Wednesday, January 15, 2025

ಸತ್ಯ | ನ್ಯಾಯ |ಧರ್ಮ

ಜಾತಿ ವಾಸ್ತವವಾಗಿರುವ ಭಾರತದಲ್ಲಿ ಜಾತಿಗಣತಿ ಅತೀ ಮುಖ್ಯ: ಬಂಜಗೆರೆ ಜಯಪ್ರಕಾಶ್ 

ಬೆಂಗಳೂರು: 2025ನೇ ಸಾಲಿನಲ್ಲಿ ರಾಷ್ಟ್ರೀಯ ಜನಗಣತಿ ನಡೆಸುವುದಾಗಿ ಘೋಷಿಸಿರುವ ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿ ಗಣತಿಯನ್ನು ನಡೆಸಬೇಕು, ಈ ಮೂಲಕ ಎಲ್ಲಾ ಜಾತಿಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಲೋಹಿಯ ವಿಚಾರ ವೇದಿಕೆ ಒತ್ತಾಯಿಸಿದ್ದು. ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು, ಉಭಯ ಸದನಗಳಲ್ಲಿಯೂ ಈ ನಿರ್ಣಯವನ್ನು ಅಂಗೀಕರಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ಏರಬೇಕೆಂದು ಆಗ್ರಹಿಸಿದೆ. 

2025 ಜನವರಿ 15 ರಂದು ರಾಜಭವನ ರಸ್ತೆಯ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲೋಹಿಯ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್.ಶಿವಣ್ಣ ಅವರು ‘ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯಬೇಕಾದ ರಾಷ್ಟ್ರೀಯ ಜನಗಣತಿ 2021ರಲ್ಲಿ ನಡೆಯಬೇಕಾಗಿತ್ತು. ಕೋವಿಡ್-19 ಸಾಂಕ್ರಾಮಿಕದ ಕಾರಣ ನಡೆಸಲಾಗಲಿಲ್ಲ. ಇದನ್ನು 2025ರಲ್ಲಿ ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಈ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಕಲಂ ಸೇರಿಸಿ, ದೇಶಾದ್ಯಂತ ಎಲ್ಲ ಜಾತಿ, ಉಪಜಾತಿಗಳ ಸಮಗ್ರ ಸಮೀಕ್ಷೆ ನಡೆಸಬೇಕೆನ್ನುವುದು ನಮ್ಮ ಒತ್ತಾಯ. ರಾಜ್ಯ ಸರ್ಕಾರ ಈ ಕುರಿತು ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಬೇಕೆನ್ನುವುದು ನಮ್ಮ ಬೇಡಿಕೆ. ಇದನ್ನು ಸಾಧಿಸಲು ನಾವು ಪ್ರತಿ ಜಿಲ್ಲೆಯಲ್ಲಿ ಜಾತಿ ಜನಗಣತಿ ಜಾಥಾ ಆಯೋಜಿಸಲು ನಿರ್ಧರಿಸಿದ್ದೇವೆ’ ಎಂದರು.

ದೇಶದಲ್ಲಿ ಮೊದಲ ಬಾರಿ ಜಾತಿಗಣತಿ ನಡೆದಿದ್ದು 1931ರಲ್ಲಿ. ಈ 94 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ 100 ಕೋಟಿಗಿಂತಲೂ ಹೆಚ್ಚು ಏರಿದ್ದು, ನೂರಾರು ಅತಿ ಹಿಂದುಳಿದ ಸಮುದಾಯಗಳ ವಿವರ ದೊರೆಯದೆ ಅವುಗಳು ಅವಕಾಶ ವಂಚಿತವಾಗಿವೆ.

ಈ ಹಿಂದುಳಿದ ಸಮುದಾಯಗಳ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ, ಇವುಗಳಿಗೆ ಸೇರಿದ ಮುಕ್ಕಾಲು ಪಾಲು ಜನರು ಪ್ರೌಢಶಿಕ್ಷಣ ಪಡೆದುಕೊಳ್ಳಲಾಗಿಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ 102 ಜಾತಿಗಳನ್ನು ಹಿಂದುಳಿದ ಸಮುದಾಯಗಳ ಪಟ್ಟಿಯ ಪ್ರವರ್ಗ -1ರಲ್ಲಿ ಸೇರಿಸಲಾಗಿದೆ. ಇನ್ನುಳಿದ 95 ಜಾತಿಗಳು ಪ್ರವರ್ಗ- 2(ಎ)ರಲ್ಲಿ ಒಳಗೊಂಡಿವೆ. ಅಧ್ಯಯನವೊಂದರ ಪ್ರಕಾರ ಇವುಗಳಲ್ಲಿ 97 ಜಾತಿಗಳಿಗೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿಯೂ ಸರ್ಕಾರದಲ್ಲಿ ಆಟೆಂಡರ್ ಹುದ್ದೆ ಕೂಡಾ ಪಡೆದುಕೊಳ್ಳಲು ಆಗಿಲ್ಲ. ಹಿಂದುಳಿದ ಸಮುದಾಯಕ್ಕೆ ಸೇರಿದ ಜಾತಿಗಳು ಒಟ್ಟು ಜನಸಂಖ್ಯೆಯ ಶೇಕಡಾ 54ರಷ್ಟಿದ್ದರೂ, ಅವುಗಳಿಗೆ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಿಗಬೇಕಾದ ಅವಕಾಶ ಸಿಕ್ಕಿಲ್ಲ.

ಈ ಬಗೆಯ ತಾರತಮ್ಯದಿಂದ ಜನತಂತ್ರದ ಮೂಲ ಆಶಯವಾದ ಸಮಸಮಾಜದ ನಿರ್ಮಾಣ ಅಸಾಧ್ಯ. ಜಾತಿ, ಉಪಜಾತಿಗಳ ಸಮೀಕ್ಷೆ ನಡೆಸಿ, ಅವುಗಳ ಸ್ಥಿತಿಗತಿಗಳಿಗೆ ತಕ್ಕಂತೆ ಅವಕಾಶಗಳನ್ನು ಒದಗಿಸುವುದೇ ಈ ಸಮಸ್ಯೆಗೆ ಪರಿಹಾರ.

ಇದನ್ನು ಮನಗಂಡ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ 2015ರಲ್ಲಿ ಜಾತಿಗಣತಿ ನಡೆಸುವ ಕಾರ್ಯವನ್ನು ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಿತ್ತು. ಆ ಮೂಲಕ ಕರ್ನಾಟಕ, ಜಾತಿಗಣತಿ ಕೈಗೆತ್ತಿಕೊಂಡ ಮೊಟ್ಟಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 

ಎಚ್.ಕಾಂತರಾಜ್ ವರದಿ ಅಪ್ರಸ್ತುತ 

ತಾಂತ್ರಿಕ ಕಾರಣಗಳಿಂದಾಗಿ ಎಚ್. ಕಾಂತರಾಜ್ ನೇತೃತ್ವದ ಆಯೋಗ 2018ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಲಿಲ್ಲ. ಆನಂತರ ಬಂದ ಸರ್ಕಾರಗಳು ವಿವಿಧ ಕಾರಣಗಳಿಗಾಗಿ ವರದಿಯನ್ನು ಪಡೆಯುವ ಪ್ರಯತ್ನ ಮಾಡಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ಪ್ರಯತ್ನ ನಡೆಸಿದ ಫಲವಾಗಿ ಕೆ. ಜಯಪ್ರಕಾಶ್ ಹೆಗಡೆ ನೇತೃತ್ವದ ಆಯೋಗ ವರದಿಯನ್ನು 2024ರ ಫೆಬ್ರವರಿಯಲ್ಲಿ ಸಲ್ಲಿಸಿತು.

ಆದರೆ, ವರದಿಯು ಸುಮಾರು ಹತ್ತು ವರ್ಷಗಳಷ್ಟು ಹಳೆಯದಾಗಿದ್ದು, ದತ್ತಾಂಶ ಪ್ರಸ್ತುತ ಜನಸಂಖ್ಯೆಗೆ ಅಪ್ರಸ್ತುತವಾಗಿದೆ ಇದೇ ವೇಳೆ, ಕೇಂದ್ರ ಸರ್ಕಾರ ಜನಗಣತಿಗೆ ಸಜ್ಜಾಗಿದೆ. ಈ ಗಣತಿಯನ್ನು ಜಾತಿಗಣತಿಯಾಗಿ ಪರಿವರ್ತಿಸುವುದೇ ಈಗಿನ ಸಮಸ್ಯೆಗೆ ಸೂಕ್ತ ಪರಿಹಾರ ಎಂದು ಅವರು ತಿಳಿಸಿದರು. 

ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಅಂಶವನ್ನು ಸೇರಿಸಬೇಕೆಂದು ಕೇಂದ್ರ ಸರ್ಕಾರರವನ್ನು ಒತ್ತಾಯಿಸುವುದರೊಂದಿಗೆ ನಾವು ರಾಜ್ಯ ಸರ್ಕಾರವನ್ನು ಈ ಕುರಿತು ನಿರ್ಣಯವೊಂದನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳುಹಿಸಲು ಒತ್ತಾಯಿಸುತ್ತೇವೆ. ನಿರ್ಣಯವನ್ನು ರಾಜ್ಯ ಸಂಪುಟ ಮತ್ತು ಉಭಯ ಶಾಸನ ಸಭೆಗಳಲ್ಲಿ ಅಂಗೀಕರಿಸಬೇಕು.

ಮಾರ್ಚ್‌ನಲ್ಲಿ ನಡೆಯುವ ವಿಧಾನ ಮಂಡಲದ ಅಧಿವೇಶನದ ವೇಳೆ ನಿರ್ಣಯವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಅಂಗೀಕರಿಸಬೇಕು. ಆಧಿವೇಶನದ ಅಂತ್ಯದವರೆಗೂ ಕಾದು, ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ನಾವು ಜಾತಿ ಜನಗಣತಿ ಜಾಥಾ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು. 

ಜಾತಿಗಣತಿ ಇಲ್ಲದೇ ಸಮಾನತೆಯ ಪ್ರಾತಿನಿಧ್ಯ ಕಲ್ಪಿಸೋದು ಸಾಧ್ಯವಿಲ್ಲ ಎಂದ ಅವರು ಜಾತಿಗಣತಿ ಮೂಲಕ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯಗಳನ್ನ ಎತ್ತಿಹಿಡಿಯಬೇಕು ಎಂದು ಹೇಳಿದರು.

ಜಾತಿ ವಾಸ್ತವವಾಗಿರುವ ಭಾರತದಲ್ಲಿ ಜಾತಿಗಣತಿ ಅನಿವಾರ್ಯ: ಬಂಜಗೆರೆ ಜಯಪ್ರಕಾಶ್

ಇದೇ ವೇಳೆ ಮಾತನಾಡಿದ ಸಮಾಜವಾದಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ‘ಭಾರತದಂತಹ ಜಾತಿಯ ದೇಶದಲ್ಲಿ ಜಾತಿಗಳ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅರಿಯಲು ಜಾತಿಜನಗಣತಿ ಮುಖ್ಯ, ಯಾಕೆಂದರೆ ಜಾತಿಗಣತಿ ಮಾಡದೇ ಜಾತಿಪ್ರಾತಿನಿಧ್ಯ ಒದಗಿಸುವುದು ಸಾಧ್ಯವಿಲ್ಲ’ ಎಂದು ವಿವರಿಸಿದರು.

ಭಾರತದಲ್ಲಿ 1931ರಲ್ಲಿ ಬ್ರಿಟೀಷರಿಂದ ಜಾತಿ ಜನಗಣತಿ ನಡೆಯಿತು. ಆನಂತರ ಈವರೆಗೆ ಜಾತಿಜನಗಣತಿ ನಡೆದಿಲ್ಲ. ಈಗ ಸರ್ಕಾರಗಳು ಸವಲತ್ತು ಕೊಡುತ್ತಿರುವುದು ಅದೇ ದತ್ತಾಂಶದ ಆಧಾರದಲ್ಲಿ. ಇಷ್ಟು ವರ್ಷಗಳು ಕಳೆದರೂ ಕೇಂದ್ರ ಸರ್ಕಾರ ಜಾತಿಗಣತಿ ನಡೆಸಲು ಇನ್ನೂ ನಿರ್ಧರಿಸಿಲ್ಲ. ವಾಸ್ತವವಾಗಿ ನಮ್ಮ ಸಂವಿಧಾನವೇ ಜಾತಿ ಗುಂಪುಗಳಿಗೆ ಸವಲತ್ತು ನೀಡುತ್ತಿದೆ; ಯಾವ ಆಧಾರದಲ್ಲಿ ಸವಲತ್ತುಗಳನ್ನು ನೀಡುತ್ತಿದ್ದೀರ ಎಂದು ಸುಪ್ರೀಂ ಕೋರ್ಟ್ ಜಾತಿ ದತ್ತಾಂಶಗಳನ್ನು ಕೇಳಿದೆ. ಆದರೂ ಸರ್ಕಾರಗಳು ಕ್ರಮ ತೆಗೆದುಕೊಂಡಿಲ್ಲ” ಎಂದು ತಿಳಿಸಿದರು

