Thursday, July 11, 2024

ಸತ್ಯ | ನ್ಯಾಯ |ಧರ್ಮ

ಜೈಲುಗಳಲ್ಲೂ ದಲಿತರ ಮೇಲೆ ಜಾತಿ ತಾರತಮ್ಯ: ಸುಪ್ರೀಂ ಕಳವಳ

ನವದೆಹಲಿ: ಸರ್ಕಾರಿ ಜೈಲುಗಳಲ್ಲಿರುವ ಎಸ್‌ಸಿ, ಎಸ್ಟಿ ಸಮುದಾಯದವರ ಮೇಲೆ ದಿನನಿತ್ಯ ಕೆಲಸ ಮಾಡಿಸುವ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಬಾರ್‌ ಅಂಡ್‌ ಬೆಂಚ್‌ ವರದಿ ಪ್ರಕಟಿಸಿದೆ. ಪತ್ರಕರ್ತರಾದ ಸುಕನ್ಯಾ ಶಾಂತಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿನ ಕೆಲ ನಿಬಂಧನೆಗಳು ಜಾತಿ ತಾರತಮ್ಯವನ್ನು ಉತ್ತೇಜಿಸುವ ರೀತಿಯಲ್ಲಿವೆ. ಅವುಗಳನ್ನು ಬದಲಾಯಿಸಬೇಕಿದೆ ಎಂದಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ ತೀರ್ಪು ಕಾಯ್ದಿರಿಸಿದೆ.

ಭಾರತದ ಕಾರಾಗೃಹಗಳಲ್ಲಿ ಜಾತಿ ಆಧಾರದಲ್ಲಿ ಶ್ರಮ ವಿಭಜನಾ ಕೆಲಸಗಳನ್ನು ನೀಡಲಾಗುತ್ತಿದೆ. ಕೆಳಜಾತಿಯವರಿಗೆ ಜಾಸ್ತಿ ಶ್ರಮದಾಯಕ ಹಾಗೂ ಮೇಲ್ಜಾತಿಯವರಿಗೆ ಕಡಿಮೆ ಶ್ರಮದ ಕೆಲಸಗಳನ್ನು ನೀಡಲಾಗುವ ಮೂಲಕ ಜಾತಿ ತಾರತಮ್ಯ ಎಸಗಲಾಗುತ್ತಿದೆ ಎಂದು ಶಾಂತಾ ತಮ್ಮ ಅರ್ಜಿಯಲ್ಲಿ ವಿವರಸಿದ್ದಾರೆ.

ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿಯೇ ಈ ರೀತಿಯ ತಾರತಮ್ಯ ಮಾಡಲು ಅವಕಾಶ ನೀಡಲಾಗಿದೆ. ಅಧಿಸೂಚಿತ ಪಂಗಡಗಳಿಗೆ ಸೇರಿದವರಿಗೆ ಇಂಥಿಂಥ ಕೆಲಸ ಕೊಡಬಹುದು ಎಂದು ಮಾರ್ಗಸೂಚಿಯೇ ತಿಳಿಸುತ್ತದೆ. ದಲಿತರನ್ನು ಅಪರಾಧಿಗಳು, ತಿರುಕರು, ವಲಸೆಯವರು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಶಾಂತಾ ತಿಳಿಸಿದ್ದಾರೆ. ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ.

Related Articles

ಇತ್ತೀಚಿನ ಸುದ್ದಿಗಳು