Monday, June 17, 2024

ಸತ್ಯ | ನ್ಯಾಯ |ಧರ್ಮ

ತಿರುವು ಪಡೆದುಕೊಂಡ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ; ಪೊಲೀಸ್ ಇಲಾಖೆ ಮೇಲೆ ಆಕ್ರೋಶ

ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪ ಕಾಫಿ ತೋಟದ ಮಾಲಿಕನೊಬ್ಬ, ಒಬ್ಬ ಗರ್ಭಿಣಿಯೂ ಸೇರಿದಂತೆ ದಲಿತ ಕೂಲಿಕಾರ ಹೆಣ್ಣು ಮಕ್ಕಳನ್ನು ಕೂಡಿ ಹಾಕಿ ಹಲ್ಲೆ ಮಾಡಿದ ಆರೋಪದ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ.

ಹಿಂದಿನ ದಿನ ತೋಟದ ಮಾಲಿಕ ಜಗದೀಶ್ ದಲಿತ ಹೆಣ್ಣು ಮಕ್ಕಳನ್ನು ಕೂಡಿ ಹಾಕಿ ಹಲ್ಲೆ ಮಾಡಿದ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಈ ಬಗ್ಗೆ ದಲಿತ ಹೆಣ್ಣು ಮಕ್ಕಳು ತೋಟದ ಮಾಲಿಕನ ಮೇಲೆ ಪೊಲೀಸರಿಗೆ ದೂರು ದಾಖಲು ಮಾಡಿದ್ದರು. ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣದ ಅಡಿಯಲ್ಲಿ ತೋಟದ ಮಾಲಿಕ ಜಗದೀಶ್ ಮೇಲೆ ಪ್ರಕರಣ ದಾಖಲಾಗಿತ್ತು.

ಆದರೆ ಅದರ ಮಾರನೇ ದಿನ ಆರೋಪಿ ಜಗದೀಶ್ ಪತ್ನಿ ಕಾರ್ಮಿಕರ ಮೇಲೆಯೇ ಬಾಳೆಹೊನ್ನೂರು ಠಾಣೆಯಲ್ಲಿ ಪ್ರತಿದೂರು ದಾಖಲು ಮಾಡಿದ್ದಾರೆ. ಮನೆಗೆ ನುಗ್ಗಿ ಕಾರ್ಮಿಕರು ಕೊಲೆ ಮಾಡಲು ಯತ್ನಿಸಿದ್ದರು. ಅಲ್ಲದೆ ಮನೆಯ ಮುಂದಿದ್ದ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎಂದು ಜಗದೀಶ್‌ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತೋಟದ ಮಾಲಿಕ ಆರೋಪಿ ಜಗದೀಶ್ ಪತ್ನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಲಿತ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಯತ್ನ, ದೌರ್ಜನ್ಯ ಸೇರಿದಂತೆ 427, 506, 143, 144, 147, 148, 149, 448 ಸೆಕ್ಷನ್ ಗಳ ಅಡಿಯಲ್ಲಿ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾಗುತ್ತಿದ್ದಂತೆ ಸ್ಥಳೀಯ ದಲಿತ ಸಂಘಟನೆಗಳು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ದಲಿತ ಹೆಣ್ಣು ಮಕ್ಕಳಿಗೆ ಹಲ್ಲೆ ಮತ್ತು ಕೂಡಿ ಹಾಕಿ ಹಿಂಸೆ ಮಾಡಿದ ಪ್ರಕರಣದ ಅಡಿಯಲ್ಲಿ ಜಗದೀಶ್ ವಿರುದ್ಧ ದೂರು ದಾಖಲಾಗಿ 24 ಗಂಟೆ ಮೇಲಾದರೂ ಪೊಲೀಸರು ಬಂಧಿಸದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ. ನಿಜವಾದ ಆರೋಪಿಯನ್ನು ಬಂಧಿಸದೇ, ಅಮಾಯಕ ದಲಿತರ ಮೇಲೆಯೇ ಸುಳ್ಳು ಪ್ರಕರಣ ದಾಖಲು ಮಾಡಿದ್ದಾರೆ ಎಂದು ಆರೋಪಿಸಿ ಬಾಳೆಹೊನ್ನೂರು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದಾರೆ.

ನಂತರ ದಲಿತ ಸಂಘಟನೆಗಳು ಕರೆ ಕೊಟ್ಟ ಪ್ರತಿಭಟನೆಯಲ್ಲಿ ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಪೊಲೀಸ್‌ ಇಲಾಖೆ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಳೆಹೊನ್ನೂರಿನ ನಾಡ ಕಚೇರಿಯಿಂದ ಜೆ.ಸಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ದಾರಿ ಉದ್ದಕ್ಕೂ ತೋಟದ ಮಾಲಿಕ ಆರೋಪಿ ಜಗದೀಶ್ ಗೌಡ ವಿರುದ್ಧ ಘೋಷಣೆ ಮತ್ತು ಧಿಕ್ಕಾರ ಕೂಗಿದ್ದಾರೆ.

ಆರೋಪಿ ಜಗದೀಶ್ ಗೌಡ ಬಿಜೆಪಿ ಪಕ್ಷದ ಬೆಂಬಲಿಗನಾಗಿದ್ದು, ಆತನ ಬಂಧನ ಆಗದಂತೆ ರಾಜಕೀಯ ಒತ್ತಡ ಕೂಡಾ ಪೊಲೀಸರ ಮೇಲೆ ಆಗಿದೆ. ಜೊತೆಗೆ ಆರೋಪಿಯನ್ನು ಬಿಜೆಪಿ ಪಕ್ಷದ ಬೆಂಬಲಿಗರೇ ರಕ್ಷಣೆ ಮಾಡಿದ ಬಗ್ಗೆಯೂ ಪ್ರತಿಭಟನೆಯಲ್ಲಿ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ದೂರು ದಾಖಲಾಗಿ ಎರಡು ದಿನ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದಲಿತ ಸಂಘಟನೆಯ ಮುಖಂಡರು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಠಾಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು