Monday, June 17, 2024

ಸತ್ಯ | ನ್ಯಾಯ |ಧರ್ಮ

ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಕಾರ್ ಸ್ಟ್ರೀಟ್‌ನಲ್ಲಿ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ಕಟ್ಟಿದ ಕ್ರಮಕ್ಕಾಗಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕರ್ನಾಟಕ ಪ್ರಾಂತದ ಜಂಟಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮತ್ತು ಇತರ ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರು”ಶರಣ್ ಮಂಗಳವಾರ ಅಕ್ಟೋಬರ್ 17ರಂದು ಧ್ವಜಗಳನ್ನು ಅಂಗಡಿಗಳಿಗೆ ಧ್ವಜ ಕಟ್ಟಿದ ನಂತರ ಹಿಂದೂಗಳು ಬಾವುಟ ಕಟ್ಟಿರುವ ಅಂಗಡಿಗಳಲ್ಲಷ್ಟೇ ವ್ಯಾಪಾರ ಮಾಡುವಂತೆ ಕರೆ ನೀಡಿದ್ದರು” ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

“ಅವರ ಈ ಹೇಳಿಕೆ ಮತ್ತು ಕೃತ್ಯವು ಧರ್ಮದ ಆಧಾರದ ಮೇಲೆ ದ್ವೇಷವನ್ನು ಸೃಷ್ಟಿಸುತ್ತದೆ” ಎಂದು ಅಗರವಾಲ್ ಹೇಳಿದ್ದಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನೋಹರ್ ಪ್ರಸಾದ್ ಅವರ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸರು ಶರಣ್ ಪಂಪ್‌ವೆಲ್ ಮತ್ತು ಇತರ ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿದ್ದರು.

“ಪಂಪ್‌ವೆಲ್ ಮತ್ತು ಇತರ ವಿಎಚ್‌ಪಿ ಸದಸ್ಯರ ಕ್ರಮವು ಸಂಸತ್ತಿನ ಚುನಾವಣೆಯ ಸಮಯದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ದೊಡ್ಡ ಕಾರ್ಯಸೂಚಿಯ ಒಂದು ಭಾಗವಾಗಿದೆ. ಸರಕಾರ ಶರಣ್ ಅವರನ್ನು ಬಂಧಿಸಬೇಕು” ಎಂದು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದರು.

ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಿರುವುದರಿಂದ 677 ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಸದಸ್ಯರಾದ ದೇವದಾಸ್ ಮತ್ತು ರಘು ಯೆಕ್ಕಾರ್ ಕೂಡ ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು