ಸಾಂಸ್ಕೃತಿಕ ಹಾಗೂ ಡಿಜಿಟಲ್ ನವ-ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಲ್ಲಿ ಸಿಲುಕಿದೆ – ಧರ್ಮೇಶ್

ಹಾಸನ: ಬ್ರಿಟಿಷರ ದಾಸ್ಯದಿಂದ ದೇಶ ಮುಕ್ತವಾಗಿದ್ದರೂ, ಇಂದಿನ ಜಗತ್ತು ಆರ್ಥಿಕ, ಸಾಂಸ್ಕೃತಿಕ ಹಾಗೂ ಡಿಜಿಟಲ್ ನವ-ಸಾಮ್ರಾಜ್ಯಶಾಹಿಯ ಕಪಿಮುಷ್ಟಿಯಲ್ಲಿ ಸಿಲುಕಿದೆ ಎಂದು ಕಮ್ಯೂನಿಸ್ಟ್ ನಾಯಕ ಧರ್ಮೇಶ್ ಆತಂಕ ವ್ಯಕ್ತಪಡಿಸಿದರು.

ನಗರದ ‘ಶ್ರಮ’ದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಜಂಟಿಯಾಗಿ ಆಯೋಜಿಸಿದ್ದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ 95ನೇ ಹುತಾತ್ಮ ದಿನಾಚರಣೆ ಅಂಗವಾಗಿ ನಡೆದ ‘ಸಾಮ್ರಾಜ್ಯಶಾಹಿ: ಅಂದು-ಇಂದು’ ವಿಷಯದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಗತ್ ಸಿಂಗ್ ಅವರನ್ನು ಕೇವಲ ಭಾವನಾತ್ಮಕ ಕ್ರಾಂತಿಕಾರಿಯಾಗಿ ಚಿತ್ರಿಸುವುದು ಇತಿಹಾಸಕ್ಕೆ ಅಪಚಾರವಾಗುತ್ತದೆ. ಅವರು ಕಾರ್ಲ್ ಮಾರ್ಕ್ಸ್ ಹಾಗೂ ಲೆನಿನ್ ಅವರ ಕಮ್ಯೂನಿಸ್ಟ್ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಚಿಂತಕ ಕ್ರಾಂತಿಕಾರಿಯಾಗಿದ್ದರು ಎಂದು ಹೇಳಿದರು. 1929ರಲ್ಲಿ ಅಸೆಂಬ್ಲಿಗೆ ಬಾಂಬ್ ಎಸೆದ ಘಟನೆ ಯಾರಿಗೂ ಹಾನಿ ಮಾಡಲು ಅಲ್ಲ, ಬ್ರಿಟಿಷರ ದೌರ್ಜನ್ಯಕ್ಕೆ ವಿರುದ್ಧವಾಗಿ ಧ್ವನಿ ಎತ್ತುವ ಉದ್ದೇಶದಿಂದ ನಡೆದಿತ್ತು ಎಂದು ವಿವರಿಸಿದರು.

ಇಂದಿನ ಸಾಮ್ರಾಜ್ಯಶಾಹಿಯ ಸ್ವರೂಪ ಬದಲಾಗಿದ್ದು, ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಂತಾದ ಜಾಗತಿಕ ಹಣಕಾಸು ಸಂಸ್ಥೆಗಳು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಸಾಲದ ಬಲೆಗೆ ಸೆರೆ ಹಿಡಿದು ಆರ್ಥಿಕ ನಿಯಂತ್ರಣ ಸಾಧಿಸುತ್ತಿವೆ ಎಂದು ಆರೋಪಿಸಿದರು. ಡಿಜಿಟಲ್ ವಲಯದಲ್ಲೂ ಸ್ಮಾರ್ಟ್‌ಫೋನ್‌ಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನರ ವೈಯಕ್ತಿಕ ಮಾಹಿತಿ, ಸಂಸ್ಕೃತಿ ಹಾಗೂ ಅಭಿರುಚಿಗಳನ್ನು ನಿಯಂತ್ರಿಸುವ ಹೊಸ ರೀತಿಯ ‘ಡಿಜಿಟಲ್ ವಸಾಹತುಶಾಹಿ’ ರೂಪುಗೊಂಡಿದೆ ಎಂದು ಹೇಳಿದರು. ಅಮೆರಿಕದಂತಹ ರಾಷ್ಟ್ರಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ವೆನೆಜುವೆಲಾ, ಇರಾನ್, ಕ್ಯೂಬಾ ದೇಶಗಳ ಮೇಲೆ ಆರ್ಥಿಕ ಹಾಗೂ ರಾಜಕೀಯ ಒತ್ತಡ ಹೇರುತ್ತಿವೆ ಎಂದು ಟೀಕಿಸಿದರು. ಭಾರತದಲ್ಲಿಯೂ ಬಂಡವಾಳಶಾಹಿ ವ್ಯವಸ್ಥೆ ಬಲಪಡೆಯಲು ಧರ್ಮವನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು, ಕಾರ್ಮಿಕ ಸಂಹಿತೆಗಳು ಹಾಗೂ ನೋಟು ಅಮಾನ್ಯೀಕರಣ, ಜಿಎಸ್‌ಟಿ ನೀತಿಗಳು ಜನಸಾಮಾನ್ಯರಿಗೆ ಹೊರೆ ಆಗಿ, ಕಾರ್ಪೊರೇಟ್ ವಲಯಕ್ಕೆ ಲಾಭಕರವಾಗಿವೆ ಎಂದು ಹೇಳಿದರು.

ಭಗತ್ ಸಿಂಗ್ ಆಶಯದಂತೆ ಕಾರ್ಮಿಕರು, ರೈತರು, ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಒಂದಾಗಿ ಶೋಷಣೆಯ ವಿರುದ್ಧ ಹೋರಾಡಬೇಕಿದೆ. ಕೇವಲ ಹುತಾತ್ಮ ದಿನ ಆಚರಣೆ ಸಾಕಾಗುವುದಿಲ್ಲ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಗೌರವ ಎಂದು ಧರ್ಮೇಶ್ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು