Friday, June 21, 2024

ಸತ್ಯ | ನ್ಯಾಯ |ಧರ್ಮ

ದ್ವೇಷಪೂರಿತ ಹೇಳಿಕೆ: ಕೆಎಸ್‌ ಈಶ್ವರಪ್ಪ ವಿರುದ್ಧ ಕೇಸ್‌ ದಾಖಲು

ದಾವಣಗೆರೆ:  ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿ ಹಿರಿಯ ಮುಖಂಡ ಕೆ. ಎಸ್. ಈಶ್ವರಪ್ಪ ವಿರುದ್ಧ ಎಫ್ ಐಆರ್ ದಾಖಲಾಗಿದೆ. 

ನಿಜಲಿಂಗಪ್ಪ ಬಡಾವಣೆಯ ಕಾಂಗ್ರೆಸ್ ಮುಖಂಡ ಹನುಮಂತ ಎಂಬುವರು ನೀಡಿದ ದೂರನ್ನು ಆಧರಿಸಿ ಇಲ್ಲಿನ ಬಡಾವಣೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505 (1) (ಸಿ), 505 (2) ಮತ್ತು 506 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈಶ್ವರಪ್ಪ ಅವರ ಹೇಳಿಕೆ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ನ ಅಧಿಕೃತ ಎಕ್ಸ್ ಖಾತೆಯಲ್ಲೂ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ. `ಮಹಾತ್ಮ ಗಾಂಧಿಯವರಿಗೆ ಗುಂಡಿಕ್ಕಿದ ಗೋಡ್ಸೆ ಸಂತತಿಯವರಾದ ಬಿಜೆಪಿ ನಾಯಕರ ಭಯೋತ್ಪಾದಕ ಮನಸ್ಥಿತಿ ಅನಾವರಣವಾಗಿದೆ. ಸಂಸದರಾದ ಡಿ. ಕೆ ಸುರೇಶ್ ಹಾಗೂ ಶಾಸಕರಾದ ವಿನಯ್ ಕುಲಕರ್ಣಿಯವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಮೂಲಕ ಬಿಜೆಪಿಯ ಈಶ್ವರಪ್ಪ ಅವರು ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಈ “ಗುಂಡು“ ಹಾಕುವ ವ್ಯಕ್ತಿಯ ಮೇಲೆ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡುತ್ತೇವೆ.’ ಎಂದು ಮನವಿ ಮಾಡಿದ್ದಾರೆ.

ಈ ನಡುವೆ ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಬೆಂಗಳೂರಿನಲ್ಲೂ ಪ್ರಕರಣ ದಾಖಲಾಗಿದ್ದು, ಅವರ ವಿರುದ್ಧ ಯಶವಂತಪುರದ ಕಾಂಗ್ರೆಸ್‌ ಯುವ ಘಟಕದ ಅಧ್ಯಕ್ಷ ಶಶಾಂಕ್‌ ಎನ್ನುವವರು ದೂರು ನೀಡಿದ್ದಾರೆ. ಅವರು ತಮ್ಮ ದೂರಿನಲ್ಲಿ ಈಶ್ವರಪ್ಪನವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸುವುದರ ಜೊತೆಗೆ ಡಿಕೆ ಸುರೇಶ್‌ ಮತ್ತು ವಿನಯ್‌ ಕುಲಕರ್ಣಿಯವರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕು ಎಂದೂ ಮನವಿ ಮಾಡಿದ್ದಾರೆ.

ದ್ವೇಷಭಾಷಣ ಮತ್ತು ದ್ವೇ಼ಪೂರಿತ ಹೇಳಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆನ್ನುವ ಸುಪ್ರೀಂಕೋರ್ಟ್‌ ಆಜ್ಞೆಯಿದ್ದರೂ ಪೊಲೀಸರು ಇಂತಹ ವಿಷಯಗಳಲ್ಲಿ ಕೈಕಟ್ಟಿ ಕುಳಿತಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು