Monday, September 2, 2024

ಸತ್ಯ | ನ್ಯಾಯ |ಧರ್ಮ

ರಾಜಕೀಯಕ್ಕೂ ವ್ಯಾಪಿಸಿದ ʼಕಾಸ್ಟಿಂಗ್‌ ಕೌಚ್‌ʼ, ʼಲೈಂಗಿಕ ದೌರ್ಜನ್ಯʼ ಆರೋಪಗಳು; ಓರ್ವ ನಾಯಕಿಯನ್ನು ಉಚ್ಛಾಟಿಸಲು ಮುಂದಾದ ಕೇರಳ ಕಾಂಗ್ರೆಸ್

ತಿರುವನಂತಪುರಂ, ಸೆಪ್ಟೆಂಬರ್ 1: ಕೆಲವು ಹೀರೋಗಳು ಮತ್ತು ಇತರ ಸಿಬ್ಬಂದಿಗಳು ನಟಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆನ್ನುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಈಗಾಗಲೇ ಮಲಯಾಳಿ ಸಿನೆಮಾರಂಗವನ್ನು ಕಾಳ್ಗಿಚ್ಚಿನಂತೆ ಸುಡುತ್ತಿದ್ದರೆ, ಅದರ ಹೊಗೆಯ ಘಾಟು ಈಗ ಕೇರಳ ಕಾಂಗ್ರೆಸ್‌ ಪಕ್ಷಕ್ಕೂ ಹಬ್ಬಿದೆ.

ನಾಯಕರ ಜತೆ ‘ಆತ್ಮೀಯ’ ಸಂಬಂಧ ಹೊಂದಿರುವ ಮಹಿಳೆಯರಿಗೆ ಮಾತ್ರ ಪಕ್ಷದಲ್ಲಿ ಅವಕಾಶ ಸಿಗುತ್ತದೆ, ಇಲ್ಲದಿದ್ದರೆ ಕಿರುಕುಳ ಎದುರಿಸಬೇಕಾಗುತ್ತದೆ ಎಂದು ಮಹಿಳಾ ಕಾಂಗ್ರೆಸ್ ವಿಭಾಗದ ನಾಯಕಿ ಮಾಡಿರುವ ಆರೋಪ ಪಕ್ಷದಲ್ಲಿ ತೀವ್ರ ಕಂಪನಗಳನ್ನು ಹುಟ್ಟಿಸಿದೆ. ಆರೋಪ ಮಾಡಿದ ತಕ್ಷಣ ಪಕ್ಷದ ನಾಯಕತ್ವ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಗಮನಾರ್ಹ.

ಸಿನೆಮಾ ರಂಗದಲ್ಲಿ ಹಲವು ಪ್ರಕರಣಗಳಿಗೆ, ಆರೋಪ ಪ್ರತ್ಯಾರೋಪಗಳಿಗೆ ಹಾಗೂ ರಾಜೀನಾಮೆಗಳಿಗೆ ಕಾರಣವಾಗಿರುವ ʼಕಾಸ್ಟಿಂಗ್‌ ಕೌಚ್‌ʼ ಆರೋಪಗಳು ಈಗ ರಾಜಕೀಯ ವಲಯವನ್ನೂ ಆವರಿಸತೊಡಗಿದೆ. ಈ ಕುರಿತು ಆರೋಪ ಮಾಡಿರುವ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕಿ ಸಿಮಿ ರೋಸ್ಬೆಲ್ ಜಾನ್ ಪಕ್ಷದಲ್ಲೂ ಇದೇ ಪರಿಸ್ಥಿತಿ ಇದ್ದು, ಇದು ಕೇವಲ ಸಿನೆಮಾ ರಂಗಕ್ಕೆ ಸೀಮಿತವಾದ ವಿಷಯವಲ್ಲ ಎಂದಿದ್ದಾರೆ. ಅವರು ಈ ವಿಷಯವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, “ಪಕ್ಷದ ಅನೇಕ ಮಹಿಳೆಯರು ನನ್ನ ಬಳಿ ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಕೆಲ ನಾಯಕರು ಪಕ್ಷದ ಮಹಿಳೆಯರ ವಿರುದ್ಧ ಆಕ್ಷೇಪಾರ್ಹವಾಗಿ ವರ್ತಿಸಿದ್ದು, ಕೆಲ ಹಿರಿಯ ನಾಯಕರು ಸ್ಥಾನಾಕಾಂಕ್ಷಿ ಮಹಿಳೆಯರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಲಾಗುವುದು ಎಂದೂ ಅವರು ಹೇಳಿದರು. ನನ್ನ ಬಳಿ ಈ ಕುರಿತು ದೂರು ಹೇಳಿದವರೂ ಈ ಸಂದರ್ಭದಲ್ಲಿ ಮುಂದೆ ಬಂದು ಮಾತನಾಡಬೇಕು ಎಂದು ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರು ಸಂಸದೆ ಜೆಬಿ ಮಾಥೆರ್ ಹಾಗೂ ಕೆಲವರ ಹೆಸರು ಪ್ರಸ್ತಾಪಿಸಿ ಪಕ್ಷದಲ್ಲಿ ಅನಗತ್ಯ ಗೌರವಧನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಎಂಟು ವರ್ಷಗಳ ಹಿಂದೆಯೇ ಮಹಿಳಾ ಕಾಂಗ್ರೆಸ್ ಸೇರಿದ್ದರೂ ಜೆಬಿಯವರನ್ನು ಯುವ ಕಾಂಗ್ರೆಸ್ ನ ಅಖಿಲ ಭಾರತ ಕಾರ್ಯದರ್ಶಿಯಾಗಿ ನೇಮಕಗೊಳಿಸಿದಾಗಲೂ ನಾವು ಮೌನವಾಗಿದ್ದೆವು ಎಂದು ಅವರು ಹೇಳಿದರು.

