Saturday, August 23, 2025

ಸತ್ಯ | ನ್ಯಾಯ |ಧರ್ಮ

ಕ್ಯೂಬಾ ಪ್ರಗತಿಗೆ ಕ್ಯಾಸ್ಟ್ರೋ, ಸಮಾಜವಾದ ಕಾರಣ – ಕೆ.ಎಸ್ ರವಿಕುಮಾರ್

ಹಾಸನ : ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಿದ್ದು ಫಿಡೆಲ್ ಕ್ಯಾಸ್ಟ್ರೋ ಮತ್ತು ಅಲ್ಲಿನ ಸಮಾಜವಾದಿ ವ್ಯವಸ್ಥೆ ಎಂದು ಬರಹಗಾರ ಕೆ.ಎಸ್.ರವಿಕುಮಾರ್ ಹೇಳಿದರು. ಇತ್ತೀಚೆಗೆ ನಗರದ ಶ್ರಮಾ ಕಛೇರಿಯಲ್ಲಿ ಹಾಸನ ಜಿಲ್ಲಾ ಕ್ಯೂಬಾ ಸೌಹಾರ್ದ ಸಮಿತಿ ಏರ್ಪಡಿಸಿದ್ದ “ಕ್ಯೂಬಾ ಸೌಹಾರ್ದ ದಿನ ಮತ್ತು ಫಿಡೆಲ್ ಕ್ಯಾಸ್ಟ್ರೋ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡುತ್ತಿದ್ದರು. ಕ್ಯೂಬಾ ಸಾಕ್ಷರತೆ, ವೈದ್ಯಕೀಯ ಕ್ಷೇತ್ರ ಮತ್ತು ಮಾನವ ಅಭಿವೃದ್ಧಿಯಲ್ಲಿ ಜಾಗತಿಕ ಗಮನ ಸೆಳೆಯುವಂತಹ ಸಾಧನೆಗಳನ್ನು ಮಾಡುವುದರಲ್ಲಿ ಧೀರ್ಘಕಾಲ ಕ್ಯೂಬಾದ ಅಧಿಕಾರವನ್ನು ಜನತೆಯ ಪರವಾಗಿ ನಡೆಸಿದ ಫಿಡೆಲ್ ಕ್ಯಾಸ್ಟ್ರೋ ಅವರ ಪಾತ್ರ ಬಹಳ ಮಹತ್ತರವಾದದ್ದು.

ಒಂದು ಪುಟ್ಟ ದೇಶದ ಮೇಲೆ ಅಮೆರಿಕ ಸಾಮ್ರಾಜ್ಯಶಾಹಿ ಆರ್ಥಿಕ ದಿಗ್ಬಂಧನಗಳನ್ನು ನಿರಂತರವಾಗಿ ಏರುತ್ತಿದ್ದರೂ, ಲಭ್ಯವಿರುವ ಅಲ್ಪ ಸಂಪನ್ಮೂಲದಲ್ಲಿಯೇ ದೇಶವನ್ನು ಅತ್ಯಂತ ಯಶಸ್ವಿಯಾಗಿ ಅಭಿವೃದ್ಧಿ ಪಡಿಸಿದ್ದು ಕಮ್ಯೂನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ. ಅಮೆರಿಕ ದಿಗ್ಭಂಧನಗಳನ್ನು ಹೇರಿದ ನಂತರ ಪೆಟ್ರೋಲಿಯಂ ಉತ್ಪನ್ನಗಳು ದೇಶಕ್ಕೆ ಆಮದಾಗುವುದು ನಿಂತು ಹೋಗುತ್ತದೆ ಇಂಥ ಕಾಲಘಟ್ಟದಲ್ಲಿ ಕ್ಯೂಬಾ ದೇಶದ ಜನರೆಲ್ಲರೂ ಸೈಕಲನ್ನು ಬಳಸಲು ಪ್ರಾರಂಭಿಸುತ್ತಾರೆ ಇದರಿಂದ ದೇಶದ ಎಲ್ಲಾ ಜನರ ಆರೋಗ್ಯ ಸುಧಾರಿಸುತ್ತದೆ. ಕ್ಯೂಬಾದಲ್ಲಿ ಅತ್ಯಂತ ಹೆಚ್ಚು ಕಬ್ಬನ್ನು ಬೆಳೆಯುತ್ತಾರೆ, ವೈಜ್ಞಾನಿಕ ವಿಧಾನದಲ್ಲಿ ಸಾವಯವ ಕೃಷಿ ಮಾಡುವ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿಯನ್ನ ಪಡೆಯುತ್ತಾರೆ. ಈ ದೇಶದಲ್ಲಿ ಅತ್ಯಂತ ಹೆಚ್ಚು ಶಿಕ್ಷಕರು, ವೈದ್ಯರು ಕ್ರೀಡಾ ತರಬೇತಿದಾರರು ಇದ್ದು ಅಮೆರಿಕದಂತ ದೇಶದಲ್ಲೂ ಇಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದನ್ನ ಕಾಣಬಹುದಾಗಿದೆ. ಇದಕ್ಕೆ ಕ್ಯಾಸ್ಟ್ರೋ ಮತ್ತು ಅವರ ಸಂಗಾತಿಗಳ ದೂರ ದೃಷ್ಟಿ ಯೋಜನೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ.


