Thursday, May 8, 2025

ಸತ್ಯ | ನ್ಯಾಯ |ಧರ್ಮ

ನೇಹಾ ಸಿಂಗ್ ರಾಥೋಡ್ ವಿರುದ್ಧದ ಪ್ರಕರಣ ರದ್ದು: ಅಯೋಧ್ಯೆ ನ್ಯಾಯಾಲಯ ತೀರ್ಪು

ಅಯೋಧ್ಯೆ, ಮೇ 8: ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದ ಜಾಲತಾಣ ಪೋಸ್ಟ್‌ನ ಹಿನ್ನೆಲೆಯಲ್ಲಿ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶದ ಅಯೋಧ್ಯೆ ನ್ಯಾಯಾಲಯವು ಮಂಗಳವಾರ ರದ್ದುಗೊಳಿಸಿದೆ.

ಅಯೋಧ್ಯೆಯ ಹೆಚ್ಚುವರಿ ಸಿವಿಲ್ ಜಡ್ಜ್ ಏಕ್ತಾ ಸಿಂಗ್ ತೀರ್ಪು ನೀಡಿದ್ದು, ಈ ದೂರನ್ನು ಪರಿಗಣಿಸಲು ಯೋಗ್ಯವಲ್ಲ ಮತ್ತು ದೂರುದಾರ ಶಿವೇಂದ್ರ ಸಿಂಗ್‌ಗೆ ದೂರು ದಾಖಲಿಸಲು ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. ಶಿವೇಂದ್ರ ಸಿಂಗ್, ವಕೀಲ ಮಾರ್ತಾಂಡ ಪ್ರತಾಪ್ ಸಿಂಗ್ ಮೂಲಕ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 310ರ ಅಡಿಯಲ್ಲಿ ದೂರು ದಾಖಲಿಸಿದ್ದರು.

ರಾಥೋಡ್ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಬಿಜೆಪಿ ನಾಯಕರ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರು ಸಾಮಾಜಿಕ ಜಾಲತಾಣದಲ್ಲಿ ಪಹಲ್ಗಾಮ್ ದಾಳಿಯನ್ನು ರಾಜಕೀಯ ಲಾಭಕ್ಕಾಗಿ ಈ ನಾಯಕರೊಂದಿಗೆ ಸಂಬಂಧಿಸಿದ್ದಾರೆ ಎಂದು ದೂರಿತ್ತು. ಆದರೆ, ಕೇಂದ್ರ ಅಥವಾ ರಾಜ್ಯ ಸಚಿವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಸರ್ಕಾರಿ ಅಭಿಯೋಜಕರು ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಈ ಪ್ರಕರಣದಲ್ಲಿ ಆ ಷರತ್ತು ಪಾಲನೆಯಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಈ ನಡುವೆ, ತಮ್ಮನ್ನು ಎಫ್‌ಐಆರ್‌ನಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿಸಿ, ನೇಹಾ ಸಿಂಗ್ ರಾಥೋಡ್ ಮಂಗಳವಾರ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ದಾವೆ ದಾಖಲಿಸಿದ್ದಾರೆ.

ಇದೇ ವೇಳೆ, ಅಭಯ್ ಪ್ರತಾಪ್ ಸಿಂಗ್ ಎಂಬ ಮತ್ತೊಬ್ಬ ವ್ಯಕ್ತಿ ಹಜರತ್‌ಗಂಜ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಥೋಡ್ ಅವರು ದೇಶವಿರೋಧಿ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ ಮತ್ತು ಪಹಲ್ಗಾಮ್ ಘಟನೆಯ ಹಿನ್ನೆಲೆಯಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page