“ಮನಮೋಹನ್ ಸಿಂಗ್ ಅವಧಿಯಲ್ಲಿ ಪ್ರತ್ಯೇಕವಾಗಿ ಜಾತಿಗಣತಿ ನಡೆಸಿದ್ದರು. ಅದನ್ನು ನರೇಗಾ ಮತ್ತು ಬಿಪಿಎಲ್ ಯೋಜನೆ ಜಾರಿಗೆ ಬಳಸಿದ್ದರು. ಆದರೆ, ಆ ಮಾಹಿತಿಯನ್ನು ಈಗ ಬಹಿರಂಗಪಡಿಸಿಲ್ಲ. 2015 ರಲ್ಲಿ ಸಿದ್ದರಾಮಯ್ಯ ಸರ್ಕಾರ ಕಾಂತರಾಜು ಆಯೋಗದ ಮೂಲಕ ವರದಿ ಮಾಡಿಸಿತ್ತು; ಈಗ ಅದಕ್ಕೆ 10 ವರ್ಷ ಕಳೆದು ಹೋಗಿದೆ. ಆ ವರದಿಯನ್ನು ಈಗ ಅಧಿಕೃತ ಎಂದು ಬಳಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದ ಜನಗಣತಿ ಬಾಕಿ ಇದ್ದು, ಕೇಂದ್ರ ಸರ್ಕಾರವೇ ಈಗ ಉಪಜಾತಿಗಳ ಸಹಿತ ಜಾತಿಗಣತಿ ನಡೆಸಬೇಕು” ಎಂದು ಆಗ್ರಹಿಸಿದರು.

“ಒಳ ಮೀಸಲಾತಿ ನೀಡಲು ಜಾತಿ ಸಮೀಕ್ಷೆ ಅನಿವಾರ್ಯ; ಕೆಲವರು 2(ಎ) ಕ್ಯಾಟಗರಿಯಲ್ಲಿ ನಮ್ಮನ್ನು ಸೇರಿಸಿ ಎಂದು ಕೇಳಿಕೊಂಡಿದ್ದಾರೆ. ಮೀಸಲಾತಿ ನೀಡುವ ಸಂದರ್ಭದಲ್ಲಿ ನ್ಯಾಯಾಲಯಗಳ ಮುಂದೆ ಸರ್ಕಾರಕ್ಕೆ ಉತ್ತರ ಕೊಡಲು ಜಾತಿ ಸಮೀಕ್ಷೆ ಅನುಕೂಲ ಆಗುತ್ತದೆ. ಇಷ್ಟೆಲ್ಲಾ ಗೊತ್ತಿದ್ದೂ ಸರ್ಕಾರ ಜಾತಿಗಣತಿಗೆ ಮೀನಾಮೇಷ ಎಣಿಸುತ್ತಿರುವುದು ಯಾಕೆ? ಬಿಹಾರ ಸರ್ಕಾರ ಮಾಡಿರುವ ಗಣತಿಯಿಂದ ಸಾಕಷ್ಟು ಅನುಕೂಲ ಆಗಿದೆ” ಎಂದು ಹೇಳಿದರು.

‘ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಜಾತಿಗಣತಿ ಅನಿವಾರ್ಯ’ ಎಂದು ಆರ್ಥಿಕತಜ್ಞ ಡಾ. ಕೃಷ್ಣ ರಾಜ್ ಅಭಿಪ್ರಾಯ ಪಟ್ಟರು.

