ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ತಕ್ಷಣದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಪುನಾರಚಿಸಿ ಅಧಿಸೂಚನೆ ಹೊರಡಿಸಿದೆ. ನೂತನ ಸಮಿತಿಗೆ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರದ ಹಲವು ಪ್ರಮುಖ ಗಣ್ಯರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
1952ರ ಸಿನೆಮಾಟೋಗ್ರಾಫ್ ಕಾಯ್ದೆ ಹಾಗೂ 2024ರ ಸಿನೆಮಾಟೋಗ್ರಾಫ್ (ಪ್ರಮಾಣೀಕರಣ) ನಿಯಮಾವಳಿಗಳ ಅಡಿಯಲ್ಲಿ ತನಗೆ ದತ್ತವಾಗಿರುವ ಅಧಿಕಾರವನ್ನು ಬಳಸಿ ಕೇಂದ್ರ ಸರ್ಕಾರವು ಈ ಪುನಾರಚನಾ ಆದೇಶವನ್ನು ಪ್ರಕಟಿಸಿದೆ. ಹೊಸ ಮಂಡಳಿಯಲ್ಲಿ ಪ್ರಮುಖವಾಗಿ ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕ್ಕಿ ಕೇಜ್, ಬಾಲಿವುಡ್ ನಟ ಸುನಿಲ್ ಶೆಟ್ಟಿ, ಖ್ಯಾತ ನಟಿ ಪ್ರೀತಿ ಜಿಂಟಾ, ಹಿರಿಯ ನಿರ್ದೇಶಕ ಪ್ರಿಯದರ್ಶನ್ ಮತ್ತು ಜನಪ್ರಿಯ ನಟ ಪಂಕಜ್ ತ್ರಿಪಾಠಿ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
ಇವರೊಂದಿಗೆ ಮನೋಜ್ ಜೋಶಿ, ಹಂಸರಾಜ್ ಹನ್ಸ್, ವಿನೋದ್ ಅನುಪಮ್, ಅಭಿಷೇಕ್ ಜೈನ್, ಸುಪ್ರಿಯಾ ಯಾರ್ಲಗಡ್ಡ, ಯತೀಂದ್ರ ಮಿಶ್ರಾ, ರೂಪಾಲಿ ಗಂಗೂಲಿ, ನೀಲಾ ಮಾಧಬ್ ಪಾಂಡಾ, ಪ್ರಸೆಂಜಿತ್ ಚಟರ್ಜಿ, ಪಲ್ಲವಿ ಜೋಶಿ, ನಿಶಿಗಂಧ ವಾಡ್, ವಾಮನ್ ಕೇಂದ್ರೆ ಮತ್ತು ರಮೇಶ್ ಪತಂಗೆ ಸೇರಿದಂತೆ ಒಟ್ಟು 18 ಸದಸ್ಯರನ್ನು ಮಂಡಳಿಗೆ ನಾಮನಿರ್ದೇಶನ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮತ್ತು ಸರ್ಕಾರದ ನೀತಿಗಳನ್ನು ವಿವಿಧ ಹಂತಗಳಲ್ಲಿ ಮುಕ್ತವಾಗಿ ಬೆಂಬಲಿಸುತ್ತಾ ಬಂದಿದ್ದ ರಿಕ್ಕಿ ಕೇಜ್ ಸೇರಿದಂತೆ ಹಲವು ಪ್ರಮುಖರಿಗೆ ಈ ಆಯಕಟ್ಟಿನ ಮಂಡಳಿಯಲ್ಲಿ ಮಹತ್ವದ ಜವಾಬ್ದಾರಿ ಲಭಿಸಿರುವುದು ಇದೀಗ ಸಾಂಸ್ಕೃತಿಕ ಹಾಗೂ ರಾಜಕೀಯ ವಲಯಗಳಲ್ಲಿ ಗಮನ ಸೆಳೆದಿದೆ. ಈ ನೂತನ ಸಮಿತಿಯು ಮುಂದಿನ ಮೂರು ವರ್ಷಗಳ ಕಾಲ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸಲಿದೆ.