ಕರೋನಾ ಸಂದರ್ಭದಲ್ಲಿ ಈ ಪುಟ್ಟ ದೇಶದಲ್ಲಿ ಐದು ರೋಗ ನಿರೋಧಕ ಲಸಿಕೆಗಳನ್ನು ಕಂಡುಹಿಡಿದು ಅತ್ಯಂತ ಕಡಿಮೆ ಅವಧಿಯಲ್ಲಿ ಇಡೀ ದೇಶದ ಜನರಿಗೆ ರೋಗ ನಿರೋಧಕ ಲಸಿಕೆ ಹಾಕಿಸಿದರು. ಆ ಮೂಲಕ ಕರೋನ ರೋಗಕ್ಕೆ ತುತ್ತಾಗುವ ದೇಶದ ಜನರನ್ನು ಸಂರಕ್ಷಿಸಿದರು. ಜಗತ್ತಿನ ಯಾವುದೇ ಮೂಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾದರೂ ಅಲ್ಲಿ ಕ್ಯೂಬಾದ ವೈದ್ಯರ ತಂಡ ಸೇವೆಗೆ ಹಾಜರಿರುತ್ತದೆ. ಈ ಪುಟ್ಟ ದೇಶ ವೈಜ್ಞಾನಿಕವಾಗಿ ಕ್ರಾಂತಿಕಾರಕ ಸಂಶೋಧನೆಗಳನ್ನ ಕೈಗೊಳ್ಳಲು ಸಾಧ್ಯವಾಗಿದ್ದು ಫೀಡಲ್ ಕ್ಯಾಸ್ಟ್ರೋ ಮತ್ತು ಸಂಗಾತಿಗಳ ಪರಿಶ್ರಮದ ಕಾರಣದಿಂದಾಗಿ. ಫೆಡಲ್ ಕ್ಯಾಸ್ಟ್ರೋ ಅವರನ್ನು ಅಮೇರಿಕ ಸರ್ಕಾರ ತನ್ನ ಸಿಐಎ ಮೂಲಕ ಕೊಲ್ಲಲು 638 ಬಾರಿ ಪ್ರಯತ್ನಿಸಿ ವಿಫಲವಾಯಿತು. ಕ್ಯಾಸ್ಟ್ರೋ ಒಬ್ಬ ಬಂಡಾಯ ಹೋರಾಟಗಾರ, ಜನರ ಸಮಸ್ಯೆಗಳ ನಿವಾರಣೆಗೆ, ಜೀವನ ಮಟ್ಟದ ಸುಧಾರಣೆಗಾಗಿ ಹೋರಾಡಿದರು. ಅತ್ಯಂತ ಪುಟ್ಟ ದೇಶ ಕ್ಯೂಬಾ ಅಮೆರಿಕ ಸಾಮ್ರಾಜ್ಯಶಾಹಿಯನ್ನೇ ನಡಗಿಸಿದ್ದು ಇತಿಹಾಸ. ಇವರು ನಡೆಸಿದ ಹೋರಾಟ ವಿಮೋಚನ ಹೋರಾಟವಾಗಿತ್ತು. ಜನರ ಜೀವ ಪರವಾಗಿತ್ತು ಹಾಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ದೇಶದ ಎಲ್ಲಾ ಜನ ಸಮುದಾಯದ ಬೆಂಬಲ ಇವರಿಗೆ ದೊರೆಯಿತು. ಈ ವಿಮೋಚನಾ ಹೋರಾಟಕ್ಕೆ ದೇಶದ ಯುವ ಜನತೆ ಅತ್ಯಂತ ಹೆಚ್ಚಿನ ಬೆಂಬಲಿಗರಾಗಿ ನಿಂತರು ಇದರಿಂದಾಗಿ ಬದಲಾವಣೆ ಸಾಧ್ಯವಾಯಿತು. ಕ್ಯೂಬಾ ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಧರ್ಮೇಶ್ ಕ್ಯೂಬಾ, ಕ್ಯಾಸ್ಟ್ರೋ ಜಗತ್ತಿನ ಸಮಾನತೆಯ ಆಶಾಕಿರಣಗಳಿದ್ದಂತೆ ಇಂತಹ ಆಶಾಕಿರಣವನ್ನೇ ಇಲ್ಲವಾಗಿಸಬೇಕೆಂದು ಅಮೇರಿಕಾ ಸತತ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಈಗ ಟ್ರಂಪ್ ಅಧ್ಯಕ್ಷರಾದ ಮೇಲೆ ಮತ್ತಷ್ಟು ಆರ್ಥಿಕ ದಿಗ್ಭಂದನಗಳು ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಕ್ಯೂಬಾದ ನೆರವಿಗೆ ಮಾನವೀಯ ಹೃದಯವಂತರೆಲ್ಲಾ ಮುಂದಾಗಬೇಕು. ಆ ಮೂಲಕ ಸಮತೆಯ ನಾಡೊಂದನ್ನು ಉಳಿಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್.ನವೀನ್‌ಕುಮಾರ್ ಕ್ಯೂಬಾ, ಕ್ಯಾಸ್ಟ್ರೋ ಮತ್ತು ಚೇ ಈ ಮೂರು ಹೆಸರು ಸಮಾನತೆಯ ಕನಸುಕಾಣುವವರಿಗೆ ಸ್ಪೂರ್ತಿಯ ಸೆಲೆಗಳು. ಕೇವಲ ಒಂದು ಕೋಟಿ ಜನಸಂಖ್ಯೆಯನ್ನು ಹೊಂದಿರುವ ಕ್ಯೂಬಾ ಭಾರತಕ್ಕಿಂತ ತಡವಾಗಿ ಅಂದರೆ 1959 ರಲ್ಲಿ ಕ್ರಾಂತಿ ಮಾಡಿ, ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಜಗತ್ತಿನ 193 ರಾಷ್ಟçಗಳ ಪೈಕಿ 50 ನೇ ಸ್ಥಾನದಲ್ಲಿದೆ. ಆದರೆ ಭಾರತ ಮಾತ್ರ 1947 ರಲ್ಲಿ ಸ್ವತಂತ್ರವಾದರೂ 130 ನೇ ಸ್ಥಾನದಲ್ಲಿದೆ. ಅಂದರೆ ಒಂದು ದೇಶದ ಅಭಿವೃದ್ಧಿ ಎಂದರೆ ಅದು ಅಲ್ಲಿಯ ಜನತೆಯ ಮಾನವಾಭಿವೃದ್ಧಿ ಇದು ಸಮಾಜವಾದಿ ಅಭಿವೃದ್ಧಿಯ ಮಾದರಿ ಎಂದು ಫಿಡೆಲ್ ಕ್ಯಾಸ್ಟ್ರೋ ತಮ್ಮ ಕೆಲಸದ ಮೂಲಕ ಸಾಧಿಸಿ ತೋರಿಸಿಕೊಟ್ಟಿದ್ದಾರೆ. ಜಗತ್ತಿನಲ್ಲಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ಯಾವ ದೇಶಗಳು ತಮ್ಮ ದೇಶದಲ್ಲಿ ಬಡತನ, ನಿರುದ್ಯೋಗ, ಅಪೌಷ್ಟಿಕತೆಯನ್ನು ಸಂಪೂರ್ಣ ತೊಡೆದು ಹಾಕಲು ಸಾಧ್ಯವಾಗಿಲ್ಲ. ಏಕೆಂದರೆ ಬಂಡವಾಳಶಾಹಿಗೆ ಅತ್ಯಂತ ಕ್ರೂರವಾದ ಲಾಭ ಮಾತ್ರ ಮುಖ್ಯವಾಗಿರುತ್ತದೆ. ಸಮಗ್ರ ಅಭಿವೃದ್ಧಿಯ ಮಾನವೀಯ ಮೌಲ್ಯವಿರುವುದು ಸಮಾಜವಾದಿ ವ್ಯವಸ್ಯೆಯಲ್ಲಿ ಮಾತ್ರ ಎಂದರು. ಕಾರ್ಯಕ್ರಮದ ಆರಂಭದಲ್ಲಿ ಅರವಿಂದ್ ಸ್ವಾಗತಿಸಿದರು, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಟ, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಅಹಮದ್ ಹಗರೆ, ಹರೀಶ್ ಕಟ್ಟೆ, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page