Wednesday, December 24, 2025

ಸತ್ಯ | ನ್ಯಾಯ |ಧರ್ಮ

ಕ್ರಿಸ್‌ಮಸ್‌ಗೂ ಮುನ್ನ ಕ್ರೈಸ್ತರ ಮೇಲೆ ದಾಳಿ: ಕ್ಯಾಥೋಲಿಕ್ ಬಿಷಪ್‌ ಒಕ್ಕೂಟದಿಂದ ತೀವ್ರ ಖಂಡನೆ

ದೆಹಲಿ: ಮುಂಬರುವ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದಾಳಿಗಳಲ್ಲಿ ‘ಆತಂಕಕಾರಿ’ ಏರಿಕೆ ಕಂಡುಬಂದಿದೆ ಎಂದು ‘ದ ಕ್ಯಾಥೋಲಿಕ್ ಬಿಷಪ್ ಕಾನ್ಫರೆನ್ಸ್ ಆಫ್ ಇಂಡಿಯಾ’ (CBCI) ಆತಂಕ ವ್ಯಕ್ತಪಡಿಸಿದೆ. ಇದು ಭಾರತದ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಉಂಟಾಗಿರುವ ಗಂಭೀರ ಧಕ್ಕೆ ಎಂದು ಸಂಘಟನೆ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ದಕ್ಷಿಣಪಂಥೀಯ ಹಿಂದೂ ಸಂಘಟನೆಗಳಿಂದ ಕ್ರಿಸ್‌ಮಸ್‌ ಆಚರಣೆಗೆ ವಿರೋಧ ವ್ಯಕ್ತವಾಗುತ್ತಿದೆ. ಹರಿದ್ವಾರದ ಹೋಟೆಲ್‌ನಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮ ರದ್ದುಗೊಳಿಸಿರುವುದು, ಜಬಲ್‌ಪುರದ ಚರ್ಚ್‌ಗೆ ನುಗ್ಗಿ ಮತಾಂತರದ ಆರೋಪ ಮಾಡಿರುವುದು ಮತ್ತು ಒಡಿಶಾದಲ್ಲಿ ಸ್ಯಾಂಟಾ ಕ್ಲಾಸ್ ಟೋಪಿ ಮಾರಾಟಗಾರನಿಗೆ ಕಿರುಕುಳ ನೀಡಿರುವ ಘಟನೆಗಳು ವರದಿಯಾಗಿವೆ.

ವಿಶೇಷವಾಗಿ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮಕ್ಕೆ ಬಂದಿದ್ದ ಅಂಧ ಮಹಿಳೆಯೊಬ್ಬರಿಗೆ ಬಿಜೆಪಿ ನಾಯಕಿ ಅಂಜು ಭಾರ್ಗವ ಅವರು ಬಹಿರಂಗವಾಗಿ ನಿಂದಿಸಿ, ದೈಹಿಕವಾಗಿ ಕಿರುಕುಳ ನೀಡಿರುವ ವಿಡಿಯೋ ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಸಿಬಿಸಿಐ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಂಜು ಭಾರ್ಗವ ಅವರನ್ನು ತಕ್ಷಣವೇ ಬಿಜೆಪಿಯಿಂದ ವಜಾಗೊಳಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಛತ್ತೀಸ್‌ಗಢದಲ್ಲಿ ಡಿಸೆಂಬರ್ 24ರಂದು ಕ್ರೈಸ್ತರ ವಿರುದ್ಧ ‘ಬಂದ್’ಗೆ ಕರೆ ನೀಡಿರುವ ಡಿಜಿಟಲ್ ಪೋಸ್ಟರ್‌ಗಳು ಹರಿದಾಡುತ್ತಿರುವುದು ಮತ್ತಷ್ಟು ಕಳವಳಕ್ಕೆ ಕಾರಣವಾಗಿದೆ. ಶಾಂತಿಯುತವಾಗಿ ಕೆರೋಲ್ ಹಾಡುವ ತಂಡಗಳು ಮತ್ತು ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಸೇರುವ ಭಕ್ತರ ಮೇಲೆ ನಡೆಯುತ್ತಿರುವ ಈ ಉದ್ದೇಶಪೂರ್ವಕ ದಾಳಿಗಳು ಭಯಮುಕ್ತವಾಗಿ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿವೆ ಎಂದು ಬಿಷಪ್‌ಗಳ ಒಕ್ಕೂಟ ಹೇಳಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿರುವ ಸಿಬಿಸಿಐ, ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ಕ್ರೈಸ್ತ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿದೆ. ದೇಶದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದೆ.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಹಿಂದೂ ಸಮಾಜವು ಕ್ರಿಸ್‌ಮಸ್‌ನಂತಹ ಧಾರ್ಮಿಕ ಉತ್ಸವಗಳನ್ನು ಆಚರಿಸಬಾರದು ಎಂದು ಕರೆ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page