Saturday, June 15, 2024

ಸತ್ಯ | ನ್ಯಾಯ |ಧರ್ಮ

ಶಾಕಿಂಗ್‌ ನ್ಯೂಸ್: ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ತಲಾ 2.5 ಲಕ್ಷ ರುಪಾಯಿ ಗಿಫ್ಟ್!

ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸಿಹಿಯ ಜೊತೆಗೆ 2.5 ಲಕ್ಷ ರೂಪಾಯಿ ನಗದು ಕೊಡುಗೆಯಾಗಿ ನೀಡಿರುವ ಶಾಕಿಂಗ್‌ ವಿದ್ಯಮಾನ ಬೆಳಕಿಗೆ ಬಂದಿದೆ.

ದೀಪಾವಳಿ, ಯುಗಾದಿ ಹಬ್ಬಗಳ ಸಂದರ್ಭದಲ್ಲಿ ರಾಜಕಾರಣಿಗಳು ಪತ್ರಕರ್ತರಿಗೆ ಸಣ್ಣಪುಟ್ಟ ಗಿಫ್ಟ್‌ ನೀಡುವುದು ಮಾಮೂಲಿ. ಆದರೆ ಮೊಟ್ಟ ಮೊದಲ ಬಾರಿ ಎರಡೂವರೆ ಲಕ್ಷ ರೂಪಾಯಿ ನಗದು ಹಣವನ್ನು ಅದೂ ಕೂಡ ಸಿಎಂ ಕಚೇರಿಯಿಂದಲೇ ನೀಡಲಾಗಿರುವುದು ಇದೇ ಮೊದಲು.
ಗಿಫ್ಟ್‌ ಪ್ಯಾಕ್‌ನಲ್ಲಿ ನಗದು ಹಣವಿರುವುದು ಗೊತ್ತಿಲ್ಲದ ಕೆಲವು ಪತ್ರಕರ್ತರು ಅದರಲ್ಲಿ ಹಣ ಇರುವುದು ಗೊತ್ತಾದ ಕೂಡಲೇ ಹಿಂದಕ್ಕೆ ಮರಳಿಸಿ, ವೃತ್ತಿಧರ್ಮ ಮೆರೆದಿದ್ದಾರೆ.

ಪತ್ರಕರ್ತರು ನ್ಯಾಯಪಕ್ಷಪಾತಿಗಳಾಗಿರಬೇಕೆಂದರೆ ಯಾರಿಂದಲೂ ಗಿಫ್ಟ್‌, ಹಣ ಸ್ವೀಕರಿಸಬಾರದು ಎಂಬುದು ಹಿಂದಿನಿಂದ ಪತ್ರಿಕಾಸಂಸ್ಥೆಗಳು ಪಾಲಿಸಿಕೊಂಡು ಬಂದ ನೈತಿಕ ನಡಾವಳಿ. ಆದರೆ ಇತ್ತೀಚಿನ ದಿನಗಳಲ್ಲಿ ಅದನ್ನೆಲ್ಲ ಗಾಳಿಗೆ ತೂರಿ ರಾಜಕಾರಣಿಗಳಿಂದ ದೊಡ್ಡ ಮಟ್ಟದ ಹಣ ಪಡೆಯುವುದು ನಡೆದುಕೊಂಡು ಬಂದೇ ಇದೆ. ಆದರೆ ಇದೇ ಮೊದಲ ಬಾರಿಗೆ ದೀಪಾವಳಿ ಗಿಫ್ಟ್‌ ಆಗಿ ಲಕ್ಷಾಂತರ ಹಣವನ್ನು ಮುಖ್ಯಮಂತ್ರಿ ಕಚೇರಿಯಿಂದಲೇ ಪಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪತ್ರಕರ್ತರಿಗೆ ಹಣದ ಆಮಿಷ ನೀಡುವುದು, ಹಣ ನೀಡುವುದು ಕೂಡ ಭ್ರಷ್ಟಾಚಾರವೇ ಆಗಿದೆ. ಹಲವಾರು ಪತ್ರಕರ್ತರಿಗೆ ತಲಾ ಎರಡೂವರೆ ಲಕ್ಷ ರೂಪಾಯಿ ಕೊಟ್ಟಿರುವ ಹಿನ್ನೆಲೆಯಲ್ಲಿ ಲಕ್ಷಗಟ್ಟಲೆ ಹಣ ಎಲ್ಲಿಂದ ಬಂತು? ಇದರ ಮೂಲವೇನು ಎಂಬ ಪ್ರಶ್ನೆಗಳೂ ಉದ್ಭವಿಸಿವೆ.

2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಮುಖ್ಯಮಂತ್ರಿಗಳ ವಿರುದ್ಧ ನೆಗೆಟಿವ್‌ ಸುದ್ದಿಗಳನ್ನು ಬರೆಯದಂತೆ ಮನವೊಲಿಸಲು ಈ ಗಿಫ್ಟ್‌ ನೀಡಲಾಗಿದೆ ಎಂದು ಮಾಧ್ಯಮ ವಲಯ ಅರ್ಥೈಸಿಕೊಳ್ಳುತ್ತಿದೆ.

ಇದುವರೆಗೆ ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವಿನ ಹಣಕಾಸಿನ ವ್ಯವಹಾರ ಕದ್ದುಮುಚ್ಚಿ ನಡೆಯುತ್ತಿತ್ತು, ಈಗ ದೀಪಾವಳಿ ನಗದು ಗಿಫ್ಟ್‌ ಮೂಲಕ ಅದು ರಾಜಾರೋಷವಾಗಿ ನಡೆದಿದೆ. ಹಣ ಪಡೆದ ಪತ್ರಕರ್ತರಿಗೆ ಮಾನಮರ್ಯಾದೆ ಇದ್ದರೆ ಕೂಡಲೇ ಅದನ್ನು ಹಿಂದಿರುಗಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಮಾಧ್ಯಮವೃತ್ತಿ ಭ್ರಷ್ಟಾಚಾರದ ಸುಳಿಗೆ ಸಿಲುಕಿ, ಸಾಮಾನ್ಯ ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿ ಕಚೇರಿಯೇ ಭ್ರಷ್ಟಾಚಾರಕ್ಕೆ ಇಳಿದು, ಪತ್ರಕರ್ತರಿಗೆ ಹಣದ ಕೊಡುಗೆ ನೀಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

Related Articles

ಇತ್ತೀಚಿನ ಸುದ್ದಿಗಳು