ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಲಡ್ಡು ಪ್ರಸಾದ ಸಿದ್ಧಪಡಿಸಲು ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 4 ಮಂದಿಯನ್ನು ಬಂಧಿಸಿದೆ.
ಬಂಧಿತರಲ್ಲಿ ಎ.ಆರ್ ಡೈರಿ ಮಾಲೀಕ ಆಯಂಡಿ ರಾಜಶೇಖರನ್, ಉತ್ತರ ಪ್ರದೇಶದ ಪರಾಗ್ ಡೈರಿ, ಪ್ರೀಮಿಯರ್ ಅಗ್ರೋ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್‌ನ ಪ್ರಮುಖರನ್ನು 3 ದಿನಗಳಿಂದ ತಿರುಪತಿಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು.
ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ. ಬಂಧಿತರನ್ನು ಸೋಮವಾರ ತಿರುಪತಿಯ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ.
ನಿಯಮಗಳನ್ನು ಮೀರಿ ಲಡ್ಡು ಪ್ರಸಾದ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಮಿಶ್ರಿತ ತುಪ್ಪ ಪೂರೈಕೆ ಮಾಡಿದ ಆರೋಪವನ್ನು ಬಂಧಿತರ ವಿರುದ್ಧ ಹೊರಿಸಲಾಗಿದೆ. ಜತೆಗೆ ಅವರು ಭಾಗಿಯಾಗಿರುವ ಬಗ್ಗೆ ಪ್ರಾಥಮಿಕ ಮಟ್ಟದಲ್ಲಿ ಪುರಾವೆಗಳೂ ಇವೆ ಎನ್ನಲಾಗಿದೆ. ಉತ್ತರ ಭಾರತದ ರಾಜ್ಯಗಳಿಂದ ತುಪ್ಪ ಖರೀದಿ ಬಗ್ಗೆ ಟಿಟಿಡಿ ಮಾಡಿಕೊಂಡಿರುವ ಒಪ್ಪಂದದಲ್ಲೂ ಈ ಸಂಸ್ಥೆಗಳು ಅವ್ಯವಹಾರ ನಡೆಸಿವೆ ಎನ್ನಲಾಗಿದೆ.
ರಾಜಕೀಯವಾಗಿಯೂ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದ ತುಪ್ಪದ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್‌ನಲ್ಲಿಯೂ ದಾವೆ ಹೂಡಲಾಗಿತ್ತು. ಈ ಹಿನ್ನೆಲೆಯಲ್ಲಿ 2024ರ ನವೆಂಬರ್‌ನಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಿಬಿಐ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶ ನೀಡಿತ್ತು.