ಸುದ್ಧಿಗೋಷ್ಠಿಯಲ್ಲಿ ಜಾತಿಗಣತಿಯ ಪ್ರಾಮುಖ್ಯತೆ ಕುರಿತು ಮಾತನಾಡಿದ ಅವರು ಭಾರತ ಆರ್ಥಿಕವಾಗಿ ಸದೃಢವಾಗುತ್ತಿದೆ. ಯಾವುದೇ ಒಂದು ಆರ್ಥಿಕನೀತಿ ಜಾರಿ ಮಾಡುವಾಗ ದತ್ತಾಂಶ ಮುಖ್ಯ ಆಗುತ್ತೆ. ಈ ದತ್ತಾಂಶದಲ್ಲಿ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಸಾಧ್ಯವಾಗುತ್ತಿದೆಯಾ ಅನ್ನೋದನ್ನ ನೋಡಬೇಕು.

ಹಾಗೆ ನೋಡಿದರೆ ಭಾರತ ಆರ್ಥಿಕವಾಗಿ ಮುಂದುವರೆಯುತ್ತಿರುವಾಗಲೇ ಸಂಪತ್ತಿನ ಹಂಚಿಕೆಯಲ್ಲಿ ಅತೀಹೆಚ್ಚು ಅಸಮಾನತೆ ಇದೆ. ಬಂಡವಾಳಶಾಯಿಗಳು ಹೆಚ್ಚು ಶ್ರೀಮಂತರಾಗುತ್ತಿರುವಾಗಲೇ ಅತೀ ಬಡತನದಿಂದ ನರಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಎಲ್ಲರನ್ನು ಒಳಗೊಂಡಂತೆ ಅಭಿವೃದ್ಧಿ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ. ಇದಕ್ಕೆ ಸಾಮಾಜಿಕ ಆರ್ಥಿಕ ನೀತಿಗಳನ್ನು ರೂಪಿಸಬೇಕು. ಸರ್ಕಾರ ವಿಕಸಿತ ಭಾರತದ ಕುರಿತು ಮಾತನಾಡುತ್ತಿದೆ. ಈ ವಿಕಸಿತ ಭಾರತವನ್ನು ಯಾರಿಗಾಗಿ ಮಾಡುತ್ತಿದೆ. ಇದು ಎಲ್ಲರನ್ನು ಒಳಗೊಂಡಿದೆಯೇ ಅನ್ನೋ ಪ್ರಶ್ನೆ ಎದುರಾಗುತ್ತದೆ.

ಈ ಅಭಿವೃದ್ಧಿಯಲ್ಲಿ ಎಲ್ಲಾ ವರ್ಗದ ಜನರನ್ನು ಒಳಗೊಳ್ಳಬೇಕು. ದಲಿತರು, ಆದಿವಾಸಿಗಳು, ಮಹಿಳೆಯರು ಇವರೆಲ್ಲರನ್ನು ಒಳಗೊಂಡಾಗಲೇ ಅಭಿವೃದ್ಧಿಗೆ ಒಂದು ಅರ್ಥ ಬರುತ್ತದೆ ಎಂದ ಕೃಷ್ಣರಾಜ್ ಅವರು ನಮ್ಮ ಸಂವಿಧಾನ ಹೇಳುವ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಈ75ವರ್ಷಗಳಲ್ಲಿ ಸಾಧ್ಯವಾಗಿಲ್ಲ ಎಂದರು.

ಈ ಎಲ್ಲಾ ಅಸಮಾನತೆಯನ್ನು ತೊಡೆದುಹಾಕಲು ಜಾತಿಗಣತಿ ಮುಖ್ಯ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಬಿ.ಎಸ್. ಶಿವಣ್ಣ, ಡಾ.ಬಂಜಗೆರೆ ಜಯಪ್ರಕಾಶ್, ಡಾ. ಕೃಷ್ಣರಾಜ್, ಕೆ. ಫಾತಿಮ ಉಪಸ್ಥಿತರಿದ್ದರು. 

Related Articles

ಇತ್ತೀಚಿನ ಸುದ್ದಿಗಳು

You cannot copy content of this page