Friday, February 14, 2025

ಸತ್ಯ | ನ್ಯಾಯ |ಧರ್ಮ

ಜಾತಿ ದೌರ್ಜನ್ಯ: ಬುಲೆಟ್ ಬೈಕ್ ಓಡಿಸಿದ್ದಕ್ಕೆ ದಲಿತ ಯುವಕನ ಕೈ ಕತ್ತರಿಸಿದ ಸವರ್ಣೀಯರು

ಪ್ರಬಲ ಜಾತಿಗರು ಬುಲೆಟ್ ಬೈಕ್ ಓಡಿಸಿದ ಕಾರಣಕ್ಕೆ ದಲಿತ ಯುವಕನ ಕೈ ಕತ್ತರಿಸಿರುವ ವಿಕೃತ ಘಟನೆಯೊಂದು ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ನಡೆದಿದೆ.  

2025 ಫೆಬ್ರವರಿ 12 ರಂದು ಸಂಜೆ ತಮಿಳುನಾಡಿನ ಶಿವಗಂಗ ಜಿಲ್ಲೆಯ ಮೇಳಪಿದವೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬುಲೆಟ್ ಬೈಕ್ ಓಡಿಸುತ್ತಿದ್ದ ಅಯ್ಯಸಾಮಿ ಎಂಬ ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಬುಧವಾರ ಸಂಜೆ ಅಯ್ಯಸಾಮಿ ತನ್ನ ಬುಲೆಟ್ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ಅದೇ ಗ್ರಾಮದ ಮೂವರು ಪ್ರಬಲ ಜಾತಿ ಹಿಂದೂಗಳಾದ ಆರ್. ವಿನೋದ್‌ಕುಮಾರ್ (21), ಎ. ಅಥೀಶ್ವರನ್ (22) ಮತ್ತು ಎಂ. ವಲ್ಲರಸು (21) ಅಡ್ಡಗಟ್ಟಿ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಹಲ್ಲೆಗೊಳಗಾದ ಅಯ್ಯಸಾಮಿ ಶಿವಗಂಗೆಯ ಕಾಲೇಜಿನಲ್ಲಿ ಮೂರನೇ ವರ್ಷದ ಯುಜಿ ಗಣಿತ ವಿದ್ಯಾರ್ಥಿ ಎಂದು ತಿಳಿದುಬಂದಿದ್ದು, ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಪ್ರಬಲ ಸಮುದಾಯದ ಯುವಕರು ಮಾತ್ರ ದುಬಾರಿ ಬೈಕ್‌ಗಳನ್ನು ಓಡಿಸಬಹುದು. ದಲಿತರು ಅಂತಹ ಬೈಕ್‌ಗಳನ್ನು ಓಡಿಸಬಾರದು” ಎಂದು ಹೇಳುತ್ತಾ ಆರೋಪಿಗಳು ಅಯ್ಯಸಾಮಿಯ ಕೈಗಳನ್ನು ಕಡಿದಿದ್ದಾರೆ” ಎಂದು ಸಂತ್ರಸ್ತ ಯುವಕನ ಸಂಬಂಧಿ ಮುನಿಯಸಾಮಿ ಹೇಳಿದ್ದಾರೆ. 

ದಾಳಿ ನಡೆದಾಗ ಅಯ್ಯಸಾಮಿ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಹೋಗಿ ಮನೆ ತಲುಪಿದ್ದಾರೆ. ಇಲ್ಲದಿದ್ದರೆ ಆರೋಪಿಗಳು ಆತನನ್ನು ಕೊಲೆ ಮಾಡುತ್ತಿದ್ದರು ಎಂದು ಮುನಿಯಸಾಮಿ ತಿಳಿಸಿದ್ದಾರೆ.

ಕುಟುಂಬಸ್ಥರು ಅಯ್ಯಸಾಮಿಯನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ಪ್ರಬಲ ಜಾತಿಯವರು ದಲಿತ ಕುಟುಂಬದ ಮನೆಯನ್ನು ದೋಚಿದ್ದಾರೆ. ಗ್ರಾಮದಲ್ಲಿ ಜಾತಿ ತಾರತಮ್ಯ ಚಾಲ್ತಿಯಲ್ಲಿದೆ. ತಮ್ಮ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡುವಂತೆ ಮುನಿಯಸಾಮಿ ಒತ್ತಾಯಿಸಿದ್ದಾರೆ.

“ಅಯ್ಯಸಾಮಿ ಬುಲೆಟ್ ಬೈಕ್ ಚಲಾಯಿಸುವುದು ಪ್ರಬಲ ಜಾತಿಯವರಿಗೆ ಇಷ್ಟವಿರಲಿಲ್ಲ. ಈ ಹಿಂದೆಯೂ ಅವರು ಬೈಕಿಗೆ ಹಾನಿ ಮಾಡಿದ್ದರು” ಎಂದು ಅವರ ತಂದೆ ಭೂಮಿನಾಥನ್ ಹೇಳಿದ್ದಾರೆ.

ಬುಲೆಟ್ ಓಡಿಸಿದ್ದಕ್ಕೆ ದಾಳಿ ಮಾಡಲಾಗಿದೆ ಎಂಬುವುದನ್ನು ಪೊಲೀಸ್ ಮೂಲಗಳು ನಿರಾಕರಿಸಿವೆ. 

ಅಯ್ಯಸಾಮಿ ಆರೋಪಿಗಳಲ್ಲಿ ಒಬ್ಬನಾದ ಅಥೀಶ್ವರನ್‌ಗೆ ಗೇಲಿ ಮಾಡಿದ್ದರು. ಈ ವಿಚಾರಕ್ಕೆ ಅವರ ನಡುವೆ ಮೊದಲೇ ಜಗಳವಿತ್ತು. ತನಿಖೆ ಇನ್ನೂ ಮುಂದುವರೆದಿದೆ ಎಂದು ಹೇಳಿರುವುದಾಗಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಘಟನೆ ಸಂಬಂಧ ಸಿಪ್ಕಾಟ್ ಪೊಲೀಸರು ವಿನೋದ್‌ಕುಮಾರ್, ಅಥೀಶ್ವರನ್ ಮತ್ತು ವಲ್ಲರಸು ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 296 (1), 126 (2), 118 (1), 351 (3) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 3(1)(ಆರ್)(ಎಸ್‌) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿಯೂ ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page