರಂಭದಲ್ಲಿ ‘ಜನತಾ ಮಾಧ್ಯಮ’ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದೆ. ಪತ್ರಿಕೆ ಆರಂಭವಾದಾಗಿನಿಂದ ಸುಮಾರು ಐದಾರು ವರ್ಷಗಳ ಕಾಲ ನಿರಂತರವಾಗಿ ಚಿತ್ರಗಳನ್ನು ನೀಡಿದ್ದೇನೆ. ನಂತರ ‘ಸುಧಾ’, ‘ತರಂಗ’ ಸೇರಿದಂತೆ ಹಲವು ಪತ್ರಿಕೆಗಳಿಗೂ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾಗಿ ಸ್ಮರಿಸಿದರು.
ಒಂದು ವ್ಯಂಗ್ಯಚಿತ್ರಕ್ಕೆ ಐದು ರೂಪಾಯಿ ಸಂಭಾವನೆ ನೀಡುತ್ತಿದ್ದ ಸಂದರ್ಭವೂ ಇತ್ತು. ಆದರೆ ಆಗ ಹಣಕ್ಕಿಂತಲೂ ನಮ್ಮ ಚಿತ್ರ ಪ್ರಕಟವಾಗುವುದು ಹಾಗೂ ಓದುಗರನ್ನು ತಲುಪುವುದು ಮುಖ್ಯವಾಗಿತ್ತು. ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಗಳಿಗೆ ವಿಶೇಷ ಸ್ಥಾನವಿತ್ತು ಎಂದು ಹೇಳಿದರು.

ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಹಿರಿಯ ಸಂಪಾದಕರು ಹಾಗೂ ಚಿತ್ರಕಾರರನ್ನು ಸ್ಮರಿಸಿದ ಅವರು, ವ್ಯಂಗ್ಯಚಿತ್ರಕಾರರು ಆ ದಿನದ ಪ್ರಮುಖ ವಿದ್ಯಮಾನಗಳನ್ನು ಕೆಲವೇ ರೇಖೆಗಳ ಮೂಲಕ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾರೆ. ಒಂದು ಉತ್ತಮ ವ್ಯಂಗ್ಯಚಿತ್ರ ಸಾವಿರಾರು ಪದಗಳ ಸುದ್ದಿಯನ್ನು ಹೇಳುವ ಸಾಮರ್ಥ್ಯ ಹೊಂದಿದೆ ಎಂದರು. ವ್ಯಂಗ್ಯಚಿತ್ರಗಳಿಗೆ ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವಿದ್ದು, ಹಿಂದಿನ ಕಾಲದಿಂದಲೂ ರಾಜರು, ಆಡಳಿತಗಾರರು ಹಾಗೂ ಸಾಮಾಜಿಕ ವಿದ್ಯಮಾನಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಬಿಂಬಿಸಲಾಗುತ್ತಿತ್ತು. ಇದೀಗ ತಂತ್ರಜ್ಞಾನ ಬೆಳವಣಿಗೆಯಿಂದ ಇಂಕ್, ಬ್ರಷ್ ಸೇರಿದಂತೆ ಸಾಂಪ್ರದಾಯಿಕ ವಿಧಾನಗಳ ಜೊತೆಗೆ ಡಿಜಿಟಲ್ ತಂತ್ರಜ್ಞಾನವೂ ವ್ಯಂಗ್ಯಚಿತ್ರಕಾರರ ಕೆಲಸವನ್ನು ಸುಲಭ ಹಾಗೂ ವೇಗಗೊಳಿಸಿದೆ ಎಂದು ಹೇಳಿದರು.

ಜನತಾ ಮಾಧ್ಯಮ’ದಿಂದ ವೃತ್ತಿಜೀವನ ಆರಂಭಿಸಿ ನಗರದ ಹಲವು ಪತ್ರಿಕೆಗಳಿಗೆ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ರಚಿಸಿದ್ದೇನೆ. ತಮ್ಮ ಲೆಕ್ಕದ ಪ್ರಕಾರ ಸುಮಾರು 1,500ಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕೆಲಸದಿಂದ ರಾಜ್ಯಮಟ್ಟದ ಪ್ರಶಸ್ತಿಗಳೂ ದೊರೆತಿವೆ ಎಂದು ತಿಳಿಸಿದರು. ನಾನು ಮೂಲತಃ ಮೆಕ್ಯಾನಿಕ್ ಇಂಜಿನಿಯರ್ ಆಗಿದ್ದು, ನನ್ನನ್ನು ನಾನು ದೊಡ್ಡ ಕಲಾವಿದ ಎಂದು ಎಂದಿಗೂ ಭಾವಿಸಿಲ್ಲ. ಚಿತ್ರ ಬಿಡಿಸುವುದು ನನ್ನ ಆಸಕ್ತಿಯಾಗಿತ್ತು. ಯಾರಿಗಾದರೂ ಚಿತ್ರ ಬಿಡಿಸಲು ಸಾಧ್ಯ ಎಂಬ ಸಂದೇಶವನ್ನು ಮುಂದಿನ ಪೀಳಿಗೆಗೆ ನೀಡಬೇಕು ಎಂಬ ಉದ್ದೇಶದಿಂದ ‘ವ್ಯಂಗ್ಯ ಲೋಕ’ ಆರಂಭಿಸುತ್ತಿದ್ದೇನೆ” ಎಂದು ಹೇಳಿದರು.

ಪತ್ರಿಕೆಯ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ರಚನೆಯ ಕುರಿತು ಕಾರ್ಯಾಗಾರಗಳನ್ನು ಆಯೋಜಿಸುವ ಉದ್ದೇಶವಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವುದು ಹಾಗೂ ಭವಿಷ್ಯದ ವ್ಯಂಗ್ಯಚಿತ್ರಕಾರರನ್ನು ರೂಪಿಸುವುದು ಇದರ ಪ್ರಮುಖ ಆಶಯವಾಗಿದೆ. ಇದಕ್ಕೆ ಪ್ರಾಯೋಜಕರ ಸಹಕಾರ ಅಗತ್ಯವಿದ್ದು, ಉತ್ತಮ ಗುಣಮಟ್ಟದ ಕಾಗದದಲ್ಲಿ ಪತ್ರಿಕೆಯನ್ನು ಹೊರತರುವ ಮೂಲಕ ಹೆಚ್ಚಿನ ವ್ಯಂಗ್ಯಚಿತ್ರಕಾರರಿಗೆ ವೇದಿಕೆ ಕಲ್ಪಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.

You cannot copy content of this page

Exit mobile version