ಅಧಿಕಾರಸ್ಥರ ಆದೇಶವನ್ನು ಪಾಲಿಸಲು ನಿರಾಕರಿಸಿದ ಮಹಿಳೆಯರೊಂದಿಗೆ ಕೆಲವು ಮುಖಂಡರು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಅದೇ ಸಮಯದಲ್ಲಿ, ಈ ನಾಯಕರು ಕೆಲವು ಮಹಿಳೆಯರ ಮೇಲೆ ಅತಿಯಾದ ಪ್ರೀತಿಯನ್ನು ತೋರಿಸಿದ್ದಾರೆ ಎಂದು ಟೀಕಿಸಿದರು. ಏತನ್ಮಧ್ಯೆ, ರೋಸ್ಬೆಲ್ ಮಾಡಿರುವ ಆರೋಪದ ಬಗ್ಗೆ ನಾಯಕತ್ವಕ್ಕೆ ದೂರು ನೀಡಿದ್ದರಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತಿದೆ ಎಂದು ಕೆಪಿಸಿಸಿ ಹೇಳಿದೆ.

ಇಂದು ಸೆಕ್ರೆಟರಿಯೇಟ್ ಎದುರು ಯುಡಿಎಫ್ ಧರಣಿ

ಕೇರಳದ ಪಿಣರಾಯಿ ಸರ್ಕಾರವು ಜಸ್ಟಿಸ್ ಹೇಮಾ ಸಮಿತಿಯ ವರದಿಯ ಪ್ರಕಾರ ಲೈಂಗಿಕ ಕಿರುಕುಳ ಸಂತ್ರಸ್ತರ ವಿರುದ್ಧ ಕ್ರಮ ಕೈಗೊಳ್ಳದಂತೆ ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಆರೋಪಿಸಿದೆ. ಸೋಮವಾರ ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಯುಡಿಎಫ್ ಸಂಚಾಲಕ ಎಂ.ಎಂ.ಹುಸೇನ್, ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಮತ್ತಿತರರು ಈ ಆಂದೋಲನದಲ್ಲಿ ಭಾಗವಹಿಸಲಿದ್ದಾರೆ.

ಇತ್ತ ಆಂಧ್ರದಲ್ಲೂ ಜಗನ್‌ ಮತ್ತು ಅವರ ಪಕ್ಷದ ನಾಯಕರು, ಮತ್ತು ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಗುಜರಾತ್‌ ಮೂಲದ ಚಿತ್ರನಟಿಯೊಬ್ಬರು ಲೈಂಗಿಕ ದೌರ್ಜನ್ಯ, ಹಲ್ಲೆಯಂತಹ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ನೆನಪಿಸಿಕೊ‍ಳ್ಳಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page